ಶಾಸಕರ ನಡೆ ಅಸಹ್ಯ ತಂದಿದೆ: ಎಲ್.‌ಹನುಮಂತಯ್ಯ

7

ಶಾಸಕರ ನಡೆ ಅಸಹ್ಯ ತಂದಿದೆ: ಎಲ್.‌ಹನುಮಂತಯ್ಯ

Published:
Updated:
Prajavani

ಬೆಂಗಳೂರು: ‘ಕೆಲವು ಶಾಸಕರು ತಮ್ಮನ್ನು ತಾವೇ ಹರಾಜಿಗಿಟ್ಟುಕೊಂಡಿದ್ದಾರೆ. ಸಾರ್ವಜನಿಕವಾಗಿ ನಡೆಯುತ್ತಿರುವ ಇಂತಹ ಪ್ರಕ್ರಿಯೆ ಅಸಹ್ಯ ತಂದಿದೆ’ ಎಂದು ಸಂಸದ ಎಲ್.‌ಹನುಮಂತಯ್ಯ ಬೇಸರ ವ್ಯಕ್ತಪಡಿಸಿದರು. 

ಕಲಾ ಬಂಧು‌ ಫೌಂಡೇಷನ್ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಎಚ್.ಎಸ್.ದೊರೆಸ್ವಾಮಿ‌ ಕುರಿತ ಸಾಕ್ಷ್ಯಚಿತ್ರದ ಸಿ.ಡಿ ಬಿಡುಗಡೆ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸರ್ಕಾರಿ ಸವಾಲು ಕೂಗುತ್ತಿದ್ದರೂ, ಸಾರ್ವಜನಿಕರು ತಾವು ಆಯ್ಕೆ ಮಾಡಿದ ಶಾಸಕರ ನಡೆ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಮೂಕ ಪ್ರೇಕ್ಷಕರಾಗಿರದೆ ಈ ವ್ಯವಸ್ಥೆಗೆ ಕಾರಣರಾರು ಎಂಬುದನ್ನು ಚಿಂತಿಸಿ, ಪ್ರಶ್ನಿಸದಿದ್ದರೆ ಪ್ರಜಾಪ್ರಭುತ್ವಕ್ಕೆ ಉಳಿವಿಲ್ಲ’ ಎಂದು ಎಚ್ಚರಿಸಿದರು.

ದೊರೆಸ್ವಾಮಿ ಜೀವನ–ಸಾಧನೆ ಪಠ್ಯವಾಗಲಿ: ‘ಎಚ್.ಎಸ್.ದೊರೆಸ್ವಾಮಿ ಕುರಿತ ಸಾಕ್ಷ್ಯಚಿತ್ರವನ್ನು  ಶಾಲಾ- ಕಾಲೇಜುಗಳಲ್ಲಿ ಪ್ರದರ್ಶಿಸಬೇಕು. ಎಲ್ಲ ವಿದ್ಯಾರ್ಥಿಗಳು ಇವರ ಜೀವನ ಸಾಧನೆಯನ್ನು ಪಠ್ಯಕ್ರಮವಾಗಿ ಓದುವಂತಾಗಬೇಕು. ಸ್ವಾತಂತ್ರ್ಯಕ್ಕಾಗಿ ದುಡಿದು, ಮಡಿದವರ ಬಗ್ಗೆ ಇಂದಿನ ಪೀಳಿಗೆಗೆ ತಿಳಿಸುವ ಅಗತ್ಯ ಕಾರ್ಯವನ್ನು ಹಿರಿಯರು ಮಾಡಬೇಕು’ ಎಂದು ಅಭಿಪ್ರಾಯಪಟ್ಟರು.

ಶಾಸಕ ಎ.ಟಿ.ರಾಮಸ್ವಾಮಿ, ‘ರಾಜ್ಯ‌ ಇಂದು, ಭೂಗಳ್ಳರ, ಮಾಫಿಯಾದಾರರ ಸ್ವರ್ಗವಾಗಿ ಮಾರ್ಪಟ್ಟಿದೆ. ಹೊಟ್ಟೆಪಾಡಿಗಾಗಿ ಭೂಮಿ ಒತ್ತುವರಿ ಮಾಡಿಕೊಂಡಿರುವ ಬಡ ಜನರ ಮೇಲೆ ಗಧಾ ಪ್ರಹಾರ ನಡೆಯುತ್ತಿದೆಯೆ ಹೊರತು ಕೋಟ್ಯನುಗಟ್ಟಲೆ ಬೆಲೆ ಬಾಳುವ ಭೂಮಿಯನ್ನು ಕಬಳಿಸಿದ ಅಧಿಕಾರಿ ವರ್ಗದ ಮೇಲೆ ಯಾವುದೇ ಕ್ರಮ ಜರುಗುತ್ತಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಾಗಬೇಕು’ ಎಂದು ಆಗ್ರಹಿಸಿದರು.

ಗಾಂಧಿ ಭವನದ ಅಧ್ಯಕ್ಷ ವೂಡೇ ಪಿ.ಕೃಷ್ಣ ಮಾತನಾಡಿ, ‘ಬಡತನ ಸ್ವೀಕಾರ ಮಾಡುವವನು ಯಾವುದೇ ಆಸೆ, ಆಮಿಷೆಗಳಿಗೆ ಬಲಿಯಾಗಲ್ಲ. ಅಂತೆಯೇ ಸರಳ ಜೀವನಕ್ಕೆ ಹೆಸರುವಾಸಿಯಾದವರು ಶತಾಯುಷಿ ಎಚ್.ಎಸ್.ದೊರೆಸ್ವಾಮಿ ಅವರು ಲೋಕ ಸೇವಕ, ಗಾಂಧಿ, ಸಮಾಜ ಚಿಂತಕರಾಗಿ ಯುವಜನತೆಗೆ ಪ್ರೇರಕ ಶಕ್ತಿಯಾಗಿದ್ದಾರೆ’ ಎಂದು ಅಭಿಪ್ರಾಯಪಟ್ಟರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !