ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ವಾರದಿಂದ ಈಚೆಗೆ ಜೋರಾಗಿದ್ದ ಮಳೆ ಅಬ್ಬರ ಶನಿವಾರ ಕಡಿಮೆಯಾಗಿದೆ. ಶನಿವಾರ ಬೆಳಿಗ್ಗೆಯಿಂದಲೂ ಬಿಸಿಲಿನಿಂದ ಕೂಡಿದ ವಾತಾವರಣವಿದೆ. ಶುಕ್ರವಾರ ರಾತ್ರಿಯೂ ಮಳೆ ಪ್ರಮಾಣ ಕಡಿಮೆ ಇತ್ತು.
ಜಿಲ್ಲೆಯ ನೇತ್ರಾವತಿ, ಕುಮಾರಧಾರ, ಫಾಲ್ಗುಣಿ, ನಂದಿನಿ ಹಾಗೂ ಶಾಂಭವಿ, ನದಿಗಳಲ್ಲೂ ನೀರು ಹರಿವಿನ ಮಟ್ಟ ತಗ್ಗಿದೆ. ಬಂಟ್ವಾಳ ಬಳಿ ಶುಕ್ರವಾರ ಅಪಾಯದ ಮಟ್ಟ ಮೀರಿ 8.6 ಮೀ. ವರೆಗೂ ತಲುಪಿದ್ದ ನೀರು ಹರಿವಿನ ಮಟ್ಟ ಶನಿವಾರ 7.4 ಮೀ.ಗೆ ಇಳಿಕೆಯಾಗಿದೆ.
ಶನಿವಾರ ಬೆಳಿಗ್ಗೆ 8.30ರವರೆಗಿನ 24 ಗಂಟೆಗಳಲ್ಲಿ ಜಿಲ್ಲೆಯ ಪಟ್ರಮೆಯಲ್ಲಿ 10.5 ಸೆಂ.ಮೀ, ಗುತ್ತಿಗಾರಿನಲ್ಲಿ 10.0,ನೆಲ್ಲೂರು ಕೆಮ್ರಾಜೆಯಲ್ಲಿ 9.90, ಜಾಲ್ಸೂರಿನಲ್ಲಿ 8.1, ಬೆಳಂದೂರು ಮತ್ತು ದೇವಚಳ್ಳದಲ್ಲಿ ತಲಾ 8.55, ಬಾಳೆಪುಣಿಯಲ್ಲಿ, 7.75, ಉಬರಡ್ಕ ಮಿತ್ತೂರಿನಲ್ಲಿ 7.70, ವಿಡ್ಲಪಡ್ನೂರಿನಲ್ಲಿ ಹಾಗೂ ನೂಜಿಬಾಳ್ತಿಲದಲ್ಲಿ ತಲಾ 7.65 ಸೆಂ.ಮೀ ಮಳೆಯಾಗಿದೆ.