ನನ್ನ ಡಾಕ್ಟರ್‌ ಹೇಗಿರಬೇಕು?

7

ನನ್ನ ಡಾಕ್ಟರ್‌ ಹೇಗಿರಬೇಕು?

Published:
Updated:

ವೈದ್ಯನನ್ನು ಸಾಕ್ಷಾತ್ ಧನ್ವಂತರಿ ಎಂದು, ಭಗವಂತನನ್ನು ಭವರೋಗವೈದ್ಯ ಎಂದೂ, ವೈದ್ಯೋ ನಾರಾಯಣೋ ಹರಿಃ ಎಂದೂ ನಂಬಿದ ಸಂಸ್ಕೃತಿ ನಮ್ಮದು. ಜೀವ ಕೊಡುವವನು ದೇವರಾದರೂ, ಆ ಜೀವ ತೊಂದರೆಗೆ ಸಿಲುಕಿ ನರಳಾಡುವಾಗ, ಸಂಕಟದಿಂದ ಪಾರು ಮಾಡಿ ಪುನರ್ಜನ್ಮ ಕೊಡುವವಳು ವೈದ್ಯೆ – ಎಂಬಷ್ಟರ ಮಟ್ಟಿಗಿನ ಭಾವುಕ ಗೌರವಕ್ಕೆ ಅರ್ಹವಾದ ಕೆಲವೇ ವೃತ್ತಿಗಳಲ್ಲಿ ಅಗ್ರಗಣ್ಯವಾದುದು ವೈದ್ಯವೃತ್ತಿ.

ಯಾವ ವೃತ್ತಿಯವರು ಒಂದೆರಡು ದಿನ ಲಭ್ಯವಿಲ್ಲದಿದ್ದರೂ ಹೇಗೋ ಸಂಭಾಳಿಸಬಹುದು, ಆದರೆ ವೈದ್ಯರು ಸಮಯಕ್ಕೆ ಒದಗದಿದ್ದರೆ ಆ ಕಷ್ಟವನ್ನು ಸಹಿಸುವುದು ಸಾಧ್ಯವೇ? ಹೀಗಿದ್ದರೂ ವೈದ್ಯರು ಅಂದ ಕೂಡಲೇ ನೂರೆಂಟು ಡಿಗ್ರಿಗಳನ್ನು ಹೆಸರಿನ ಮುಂದಿಟ್ಟುಕೊಂಡು, ಬಿಳಿಕೋಟು ಸ್ಟೆಥಸ್ಕೋಪ್‌ ಧರಿಸಿ ಠಾಕು ಠೀಕಾಗಿ ತಮ್ಮ ಕ್ಲಿನಿಕ್‌ನಲ್ಲಿ ಕುಳಿತು ಅಥವಾ ಅಪರೇಷನ್ ಥಿಯೇಟರ್‌ನ ಗೌನು ಧರಿಸಿ, ಮೆಡಿಕಲ್ ರಿಪೋರ್ಟ್‌ಗಳನ್ನು ನೋಡುತ್ತಾ, ಧಾವಂತದಿಂದ ಓಡಾಡಿಕೊಂಡು ಭಯ ಹುಟ್ಟಿಸುತ್ತ, ನಮ್ಮಂತಹ ಹುಲುಮಾನವರಿಗೆ ಅರ್ಥವಾಗದ ಪದಗಳನ್ನು ಪ್ರಯೋಗಿಸುತ್ತ, ಬ್ರಹ್ಮಲಿಪಿಯಂತಹ ಕೈಬರಹದಲ್ಲಿ ಏನೋ ಬರೆದುಕೊಟ್ಟು, ನೂರಾರು ವೈದ್ಯಕೀಯ ಪರೀಕ್ಷೆಗಳ ಪಟ್ಟಿಯನ್ನು ದಯಪಾಲಿಸಿ ಭಾರಿ ಬಿಲ್ಲನ್ನು ಕೇಳದೆಯೇ ನೀಡಿ ಕರೆಂಟಿಲ್ಲದೆ ಶಾಕ್ ಟ್ರೀಟ್‌ಮೆಂಟ್‌ ಕೊಡುವವರು ಎಂಬ ಅಪವಾದ ಹೊತ್ತವರು.

ಬಹುಶಃ ನಮ್ಮ ಕಾಲದಲ್ಲಿ ತೀರ ಅಪನಂಬಿಕೆಗೆ ಅಪವಾದಕ್ಕೆ ಗುರಿಯಾದ ಶ್ರೇಷ್ಠ ಉದ್ಯೋಗ ಎಂದರೆ ಅದು ವೈದ್ಯವೃತ್ತಿಯೇ ಎಂದರೆ ತಪ್ಪಾಗಲಾರದು. ಆದರೆ ಇಷ್ಟೆಲ್ಲ ಸಂಶಯದ ನಡುವೆಯೂ ‘ಸೇವೆಯೇ ಜೀವನದ ಉಸಿರು’ ಎಂಬಷ್ಟು ಅರ್ಪಣಾ ಮನೋಭಾವ ಅಲ್ಲದಿದ್ದರೂ, ಕರ್ತವ್ಯವನ್ನು ನಿರ್ವಂಚನೆಯಿಂದ ನಿರ್ವಹಿಸಬೇಕೆನ್ನುವ ಆತ್ಮಸಾಕ್ಷಿಯುಳ್ಳ ವೈದ್ಯರು ಇರುವುದರಿಂದಲೇ ಮಾನವೀಯತೆಯಲ್ಲಿನ ನಮ್ಮ ನಂಬಿಕೆ ಇನ್ನೂ ಜೀವಂತವಾಗಿದೆ.

ಹಾಗಾದರೆ ‘ಒಳ್ಳೆಯ ಡಾಕ್ಟರು’ ಎಂದರೆ ಹೇಗಿರಬೇಕು? ‘ಒಳ್ಳೆಯ ಡಾಕ್ಟರು’ ಎಂದಾಗ ರೋಗಿಯ ಮನಸ್ಸಿನಲ್ಲಿ ಯಾವ ಚಿತ್ರಣ ಉಂಟಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ನಡೆಯುವುದು ‘ಒಳ್ಳೆಯ ಡಾಕ್ಟರ್’ನ ಲಕ್ಷಣ. ಮೊದಲನೆಯದಾಗಿ ವೈದ್ಯರನ್ನು ತೀರ ದೇವರೆಂಬಂತೆ ತಿಳಿಯುವ ಮುಗ್ದತೆ ರೋಗಿಗಳಿಗೂ, ವೈದ್ಯರಿಗೂ ಅತಿ ತೊಂದರೆ ಕೊಡುವಂತಹ ನಂಬಿಕೆ. ವೈದ್ಯರಿಗೂ ಮಿತಿಗಳಿವೆ. ಕೈ ಮೀರಿ ಹೋದದಕ್ಕೆ ಅವರೇನೂ ಮಾಡಲಾರರು. ಅಷ್ಟೇ ಅಲ್ಲದೆ, ಮನುಷ್ಯನ ಅರಿವಿಗೆ ಮೀರಿದ ಅಥವಾ ಇನ್ನೂ ಸಂಶೋಧನಾ ಹಂತದಲ್ಲಿಯೇ ಇದ್ದು ‘ಇದು ಹೀಗೆ’ ಎಂದು ನಿರ್ಣಯವಾಗದ ಅನೇಕ ವಿಚಾರಗಳನ್ನು ವೈದ್ಯರು ಚೆನ್ನಾಗಿ ಅರಿತಿರುವುದಷ್ಟೇ ಅಲ್ಲದೆ, ರೋಗಿಗೆ ಮನಮುಟ್ಟುವಂತೆ ತಿಳಿಸಿಕೊಡಬೇಕಾಗುತ್ತದೆ. ಹಾಗೆಯೇ ವೈದ್ಯರು ನೀಡುವ ವೈದ್ಯಕೀಯ ಪರೀಕ್ಷಾ ಪಟ್ಟಿಯು ಕೇವಲ ದುಡ್ಡು ಮಾಡುವ ತಂತ್ರವಲ್ಲ, ಅದು ಅನೇಕ ಕಾಯಿಲೆಗಳನ್ನು ಅಲ್ಲಗೆಳೆಯುವ, ರೋಗದ ನಿರ್ದಿಷ್ಟ ಕಾರಣವನ್ನು ತಿಳಿಸುವ ಏಕೈಕ ವಿಧಾನ ಎಂಬುದನ್ನು ರೋಗಿಗೆ ಮನವರಿಕೆ ಮಾಡಿಕೊಡಬೇಕು. ಇನ್ನು ವೈದ್ಯ ನಂಬಲರ್ಹ ವ್ಯಕ್ತಿಯಾಗಿರಬೇಕು. ಈಗ practo ಮುಂತಾದ website ಮುಖೇನ ವೈದ್ಯರ ವಿದ್ಯಾರ್ಹತೆ, ಅನುಭವ, ವಿಶೇಷ ಪರಿಣತಿ, ಮೆಡಿಕಲ್ ಕೌನ್ಸಿಲ್ ರಿಜಿಸ್ಟ್ರೇಷನ್ ವಿವರಗಳು ಹಾಗೂ ವೈದ್ಯರ ಬಗ್ಗೆ ರೋಗಿಗಳ ಫೀಡ್‌ಬ್ಯಾಕ್‌ ಕೂಡ ಲಭ್ಯ. ಹಾಗೆಯೇ ನಂಬಿಕಸ್ತ ಆಸ್ಪತ್ರೆಗಳ ವೈದ್ಯರೇ ಬೇಕು ಎಂಬುದರಲ್ಲಿಯೂ ಅರ್ಥವಿದೆ. ನಂಬಿಕೆ ಇಲ್ಲದ ವೈದ್ಯರ ಬಳಿ ಯಾರು ಹೋದಾರು? ಡಾಕ್ಟರು whatsApp, ಫೋನ್ ಮೂಲಕ ನಿಗದಿತ ಸಮಯದಲ್ಲಾದರೂ ಸಂಪರ್ಕಿಸಲು ಸಾಧ್ಯವಿರಬೇಕು ಎನ್ನುವುದು ಈ ಕಾಲದ ಬೇಡಿಕೆ. ಅದು ಸರಿಯೇ.

ಈಗ, ನಿಜವಾಗಲೂ ವೈದ್ಯರಿಗೆ ಭೂಷಣವಾದ ಗುಣಗಳು ಯಾವುವು ಚರ್ಚಿಸೋಣ:

1) ಏಕಾಗ್ರತೆಯಿಂದ ರೋಗಿಯ ಅನುಭವ, ತೊಂದರೆ ಕೇಳಿಸಿಕೊಳ್ಳುವ ತಾಳ್ಮೆ ಮತ್ತು ರೋಗಿಯ ಬಗೆಗೆ ಅನುಕಂಪ. ಎಷ್ಟೋ ವೈದ್ಯರು ರೋಗಿಯನ್ನೇ ನೋಡದೆ ಬರೀ ರೋಗಕ್ಕೆ ಚಿಕಿತ್ಸೆ ಮಾಡಲು ಹೊರಡುತ್ತಾರೆ. ಹೀಗಿದ್ದಾಗ ರೋಗಿಗೆ ಡಾಕ್ಟರ್‌ ಬಗ್ಗೆ ನಂಬಿಕೆ ಬರುವುದು ಹೇಗೆ? ರೋಗಿ ಬರೀ ರೋಗ ಹೊತ್ತ ದೇಹವಲ್ಲ, ಅವಳು ಸಮಾಜದ ಒಂದು ಭಾಗವಾದ, ಒಂದು ಜೀವನಶೈಲಿ ಹೊಂದಿದ, ರೋಗದ ಕಾರಣ ಸಂಕಟದಲ್ಲಿರುವ ಒಬ್ಬ ವ್ಯಕ್ತಿ ಎಂದು ತಿಳಿಯುವವಳೇ ರೋಗಿಯ ಪಾಲಿನ ಉತ್ತಮ ಬಂಧು ಎನಿಸಿಕೊಳ್ಳುವ ವೈದ್ಯೆ.

2) ರೋಗಿಗೆ ಧೈರ್ಯ ಹೇಳುವ ಶಾಂತಸ್ವಭಾವ. ವೈದ್ಯರ ತಾಳ್ಮೆಯು ಬಹು ಚರ್ಚಿತ ವಿಷಯ. ಸಿಡುಕಿನ, ಆತುರದ, ಎಡವಟ್ಟು ಮಾಡಿಬಿಡುವನೇನೋ ಎಂಬಷ್ಟು ಅವಾಂತರಿಸುವ ಡಾಕ್ಟರನ್ನು ಕಂಡರೆ ಯಾರಿಗೆ ತಾನೇ ‘ಯಮರಾಜನ ಸಹೋದರನನ್ನು’ ಕಂಡಂತೆ ಭೀತಿಯಾಗುವುದಿಲ್ಲ? ಇತ್ತೀಚೆಗೆ ವೈದ್ಯವಿಜ್ಞಾನದ ತಲೆಬುಡ ಗೊತ್ತಿಲ್ಲದ ಮಂದಿ ಗೂಗಲ್‌ ಅನ್ನು ಕೆಣಕಿ, ಕೆಟ್ಟ ಕೆಟ್ಟ ಸಂಶೋಧನೆ ನಡೆಸಿ ವೈದ್ಯರ ತಲೆ ತಿನ್ನುತ್ತಾರೆ. ಆದರೆ ಎಲ್ಲ ರೋಗಿಗಳು ಹಾಗಲ್ಲದೆ ತಮ್ಮ ಸಮಸ್ಯೆಯ ಕುರಿತು ಸ್ವಾಭಾವಿಕವಾದ ಆತಂಕ, ಭಯ, ತಪ್ಪು ತಿಳಿವಳಿಕೆ ಹೊಂದಿದವರಾಗಿರುತ್ತಾರೆ. ಅದು ಸಹಜವೆಂದು ಬಗೆದು ರೋಗಿಗೆ ಧೈರ್ಯ ಹೇಳಿ, ರೋಗಿಯ ವಿಶ್ವಾಸ ಸಂಪಾದಿಸುವ ವೈದ್ಯರು ಉತ್ತಮರು. ಹಾಗೆಯೇ ಕೆಲವು ರೋಗಗಳು ಅಥವಾ ಪರಿಸ್ಥಿತಿಗಳು ಮತ್ತು ಅವುಗಳಿಗಾಗಿ ನಡೆಸುವ ದೈಹಿಕ ಪರೀಕ್ಷೆಗಳು ಮುಜುಗರ ಉಂಟುಮಾಡುವುದು ನೈಜವೆಂದು ತಿಳಿದು ಪ್ರಬುದ್ಧ ನಡುವಳಿಕೆ ಹೊಂದಿದ ವೈದ್ಯರು ಪ್ರಶಂಸಾರ್ಹರೇ ಹೌದು.

3) ರೋಗಿಯ ಬುದ್ಧಿಮತ್ತೆ ಜಾಣ್ಮೆಗಳನ್ನು ಕಡೆಗಣಿಸದೆ ರೋಗಿಗೆ ಅರ್ಥವಾಗುವಂತೆ ವಿವರಿಸುವ ಕಲೆ. ರೋಗಿಗಳು ವೈದ್ಯವಿಜ್ಞಾನದ ಪಂಡಿತರಲ್ಲದಿದ್ದರೂ, ಬೇರೆ ರಂಗಗಳಲ್ಲಿ ಯಶಸ್ವೀ ವ್ಯಕ್ತಿಗಳೇ ಹೌದು ಎಂಬುದನ್ನು ಅಲ್ಲಗೆಳೆಯಲಾಗದು. ಹಾಗೆಯೇ ಅನಕ್ಷರಸ್ಥರಾದರು ರೋಗಿಗಳು ಬುದ್ಧಿಹೀನರಲ್ಲ ಎಂಬುದನ್ನು ವೈದ್ಯರು ಮರೆಯಬಾರದು. ಪ್ರಪಂಚದ ಶ್ರೇಷ್ಠ ವೈದ್ಯಕೀಯ ವಿದ್ಯಾಲಯದಲ್ಲಿ ಕಲಿತು, ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ ಪ್ರಖ್ಯಾತ ವೈದ್ಯರು ಹಳ್ಳಿಯ ಮುಗ್ಧ ಅನಕ್ಷರಸ್ಥ ದಂಪತಿಗೆ, ಚಿತ್ರಗಳನ್ನು ಬರೆದು ತೋರಿಸಿ, ಔಷಧೋಪಚಾರಗಳನ್ನು ನಗುಮುಖದಿಂದ ವಿವರಿಸುವುದನ್ನು ಕಂಡಿದ್ದೇನೆ. ಹಿರಿಯ ENT ಸ್ಪೆಷಲಿಸ್ಟ್‌ ಒಬ್ಬರು ಒಮ್ಮೆ audiometry ಯ graphನ ಬಗ್ಗೆ ಸುಮಾರು ಮುಕ್ಕಾಲು ಗಂಟೆ ಪಾಠ ಮಾಡಿ, ಏನೂ ತೊಂದರೆಯಾಗಿಲ್ಲ ಎಂದು ಸಮಾಧಾನ ಮಾಡಿ ನನ್ನ ಸಂದೇಹವನೆಲ್ಲ ನಿವಾರಿಸಿದ್ದನ್ನು ನಾನೆಂದೂ ಮರೆಯಲಾರೆ!!

ಒಟ್ಟಿನಲ್ಲಿ ವೈದ್ಯ ಎಂದರೆ ಬರೀ ವೈದ್ಯವಿಜ್ಞಾನದ ಜ್ಞಾನಭಂಡಾರ ಮಾತ್ರವಾಗಿರದೆ ರೋಗಿಯಲ್ಲಿರುವ ವ್ಯಕ್ತಿಗೆ, ವ್ಯಕ್ತಿತ್ವಕ್ಕೆ ಸ್ಪಂದಿಸುವ ಸಹೃದಯನಾಗಿರಬೇಕು ಎಂಬುದು ಸಮಾಜದ ಆಶಯವಷ್ಟೇ ಅಲ್ಲ, ಅದು ವೈದ್ಯವೃತ್ತಿಯ ಸಾಫಲ್ಯತೆಯ ಮೂಲತತ್ವವೇ ಆಗಿದೆ, ಅಲ್ಲವೇ? 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !