ಹನಿಮೂನ್‌ ಅಂದ್ರೆ ನಾಲ್ಕು ಗೋಡೆ ಮಧ್ಯೆ...

ಬುಧವಾರ, ಏಪ್ರಿಲ್ 24, 2019
29 °C

ಹನಿಮೂನ್‌ ಅಂದ್ರೆ ನಾಲ್ಕು ಗೋಡೆ ಮಧ್ಯೆ...

Published:
Updated:
Prajavani

ಸಖತ್ ಸ್ಟುಡಿಯೋ ಮತ್ತು ನಟ ಶಿವರಾಜ್ ಕುಮಾರ್ ಅವರ ‘ಶ್ರೀಮುತ್ತು ಸಿನಿ ಸರ್ವೀಸಸ್’ ಜೊತೆಯಾಗಿ ‘ಹೇಟ್ ಯೂ ರೋಮಿಯೋ’ ಎಂಬ ಕನ್ನಡದ ವೆಬ್‌ ಸರಣಿ ನಿರ್ಮಾಣ ಆರಂಭಿಸಿದ್ದು ಹಳೆಯ ಸುದ್ದಿ. ಆ ಸರಣಿ ಈಗ ಬಿಡುಗಡೆಯ ಹಂತಕ್ಕೆ ಬಂದಿದೆಯಂತೆ.

ಅದಲ್ಲ ಸುದ್ದಿ. ಅದಕ್ಕಿಂತ ತಾಜಾ ಸುದ್ದಿಯೆಂದರೆ, ಈ ಎರಡೂ ನಿರ್ಮಾಣ ಸಂಸ್ಥೆಗಳು ಸೇರಿ ಮತ್ತೊಂದು ದೊಡ್ಡ ವೆಬ್ ಸರಣಿ ನಿರ್ಮಾಣಕ್ಕೆ ಕೈ ಹಾಕಿವೆ. ಹೊಸ ಸರಣಿಗೆ ‘ಹನಿಮೂನ್’ ಎಂಬ ಶೀರ್ಷಿಕೆ ನೀಡಲಾಗಿದೆ. ಅಪ್ಪ–ಅಮ್ಮ ನೋಡಿ ಮಾಡುವ ಆರೇಂಜ್ಡ್‌ ವಿವಾಹ ಬಂಧನಕ್ಕೆ ಒಳಗಾಗುವ ಜೋಡಿ ಹನಿಮೂನ್‌ಗೆ ಹೋಗುವ ಕಥೆ ಇದರಲ್ಲಿ ಇದೆಯಂತೆ. ‘ಹನಿಮೂನ್ ಅಂದ್ರೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ನಡೆಯುವಂಥದ್ದಲ್ಲಾ, ಎರಡು ಬೇರೆ ಬೇರೆ ಯೋಚನಾ ಲಹರಿಯ ಮನಸ್ಸುಗಳು ಒಂದಾಗುವ ಕಥೆಯೇ ಹನಿಮೂನ್’ ಎಂದು ತುಸು ತುಂಟತನದಿಂದಲೂ, ತುಸು ಗಂಭೀರವಾಗಿಯೂ ಹೇಳಿದೆ ಈ ವೆಬ್‌ ಸಿರೀಸ್‌ ತಂಡ.

ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಮೈಸೂರಿನ ನಾಗಭೂಷಣ ಅವರು ಈ ವೆಬ್ ಸರಣಿಯ ಚಿತ್ರಕಥೆ ಹಾಗು ಸಂಭಾಷಣೆಯ ಹೊಣೆ ಹೊತ್ತಿರುವುದಲ್ಲದೆ ಮುಖ್ಯ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ಇತ್ತೀಚೆಗಷ್ಟೆ ಬಿಡುಗಡೆಯಾದ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾದಲ್ಲಿ ಅಭಿನಯಿಸಿರುವ ಸಂಜನಾ ಆನಂದ್ ಅವರು ಈ ಸರಣಿಯಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ.

‘ಹೀಗೊಂದು ದಿನ’ ಸಿನಿಮಾ ಹಾಗೂ ‘ಡಾ ಪಾಲ್’ ವೆಬ್ ಸರಣಿ ನಿರ್ದೇಶಿಸಿದ ಅನುಭವವಿರುವ ವಿಕ್ರಂ ಯೋಗಾನಂದ್ ಈ ಸರಣಿಯನ್ನು ನಿರ್ದೇಶಿಸುತ್ತಿದ್ದಾರೆ. ವಾಸುಕಿ ವೈಭವ್ ಅವರು ಈ ಸರಣಿಗೆ ನಾಲ್ಕು ಹಾಡುಗಳಿಗೆ ಸಂಗೀತವನ್ನು ಹಾಗೂ ಹಿನ್ನೆಲೆ ಸಂಗೀತವನ್ನು ಸಂಯೋಜಿಸುತ್ತಿದ್ದಾರೆ.

ಇಷ್ಟು ಮಾಹಿತಿ ನೀಡಿರುವ ಈ ಎರಡು ನಿರ್ಮಾಣ ಸಂಸ್ಥೆಗಳು ಇನ್ನೊಂದು ಸುದ್ದಿಯನ್ನೂ ನೀಡಿವೆ. ‘ಈ ವರ್ಷ ಐದು ವೆಬ್ ಸರಣಿಗಳನ್ನು ಮಾಡುವ ಯೋಜನೆ ಇದೆ. ಮುಂಬರುವ ವೆಬ್ ಸರಣಿಯಲ್ಲಿ ಕನ್ನಡದ ಬಹು ದೊಡ್ಡ ನಾಯಕ ನಟರು ಅಭಿನಯಿಸುತ್ತಿದ್ದು, ಅತಿ ಶೀಘ್ರದಲ್ಲೇ ಅದನ್ನು ಬಹಿರಂಗಪಡಿಸಲಾಗುವುದು’ ಎಂಬುದು ಆ ಸುದ್ದಿ.

Tags: 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !