ಗುರುವಾರ , ಅಕ್ಟೋಬರ್ 17, 2019
26 °C

ತಾಯಿಯ ಆಸೆಯನ್ನು ಪೂರೈಸುವುದು ಹೇಗೆ?

Published:
Updated:

ನಾನು ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ನನಗೆ ಪಾಠವನ್ನು ಕೇಳಲು ಆಸಕ್ತಿಯಿಲ್ಲ. ಕೇವಲ ಯೋಚನೆ ಮಾಡಿ ಮಾಡಿ ಮನಸ್ಸು ಕೆಟ್ಟು ಹೋಗಿದೆ. ನನಗೆ ಸಹಾಯ ಮಾಡಿ.

ಹೆಸರು, ಊರು ಬೇಡ

ನೀವು ಕೊಟ್ಟಿರುವ ವಿವರಗಳು ಅಪೂರ್ಣವಾಗಿವೆ. ಯೋಚನೆ ಮಾಡುವ ವಿಚಾರಗಳು, ಅವುಗಳ ಹಿನ್ನೆಲೆಯನ್ನು ತಿಳಿಸಿದ್ದರೆ ಸಹಾಯವಾಗುತ್ತಿತ್ತು. ನಿಮ್ಮ ಗುರಿ, ಉದ್ದೇಶಗಳು, ಆಸೆಗಳೆಲ್ಲವೂ ಪ್ರಾಮಾಣಿಕವಾಗಿದ್ದರೂ ಸದ್ಯಕ್ಕೆ ನಿಮ್ಮ ಯೋಚನೆಗಳಿಗೆ ಪ್ರಾಮುಖ್ಯತೆಯನ್ನು ಕೊಡುತ್ತಿದ್ದೀರಿ. ಯೋಚನೆಗಳನ್ನು ಬಲವಂತವಾಗಿ ಹೊರತಳ್ಳಿ ಏಕಾಗ್ರತೆ ಮಾಡಲು ಸಾಧ್ಯವಾಗುವ ವ್ಯವಸ್ಥೆಯನ್ನು ಪ್ರಕೃತಿ ನಮ್ಮ ಮೆದುಳಿನಲ್ಲಿ ಇಟ್ಟಿಲ್ಲ. ಮನಸ್ಸು ತನಗೆ ಆಸಕ್ತಿ ಇರುವುದನ್ನು ಅಥವಾ ಮುಖ್ಯ ಎನ್ನಿಸುವುದನ್ನು ಆಯ್ದುಕೊಂಡು ಅದರಲ್ಲಿ ತನ್ನ ಶಕ್ತಿಯನ್ನು ಉಪಯೋಗಿಸುತ್ತದೆ. ಓದುವ ವಿಷಯದಲ್ಲಿ ನಿಮಗೆ ಆಳವಾದ ಆಸಕ್ತಿಯಿಲ್ಲದಿದ್ದಾಗ ಬಲವಂತದ ಏಕಾಗ್ರತೆ ಅಸಾಧ್ಯ.

ಹಾಗಾಗಿ ನನ್ನ ನಿಜವಾದ ಆಸಕ್ತಿಗಳೇನು, ನನ್ನನ್ನು ಕಾಡುವ ವಿಚಾರಗಳ ಹಿನ್ನೆಲೆಯೇನು, ಅಂತಹ ಯೋಚನೆಗಳನ್ನು ನಿಭಾಯಿಸುತ್ತಲೇ ನನ್ನ ಆಸಕ್ತಿಗಳಿಗಾಗಿ ಹೇಗೆ ಶ್ರಮವಹಿಸುವುದು ಎನ್ನುವುದರ ಬಗೆಗೆ ಯೋಚಿಸಿ. ಹದಿಹರೆಯದಲ್ಲಿ ಆಯ್ಕೆಯ ಗೊಂದಲಗಳು ಸಹಜ. ನಿಧಾನವಾಗಿ ಸ್ಪಷ್ಟತೆ ಮೂಡುತ್ತದೆ.

ನಾನು ಪಿಎಸ್‍ಐ ಪರೀಕ್ಷೆಗೆ ಕೋಚಿಂಗ್ ಪಡೆಯುತ್ತಿದ್ದೇನೆ. ನನಗೆ ಓದಲು ಏಕಾಗ್ರತೆ ಬರುತ್ತಿಲ್ಲ. ಕಷ್ಟಪಟ್ಟು ಓದಿದರೆ ಅರ್ಥವಾಗುತ್ತದೆ, ಆದರೆ ನೆನಪುಳಿಯುವುದಿಲ್ಲ. ಈ ಚಿಂತೆ, ದುಃಖಗಳಿಂದ ಯಾರೊಡನೆಯೂ ಬೆರೆಯಲಾಗುತ್ತಿಲ್ಲ. ಓದು, ಜೀವನ ಬೇಡವೆನಿಸುತ್ತದೆ. ಆದರೆ ತಾಯಿಯ ಆಸೆಯಿಂದ ಓದುವುದನ್ನು ಬಿಡಲೂ ಆಗುತ್ತಿಲ್ಲ. ತಾಯಿಯ ಕನಸುಗಳು ನನ್ನನ್ನು ಕಟ್ಟಿಹಾಕುತ್ತಿವೆ. ಎಲ್ಲರ ಹತ್ತಿರ ಹೇಳಿದರೂ ಪರಿಹಾರ ಸಿಗಲಿಲ್ಲ. ನಾನೇಕೆ ಹೀಗೆ? ಪರಿಹಾರವೇನು?

ಹೆಸರು, ಊರು ಬೇಡ

ನಿಮ್ಮ ಪತ್ರದ ಧ್ವನಿಯನ್ನು ನೋಡಿದರೆ ಪಿಎಸ್‍ಐ ಪರೀಕ್ಷೆಗೆ ಓದುವುದು ನಿಮ್ಮ ಆಸಕ್ತಿಯಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಆಸಕ್ತಿಯಿಲ್ಲದ ಕ್ಷೇತ್ರದಲ್ಲಿ ಜೀವನವೆಲ್ಲಾ ಹೇಗೆ ಕಳೆಯುತ್ತೀರಿ? ತಾಯಿಯ ಬಗೆಗಿನ ನಿಮ್ಮ ಮಮತೆ ಪ್ರಾಮಾಣಿಕವಾಗಿದ್ದರೂ ಪ್ರೀತಿಸುವುದೆಂದರೆ ಅವರ ಇಷ್ಟದಂತೆ ಬದುಕುವುದು ಎಂದು ಸಿನಿಮಾಗಳಲ್ಲಿ ತೋರಿಸುವಂತೆ ತಪ್ಪಾಗಿ ತಿಳಿದುಕೊಂಡಿದ್ದೀರಿ. ಒತ್ತಾಯದಿಂದ ನಿಮಗೆ ಇಷ್ಟವಿಲ್ಲದ ಕೆಲಸವನ್ನು ಮಾಡಿದರೆ ನಿಮ್ಮೊಳಗೆ ಹತಾಶೆ, ಅಸಹಾಯಕತೆ ತುಂಬಿಕೊಂಡು ಅದು ಕೋಪವಾಗಿ ಬೇಸರವಾಗಿ ಬದಲಾಗುತ್ತದೆ. ಆಗ ತಾಯಿಯಲ್ಲಿ ಪ್ರೀತಿಯೆಲ್ಲಿ ಉಳಿಯುತ್ತದೆ? ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ನೂರಾರು ಮಾರ್ಗಗಳಿವೆ. ಅದಕ್ಕಾಗಿ ಅವರಿಚ್ಛೆಯಂತೆ ಬದುಕಲೇಬೇಕಾಗಿಲ್ಲ. ತನ್ನ ಆಸೆಯನ್ನು ಪೂರೈಸುವುದಕ್ಕಾಗಿ ಮಗ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾನೆ ಎನ್ನುವುದು ನಿಮ್ಮ ತಾಯಿಯವರಿಗೆ ಸಂತೋಷದ ವಿಷಯವೆಂದುಕೊಂಡಿದ್ದೀರಾ? ಬೇಕಿದ್ದರೆ ಅವರನ್ನೇ ಕೇಳಿನೋಡಿ.

ಮೊದಲು ನಿಮ್ಮ ಆಸಕ್ತಿಗಳೇನು ಮತ್ತು ಅದನ್ನು ಹೇಗೆ ಸಾಧಿಸಬೇಕೆಂದಿದ್ದೀರಿ ಎನ್ನುವುದರ ಬಗೆಗೆ ವಿವರವಾದ ಯೋಜನೆಯನ್ನು ಸಿದ್ಧಪಡಿಸಿ. ನಂತರ ತಾಯಿಯ ಜೊತೆ ಏಕಾಂತದಲ್ಲಿ ಮಾತನಾಡಿ. ನೀವು ಈಗ ಅನುಭವಿಸುತ್ತಿರುವ ಮಾನಸಿಕ ಹಿಂಸೆ, ಪಿಎಸ್‍ಐ ಆಗದೆ ಇರುವುದರಿಂದ ತಾಯಿಗೆ ಆಗುವ ನಿರಾಸೆ, ನಿಮ್ಮ ಮುಂದಿನ ಯೋಜನೆ, ದಾರಿ ಎಲ್ಲವನ್ನೂ ಅವರಿಗೆ ವಿವರಿಸಿ. ನನ್ನ ದಾರಿಯನ್ನು ಹುಡುಕಿಕೊಂಡಾಗ ಸಿಗುವ ಖುಷಿಯಿಂದ ನಿನ್ನನ್ನು ಇನ್ನೂ ಆಳವಾಗಿ ಪ್ರೀತಿಸಲು ಸಾಧ್ಯ ಎಂದು ವಿವರಿಸಿ. ಯಾವುದೇ ಒತ್ತಾಯ, ಕಣ್ಣೀರುಗಳಿಗೆ ಮಣಿಯದೆ ನಿಮ್ಮ ಆಯ್ಕೆಯನ್ನು ಮಾಡಿಕೊಳ್ಳಿ. ನಂತರ ನಿಮಗೆ ಸಿಗುವ ಸಂತೋಷ, ಸಮಾಧಾನವನ್ನು ತಾಯಿಯ ಜೊತೆ ಹಂಚಿಕೊಳ್ಳಲು ಅವಕಾಶವಿರುತ್ತದೆ. ಸಹನೆಯಿರಲಿ. ಮೂರನೆಯವರಿಂದ ತಾಯಿಗೆ ಹೇಳಿಸಿ ನಿಮ್ಮ ಸಂಬಂಧವನ್ನು ಹಾಳುಮಾಡಿಕೊಳ್ಳಬೇಡಿ.

ಎಂ.ಎ. ಓದುತ್ತಿದ್ದೇನೆ. ನನಗೆ ಚೆನ್ನಾಗಿ ಓದೋಕೆ ಬರುತ್ತದೆ. ಆದರೆ ಎಲ್ಲರ ಮುಂದೆ ಓದುವಾಗ ತುಂಬಾ ಭಯವಾಗುತ್ತದೆ. ಉಸಿರು ಬಿಗಿಯಾದ ಹಾಗಾಗಿ ಬೇಗನೆ ಮುಗಿಸಿದರೆ ಸಾಕು ಎನ್ನಿಸುತ್ತದೆ. ಪರಿಹಾರವೇನು?

ಹೆಸರು, ಊರು ಬೇಡ

ಮನುಷ್ಯರ ಮೆದುಳು ವಾಸ್ತವ ಮತ್ತು ಕಲ್ಪನೆಗಳನ್ನು ಸ್ಪಷ್ಟವಾಗಿ ಗುರುತಿಸುವುದಿಲ್ಲ. ಹಾಗಾಗಿಯೇ ಹಗಲುಗನಸುಗಳು ವಾಸ್ತವದಂತೆಯೇ ಖುಷಿಕೊಡುತ್ತವೆ. ಎಲ್ಲರೆದುರು ಓದುವುದನ್ನು ನೀವು ಹುಲಿಯನ್ನು ಎದುರಿಸುವ ರೀತಿಯಲ್ಲಿ ತೆಗೆದುಕೊಳ್ಳುತ್ತಿದ್ದೀರಿ. ಹಾಗಾಗಿ ಉಸಿರಿನ ವೇಗ ಹೆಚ್ಚಿ ಸಿಕ್ಕಿಹಾಕಿಕೊಂಡಂತೆ ಅನಿಸುತ್ತದೆ. ನಿಮ್ಮ ಭಯದ ಮೂಲಗಳನ್ನು ಗುರುತಿಸಿದ್ದೀರಾ? ತಪ್ಪಾಗಿ ಓದುವುದನ್ನು ಅವಮಾನ, ಸೋಲು, ಕಪ್ಪುಚುಕ್ಕೆಗಳಾಗಿ ನೀವು ಕಲ್ಪಿಸಿಕೊಳ್ಳುತ್ತಿರಬಹುದೇ? ಇಂತಹ ಅನಿಸಿಕೆಗಳು ನಿಜವೇ? ನಿಮ್ಮ ಸಂಪೂರ್ಣ ವ್ಯಕ್ತಿತ್ವ ತಪ್ಪಾಗಿ ಓದಿದರೆ ಕುಸಿದು ಬೀಳುತ್ತದೆಯೇ? ಉತ್ತರಗಳನ್ನು ಹುಡುಕಿ. ಮೆದುಳಿಗೆ ಕನಸುಗಳ ಮೂಲಕವೇ ತರಬೇತಿ ನೀಡಿ. ಕನ್ನಡಿಯೆದುರು ನಿಂತು ಓದಬೇಕಾದ ಸಂದರ್ಭವನ್ನು ಆಳವಾಗಿ ಕಲ್ಪಿಸಿಕೊಳ್ಳಿ. ಓದಲು ಪ್ರಾರಂಭಿಸಿದೊಡನೆ ದೇಹದಲ್ಲಾಗುವ ಬದಲಾವಣೆಗಳನ್ನು ಗಮನಿಸಿ. ನಿಧಾನವಾಗಿ ಉಸಿರಾಡುತ್ತಾ ದೇಹವನ್ನು ಸಡಿಲಬಿಡಿ. ಮತ್ತೆ ಓದುವ ಕಲ್ಪನೆ ಮುಂದುವರೆಸಿ. ಹೀಗೆ ಪದೇ ಪದೇ ಮಾಡಿ. ಓದುವುದಕ್ಕೆ ವೇದಿಕೆ ಹತ್ತಿದ ಕೂಡಲೇ ಅವಸರವಿಲ್ಲದೆ 10 ಸೆಂಕೆಂಡ್ ಎಲ್ಲರನ್ನೂ ನೋಡಿ. ನಿಧಾನವಾಗಿ ಉಸಿರಾಡುತ್ತಾ ದೇಹವನ್ನು ಸಡಿಲಬಿಡಿ. ಆತಂಕ ಶುರುವಾದ ಕೂಡಲೇ ಮತ್ತೆ ನಿಧಾನಿಸಿ. ಅವಸರ ಮಾಡಿದಷ್ಟೂ ಆತಂಕ ನಿಮ್ಮ ಹಿಡಿತ ಮೀರುತ್ತದೆ.

(ಅಂಕಣಕಾರರು ಶಿವಮೊಗ್ಗದಲ್ಲಿ ಮನೋಚಿಕಿತ್ಸಕರು)

Post Comments (+)