ಇವರಿಗೊಂದು ಸೂರು: ಒಂಚೂರು ನೆಮ್ಮದಿಗೆ, ಘನತೆಯ ಬಾಳಿಗೆ..

7

ಇವರಿಗೊಂದು ಸೂರು: ಒಂಚೂರು ನೆಮ್ಮದಿಗೆ, ಘನತೆಯ ಬಾಳಿಗೆ..

Published:
Updated:
Prajavani

‘ನನ್ನೊಳಗಿನ ಹೆಣ್ತನದ ದನಿ ಕೇಳಿ ಮನೆ ಬಿಟ್ಟು ಹೊರಟಾಗ 21 ವರ್ಷ. ಮೈತುಂಬಾ ಕಸುವು ತುಂಬಿಕೊಂಡಿತ್ತು. ಎಲ್ಲೂ ಆಶ್ರಯ ಸಿಗದೇ ಕಲಾಸಿಪಾಳ್ಯದ ಫುಟ್‌ಪಾತ್‌ ಆಶ್ರಯತಾಣವಾಯಿತು. ಹಗಲೆಲ್ಲಾ ಭಿಕ್ಷೆ, ರಾತ್ರಿ ಫುಟ್‌ಪಾತ್‌ನಲ್ಲಿ ಮಲಗಿದರೆ ಪೊಲೀಸರ ಬೆತ್ತದೇಟಿನ ರುಚಿ. ಕಾಮುಕರ ಕಾಟ, ಕಲ್ಲೆಸೆತ... ಆಗೆಲ್ಲಾ ತುಂಬ ಅನ್ನಿಸುತ್ತಿದ್ದುದು ನಮ್ಮಂಥವರಿಗೂ ಅಂಗೈಯಗಲ ಜಾಗ ಇದ್ದಿದ್ದರೆ...’

ಲಿಂಗತ್ವ ಅಲ್ಪಸಂಖ್ಯಾತೆ ಶಾಂತಿ ಮುನಿಸ್ವಾಮಿ ಕೊರಳಸೆರೆ ಉಬ್ಬಿ, ಹಸಿಗೊಂಡ ಕಣ್ಣಂಚು ಸೂರಿನ ಮಹತ್ವ ಧ್ವನಿಸುತ್ತಿತ್ತು.

‘ಬೆಂಗಳೂರಿನಲ್ಲಿ ನಮ್ಮಂಥವರು ಸಾವಿರಾರು. ಹಗಲು ಹೊತ್ತು ಹೇಗೊ ನಿಭಾಯಿಸ್ತೀವಿ. ಆದರೆ, ರಾತ್ರಿ ಯಾಕಾದರೂ ಆಗುತ್ತೆ ಅನ್ನುವ ಸಂಕಟ. ಮನೆ ಬಾಡಿಗೆ ಕೇಳಲು ಹೋದರೆ, ಮೇಲಿಂದ ಕೆಳಗೆ ನೋಡುವ ಮನೆ ಮಾಲೀಕರು ನಿಮ್ಮಂಥವರಿಗೆ ಮನೆ ಬಾಡಿಗೆ ಕೊಡಲ್ಲ ಅಂತ ಮುಖಕ್ಕೆ ಹೊಡೆದಂತೆ ಹೇಳುತ್ತಾರೆ. ಮೆಜೆಸ್ಟಿಕ್ ಬಸ್‌ ಸ್ಟ್ಯಾಂಡ್, ಕಲಾಸಿಪಾಳ್ಯದ ಫುಟ್‌ಪಾತೇ ನಮಗೆ ಗತಿ. ಸೆಕ್ಸ್ ವರ್ಕ್ ಇಷ್ಟವಿಲ್ಲದಿದ್ದರೂ ಬಲವಂತವಾಗಿ ಆ ಕೂಪದೊಳಗೆ ವ್ಯವಸ್ಥೆ ಎಳೆದೊಯ್ಯುತ್ತದೆ. ನಮ್ಮದೇ ಆಶ್ರಯ ತಾಣವಿದ್ದರೆ ಅಲ್ಲಿ ಯಾರೂ ನಮ್ಮ ಮೇಲೆ ದಬ್ಬಾಳಿಕೆ ಮಾಡುವಂತಿರೋದಿಲ್ಲ. ಇಷ್ಟು ವರ್ಷಗಳಾದ ಮೇಲಾದರೂ ಬಿಬಿಎಂಪಿ ನಮಗೊಂದು ‘ಆಶ್ರಯತಾಣ’ ಕಲ್ಪಿಸಲು ಮುಂದಾಗಿದೆಯಲ್ಲಾ. ನಿಜಕ್ಕೂ ಅಭಿನಂದನೀಯ ಕ್ರಮವಿದು’ ಅಂದರು ಶಾಂತಿ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ಗತಿಕ ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ‘ಆಶ್ರಯತಾಣ’ (ಹೋಮ್ ಶೆಲ್ಟರ್) ಕಲ್ಪಿಸಲು ಮುಂದಾಗಿದೆ. ಯೋಜನೆ ರೂಪಿಸಿರುವ ಬಿಬಿಎಂಪಿ, ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ಮೀಸಲಿಟ್ಟಿರುವ ₹ 1 ಕೋಟಿ ಬಜೆಟ್‌ನಲ್ಲಿ ಹಣ ವಿನಿಯೋಗಿಸಲಿದೆ.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಲಿಂಗತ್ವ ಅಲ್ಪಸಂಖ್ಯಾತರ ಸಬಲೀಕರಣಕ್ಕಾಗಿ ಈ ವ್ಯವಸ್ಥೆ ಮಾಡಲಾಗುತ್ತಿದೆ. ಅವರದ್ದೇ ಆದ ಎನ್‌ಜಿಒ ಮೂಲಕ ನಿರ್ಗತಿಕರನ್ನು ಗುರುತಿಸಲಾಗುತ್ತದೆ. ಇದು ರಾತ್ರಿ ತಂಗುದಾಣದ ರೀತಿಯಲ್ಲ. ದಿನದ 24 ಗಂಟೆಯೂ ಅವರು ಇಲ್ಲಿರಬಹುದು. ವಾಸಕ್ಕೆ  ಜಾಗವಿಲ್ಲದವರು, ವಯಸ್ಸಾದವರು, ನಿರ್ಗತಿಕರು ಇಲ್ಲಿ ವಾಸ ಮಾಡಬಹುದು’ ಎಂದು ಮಾಹಿತಿ ನೀಡುತ್ತಾರೆ ಬಿಬಿಎಂಪಿ ಹೆಚ್ಚುವರಿ ಕಮೀಷನರ್ (ಆಡಳಿತ) ರಂದೀಪ್ ಡಿ.

‘ನಗರದಲ್ಲಿರುವ ಬಹುತೇಕ ಲಿಂಗತ್ವ ಅಲ್ಪಸಂಖ್ಯಾತರು ವಸತಿಹೀನರು. ಅಂಥವರಿಗೆ ವಸತಿ ವ್ಯವಸ್ಥೆ ರೂಪಿಸಲು ಗಾಂಧಿನಗರ ಉಪ್ಪಾರಪೇಟೆ ಪೊಲೀಸ್ ಠಾಣೆಯ ಹತ್ತಿರ ‘ಆಶ್ರಯತಾಣ’ ರೂಪಿಸಲಾಗುತ್ತಿದೆ. ಅಲ್ಲಿ 100 ಮಂದಿ ವಾಸಿಸಲು ಅವಕಾಶ ಕಲ್ಪಿಸಲಾಗುವುದು’ ಎನ್ನುತ್ತಾರೆ ಬಿಬಿಎಂಪಿ ಉಪ ಆಯುಕ್ತ (ಕಲ್ಯಾಣ) ಬಿ.ಎನ್. ಜಗದೀಶ್.

ವಿದ್ಯಾವಂತ ಲಿಂಗತ್ವ ಅಲ್ಪಸಂಖ್ಯಾತರು ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಒಲವು ತೋರುತ್ತಿದ್ದಾರೆ. ಐಎಎಸ್ ಮತ್ತು ಕೆಎಎಸ್ ಪರೀಕ್ಷೆ ಬರೆಯಬೇಕೆನ್ನುವವರಿಗೆ ತರಬೇತಿ ನೀಡುವ ಯೋಜನೆಯನ್ನೂ ಬಿಬಿಎಂಪಿ ಹೊಂದಿದೆ. ಅಷ್ಟೇ ಅಲ್ಲ, ಆಶ್ರಯತಾಣದಲ್ಲಿ ಕ್ಯಾಂಡಲ್ ತಯಾರಿಕೆ, ಟೈಲರಿಂಗ್, ಕಂಪ್ಯೂಟರ್, ಕೈತೋಟ ನಿರ್ವಹಣೆ, ಚಾಲನಾ ತರಬೇತಿ ಸೇರಿದಂತೆ ಮತ್ತಿತರ ಕೌಶಲ ತರಬೇತಿ ನೀಡುವ ಯೋಜನೆಯೂ ಇದೆ.

‘ಆಶ್ರಯ ತಾಣ ಯೋಜನೆ ಒಳ್ಳೆಯದು. ಎಲ್ಲೋ ಕಳ್ಳತನ, ಕೊಲೆಯಾದರೆ ನಾವೇ ಪೊಲೀಸರ ಕಣ್ಣಿಗೆ ಬೀಳುತ್ತೇವೆ. ಉಪ್ಪಾರಪೇಟೆ ಪೊಲೀಸ್ ಠಾಣೆ ಎದುರಿಗೆ ರೂಪಿಸಲಾಗುತ್ತಿರುವ ಆಶ್ರಯತಾಣಕ್ಕೆ ಈಗಾಗಲೇ ಸುತ್ತಮುತ್ತಲಿನವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ನಾನಿನ್ನೂ ಆ ಸ್ಥಳಕ್ಕೆ ಭೇಟಿ ನೀಡಿಲ್ಲ. ಆಶ್ರಯತಾಣ ರೂಪಿಸುವ ವಸತಿ ವ್ಯವಸ್ಥೆ ಜತೆಗೆ ಆ ಪ್ರದೇಶದಲ್ಲಿರುವ ಹೋಟೆಲ್, ಅಂಗಡಿ ನಡೆಸುತ್ತಿರುವವರು, ಸ್ಥಳೀಯರಿಗೆ ನಮ್ಮ ಸಮುದಾಯದ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ನಮಗೆ ರಕ್ಷಣೆಯ ಜತೆಗೆ ಗೌರವಯುತ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕೆಂಬುದೇ ನನ್ನ ಮನವಿ’ ಎನ್ನುತ್ತಾರೆ ಹೋರಾಟಗಾರ್ತಿ ಅಕ್ಕೈ ಪದ್ಮಸಾಲಿ.

**

ತಮಿಳುನಾಡು, ಕೇರಳ ಸರ್ಕಾರಗಳು, ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ಉಚಿತವಾಗಿ ಸರ್ಕಾರಿ ವಸತಿಗೃಹಗಳನ್ನು ನೀಡಿವೆ. ನಮ್ಮ ಸರ್ಕಾರವೂ ಈ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕಿದೆ.

–ಶಾಂತಿ ಮುನಿಸ್ವಾಮಿ, ಲಿಂಗತ್ವ ಅಲ್ಪಸಂಖ್ಯಾತೆ, ರೇಡಿಯೊ ಜಾಕಿ

Tags: 

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !