ಮಂಗಳವಾರ, ನವೆಂಬರ್ 12, 2019
20 °C
3 ತಿಂಗಳು ನಡೆದ ಪ್ರಜಾಪ್ರಭುತ್ವ ಪರ ಹೋರಾಟಕ್ಕೆ ಜಯ

ಹಾಂಗ್‌ಕಾಂಗ್‌: ಗಡಿಪಾರು ಮಸೂದೆ ಕೈಬಿಟ್ಟ ಚೀನಾ

Published:
Updated:
Prajavani

ಹಾಂಗ್‌ಕಾಂಗ್‌ (ಎಎಫ್‌ಪಿ): ಆರೋಪಿಗಳನ್ನು ಚೀನಾಕ್ಕೆ ಹಸ್ತಾಂತರಿಸಲು ಅನುವು ಮಾಡಿಕೊಡುವ ಪ್ರಸ್ತಾವಿತ ಮಸೂದೆಯನ್ನು ಸಂಪೂರ್ಣವಾಗಿ ಕೈಬಿಡುವುದಾಗಿ ಚೀನಾ ‍ಪರ ಒಲವು ಇರುವ ನಾಯಕಿ, ಹಾಂಗ್‌ಕಾಂಗ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಯಾರಿ ಲ್ಯಾಮ್‌ ಬುಧವಾರ ಹೇಳಿದ್ದಾರೆ.

ಈ ಮಸೂದೆ ವಿರೋಧಿಸಿ ಹಾಗೂ ಪ್ರಜಾಪ್ರಭುತ್ವ ಪರ ಹೋರಾಟಗಾರರು ಕಳೆದ ಮೂರು ತಿಂಗಳಿನಿಂದ ನಡೆಸುತ್ತಿರುವ ಭಾರಿ ಪ್ರತಿಭಟನೆಗೆ ಮಣಿದಂತಾಗಿದೆ.

ಕ್ಯಾರಿ ಲ್ಯಾಮ್‌ ಹಾಗೂ ಚೀನಾ ಪರ ಒಲವುಳ್ಳ ಇತರ ಮುಖಂಡರೊಂದಿಗೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಫೆಲಿಕ್ಸ್‌ ಚುಂಗ್‌, ‘ಈ ಮಸೂದೆಯನ್ನು ಸಂಪೂರ್ಣವಾಗಿ ಕೈಬಿಡಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರತಿಭಟನೆ ಆರಂಭವಾಗಿದ್ದು ಹೇಗೆ?: ಹಾಂಗ್‌ಕಾಂಗ್‌ ಸರ್ಕಾರ ಏಪ್ರಿಲ್‌ನಲ್ಲಿ ಮಂಡಿಸಿದ ಆರೋಪಿಗಳ ಹಸ್ತಾಂತರ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆಗಳು ಆರಂಭವಾದವು. ಆರಂಭದಲ್ಲಿ ಮಸೂದೆಯನ್ನಷ್ಟೇ ವಿರೋಧಿಸಿದ್ದ ಜನರ ಬೇಡಿಕೆಗಳು ವಿಸ್ತರಿಸುತ್ತಾ ಹೋದವು. 

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದುದ್ದನ್ನು ಗಮನಿಸಿದ ಚೀನಾ, ಗಡಿಭಾಗದಲ್ಲಿ ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿತ್ತು. ಹಾಂಗ್‌ಕಾಂಗ್‌ನ ವಿದ್ಯಮಾನಗಳಲ್ಲಿ ಚೀನಾ ಯಾವುದೇ ಕ್ಷಣದಲ್ಲಿ ಮಧ್ಯಪ್ರವೇಶಿಸಬಹುದು ಎಂಬಂತಹ ವಾತಾವರಣವೂ ನಿರ್ಮಾಣವಾಗಿತ್ತು.

ಹಾಂಗ್‌ಕಾಂಗ್‌ ಜನರ ಆತಂಕಗಳು

l ಚೀನಾ ವಿರುದ್ಧ ಅಪರಾಧ ಎಸಗಿದ ಆರೋಪಿಯನ್ನು ಹಸ್ತಾಂತರ ಮಾಡಲು ಮಸೂದೆಯಲ್ಲಿ ಅವಕಾಶ

l ಚೀನಾಕ್ಕೆ ಹಸ್ತಾಂತರವಾದ ಆರೋಪಿಯು, ಅಲ್ಲಿನ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಚಾರಣೆ ಎದುರಿಸಬೇಕು. ಆದರೆ, ಅಲ್ಲಿನ ನ್ಯಾಯಾಂಗ ವ್ಯವಸ್ಥೆ ನ್ಯಾಯಸಮ್ಮತವಲ್ಲ ಮತ್ತು ಹಿಂಸಾತ್ಮಕ ಎಂಬುದು ಹಾಂಗ್‌ಕಾಂಗ್‌ ಜನರ ಆರೋಪ

l ಸಾಮಾಜಿಕ ಕಾರ್ಯಕರ್ತರು ಹಾಗೂ ಪತ್ರಕರ್ತರನ್ನು ಇದು ಅಪಾಯಕ್ಕೆ ದೂಡುತ್ತದೆ

l ಹಾಂಗ್‌ಕಾಂಗ್ ಮೇಲೆ ಚೀನಾದ ಹಿಡಿತ ಮತ್ತಷ್ಟು ಹೆಚ್ಚುತ್ತದೆ

l ಈ ಮಸೂದೆಯು ಪ್ರಾದೇಶಿಕ ನ್ಯಾಯಾಂಗದ ಸ್ವಾತಂತ್ರ್ಯ ಕಸಿದು
ಕೊಳ್ಳುತ್ತದೆ‌‌

ಪ್ರತಿಭಟನಕಾರರ 5 ಬೇಡಿಕೆ

l ಪ್ರಸ್ತಾವಿತ ಹಸ್ತಾಂತರ ಮಸೂದೆಯನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆಯಬೇಕು

l ಜೂನ್ 12ರ ಪ್ರತಿಭಟನೆಯನ್ನು ‘ದಂಗೆ’ ಎಂಬುದಾಗಿ ಕರೆದಿದ್ದನ್ನು ವಾಪಸ್ ಪಡೆಯಬೇಕು

l ಬಂಧಿತ ಎಲ್ಲ ಪ್ರತಿಭಟನಕಾರರಿಗೆ ಕ್ಷಮಾದಾನ ನೀಡಬೇಕು

l ಪೊಲೀಸರ ಕ್ರೂರ ವರ್ತನೆ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು

l ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಯ್ಕೆ ಹಾಗೂ ಶಾಸನಸಭೆ ಚುನಾವಣೆಯಲ್ಲಿ ಸಾರ್ವತ್ರಿಕ ಮತದಾನದ ಹಕ್ಕು ನೀಡಬೇಕು

ಪ್ರತಿಕ್ರಿಯಿಸಿ (+)