ಜೀವನಶೈಲಿಗೆ ತಕ್ಕ ವೀರ್ಯ!

7
ಅಂಕುರ

ಜೀವನಶೈಲಿಗೆ ತಕ್ಕ ವೀರ್ಯ!

Published:
Updated:
ಡಾ.ಎಸ್‌.ಎಸ್‌.ವಾಸನ್‌

ಕಳೆದ ಸಂಚಿಕೆಯಿಂದ...

ಔಷಧಗಳು: ಉರಿನಿವಾರಕ ಔಷಧಗಳು, ಕೆಲವು ಕ್ರೀಡಾಪಟುಗಳು ಸೇವಿಸುವ ಔಷಧಗಳು ವೀರ್ಯದ ಉತ್ಪತ್ತಿ ಮೇಲೆ ಋಣಾತ್ಮಕ ಪರಿಣಾಮ ಬೀರಿರುವುದು ಕಂಡುಬಂದಿದೆ.

‘ಐಬುಪ್ರೊಫೆನ್’ - ವೀರ್ಯೋತ್ಪತ್ತಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದಿದೆ ‘ಜರ್ನಲ್ ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್’. ಈ ಔಷಧಗಳು ಹಾರ್ಮೋನಿನಲ್ಲಿ ಅಸಮತೋಲನ ಉಂಟುಮಾಡಿ ಸಂತಾನಶಕ್ತಿಯನ್ನು ಕುಗ್ಗಿಸುತ್ತವೆ.

ಮಾನಸಿಕ ಒತ್ತಡ: ಒತ್ತಡ ಹಲವು ರೀತಿಯಲ್ಲಿ ವೀರ್ಯದ ಸಮಸ್ಯೆಯನ್ನು ತಂದೊಡ್ಡುತ್ತದೆ. ನರವ್ಯೂಹ, ಹಾರ್ಮೋನಿನ ಕಾರ್ಯವೈಖರಿಗೆ ಅಡ್ಡಿ ತರುತ್ತದೆ. ಒತ್ತಡದಲ್ಲೂ ಹಲವು ರೂಪ. ವೃತ್ತಿ, ಜೀವನಶೈಲಿ, ಕೌಟುಂಬಿಕ – ಹೀಗೆ ಹಲವು ರೀತಿಯ ಒತ್ತಡಗಳು ಎದುರಾಗುತ್ತವೆ.

ವೃತ್ತಿಸಂಬಂಧಿತ ಒತ್ತಡವೇ ಸಂತಾನಹೀನತೆ ವಿಷಯದಲ್ಲಿ ಅತಿ ಕೆಟ್ಟ ಪರಿಣಾಮ ಬೀರುವ ಅಂಶ. ಇದು ಡಿಎನ್‍ಎಗೆ ಹಾನಿ ತರುತ್ತದೆ ಎಂಬುದು ಕೆಲವು ವರದಿಗಳಿಂದ ತಿಳಿದುಬಂದಿದೆ. ಇದರೊಂದಿಗೆ ಕೌಟುಂಬಿಕ ಒತ್ತಡವೂ ಅಸಹಜ ಕೋಶಗಳ ರಚನೆಗೆ ಎಡೆಮಾಡಿಕೊಟ್ಟು ಸಂತಾನಹೀನತೆ ಸಮಸ್ಯೆಗೆ ಕಾರಣವಾಗುತ್ತದೆ.

ತಂದೆಯಾಗುವ ಅವಧಿ: 35 ವಯಸ್ಸಿನ ನಂತರ ಮಕ್ಕಳನ್ನು ಪಡೆಯಲು ಬಯಸುವ ಮಹಿಳೆಯರಿಗೆ ‘ಅಡ್ವಾನ್ಸಡ್ ಮೆಟರ್ನಲ್ ಏಜ್’ ಎನ್ನುವಂತೆ ಪುರುಷರಿಗೂ ‘ಅಡ್ವಾನ್ಸಡ್ ಪೆಟರ್ನಲ್ ಏಜ್’ ಎಂದಿದೆ. ಆದರೆ ಪುರುಷರಲ್ಲಿ ಇದನ್ನು 35ರಿಂದ 50 ವರ್ಷದವರೆಗೂ ಪರಿಗಣಿಸಲಾಗುತ್ತದೆ.

ಪುರುಷರಲ್ಲೂ ವೀರ್ಯದ ಚಲನಶಕ್ತಿ ಹಾಗೂ ಡಿಎನ್‍ಎ ಮೇಲೆ ವಯಸ್ಸು ಪರಿಣಾಮ ಬೀರುತ್ತದೆ. ವಯಸ್ಸಿಗೆ ಸಂಬಂಧಿಸಿದ ಬದಲಾವಣೆಗಳು ವೀರ್ಯದ ವಿಷಯಕ್ಕೂ ಹೊರತಲ್ಲ. ವಯಸ್ಸಾಗುತ್ತಿದ್ದಂತೆ ಹಾರ್ಮೋನಿನ ಮಟ್ಟದಲ್ಲೂ ಏರುಪೇರು ಸಹಜ. ಆದ್ದರಿಂದ ಮಗುವನ್ನು ಪಡೆಯಲು ಬಯಸುವ ದಂಪತಿ ವಯಸ್ಸಿನ ಬಗ್ಗೆಯೂ ಯೋಚಿಸಲೇಬೇಕಿರುತ್ತದೆ.

ಆಹಾರಪದ್ಧತಿ: ಆರೋಗ್ಯಕರ ಆಹಾರಪದ್ಧತಿ ಹಾಗೂ ಪೋಷಕಾಂಶಗಳ ಸೇವನೆ ವೀರ್ಯದ ಗುಣಮಟ್ಟದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ಒಮೆಗಾ 3 ಫ್ಯಾಟಿ ಆಸಿಡ್, ವಿಟಮಿನ್‍ಗಳು, ಕಡಿಮೆ ಕೊಬ್ಬಿನಂಶ ಇರುವ ಪದಾರ್ಥಗಳು, ಯಾಂಟಿಯಾಕ್ಸಿಡಂಟ್‍ಗಳನ್ನು ಹೊಂದಿರುವ ಮೆಡಿಟರೇನಿಯನ್ ಡಯಟ್ ವೀರ್ಯದ ಉತ್ಪತ್ತಿ ಹಾಗೂ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ನೆರವಾಗುತ್ತದೆ.

ತರಕಾರಿ, ಹಣ್ಣುಗಳು, ಮೀನು, ಮಾಂಸ, ಧಾನ್ಯಗಳು, ಕಡಿಮೆ ಕೊಬ್ಬಿನ ಹಾಲಿನ ಉತ್ಪನ್ನಗಳು, ಇವೆಲ್ಲವೂ ವೀರ್ಯದ ಗುಣಮಟ್ಟವನ್ನು ಹೆಚ್ಚಿಸುವ ಆಹಾರ ಪದಾರ್ಥಗಳು. ಸಂಸ್ಕರಿತ ಮಾಂಸ, ಹೆಚ್ಚು ಕೊಬ್ಬಿನ ಅಂಶವಿರುವ ಹಾಲಿನ ಉತ್ಪನ್ನಗಳು, ಮದ್ಯ, ಕಾಫಿಗಳಂಥವು ಋಣಾತ್ಮಕ ಪರಿಣಾಮವನ್ನು ಬೀರುತ್ತವೆ. ಸಂತಾನಹೀನತೆ ಸಮಸ್ಯೆ ಇದ್ದವರು ಕೆಫೇನ್ ಅಂಶದ ಆಹಾರ ಪದಾರ್ಥಗಳಿಂದ ದೂರವುಳಿಯುವುದೇ ಉತ್ತಮ.

ಇನ್ನಿತರ ಜೀವನಶೈಲಿ ಸಂಬಂಧಿ ಕಾರಣಗಳು:

* ದೀರ್ಘಾವಧಿ ಕುಳಿತಿರುವುದು

* ಅಧಿಕ ಶಾಖಕ್ಕೆ ತೆರೆದುಕೊಳ್ಳುವುದು

* ಜನನೇಂದ್ರಿಯದ ನಾಳಗಳ ಹಿಗ್ಗುವಿಕೆ

* ನಿದ್ರಾಹೀನತೆ ಸಮಸ್ಯೆ

* ರೇಡಿಯೊಫ್ರಿಕ್ವೆನ್ಸಿ ಎಲೆಕ್ಟ್ರೊಮ್ಯಾಗ್ನೆಟಿಕ್ ತರಂಗಗಳಿಗೆ ಹೆಚ್ಚು ಒಡ್ಡಿಕೊಳ್ಳುವುದು.

ಸಕಾರಾತ್ಮಕ ಜೀವನಶೈಲಿಯ ದಾರಿ

ಮಗುವನ್ನು ಪಡೆಯಲು ಬಯಸುವ ಪುರುಷರು ತಮ್ಮ ಜೀವನಶೈಲಿಯಲ್ಲಿ, ಅಭ್ಯಾಸಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ್ದು ಅವಶ್ಯಕ. ಅದರಲ್ಲೂ ಸಂತಾನಹೀನತೆ ಸಮಸ್ಯೆಗೆ ಒಳಗಾದ ಪುರುಷರು ಈ ಬಗ್ಗೆ ಗಂಭೀರವಾಗಿ ಯೋಚಿಸಲೇಬೇಕಾದ ಅಗತ್ಯವಿದೆ.

ಸಕಾರಾತ್ಮಕ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು, ವೀರ್ಯದ ಗುಣಮಟ್ಟವನ್ನು ಹೆಚ್ಚಿಸಬಲ್ಲ ಬಹು ಅಂಶಗಳನ್ನು ನಿಧಾನವಾಗಿ ವೃದ್ಧಿಯಾಗುವಂತೆ ಮಾಡುತ್ತದೆ.

ಆದರೆ ಇದಕ್ಕೂ ಮೊದಲು, ಪುರುಷರ ಸಂತಾನ ಹೀನತೆ ಸಮಸ್ಯೆಯ ಸಾಧ್ಯತೆಯನ್ನು ಶೀಘ್ರ ಗುರುತಿಸುವ, ಹಾಗೆಯೇ ಈ ಕುರಿತು ಜಾಗೃತಿ ಮೂಡುವ ಅವಶ್ಯಕತೆಯೂ ಇಂದಿನ ಸಂದರ್ಭದಲ್ಲಿ ಅತಿ ಮುಖ್ಯವಾಗಿದೆ. ಇದು ಶೀಘ್ರವಾಗಿ ಸಮಸ್ಯೆಯ ಪರಿಹಾರಕ್ಕೆ, ಸೂಕ್ತ ಚಿಕಿತ್ಸೆಗೆ ಒಳಗಾಗುವುದಕ್ಕೆ ಉತ್ತಮ ಮಾರ್ಗವೂ ಹೌದು.

ಬರಹ ಇಷ್ಟವಾಯಿತೆ?

 • 6

  Happy
 • 4

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !