ಬುಧವಾರ, ನವೆಂಬರ್ 13, 2019
18 °C

ಹಾಂಗ್‌ಕಾಂಗ್‌ ವಿಮೋಚನೆಗೆ ನೆರವಾಗಿ: ಟ್ರಂಪ್‌ಗೆ ಪ್ರತಿಭಟನಕಾರರ ಮೊರೆ

Published:
Updated:
Prajavani

ಹಾಂಗ್‌ಕಾಂಗ್‌: ಹಾಂಗ್‌ಕಾಂಗ್‌ ನಗರವನ್ನು ಚೀನಾ ಆಳ್ವಿಕೆಯಿಂದ ವಿಮೋಚನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ನೆರವಾಗಬೇಕು ಎಂದು ಆಗ್ರಹಿಸಿ ಪ್ರಜಾಪ್ರಭುತ್ವ ಪರ ಹೋರಾಟಗಾರರು ಭಾನುವಾರ ಇಲ್ಲಿನ ಅಮೆರಿಕ ರಾಯಭಾರ ಕಚೇರಿಗೆ ವರೆಗೆ ರ‍್ಯಾಲಿ ನಡೆಸಿದ್ದಾರೆ.

ನಗರದ ಉದ್ಯಾನದಲ್ಲಿ ಸೇರಿದ್ದ ಸಾವಿರಾರು ಪ್ರತಿಭಟನಕಾರರು, ‘ಬೀಜಿಂಗ್‌ ವಿರೋಧಿಸಿ, ಹಾಂಗ್‌ಕಾಂಗ್‌ ಮುಕ್ತಗೊಳಿಸಿ‘ ಎಂಬ ಘೋಷಣೆ ಕೂಗಿದರು.

ಕಪ್ಪು ಬಟ್ಟೆ ಧರಿಸಿದ್ದ ಕೆಲವರು ಅಮೆರಿಕದ ಧ್ವಜವನ್ನು ಹಿಡಿದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅಮೆರಿಕ ರಾಯಭಾರ ಕಚೇರಿಗೆ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು.

’ಚೀನಾದ ನಿರಂಕುಶ ಪ್ರಭುತ್ವ ವಿರುದ್ಧದ ಹೋರಾಟದಲ್ಲಿ ಹಾಂಗ್‌ಕಾಂಗ್‌ ಮುಂಚೂಣಿಯಲ್ಲಿದೆ. ನಮ್ಮ ಹೋರಾಟಕ್ಕೆ ಬೆಂಬಲ ನೀಡಿ‘ ಎಂದು ಪ್ರತಿಭಟನೆಯ ಆಯೋಜಕರು ಕೋರಿದ್ದಾರೆ.

ಹಾಂಗ್‌ಕಾಂಗ್‌ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ರಕ್ಷಣೆಗಾಗಿ ಮಸೂದೆಯೊಂದನ್ನು ಅಂಗೀಕರಿಸುವಂತೆ ಪ್ರತಿಭಟನಕಾರರು ಅಮೆರಿಕವನ್ನು ಒತ್ತಾಯಿಸಿದ್ದಾರೆ.

ಚೀನಾ ಮತ್ತು ಹಾಂಗ್‌ಕಾಂಗ್‌ ನಡುವಿನ ವಿಚಾರದಲ್ಲಿ ಹಸ್ತಕ್ಷೇಪ ಮಾಡದೆ ದೂರ ಉಳಿಯುವ ಸೂಚನೆಯನ್ನು ಡೊನಾಲ್ಡ್‌ ಟ್ರಂಪ್‌ ನೀಡಿದ್ದಾರೆ.

ಭಾನುವಾರ ನಡೆದ ಪ್ರತಿಭಟನೆ ವೇಳೆ ಕೆಲವರು ರೈಲು ನಿಲ್ದಾಣದ ಬಳಿ ಕಸಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಂಕಿತ ಅಪರಾಧಿಗಳನ್ನು ವಿಚಾರಣೆಗಾಗಿ ಚೀನಾ ಮೇನ್‌ ಲ್ಯಾಂಡ್‌ಗೆ ಹಸ್ತಾಂತರಿಸುವ ವಿವಾದಾತ್ಮಕ ಮಸೂದೆಯನ್ನು ವಿರೋಧಿಸಿ ಹಾಂಗ್‌ ಕಾಂಗ್‌ನಲ್ಲಿ ಮೂರು ತಿಂಗಳುಗಳಿಂದ ಭಾರಿ ಪ್ರತಿಭಟನೆ ನಡೆಯುತ್ತಿದೆ. 

ಪ್ರಸ್ತಾವಿತ ಮಸೂದೆಯನ್ನು ಸಂಪೂರ್ಣವಾಗಿ ಕೈಬಿಡುವುದಾಗಿ ಚೀನಾ ಪರ ಒಲವು ಇರುವ ನಾಯಕಿ ಹಾಗೂ  ಹಾಂಗ್‌ಕಾಂಗ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕ್ಯಾರಿ ಲ್ಯಾಮ್‌ ಅವರು ಬುಧವಾರ ಘೋಷಿಸಿದ್ದರು.

 

 

 

ಪ್ರತಿಕ್ರಿಯಿಸಿ (+)