ಬಾಗೇಪಲ್ಲಿ: ರೈತರ ಹಾಲಿನ ಬೆಲೆ ಏರಿಕೆ ಮಾಡುವಂತೆ ಹಾಗೂ ಗ್ರಾಹಕರು ಖರೀದಿಸುವ ಹಾಲಿನ ದರ ಇಳಿಕೆ ಮಾಡುವಂತೆ ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ತಾಲ್ಲೂಕು ಸಮಿತಿ ಮುಖಂಡರು ಸೋಮವಾರ ಪಟ್ಟಣದ ಬಸ್ ನಿಲ್ದಾಣದ ಮುಂಭಾಗ ರಸ್ತೆ ತಡೆ ನಡೆಸಿ, ಪ್ರತಿಭಟನೆ ಮಾಡಿದರು.
ಪಟ್ಟಣದ ಸುಂದರಯ್ಯ ಭವನದಿಂದ ಹೊರಟ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಈ ವೇಳೆ ಪಕ್ಷದ ಜಿಲ್ಲಾ ಸಮಿತಿ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ಜಿಲ್ಲೆಯ ರೈತರು ಹೈನುಗಾರಿಕೆಯನ್ನೇ ನಂಬಿದ್ದು, ಇದರಲ್ಲಿ ಮಹಿಳೆಯರ ಶ್ರಮ ಹೆಚ್ಚಿದೆ. ಕೆಎಂಎಫ್ ಅಡಿಯಲ್ಲಿ 15 ಹಾಲಿನ ಒಕ್ಕೂಟಗಳಿವೆ. ಪ್ರತಿದಿನ 78.8 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಪಶು ಆಹಾರ ಬೆಲೆ ಏರಿಕೆ, ನಿರ್ವಹಣೆಗೆ ಹೆಚ್ಚು ಹಣವಾಗುತ್ತಿದೆ. ಆದರೆ, ಪ್ರತಿ ಲೀಟರ್ ಹಾಲಿಗೆ ಪೋತ್ಸಾಹ ಧನ ಸೇರಿ ₹38 ಪಾವತಿ ಮಾಡುತ್ತಿದ್ದಾರೆ. ಜತೆಗೆ ಎಂಟು ತಿಂಗಳಿನಿಂದ ಹಾಲಿನ ಪ್ರೋತ್ಸಾಹ ಧನ ನಿಲ್ಲಿಸಿದ್ದು, ಹಾಲು ಉತ್ಪಾದಕರ ಮೇಲೆ ಬರೆ ಎಳೆದಂತಾಗಿದೆ ಎಂದರು.
ಸರ್ಕಾರಿ ಸ್ವಾಮ್ಯದ ನಂದಿನಿಯನ್ನು ಉಳಿಸಬೇಕಾದ ಸರ್ಕಾರ, ಬಹುರಾಷ್ಟ್ರೀಯ ಕಂಪನಿ ಹಾಗೂ ಖಾಸಗಿ ಕಂಪನಿಗಳಿಗೆ ಅವಕಾಶ ನೀಡುತ್ತಿದೆ. ಜತೆಗೆ ಕೂಡಲೇ ಬಾಕಿ ಇರುವ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಪ್ರಾಂತ ಕೃಷಿ ಕೂಲಿಕಾರರ ಸಂಘಟನೆಯ ಮುಖಂಡ ಚನ್ನರಾಯಪ್ಪ ಮಾತನಾಡಿ, ಹಾಲಿನ ಪ್ರೋತ್ಸಾಹಧನವನ್ನು ₹5 ರಿಂದ ₹10ಕ್ಕೆ ಏರಿಕೆ ಮಾಡಬೇಕು. ಹಸುಗಳ ಬೆಲೆ ಏರಿಕೆ ಸೇರಿದಂತೆ ಉತ್ಪಾದನಾ ವೆಚ್ಚ ಹೆಚ್ಚಳ ಆಗಿರುವುದರಿಂದ ಡಾ.ಎಂ.ಎಸ್.ಸ್ವಾಮಿನಾಥನ್ ಆಯೋಗದ ಶಿಫಾರಸ್‌ನಂತೆ ಪ್ರತಿ ಲೀಟರ್ ಹಾಲಿಗೆ ₹50 ನಿಗದಿಪಡಿಸಬೇಕು. ಹಾಲು ಉತ್ಪಾದಕರ ಮಕ್ಕಳ ಶಿಕ್ಷಣಕ್ಕೆ ವಿದ್ಯಾರ್ಥಿನಿಲಯ ಆರಂಭಿಸಬೇಕು. ಪಶು ಆಹಾರಗಳ ಗುಣಮಟ್ಟ ಕಾಯ್ದುಕೊಳ್ಳಬೇಕು. ಪಶು ಆಹಾರಗಳ ಬೆಲೆ ಇಳಿಕೆ ಮಾಡಿ ಬೆಲೆ ಏರಿಕೆ ನಿಯಂತ್ರಣ ಮಾಡಬೇಕು. ನಂದಿನ ಹಾಲು ಮತ್ತು ಅದರ ಉತ್ಪನ್ನಗಳ ಮಾರಾಟ ಕೇಂದ್ರಗಳನ್ನು ಹೆಚ್ಚಿಸಬೇಕು. ಪ್ರಾಥಮಿಕ ಸಹಕಾರ ಸಂಘಗಳಲ್ಲಿನ ನೌಕರರಿಗೆ ಕೆಲಸದ ಭದ್ರತೆ ನೀಡಬೇಕು. ಸಂಘಗಳ ಒಕ್ಕೂಟಗಳಲ್ಲಿ ನೇಮಕಾತಿ, ಟೆಂಡರ್‌ಗಳ ಹೆಸರಿನಲ್ಲಿ ಭ್ರಷ್ಟಾಚಾರ ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಎಂ.ಎನ್.ರಘುರಾಮರೆಡ್ಡಿ, ವಾಲ್ಮೀಕಿ ಅಶ್ವತ್ಥಪ್ಪ, ನರಸಿಂಹಾರೆಡ್ಡಿ, ಜಿ.ಮುಸ್ತಾಫ, ಜಿ.ಕೃಷ್ಣಪ್ಪ, ಚಂಚುರಾಯನಪಲ್ಲಿ ಕೃಷ್ಣಪ್ಪ, ಮುನಿಯಪ್ಪ, ಕೃಷ್ಣಪ್ಪ, ಚಿನ್ನಾಗಪ್ಪ, ಆಂಜಿನಪ್ಪ, ರಾಮಾಂಜಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.