ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಎಸ್‌ಐ ನೇಮಕಾತಿ ಅಕ್ರಮ: ನ್ಯಾಯಾಂಗ ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರ

ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚನೆ
Published : 21 ಜುಲೈ 2023, 20:30 IST
Last Updated : 21 ಜುಲೈ 2023, 20:30 IST
ಫಾಲೋ ಮಾಡಿ
Comments

ಬೆಂಗಳೂರು: ರಾಜ್ಯದಲ್ಲಿ ನಡೆದಿದ್ದ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ (ಸಿವಿಲ್‌) –545 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶಿಸಿದೆ.

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಆಯೋಗ ರಚಿಸಲಾಗಿದೆ. ಅಕ್ರಮ ಪ್ರಕರಣದ ವರದಿಯನ್ನು ಮೂರು ತಿಂಗಳಲ್ಲಿ ನೀಡುವಂತೆ ಆಯೋಗವನ್ನು ಸರ್ಕಾರ ಕೋರಿದೆ.

2021ರ ಜನವರಿ 21ರಂದು ಪಿಎಸ್ಐಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಿತ್ತು. ನೇಮಕಾತಿಯಲ್ಲಿ ನಿಯಮಗಳ ಉಲ್ಲಂಘನೆ, ವಿವಿಧ ಹಂತಗಳಲ್ಲಿ ನಡೆದಿರುವ ಅಕ್ರಮಗಳು ಹಾಗೂ ಯಾರೆಲ್ಲಾ ದುರ್ಲಾಭ ಪಡೆದಿದ್ದಾರೆ ಎಂಬುದರ ಕುರಿತು ತನಿಖೆ ನಡೆಸುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಮುಂದಿನ ದಿನಗಳಲ್ಲಿ ಪಿಎಸ್‌ಐ ಹುದ್ದೆಯ ನೇರ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿಯಮಾನುಸಾರ, ಪಾರದರ್ಶಕ ಹಾಗೂ ಲೋಪರಹಿತವಾಗಿ ನಡೆಸಲು ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಶಿಫಾರಸು ಮಾಡುವಂತೆ ಆಯೋಗವನ್ನು ಕೋರಲಾಗಿದೆ.

ಸಿಐಡಿ ತಂಡ ಹಾಗೂ ಪೊಲೀಸ್ ನೇಮಕಾತಿ ವಿಭಾಗವು ಆಯೋಗಕ್ಕೆ ಸಮಗ್ರ ಮಾಹಿತಿ, ದಾಖಲೆ ಸಲ್ಲಿಸುವಂತೆ ಸೂಚಿಸಿದೆ.

ಇದೇ ಅಕ್ರಮ ಪ್ರಕರಣದಲ್ಲಿ ಹಿಂದೆ ತನಿಖೆ ನಡೆಸಿದ್ದ ಸಿಐಡಿ ತಂಡವು ಹಲವರನ್ನು ಬಂಧಿಸಿತ್ತು. ಮತ್ತೆ ವಿಚಾರಣಾ ಆಯೋಗದಿಂದ ತನಿಖೆ ಆರಂಭಗೊಳ್ಳಲಿದೆ.

2021ರ ಅಕ್ಟೋಬರ್ 3ರಂದು ರಾಜ್ಯದ 92 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆದಿತ್ತು. ಲಿಖಿತ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿತ್ತು. ಬಳಿಕ 52 ಮಂದಿಯ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ 52 ಅಭ್ಯರ್ಥಿಗಳನ್ನು ಪೊಲೀಸ್‌ ಇಲಾಖೆ ನಡೆಸುವ ಯಾವುದೇ ಪರೀಕ್ಷೆಯಲ್ಲಿ ಭಾಗವಹಿಸದಂತೆ ಶಾಶ್ವತವಾಗಿ ಡಿಬಾರ್‌ ಮಾಡಲಾಗಿದೆ.

ಬೆಂಗಳೂರಿನಲ್ಲೇ ಕಚೇರಿ: ಆಯೋಗದ ಕಾರ್ಯ ನಿರ್ವಹಣೆಗೆ ಬೆಂಗಳೂರಿನಲ್ಲೇ ಕಚೇರಿ ಇರಲಿದೆ. ನ್ಯಾಯಮೂರ್ತಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT