ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಳವಾರು: ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಡ್ಯಾಗರ್ ನಿಂದ ಇರಿದು ಹಲ್ಲೆ

ಮೂವರು ಆರೋಪಿಗಳ ಬಂಧನ
Published : 4 ಸೆಪ್ಟೆಂಬರ್ 2023, 7:56 IST
Last Updated : 4 ಸೆಪ್ಟೆಂಬರ್ 2023, 7:56 IST
ಫಾಲೋ ಮಾಡಿ
Comments

ಮಂಗಳೂರು: ಬೈಕಿನಲ್ಲಿ ಸ್ನೇಹಿತನನ್ನು ಕೂರಿಸಿಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಕಳವಾರು ಗೆಳೆಯರ ಬಳಗ ಬಸ್ ನಿಲ್ದಾಣದ ಬಳಿ ಡ್ಯಾಗರ್ ನಿಂದ ಇರಿದು ಹಲ್ಲೆ ನಡೆಸಿದ ಕುರಿತು ಸುರತ್ಕಲ್ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಮೂವರು ಆರೋಪಿಗಳನ್ಬು ಪೊಲೀಸರು ಬಂಧಿಸಿದ್ದಾರೆ.

ಅಬ್ದುಲ್ ಸಫ್ಘಾನ್ ಇರಿತಕ್ಕೊಳಗಾದವರು. ಕಳವಾರು ಬೆಂಕಿನಾಥೇಶ್ವರ ದೇವಸ್ಥಾನದ ಬಳಿಯ ಎಂಎಸ್ಇಜೆಡ್ ಕಾಲೋನಿಯ ಪ್ರಶಾಂತ್ ಅಲಿಯಾಸ್ ಪಚ್ಚು (28), ಕಳವಾರು ಆಶ್ರಯ ಕಾಲೋನಿ ಧನರಾಜ್ (23), ಕಳವಾರು ಚರ್ಚ್ ಗುಡ್ಡೆ ಸೈಟ್ ನ ಯಜ್ಞೇಶ್ (22) ಬಂಧಿತ ಆರೋಪಿಗಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

'ಕಳವಾರಿನಲ್ಲಿ ಗುರುವಾರ ನಡೆದ ಗಲಾಟೆಗೆ (ಆ.31ರಂದು ) ಸಂಬಂಧಿಸಿ ರಿಯಾಜ್ ಎಂಬಾತನ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎರಡು ಭಿನ್ನ ಕೋಮುಗಳಿಗೆ ಸಂಬಂಧಿಸಿದ ಈ ಗಲಾಟೆಯಿಂದ ಊರಿನ ಸೌಹಾರ್ದ ಹದಗೆಡಬಾರದು ಎಂಬ ಕಾರಣಕ್ಕೆ ಪೊಲೀಸರು ಕಳವಾರಿನಲ್ಲಿ ಭಾನುವಾರ ಶಾಂತಿ ಸಭೆಯನ್ನು ನಡೆಸಿದ್ದರು. ಇದಾದ ಕೆಲ ಹೊತ್ತಿನಲ್ಲೇ ಅಬ್ದುಲ್ ಮೇಲೆ ಹಲ್ಲೆ ನಡೆದಿದೆ' ಎಂದು ಪೊಲೀಸ್ ಮೂಲಗಳು ತಿಳಿಸಿವೆ.

'ನನ್ನನ್ನು ಆರೋಪಿಗಳು ಮಾತುಕತೆಗೆ ಕರೆದಿದ್ದರು. ನಾನು ನನ್ನ ಸ್ನೇಹಿತ ಮೊಹಮ್ಮದ್ ಸಫ್ಘಾನ್ ಜೊತೆ ಭಾನುವಾರ ಸಂಜೆ 7.30ರ ಸುಮಾರಿಗೆ ಕಳವಾರು ಗೆಳೆಯರ ಬಳಗ ಬಸ್ ನಿಲ್ದಾಣದ ಬಳಿ ಬೈಕಿನಲ್ಲಿ ಹೋಗುತ್ತಿದ್ದಾಗ, ಎದುರುಗಡೆಯಿಂದ ಬೈಕಿನಲ್ಲಿ ಬಂದ ಆರೋಪಿಗಳಾದ ಪ್ರಶಾಂತ್ ಮತ್ತು ಧನರಾಜ್ ನನ್ನನ್ನು ಅಡ್ಡಹಾಕಿ ಅವಾಚ್ಯವಾಗಿ ಬೈದಿದ್ದರು. ಆರೋಪಿ ಧನರಾಜ್ ಯಾವುದೋ ಆಯುಧದಿಂದ ನನ್ನ ಕಣ್ಣಿಗೆ ಬಲವಾಗಿ ಗುದ್ದಿದ್ದ. ಇನ್ನೊಬ್ಬ ಆರೋಪಿ ಪ್ರಶಾಂತ ಡ್ಯಾಗರ್ ಚೂರಿಯಿಂದ ಬಲ ಕಂಕುಳಕ್ಕೆ ತಿವಿದಿದ್ದ. ಸ್ಥಳಕ್ಕೆ ಬಂದ ಇತರ ಆರೋಪಿಗಳು ನನಗೆ ಅವಾಚ್ಯ ಶಬ್ದಗಳಿಂದ ಬೈದಿದ್ದರು. ಇನ್ನೊಬ್ಬ ಆರೋಪಿ ಕಳವಾರು ಗಣೇಶ ನನ್ನ ಬಲಗೈ ತೋಳಿಗೆ ಚೂರಿಯಿಂದ ಚುಚ್ಚಿದ್ದ. ಇನ್ನೊಬ್ಬ ಆರೋಪಿ ಯಜ್ಞೇಶ ನನ್ನ ಬೆನ್ನಿಗೆ ಚೂರಿಯಿಂದ ಚುಚ್ಚಿದ್ದ. ಗೆಳೆಯ ಮೊಹಮ್ಮದ್ ಸಫ್ಘಾನ್ ನನ್ನ ರಕ್ಷಣೆಗೆ ಬಂದಾಗ ಆರೋಪಿಗಳಾದ ಪುನೀತ್, ಬಬ್ಬು ಗಣೇಶ್, ಪ್ರದೀಪ್ ಮತ್ತು ಇತರರು ಅವನಿಗೆ ಹೊಡೆದು ಬಿಗಿಯಾಗಿ ಹಿಡಿದುಕೊಂಡರು. ಅಲ್ಲಿ ಜನರು ಸೇರುವುದನ್ನು ಕಂಡ ಆರೋಪಿಗಳು, 'ಮುಂದಕ್ಕೆ ಎಲ್ಲಿಯಾದರೂ ಸಿಕ್ಕಿದರೆ, ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ' ಎಂದು ಬೆದರಿಕೆ ನೀಡಿ ಅಲ್ಲಿಂದ ತೆರಳಿದರು. ಈ ಹಲ್ಲೆಯಿಂದ ನನ್ನ ಬಲ ಕಂಕುಳಕ್ಕೆ ಕಣ್ಣಿಗೆ, ಬೆನ್ನಿಗೆ, ಬಲಗೈ ತೋಳಿಗೆ ಗಾಯವಾಗಿದೆ' ಎಂದು ಅಬ್ದುಲ್ ಸಫ್ಘಾನ್ ದೂರಿನಲ್ಲಿ ತಿಳಿಸಿದ್ದಾರೆ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

'ನಾನು ರಿಯಾಜ್ ಗೆ ಬೆಂಬಲ ನೀಡುತ್ತಿದ್ದನೆಂದು ಭಾವಿಸಿ ಆರೋಪಿಗಳು, ನನ್ನ ಮೇಲೆ ಹಲ್ಲೆಯನ್ನು ನಡೆಸಿದ್ದಾರೆ' ಎಂದು ಅಬ್ದುಲ್ ಸಫ್ಘಾನ್ ದೂರಿನಲ್ಲಿ ಆರೋಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿದ್ದು ತನಿಖೆ ಮುಂದುವರಿಸಿ ಕ್ರಮ ಕೈಗೊಳ್ಳಲಾಗಿದೆ' ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT