ಮನದ ಕನ್ನಡಿಯಲ್ಲಿ ಪ್ರಾಮಾಣಿಕತೆಯ ಪ್ರತಿಬಿಂಬ

6

ಮನದ ಕನ್ನಡಿಯಲ್ಲಿ ಪ್ರಾಮಾಣಿಕತೆಯ ಪ್ರತಿಬಿಂಬ

Published:
Updated:
Deccan Herald

‘ಅಯ್ಯೋ, ಕಾಲ ಕೆಟ್ಹೋಯ್ತು, ನಮ್ ಕಾಲ್ದಲ್ಲಿ ಹೀಗಿರ್ಲಿಲ್ಲ’ - ಹೀಗೆನ್ನುವವರು ಎಲ್ಲಾ ಕಾಲದಲ್ಲೂ ಸಿಗುತ್ತಾರೆ. ಕೆಲವು ಆಯಾಮಗಳಲ್ಲಿ ಅದು ನಿಜವಿರಲೂಬಹುದೇನೋ! ಆದರೆ ಮಾಧ್ಯಮಗಳಲ್ಲಿ ಇತ್ತೀಚೆಗೆ ವೈಭವೀಕರಣಗೊಳ್ಳುವ ಸುದ್ದಿಗಳು, ಜಗತ್ತು ದುಷ್ಟರ ಕೂಟ ಎಂದೆನಿಸುವ ಹಾಗೆ ಮಾಡುತ್ತಿದೆ ಎಂಬುದನ್ನು ನಾವು ಇಲ್ಲವೆನ್ನುವಂತಿಲ್ಲ; ಹಾಗೆಂದು, ಒಳ್ಳೆಯ ಸುದ್ದಿಗಳೇ ಇಲ್ಲವೇ? ಸದ್ಗುಣಸಂಪನ್ನರೇ ಇಲ್ಲವೇ? ಖಂಡಿತ ಒಳ್ಳೆಯದ್ದು ಸುದ್ದಿಗಳಲ್ಲೂ, ಜನರಲ್ಲೂ ಇದ್ದೇ ಇದೆ; ಆದರೆ, ಅದ್ಯಾಕೋ ಕೆಟ್ಟದ್ದಕ್ಕೆ ಹೆಚ್ಚು ಪ್ರಚಾರ ಸಿಗುತ್ತಿದೆ ಅಷ್ಟೇ! ಯಾವ ವಿಷಯದ ಬಗ್ಗೆ ನಮ್ಮ ಮನಸ್ಸು ಗಮನ ಕೊಡಬೇಕು, ಯಾವ ಜನರ ಸಖ್ಯ ಬಯಸಬೇಕು ಎಂಬುದು ನಮ್ಮ ಕೈಯಲ್ಲೇ ಇರುತ್ತದೆ. ಮಾನವನ ಮೂಲಗುಣಗಳಲ್ಲಿ ಒಂದು, ತನ್ನಂತೆಯೇ ಇತರರೂ ಎಂದು ಕಾಣೋದು; ಆದರೆ, ಇತ್ತೀಚೆಗೆ ನಾವು ನಮ್ಮೊಂದಿಗೆ ಹೆಚ್ಚು ಸಮಯ ಕಳೆಯದೇ, ನಮಗೆ ನಾವು ತಿಳಿ ಹೇಳಿಕೊಳ್ಳದೇ ಇರುವ ಕಾರಣ, ನಮ್ಮಂತೆಯೇ ಇತರರನ್ನು ಕಾಣುವುದು ಮರೆಯಾಗುತ್ತಾ, ‘ನಾನು ಸರಿ ಉಳಿದವರು ಸರಿಯಿಲ್ಲ’ ಎಂಬ ಭಾವನೆ ಹೆಚ್ಚುತ್ತಿದೆ ಎಂದು ಕಂಡುಬರುತ್ತಿದೆ. ‘ಈಗ ಸತ್ಯಕ್ಕೆ ಬೆಲೆಯೆಲ್ಲಿದೆ?’ ಎಂದು ಹಲುಬುವ ವ್ಯಾಪಾರಿ, ತಾನು ಸತ್ಯನಿಷ್ಠನೇ ಎಂಬುದನ್ನು ಮೊದಲು ಪರಾಮರ್ಶಿಸಿಕೊಳ್ಳಬೇಕು; ಜಗತ್ತಿನಲ್ಲಿ ಪ್ರಾಮಾಣಿಕತೆಯೇ ಇಲ್ಲ ಎಂಬುವವರು, ತಾವು ತಮ್ಮ ನಡೆ ನುಡಿಗಳಲ್ಲಿ ಎಷ್ಟು ಪ್ರಾಮಾಣಿಕರೆಂಬುದನ್ನು ಮೊದಲು ಅವಲೋಕಿಸಬೇಕು.

ಈಗಿನ ಕಾಲದಲ್ಲೂ ಸತ್ಯ, ಪ್ರಾಮಾಣಿಕತೆಯಂತಹ ಸದ್ಗುಣಗಳು ಇವೆ; ಖಂಡಿತ ಇವೆ. ಅದನ್ನು ಗುರುತಿಸುವ ಒಳಗಣ್ಣು ನಮಗೆ ಬೇಕಷ್ಟೇ! ನಾವು ಏನನ್ನು ನಿಜವಾಗಿ ಬಯಸುತ್ತೇವೋ, ಅದೇ ದಕ್ಕುತ್ತದೆ ಎನ್ನುತ್ತಾರೆ ತಿಳಿದವರು; ನಮ್ಮ ಭಾವನೆ, ಯೋಚನೆ, ಬಯಕೆಗಳಿಗೆಲ್ಲಾ ಅಷ್ಟು ಶಕ್ತಿಯಿದೆ; ಹೀಗಿರುವಾಗ, ನಮ್ಮ ಭಾವನೆ, ಯೋಚನೆ, ಬಯಕೆಗಳಿಗೆ ಸರಿಯಾದ ದಿಕ್ಕು ತೋರುವುದು ನಮ್ಮ ಕರ್ತವ್ಯವಲ್ಲವೇ? ನಮಗಷ್ಟು ವಿವೇಕ ಸಾಲದು ಎಂದೆನಿಸಿದರೆ, ತಿಳಿದವರು, ಗುರುಗಳು ಇದ್ದೇ ಇದ್ದಾರೆ; ಗುರುವಿನ ಗುಲಾಮನಾಗಿ, ಅಜ್ಞಾನದಿಂದ, ಅನಗತ್ಯ ತುಮುಲಗಳಿದ ಮುಕ್ತಿ ಪಡೆಯಲೇಬಹುದು; ನಮಗೆ ಮನಸ್ಸಿರಬೇಕಷ್ಟೇ. ಇಂತಹ ಯೋಚನೆ, ಭಾವನೆಗಳು ಪ್ರಾಮಾಣಿಕವಾಗಿದ್ದರೆ, ಅದಕ್ಕಿಂತ ನೆಮ್ಮದಿ ಮತ್ತೊಂದಿಲ್ಲ. ನಾವು ಪ್ರಾಮಾಣಿಕವಾಗಿದ್ದರೆ, ನಮ್ಮಂತೆಯೇ ಪರರು ಎಂದು ಭಾವಿಸಿ ಗಮನಿಸಿದರೆ, ಇತರರಲ್ಲೂ ಪ್ರಾಮಾಣಿಕತೆ ಎದ್ದುಕಂಡೀತು. ಕೆಲವರಲ್ಲಿ ಹೆಚ್ಚು ಮತ್ತು ಕೆಲವರಲ್ಲಿ ಕಡಿಮೆಯಿರಬಹುದು; ಅವರವರು ಬೆಳೆದು ಬಂದ ದಾರಿ, ಅವರವರು ಪಡೆದ ಸಂಸ್ಕಾರ, ಅವರವರು ಆಯ್ದುಕೊಂಡ ಬಾಳಹಾದಿಯ ಆಧಾರದ ಮೇಲೆ ಗುಣಾವಗುಣಗಳ ಮೊತ್ತ ನಿರ್ಧರಿತ. ಆದರೆ, ಪ್ರತಿಯೊಬ್ಬರಲ್ಲೂ ಇರುವ ಗುಣಾವಗುಣಗಳಲ್ಲಿ ನಮಗೆ ಬೇಕಾದ್ದನ್ನು ಮಾತ್ರ ತಲೆಗೆ ತಂದುಕೊಂಡು, ಮಿಕ್ಕಿದ್ದನ್ನು ನಿರ್ಲಕ್ಷಿಸುವ ಅಧಿಕಾರ ನಮ್ಮದೇ! ಆದರೂ, ನಮ್ಮಲ್ಲಾಗಲೀ ಇತರರಲ್ಲಾಗಲೀ ಪ್ರಾಮಾಣಿಕತೆಯ ಕೊರತೆಯಂತಹ ಋಣಾತ್ಮಕತೆ ಇದ್ದರೆ, ಒಟ್ಟಾರೆಯಾಗಿ ಅದು ಜಗದ ಋಣಾತ್ಮಕತೆಯನ್ನು ಹೆಚ್ಚಿಸುತ್ತದೆ. ನಮ್ಮನ್ನು ನಾವು ತಿದ್ದಿಕೊಂಡು, ಸನ್ಮಾರ್ಗಕ್ಕೆ ನಮ್ಮನ್ನು ಒಡ್ಡಿಕೊಳ್ಳುವ ಹಾದಿ ನಮ್ಮ ಮುಂದೆ ಇದ್ದೇ ಇರುತ್ತದೆ. ಗಮನಿಸಲು ಕೊಂಚ ಪುರುಸೊತ್ತು ಮಾಡಿಕೊಳ್ಳೋಣವೇ?

ಸದ್ಗುಣಗಳು ಎಂದೂ ‘ಔಟ್ ಆಫ್ ಫ್ಯಾಶನ್’ ಆಗಲೀ, ‘ಔಟ್ ಆಫ್ ಕಾಂಟೆಕ್ಸ್ಟ್’ ಆಗಲೀ, ‘ಔಟ್‍ಡೇಟೆಟ್’ ಆಗಲೀ ಆಗೋಕೆ ಸಾಧ್ಯವೇ ಇಲ್ಲ; ಅವು ಎಂದೆಂದಿಗೂ ಪ್ರಸ್ತುತವೇ! ಪ್ರಾಮಾಣಿಕತೆಯೂ, ಅಂತಹ ಸದ್ಗುಣಗಳಲ್ಲಿ ಬಹುಮುಖ್ಯವಾದ ಒಂದು ವಜ್ರ; ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳುವುದು, ಅಭ್ಯಸಿಸುವುದು ಅಂತಹ ಕಷ್ಟವೇನಲ್ಲ. ಏನು ಯೋಚಿಸಿದರೆ ಸರಿ, ಅದನ್ನೇ ಯೋಚಿಸಿ, ಏನು ಮಾಡಿದರೆ ಸರಿ ಅದನ್ನೇ ಮಾಡಿ, ಏನು ಹೇಳಿದರೆ ಸರಿ ಅದನ್ನೇ ಹೇಳಿದರೆ ಆಯ್ತು; ಪ್ರಾಮಾಣಿಕತೆ ಮೈಗೂಡಿದಂತೆಯೇ! ಆದರೆ, ಈ ‘ಸರಿ’ ಎಂಬುದು ಯಾರ ಮೂಗಿನ ನೇರಕ್ಕೆ ಎಂಬುದೇ ಇಲ್ಲಿ ಜಿಜ್ಞಾಸೆಯ ವಿಚಾರ. ಈ ಯಾವುದು ಸರಿ, ಯಾರ ಪ್ರಕಾರ ಸರಿ ಎಂಬುದಕ್ಕೆ ಉತ್ತರ ಬೇಕೆಂದರೆ, ಸದ್ವಿಚಾರದ ಮೇಲೆ ಬೆಳಕು ಚೆಲ್ಲುವ ಪುಸ್ತಕಗಳೂ ಸದ್ಗುಣಿಗಳೂ ಕೊಂಚ ಮಾರ್ಗದರ್ಶನ ನೀಡಬಹುದು; ಜೊತೆಗೇ, ನಾವು ಈ ಪ್ರಶ್ನೆಗಳನ್ನು ನಮ್ಮ ಮನಸ್ಸಿಗೇ ಕೇಳಿಕೊಂಡರೆ, ಖಂಡಿತ ಉತ್ತರ ಸಿಗುತ್ತದೆ. ಬೇರೆಯವರ ಜೊತೆ ಪ್ರಾಮಾಣಿಕವಾಗಿ ವ್ಯವಹರಿಸುವ ಮೊದಲು ನಮಗೆ ನಾವೇ ಪ್ರಾಮಾಣಿಕವಾಗಿರುವುದು ಅತಿಮುಖ್ಯವಾದ ಸಂಗತಿ. ನಾವು ಸತ್ಯವಾದದ್ದನ್ನು, ಸರಿಯಾದದ್ದನ್ನು ಯೋಚಿಸಿದರೆ, ಶ್ರದ್ಧೆಯಿಂದ ಆಡಿದರೆ, ಮಾಡಿದರೆ ಅದು ನಮ್ಮ ವ್ಯಕ್ತಿತ್ವದ ಭಾಗವೇ ಆಗಿ, ನಮ್ಮೊಂದಿಗೆ ನಾವು ವ್ಯವಹರಿಸುವಾಗ ಮಾತ್ರವಲ್ಲದೇ ಇತರರೊಂದಿಗೆ ವ್ಯವಹರಿಸುವಾಗಲೂ ತಾನೇತಾನಾಗಿ ಪ್ರಾಮಾಣಿಕತೆಯು ಒಡಮೂಡುತ್ತದೆ. ಸರಿ, ಆದರೆ, ಈ ಪ್ರಾಮಾಣಿಕತೆಯ ಅವಶ್ಯಕತೆಯೇನು? ಇದಿಲ್ಲದೇ ಬದುಕಲು ಸಾಧ್ಯವೇ ಇಲ್ಲವೇ? ಖಂಡಿತ ಸಾಧ್ಯ; ಆದರೆ ನೆಮ್ಮದಿ ಇಲ್ಲದೆ, ನಮ್ಮ ಅಂತರಂಗದಲ್ಲಿ ನಮಗೇ ಗೌರವವಿಲ್ಲದೇ, ನಿಜವಾದ ಗೆಳೆಯರಿಲ್ಲದೇ, ಸಂಬಂಧಗಳಲ್ಲಿ ಸತ್ವವಿಲ್ಲದೇ ಬದುಕುವುದು, ಅದೂ ಒಂದು ಬಾಳೇ? ಹೌದು, ಪ್ರಾಮಾಣಿಕತೆಯಂತಹ ಸದ್ಗುಣಗಳು ಅಲೌಕಿಕ ಮೋಕ್ಷಕಷ್ಟೇ ಅಲ್ಲದೇ, ಲೌಕಿಕ ಸಂತೃಪ್ತಿಯ ಸಾಧನೆಗೂ ಬೇಕೇಬೇಕು. ಪ್ರತಿಯೊಬ್ಬರಿಗೂ ತಮ್ಮ ಬದುಕಿನಲ್ಲಿ ಭಾಗವಹಿಸುವ ಎಲ್ಲರೂ ಪ್ರಾಮಾಣಿಕವಾಗಿರಬೇಕೆಂಬ ಬಯಕೆ ಇದ್ದೇ ಇರುತ್ತದೆ; ತನ್ನ ಗೆಳೆಯ/ಗೆಳತಿ, ಗಂಡ/ಹೆಂಡತಿ, ಸಹೋದರ/ಸಹೋದರಿ, ಕಚೇರಿಯಲ್ಲಿ ತನ್ನ ಮೇಲಧಿಕಾರಿ ಅಥವಾ ತನ್ನ ಕೈಕೆಳಗೆ ಕೆಲಸ ಮಾಡುವವರಾಗಲೀ, ತನ್ನ ಬ್ಯಾಂಕ್ ಮ್ಯಾನೇಜರ್, ತನ್ನ ಪಾರ್ಸೆಲ್ ತಂದುಕೊಡುವ ಡೆಲಿವರಿ ಬಾಯ್, ಮನೆಕೆಲಸದವರು, ಇಸ್ತ್ರೀ ಮಾಡುವವರು - ಹೀಗೆ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿರಲಿ ಎಂದೇ ಎಲ್ಲರೂ ಬಯಸುವುದು. ಇವರಲ್ಲೊಬ್ಬರು ಪ್ರಾಮಾಣಿಕತೆಯಿಂದ ತಮ್ಮ ಕೆಲಸ ಮಾಡದಿದ್ದರೂ ಸಣ್ಣದೋ, ದೊಡ್ಡದೋ ತೊಂದರೆಯಂತೂ ಕಟ್ಟಿಟ್ಟ ಬುತ್ತಿ. ನಾವು ಇಸ್ತ್ರಿಗೆ ಕೊಟ್ಟ ಎಂಟು ಬಟ್ಟೆಯಲ್ಲಿ ಹಿಂದಿರುಗುವುದು ಕೇವಲ ಏಳು ಎಂದರೆ ಸರಿಯೆನಿಸುವುದೇ? ಅಥವಾ ಡೆಲಿವರಿ ಬಾಯ್ ನಮಗೆ ಸುಸ್ಥಿತಿಯಲ್ಲಿ ಇಲ್ಲದ ಪಾರ್ಸೆಲ್ ನೀಡಿ ಗಾಡಿಯಲ್ಲಿ ಮಂಗಮಾಯವಾದರೆ ಹೇಗನ್ನಿಸುತ್ತದೆ ಯೋಚಿಸಿ? ನಾವೇನು ಸುಮ್ಮನೆ ಬಿಡುವುದಿಲ್ಲ, ಜಗಳ ಕಾಯದೇ, ಕಂಪ್ಲೇಂಟ್ ಮಾಡದೇ ಬಿಟ್ಟೇವೆಯೇ? ಆಗ, ಮಾನಸಿಕ ಕ್ಷೋಭೆ, ಲೌಕಿಕ ನಷ್ಟ ಯಾರಿಗೆ? ನಮಗೇ ತಾನೆ? ಈ ಅಪ್ರಾಮಾಣಿಕತೆಯ ಜಾಡ್ಯಕ್ಕೆ ಮದ್ದು ಪ್ರಾಮಾಣಿಕತೆಯೇ!

ಬೆಂಜಮಿನ್ ಫ್ರಾಂಕ್ಲಿನ್ ಹೇಳಿದಂತೆ, ಹಾನೆಸ್ಟೀ ನಿಜಕ್ಕೂ ಬೆಸ್ಟ್ ಪಾಲಿಸಿಯೇ! ಇದನ್ನು ಪಾಲಿಸುವವರು ಖಂಡಿತ ಇದನ್ನು ಒಪ್ಪುತ್ತಾರೆ, ಪ್ರಾಮಾಣಿಕತೆಯನ್ನು ರೂಢಿಸಿಕೊಂಡು ನೋಡಿದರೆ, ಇದು ನಮ್ಮ ಅರಿವಿಗೆ ಖಂಡಿತ ಗೋಚರಿಸುತ್ತದೆ. ಸರಿಯಾದ್ದನ್ನೇ ಮಾಡಿದರೆ ಸರಿಯಾದ್ದನೇ ಆಡಿದರೆ, ಯಾವ ಭಯವೂ ಬೇಕಿಲ್ಲ ಅಲ್ಲವೇ? ಕಳ್ಳನ ಮನಸ್ಸು ಹುಳ್ಳಹುಳ್ಳಗೆ ಎನ್ನುತ್ತದೆ ಗಾದೆ; ಕಳ್ಳಯೋಚನೆಗಳೇ ಇಲ್ಲದಿದ್ದರೆ, ಮನಸ್ಸನ್ನು ಕನ್ನಡಿಯ ಹಾಗೆ ಇಟ್ಟುಕೊಂಡರೆ, ಯಾರ ಭಯವೇಕೆ? ಇದ್ದದ್ದನ್ನು ಇದ್ದ ಹಾಗೆ ಹೇಳುವ ಗುಣವೊಂದು ಅದ್ಭುತ ಮಾಯಾದಂಡ. ಇದು ತನ್ನಿಂತಾನೇ ಎಲ್ಲವನ್ನೂ ಸರಿಪಡಿಸಿಬಿಡುತ್ತದೆ; ಆದರೆ, ನಾನು ‘ಸ್ಟ್ರೈಟ್ ಫಾರ್ವರ್ಡ್’ ಇದ್ದದ್ದನ್ನು ಇದ್ದ ಹಾಗೆಯೇ ಹೇಳಿಬಿಡುತ್ತೇನೆ ಎಂಬುದನ್ನು ಅಹಂಕಾರ ಹಾಗೂ ಒರಟು ಮಾತಿನೊಂದಿಗೆ ಬೆರೆಸಿದರೆ, ಹೊಸ ಸ್ನೇಹಿತರನ್ನು ಸಂಪಾದಿಸುವುದಿರಲಿ, ಇರುವವರನ್ನೂ ಕಳೆದುಕೊಳ್ಳಬೇಕಾದೀತು. ಅನಗತ್ಯ ನೇರವಂತಿಕೆ, ಹಿತವಿಲ್ಲದ ನುಡಿ ಎರಡೂ ಹಿಂಸೆಯೇ. ಹಾಗೆಂದು ನಾವು ಜೇನಿನಲ್ಲಿ ಅದ್ದಿ ತೆಗೆದು, ಅನಗತ್ಯವಾಗಿ ಸಿಹಿಯಾದ ಮಾತಾಡಿದರೂ ತಪ್ಪೇ! ‘ಅತಿ ವಿನಯಂ ಧೂರ್ತ ಲಕ್ಷಣಂ’ ಅಲ್ಲವೇ? ಇರುವುದನ್ನು ಇರುವ ಹಾಗೆ, ಎಲ್ಲಿ, ಯಾವಾಗ ಹೇಗೆ ಹೇಳಬೇಕೆಂಬ ವಿವೇಕವೂ, ಪ್ರಾಮಾಣಿಕತೆಯ ಸಂಗಾತಿಯಾಗಿದ್ದರೆ ಚೆನ್ನ. ನಾವು ಒಳಗೊಂದು, ಹೊರಗೊಂದು ಮಾಡಿದರೆ ಜನರಿಗೆ ತಿಳಿಯುವುದಿಲ್ಲ ಎಂದುಕೊಂಡರೆ, ಅದಕ್ಕಿಂತಲೂ ದೊಡ್ಡ ಮೂರ್ಖತನ ಮತ್ತೊಂದಿಲ್ಲ.

ಒಳಗೇ ಕೋಪವನ್ನು ಅಡಗಿಸಿಟ್ಟು, ಹೊರಗೆ ಮಂದಹಾಸ ಬೀರಿದರೂ, ಒಳಗೇ ಸತ್ಯವನ್ನು ಮುಚ್ಚಿಟ್ಟು ಸುಳ್ಳನ್ನು ಆಡಿದರೂ, ಎದುರಿನಲ್ಲಿರುವವರಿಗೆ ಅದು ತಿಳಿಯದ್ದೇನೂ ಅಲ್ಲ; ನಾವೆಷ್ಟೇ ಚೆನ್ನಾಗಿ ನಟಿಸಿದರೂ, ನಮಗರಿವಿಲ್ಲದಂತೆಯೇ ನಮ್ಮ ಮಾತಿನಲ್ಲಿ ಇಣುಕುವ ಯಾವುದೋ ಪದವೋ ಧಾಟಿಯೋ ಕಣ್ಣಿನ ಕೊಂಕೋ ಆಂಗಿಕಶೈಲಿಯೋ ನಿಜಭಾವವನ್ನು ಹೊರಹಾಕಿಯೇಬಿಟ್ಟಿರುತ್ತದೆ; ಕೆಲಸಕ್ಕಾಗಿ ಸಂದರ್ಶನ ನಡೆಸುವವರು ಕೂಡ ನಮ್ಮ ಕೌಶಲಗಳು, ವಿದ್ಯಾಭ್ಯಾಸ, ಆತ್ಮವಿಶ್ವಾಸದ ಜೊತೆಗೇ ನಮ್ಮ ಮಾತಿನಲ್ಲಿ, ಕಣ್ಣಿನಲ್ಲಿ ನಾವೆಷ್ಟು ಪ್ರಾಮಾಣಿಕರು ಎಂಬುದನ್ನು ಹುಡುಕುತ್ತಿರುತ್ತಾರೆ. ಅಕಸ್ಮಾತ್ ನಾವು ಅಸಾಮಾನ್ಯವಾಗಿ ನಟಿಸಿ, ನಮ್ಮಲ್ಲಿ ಇಲ್ಲದ ಪ್ರಾಮಾಣಿಕತೆಯನ್ನು ಇದೆಯೆಂದು ನಂಬಿಸಿ ಕೆಲಸಕ್ಕೆ ಆಯ್ಕೆಯಾದರೂ, ಒಂದಲ್ಲ ಒಂದು ದಿನ ನಮ್ಮ ನಿಜಬಣ್ಣ ಬಯಲಾಗದೇ ಇರುತ್ತದೆಯೇ? ಅಪ್ರಾಮಾಣಿಕರಾಗಿ, ಲೋಪದೋಷಗಳನ್ನು ಮರೆಮಾಚಿ ಮದುವೆಯಾಗುವವರು, ನಮ್ಮ ಸುತ್ತ ಹಲವರು ಕಂಡುಬರುತ್ತಾರೆ; ಆದರೆ, ಮದುವೆಯ ನಂತರ ಸತ್ಯ ಹೊರಗೆ ಬರದೇ ಇರುವುದು ಸಾಧ್ಯವೇ? ಆಗ, ಸಂಬಂಧ ಹಳಸದೇ ಇರುತ್ತದೆಯೇ? ಇಷ್ಟಕ್ಕೂ ಯಾವುದನ್ನಾದರೂ ಮುಚ್ಚಿಡುವುದು ಯಾಕಾಗಿ ಅಥವಾ ಎಲ್ಲಿಯವರೆಗೂ? ತಪ್ಪು ಮಾಡಿದ್ದಕ್ಕಲ್ಲವೇ ಮುಚ್ಚಿಡುವ ಸಂಕಟ, ಗುಟ್ಟು ಹೊರಬಿದ್ದೀತೆಂಬ ಭಯ? ಪ್ರಾಮಾಣಿಕವಾಗಿದ್ದುಬಿಟ್ಟರಾಯಿತು!  ಸರಳವಾಗಿ ಬದುಕುತ್ತಾ, ಸಕಲರಿಗೂ ಒಳಿತನ್ನೇ ಬಯಸುತ್ತಾ ಇದ್ದುಬಿಟ್ಟರೆ, ತಂತಾನೇ ನಮ್ಮ ಆಲೋಚನೆ ಹಾಗೂ ವರ್ತನೆಯು ಧನಾತ್ಮಕವಾಗುತ್ತಾ, ನಮಗಷ್ಟೇ ಅಲ್ಲದೇ ಜಗತ್ತಿಗೇ ನಮ್ಮ ಪ್ರಾಮಾಣಿಕತೆ ಗೋಚರಿಸುತ್ತದೆ. ನಾವಾಡುತ್ತಿರುವುದು ಸತ್ಯ ಎಂಬ ನಂಬಿಕೆ ನಮಗಿಬೇಕು; ಆಮೇಲಷ್ಟೆ ನಮ್ಮ ಮಾತಿನ ಮೇಲೆ ಸ್ನೇಹಿತರೂ ಸಂಬಂಧಿಗಳೂ ಸಹಪಾಠಿಗಳೂ ಸಹಚರರೂ ನಂಬಿಕೆ ಇರಿಸಿಯಾರು. 


ಕ್ಷಮಾ ವಿ. ಭಾನುಪ್ರಕಾಶ್

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !