ಈ ವಿದ್ಯಾರ್ಥಿಗಳ ಹಾಸ್ಟೆಲ್‌ ಶೌಚಾಲಯಕ್ಕೆ ಬಾಗಿಲೇ ಇಲ್ಲ!

7

ಈ ವಿದ್ಯಾರ್ಥಿಗಳ ಹಾಸ್ಟೆಲ್‌ ಶೌಚಾಲಯಕ್ಕೆ ಬಾಗಿಲೇ ಇಲ್ಲ!

Published:
Updated:
Prajavani

ಇದು ವೈದ್ಯಕೀಯ ಮತ್ತು ತಾಂತ್ರಿಕ ಪದವಿ ಕೋರ್ಸ್‌ಗಳ ವಿದ್ಯಾರ್ಥಿಗಳ ನಿಲಯ, ಆದರೆ ಇಲ್ಲಿನ ವಿದ್ಯಾರ್ಥಿಗಳಿಗೆ ಬೇಕಾದ ಸೌಲಭ್ಯ ಎಳ್ಳಷ್ಟೂ ಇಲ್ಲ.  ದಿನ ಬೆಳಗಾದರೆ ದೂಳಿನಲ್ಲೇ ಕಳೆಯಬೇಕು, ಶೌಚಾಲಯಕ್ಕೆ ಬಾಗಿಲು ಇಲ್ಲ, ಕೊಠಡಿಗಳ ಬಾಗಿಲುಗಳಂತೂ ತೂತು ಮುಚ್ಚಿದ ಮರದ ಹಲಗೆಯಂತಿವೆ. ಸ್ವಚ್ಛತೆಗೆ ಇಲ್ಲಿ ಜಾಗವೇ ಇಲ್ಲ. ಅಡುಗೆ ಮನೆಯಲ್ಲಂತೂ ಶುಚಿತ್ವವೇ ಇಲ್ಲ.

ಇದು ಸರ್ಕಾರಿ ವೈದ್ಯಕೀಯ ಮತ್ತು ತಾಂತ್ರಿಕ ಕಾಲೇಜುಗಳ ಬಾಲಕರ ವಿದ್ಯಾರ್ಥಿ ನಿಲಯ. ಇರುವುದು ವಿದ್ಯಾಪೀಠ ಸರ್ಕಲ್‌ ಬಳಿ.

‘ನಮಗೆ ಇಲ್ಲಿ ಓದುವ ವಾತಾವರಣವೇ ಇಲ್ಲ. ಮೂರು ವರ್ಷಗಳಿಂದ ಕಾಮಗಾರಿ ನಡೆಯುತ್ತಲೇ ಇದೆ. ನೆಲಕ್ಕೆ, ವಾರಕ್ಕೆ ಒಂದು ಕಲ್ಲು ಹಾಕುತ್ತಾರೆ. ಅಷ್ಟು ನಿಧಾನವಾಗಿ ಕಾಮಗಾರಿ ನಡೆಯುತ್ತಿದೆ. ಕಾಂಪೌಂಡ್‌ ಕಟ್ವಲು ವರ್ಷಗಟ್ಟಲೇ ಸಮಯ ಹಿಡಿದಿದೆ. ಶಬ್ದ ಹಾಗೂ ದೂಳಿನಲ್ಲೇ ನಾವು ಮೂರು ವರ್ಷಗಳನ್ನು ಕಳೆದಿದ್ದೇವೆ. ಈಗ ಎಂಜಿನಿಯರಿಂಗ್‌ ಕೋರ್ಸ್‌ನ ಅಂತಿಮ ವರ್ಷದಲ್ಲಿದ್ದೇವೆ’ ಎಂದು ವಿದ್ಯಾರ್ಥಿಗಳು ಗೋಳು ತೋಡಿಕೊಂಡರು.

‘ವಿದ್ಯಾರ್ಥಿ ನಿಲಯದ ವಾರ್ಡನ್‌ ಹಾಗೂ ಸರ್ಕಾರದ ಪ್ರತಿನಿಧಿಗಳಿಗೂ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದೇವೆ. ಪ್ರತಿಭಟನೆಯನ್ನೂ ಮಾಡಿದ್ದೇವೆ. ಆದರೆ ಯಾರೂ ನಮ್ಮ ಸಮಸ್ಯೆಗಳನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಇಂತಹ ವಾತಾವರಣ, ನಮ್ಮ ವಿದ್ಯಾರ್ಥಿ ಜೀವನವನ್ನು ಹಾಳು ಮಾಡಿದೆ’ ಎಂದು ವೈದ್ಯಕೀಯ ವಿದ್ಯಾರ್ಥಿಯೊಬ್ಬರು ಅಳಲು ತೋಡಿಕೊಂಡರು.

ಗ್ರಂಥಾಲಯ ಇಲ್ಲ

ಇಲ್ಲಿ ಸರಿಯಾದ ಗ್ರಂಥಾಲಯವೂ ಇಲ್ಲ. ಬೇಡಿಕೆ ಹೆಚ್ಚಿದ್ದರಿಂದ ಹೆದರಿಕೊಂಡು ಇತ್ತೀಚೆಗೆ ಗ್ರಂಥಾಲಯ ತೆರೆಯಲು ಮನಸ್ಸು ಮಾಡಿದ್ದಾರೆ. ಆದರೆ ಪುಸ್ತಕಗಳು ಇನ್ನೂ ಬಂದಿಲ್ಲ. ಗ್ರಂಥಾಲಯದಲ್ಲಿ ಕೂತು ನಮ್ಮ ಪುಸ್ತಕಗಳನ್ನೇ ಓದಿಕೊಳ್ಳುತ್ತಿದ್ದೇವೆ. ಹಾಸ್ಟೆಲ್‌ನಲ್ಲಿ ಪ್ರಶಾಂತ ವಾತಾವರಣವೇ ಇಲ್ಲ. ಯಾವಾಗಲೂ ಕಾಮಗಾರಿ ನಡೆಯುತ್ತಿದ್ದರೆ ಓದುವುದು ಯಾವಾಗ ಎನ್ನುವುದು ವಿದ್ಯಾರ್ಥಿಗಳ ಪ್ರಶ್ನೆ. 

ತಣ್ಣೀರಿನ ಸ್ನಾನ

ಸೋಲಾರ್‌ ಹಾಕಿಸಿಕೊಡಬೇಕು ಎಂದು ವಿದ್ಯಾರ್ಥಿಗಳು ಹೋರಾಟ ಮಾಡುತ್ತಲೇ ಇದ್ದಾರೆ. ಆದರೆ ಇದು ಕೈಗೂಡಿಲ್ಲ. ಬೆಳಗ್ಗಿನ ಜಾವ ಹೊರಗೆ ಹೋಗುವವರು ಕೂಡ ತಣ್ಣೀರಿನಲ್ಲೇ ಸ್ನಾನ ಮಾಡುವ ಸ್ಥಿತಿ ಇಲ್ಲಿದೆ. 

ಆಹಾರ ಗುಣಮಟ್ಟ ಇಲ್ಲ

‘ಅಡುಗೆಗೆ ಸೊಸೈಟಿ ಅಕ್ಕಿ ಬಳಸುತ್ತಿದ್ದರು. ಬಳಿಕ ಸೋನಾ ಮಸೂರಿ ಬಳಸಲು ಹೋರಾಟ ಮಾಡಿದೆವು. ಈಗ ಎರಡನ್ನೂ ಮಿಕ್ಸ್‌ ಮಾಡುತ್ತಿದ್ದಾರೆ. ಕೇಳಲು ಹೋದರೆ ಬೈಯುತ್ತಾರೆ. ಅದಕ್ಕೇ ಸುಮ್ಮನಾಗಿಬಿಟ್ಟಿದ್ದೇವೆ’ ಎಂದು ಹೆಸರು ಹೇಳದ ವಿದ್ಯಾರ್ಥಿಗಳು ಅಭಿಪ್ರಾಯ ಹಂಚಿಕೊಂಡರು.

ವಿದ್ಯಾರ್ಥಿ ನಿಲಯ ಸ್ಥಾಪನೆ

1987ರಲ್ಲಿ ವಿದ್ಯಾರ್ಥಿ ನಿಲಯ ಆರಂಭವಾಯಿತು. 1984ರಲ್ಲಿ ಶಂಕುಸ್ಥಾಪನೆ ಮಾಡಲಾಗಿತ್ತು. ನಗರಾಭಿವೃದ್ಧಿ ಸಚಿವರಾಗಿದ್ದ ಎಂ. ಚಂದ್ರಶೇಖರ್‌ ಶಂಕುಸ್ಥಾಪನೆ ಮಾಡಿದ್ದರು. ಟಿ.ಆರ್‌.ಶಾಮಣ್ಣ, ಎಚ್‌.ಎಲ್‌.ತಿಮ್ಮೇಗೌಡ, ವಿ.ಎಸ್‌.ಕೃಷ್ಣಯ್ಯ ಉಪಸ್ಥಿತರಿದ್ದರು. ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಈ ಕಟ್ಟಡವನ್ನು ಉದ್ಘಾಟಿಸಿದ್ದರು. ಪ್ರತಿ ವರ್ಷ 200ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವಾಸ ಮಾಡುತ್ತಾರೆ. ಈ ವರ್ಷ 230 ಮಂದಿ ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !