ಸೋಮವಾರ, ಅಕ್ಟೋಬರ್ 14, 2019
22 °C
ಏನಾದ್ರೂ ಕೇಳ್ಬೋದು

ತಮ್ಮನ ಓದಿನ ಭವಿಷ್ಯ ಹೇಗೆ?

Published:
Updated:

ನನ್ನ ತಮ್ಮ ಮೊದಲಿನಿಂದಲೂ ಓದಿನಲ್ಲಿ ಸದಾ ಮುಂದು. ಎಸ್‌ಎಸ್‌ಎಲ್‌ಸಿಯಲ್ಲಿ ಶೇ 90 ಅಂಕ ಗಳಿಸಿದ್ದ. ನಂತರ ಅವನು ಬಯಸಿದ ಹಾಗೆ ಧಾರಾವಾಡದಲ್ಲಿ ಪಿಯುಸಿಗೆ ಸೇರಿಸಿದೆ. ಆದರೆ ಅಲ್ಲಿ ಕಾಲೇಜಿಗೆ ಸೇರಿದ ಮೇಲೆ ‘ನನಗೆ ಇಲ್ಲಿ ಇರಲು ಆಗುತ್ತಿಲ್ಲ’ ಎಂದು ಹಟ ಮಾಡಿದ. ಹಾಗಾಗಿ ಮತ್ತೆ ನಮ್ಮೂರಿನ ಕಾಲೇಜಿಗೆ ಸೇರಿಸಿದೆ. ಇಲ್ಲಿಯೂ ಸರಿಯಾಗಿ ಕಾಲೇಜಿಗೆ ಹೋಗದೆ, ಕೊನೆಗೆ ನಮ್ಮ ಒತ್ತಾಯಕ್ಕೆ ಮಣಿದು ಕಷ್ಟಪಟ್ಟು ಕಾಲೇಜಿಗೆ ಹೋಗಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣನಾದ. ‘ನಾನು ಈ ವರ್ಷ ಸರಿಯಾಗಿ ಕಾಲೇಜಿಗೆ ಹೋಗದೆ ಕಡಿಮೆ ಅಂಕಗಳನ್ನು ಪಡೆದಿದ್ದೇನೆ. ಆದರೆ ದ್ವಿತೀಯ ಪಿಯುಸಿಯಲ್ಲಿ ಪ್ರತಿದಿನ ಕಾಲೇಜಿಗೆ ಹೋಗಿ ಉತ್ತಮ ಅಂಕಗಳನ್ನು ಪಡೆಯುತ್ತೇನೆ’ ಎಂದು ಅವನೇ ಹೇಳುತ್ತಿದ್ದ. ಜೊತೆಗೆ ಆತ್ಮವಿಶ್ವಾಸದಿಂದ ಇದ್ದ. ಆದರೆ ಈಗ ತರಗತಿಗಳು ಆರಂಭವಾಗಿದ್ದು ಮತ್ತೆ ಕಾಲೇಜಿಗೆ ಹೋಗಲು ಇಷ್ಟಪಡುತ್ತಿಲ್ಲ. ‘ನನಗೆ ಕಾಲೇಜು ಇಷ್ಟವಿಲ್ಲ’ ಎನ್ನುತ್ತಿದ್ದಾನೆ. ಈ ಬಗ್ಗೆ ನಾವು ನೂರು ಪ್ರಶ್ನೆ ಕೇಳಿದರೂ ಅವನು ಒಂದೂ ಮಾತನಾಡುತ್ತಿಲ್ಲ. ವಿಪರೀತ ಕೋಪ ಮಾಡಿಕೊಳ್ಳುವುದು, ಬುದ್ಧಿ ಹೇಳಿದವರ ಮೇಲೆಲ್ಲ ರೇಗುವುದು ಮಾಡುತ್ತಾನೆ. ನನಗೆ ಅವನ ಭವಿಷ್ಯದ ಬಗ್ಗೆ ಚಿಂತೆ ಆಗುತ್ತಿದೆ. ಅವನ ಸಮಸ್ಯೆ ಏನು ಎಂಬುದು ಅರ್ಥವಾಗುತ್ತಿಲ್ಲ. ಕಾಲೇಜು ಕಡೆಯಿಂದಲೂ ಯಾವುದೇ ಸಮಸ್ಯೆ ಇಲ್ಲ.
–ರವಿ ಡಿ., ಸವಣೂರು ಹಾವೇರಿ

ಉತ್ತರ: ನಿಮ್ಮ ತಮ್ಮ ತುಂಬಾ ಬುದ್ಧಿವಂತ ನಿಜ. ಆದರೆ ಈಗ ಅವನಿಗೆ ಓದಿನಲ್ಲಿ ಆಸಕ್ತಿ ಇಲ್ಲ. ಕೆಲವೊಮ್ಮೆ ಹೀಗಾಗುತ್ತದೆ. ತರಗತಿಯ ಪಾಠದ ಮೇಲಿನ ನಿರಾಸಕ್ತಿ, ಆಲಸ್ಯ, ಓದದಿದ್ದರೂ ನಡೆಯುತ್ತದೆ ಎನ್ನುವ ಮನೋಭಾವ ಈ ಎಲ್ಲಾ ಕಾರಣಗಳಿಂದ ಅವರು ಈ ರೀತಿ ಆಗಿರಬಹುದು. ನಿಮ್ಮ ತಮ್ಮನಿಗೆ ಆತ್ಮೀಯರು ಯಾರು ಹಾಗೂ ಅವರು ಯಾರ ಬಳಿ ಯಾವುದೇ ಹಿಂಜರಿಕೆಯಿಲ್ಲದೇ ಮಾತನಾಡುತ್ತಾರೆ ಎಂಬುದನ್ನು ಗಮನಿಸಿ. ಆಗ ನೀವು ನಿಮ್ಮ ತಮ್ಮನ ಆತ್ಮೀಯರ ಬಳಿ ತಮ್ಮೊಂದಿಗೆ ಮಾತನಾಡುವಂತೆ ಹೇಳಬಹುದು. ಅವರು ಯಾವ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ, ಕಾಲೇಜು ತಪ್ಪಿಸಲು ಕಾರಣ ಏನು ಈ ಎಲ್ಲವನ್ನು ಮುಕ್ತವಾಗಿ ಅವರ ಜೊತೆ ಹೇಳಿಕೊಳ್ಳಬಹುದು. ಕಾಲೇಜ್ ಅಲ್ಲದೇ ಅವರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳಿ. 

ಅವರು ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದಾರಾ?, ಪೌಷ್ಟಿಕ ಆಹಾರ ಸೇವಿಸುತ್ತಿದ್ದಾರಾ? ಎಂದು ಗಮನಿಸಿ. ವಿದ್ಯಾರ್ಥಿಗಳಿಗೆ ವ್ಯಾಯಾಮ ಹಾಗೂ ಪೌಷ್ಟಿಕ ಆಹಾರ ಸೇವನೆ ತುಂಬಾ ಮುಖ್ಯ. ಅವು ವಿದ್ಯಾರ್ಥಿಗಳನ್ನು ಶಕ್ತಿವಂತರನ್ನಾಗಿ ಮಾಡಿ, ಸದಾ ಕ್ರಿಯಾಶೀಲರಾಗಿರಲು ಸಹಾಯ ಮಾಡುತ್ತದೆ. ಅವರ ಬಳಿ ಮೊಬೈಲ್ ಫೋನ್ ಇದ್ದರೆ ಅದಕ್ಕೆ ಅಡಿಕ್ಟ್ ಆಗಿದ್ದಾರೆಯೇ ಗಮನಿಸಿ. ಈ ಎಲ್ಲಾ ಸಮಸ್ಯೆಗಳಿಲ್ಲದೇ ಎಲ್ಲವೂ ಸರಿಯಿದ್ದರೆ ಅವರ ಜೊತೆ ಕುಳಿತು ಶಿಕ್ಷಣ ಎಂಬುದು ಭವಿಷ್ಯದ ಜೀವನಕ್ಕೆ ಎಷ್ಟು ಮುಖ್ಯ ಎಂಬುದನ್ನು ನಿಧಾನಕ್ಕೆ ಅವರಿಗೆ ತಿಳಿಸಿ. ಕೇವಲ ಅವರ ಭವಿಷ್ಯಕ್ಕಾಗಿ ಓದುವಂತೆ ಒತ್ತಾಯಿಸುತ್ತಿರುವುದು ಎಂಬುದನ್ನು ಮನವರಿಕೆ ಮಾಡಿ. ಇದ್ಯಾವುದರಿಂದಲೂ ಅವರು ಸರಿಹೊಂದದಿದ್ದರೆ ಉತ್ತಮ ಆಪ್ತಸಮಾಲೋಚಕರನ್ನು ನೋಡಲು ಹೇಳಿ. ಅದರಿಂದ ಖಂಡಿತ ಅವರಿಗೆ ಸಹಾಯವಾಗುತ್ತದೆ.

***

ನನಗೆ 23 ವರ್ಷ. ಮದುವೆ ಆಗಿ ಒಂದು ಮಗುವಿದೆ. ಎಲ್ಲರೊಂದಿಗೆ ಮಾತನಾಡಲು ನನಗೆ ಹಿಂಜರಿಕೆ. ನಾನು ತುಂಬಾ ಸೈಲೆಂಟ್. ನಾನೇಕೆ ಹೀಗೆ? ಇದರಿಂದ ಹೊರ ಬರಲು ಏನು ಮಾಡಬೇಕು? 
–ಹೆಸರು, ಊರು ಬೇಡ

ಉತ್ತರ: ನೀವು ಕೀಳರಿಮೆಯಲ್ಲಿದ್ದೀರಿ. ನಿಮ್ಮಲ್ಲಿ ನೀವು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದರಿಂದ ಖಂಡಿತ ಕೀಳರಿಮೆಯಿಂದ ಹೊರ ಬರಬಹುದು. ನಿಮ್ಮನ್ನೇ ನೀವು ಪರಿಶೀಲನೆ ಮಾಡಿಕೊಳ್ಳಿ. ಕೀಳರಿಮೆ ಮೂಡಲು ಕಾರಣ ಏನು ಎಂಬುದನ್ನು ತಿಳಿದುಕೊಳ್ಳಿ. ಅದಕ್ಕೆ ಕಾರಣಗಳು ಹಲವಿರಬಹುದು. ನೀವು ಮಾತನಾಡುವ ರೀತಿಯನ್ನು ಯಾರಾದರೂ ಟೀಕಿಸಿರಬಹುದು, ನಿಮ್ಮದು ನಾಚಿಕೆಯ ಸ್ವಭಾವವಾಗಿರಬಹುದು ಅಥವಾ ನಿಮಗೆ ಆರಾಮಾಗಿ ಇನ್ನೊಬ್ಬರ ಜೊತೆ ಮಾತನಾಡಲು ಸಾಧ್ಯವಾಗದಿರಬಹುದು. ನಿಮ್ಮ ಸುತ್ತಲಿನ ಜನರ ಜೊತೆ ನಿಮ್ಮನ್ನು ಹೋಲಿಸಿಕೊಂಡು ಅವರೊಂದಿಗೆ ನೀವು ಜಾಣತನದಿಂದ ವರ್ತಿಸುತ್ತಿಲ್ಲ, ಆ ಕಾರಣಕ್ಕೆ ನನ್ನನ್ನು ನೋಡಿ ನಗುತ್ತಿದ್ದಾರೆ ಎಂಬ ಭಾವನೆ ನಿಮ್ಮಲ್ಲಿರಬಹುದು.  

ಈ ಎಲ್ಲಾ ಕಾರಣಗಳಾಗಿದ್ದರೆ ಮನೆಯಲ್ಲಿ ಮನಸ್ಸಿಗೆ ಹತ್ತಿರವಾದವರ ಜೊತೆ ಮಾತನಾಡಿ. ಅವರೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ನಿಮಗೆ ಆಸಕ್ತಿ ಇರುವ ವಿಷಯದ ಮೇಲೆ ಹೆಚ್ಚು ಹೆಚ್ಚು ಮಾತನಾಡಿ. ನಿಧಾನಕ್ಕೆ ಸ್ನೇಹಿತರನ್ನು ಸಂಪಾದಿಸಿ. ಅಪರಿಚಿತರ ಜೊತೆ ಮಾತನಾಡಲು ಅಭ್ಯಾಸ ಮಾಡಿ. ದೇವಸ್ಥಾನ, ಬಸ್ ನಿಲ್ದಾಣ ಅಥವಾ ಇನ್ನಿತರ ಯಾವುದೇ ಸಾಮಾಜಿಕ ಸ್ಥಳಗಳಲ್ಲಿ ಸಿಗುವ ಅಪರಿಚಿತರ ಜೊತೆ ಮಾತನಾಡಿ. ಆಗ ನಿಮಗೆ ಆತ್ಮವಿಶ್ವಾಸ ಹೆಚ್ಚುತ್ತದೆ. ಅಪರಿಚಿತರು ನಿಮ್ಮ ವ್ಯಕ್ತಿತ್ವವನ್ನು ಅಳೆಯುವುದಿಲ್ಲ.

ಈಗ ನಿಮಗೆ ಮಗು ಇದೆ. ಮಗುವನ್ನು ಕರೆದುಕೊಂಡು ಪಾರ್ಕ್‌ಗೆ ಹೋಗಿ. ಅಲ್ಲಿ ಬೇರೆ ಮಕ್ಕಳ ತಂದೆ–ತಾಯಿಯರನ್ನು ಭೇಟಿ ಮಾಡಲು ಸಾಧ್ಯವಾಗುತ್ತದೆ. ಅವರನ್ನು ನೋಡಿ ನಿಮ್ಮಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ನಿಧಾನಕ್ಕೆ ಆತ್ಮಗೌರವವೂ ಹೆಚ್ಚುತ್ತದೆ. 

***
ನಾನು ಖಾಸಗಿ ಕಂಪನಿ ಉದ್ಯೋಗಿ. ನನಗೆ ಆಶಾವಾದಿಯಾಗಿ ಇರಲು ಬರುವುದಿಲ್ಲ. ಪ್ರತಿ ವಿಷಯವನ್ನೂ ನೆಗೆಟಿವ್‌ ಆಗಿ ಯೋಚಿಸುತ್ತೇನೆ. ಪ್ರತಿದಿನ ಅದು ಮಾಡಬೇಕು, ಇದು ಮಾಡಬೇಕು ಎಂದುಕೊಳ್ಳುತ್ತೇನೆ. ಆದರೆ ಯಾವುದನ್ನು ಪೂರ್ಣವಾಗಿ ಮಾಡುವುದಿಲ್ಲ. ಯಾವುದೇ ಕೆಲಸವನ್ನಾದರೂ 4ರಿಂದ 5 ದಿನ ಮಾಡಿ ಸುಮ್ಮನಾಗುತ್ತೇನೆ. ಇದರಿಂದ ಮನೆಯಲ್ಲಿ ಬೈಸಿಕೊಳ್ಳುವುದೇ ಆಗಿದೆ. ಆಲಸ್ಯ ಕಾಡುತ್ತದೆ. ಸದಾ ನಿದ್ದೆ ಮಾಡಬೇಕು ಎನ್ನಿಸುತ್ತದೆ. ನನಗಿರುವ ಸಮಸ್ಯೆ ಏನು?
–ರಕ್ಷಾ, ದಾವಣಗೆರೆ

ಉತ್ತರ: ನೀವು ಇಲ್ಲಿ ನಿಮ್ಮ ವಯಸ್ಸನ್ನು ತಿಳಿಸಿ. ಅದೇನೆ ಇರಲಿ. ನಿರಾಸಕ್ತಿ ಹಾಗೂ ಉತ್ಸಾಹದ ಕೊರತೆಯಿಂದ ನೀವು ಈ ಸಮಸ್ಯೆಯನ್ನು ಎದುರಿಸುತ್ತಿದ್ದೀರಿ. ವಿಳಂಬ ಪ್ರವೃತ್ತಿಯಿರುವ ಅನೇಕರಲ್ಲಿ ಈ ಸಮಸ್ಯೆ ಕಾಡುತ್ತಿದೆ. ಮೊದಲು ನಿಮ್ಮ ವ್ಯಾಯಾಮ ಹಾಗೂ ಆಹಾರಕ್ರಮವನ್ನು ಗಮನಿಸಿ. ಅವು ನಿಮ್ಮನ್ನು ಆರೋಗ್ಯೊಪೂರ್ಣರಾಗಿ ಉತ್ಸಾಹದಿಂದಿರಲು ಸಹಾಯ ಮಾಡುತ್ತದೆ. ಒಂದು ಕೆಲಸ ಹಿಡಿದ ಮೇಲೆ ಅದು ಪರಿಪೂರ್ಣವಾಗುವವರೆಗೂ ಇನ್ನೊಂದು ಕೆಲಸಕ್ಕೆ ಕೈ ಹಾಕಬೇಡಿ. ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರ ಬಳಿ ನಿಮ್ಮನ್ನು ಬೈಯುವ ಬದಲು ಪ್ರೇರಿಪಿಸಲು ತಿಳಿಸಿ.  ಪ್ರತಿದಿನ ಮೈ ಬೆವರಿಳಿಯುವಷ್ಟು ಆಟವಾಡಿ. ಇದರಿಂದ ಅತಿಯಾದ ನಿದ್ದೆ ನಿಮ್ಮನ್ನು ಕಾಡದಂತೆ ತಡೆಯಬಹುದು. ಜೊತೆಗೆ ಏಕಾಗ್ರತೆಯನ್ನು ಹೆಚ್ಚಿಸಿ ಕೆಲಸದ ಮೇಲೆ ಆಸಕ್ತಿ ಮೂಡುವಂತೆ ಮಾಡುತ್ತದೆ. ಈ ಕೆಲವು ಚಿಕ್ಕ ಕೆಲಸಗಳಿಂದ ನೀವು ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ನೀವು ಈ ದೇಶದ ಯುವ ಸಮೂಹ. ಹಾಗಾಗಿ ನೀವು ಸದಾ ಕ್ರೀಯಾಶೀಲರಾಗಿರಬೇಕು. ಉತ್ಸಾಹ ಹಾಗೂ ಕ್ರಿಯಾಶೀಲತೆ ಸದಾ ನಿಮ್ಮಲ್ಲಿರಬೇಕು. ಈ ಸಮಯ ಮತ್ತೆ ಬರುವುದಿಲ್ಲ ಎಂಬುದು ನಿಮ್ಮ ಮನಸ್ಸಿನಲ್ಲಿರಲಿ. ಆಗ ಸಂತಸದಿಂದ ಬದುಕಬಹುದು.

Post Comments (+)