ಕಲಬುರಗಿ: ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ ಕುಲಪತಿ, ಕುಲಸಚಿವರು, ಹಿರಿಯ ಪ್ರಾಧ್ಯಾಪಕರ ಉಪಸ್ಥಿತಿಯಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸಭೆ ನಡೆದಿದೆ. ಕೊನೆಯಲ್ಲಿ ಸಂಘದ ಗೀತೆ ‘ನಮಸ್ತೆ ಸದಾ ವತ್ಸಲೆ...’ ಮೊಳಗಿದ್ದು, ಎಲ್ಲರೂ ಎದ್ದು ನಿಂತು ಆರ್‌ಎಸ್‌ಎಸ್ ಕಾರ್ಯಕರ್ತರಂತೆ ಕೈ ಎದೆಗೆ ಅಡ್ಡ ಹಿಡಿದು ನಿಂತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಭೆಯ ವಿಡಿಯೊ ಚಿತ್ರೀಕರಣ ಮಾಡುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆಯೇ ಚಿತ್ರೀಕರಣ ಮಾಡಿದ ವಿದ್ಯಾರ್ಥಿಗೆ ಬೆದರಿಕೆ ಹಾಕಿ, ಮೊಬೈಲ್ ಕಸಿದುಕೊಂಡು ವಿಡಿಯೊ ಡಿಲೀಟ್ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಶೈಕ್ಷಣಿಕ ಚಟುವಟಿಕೆಗಳಿಗೆ ಮೀಸಲಾದ ವಿಶ್ವವಿದ್ಯಾಲಯದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳು ಹಿಂದೆಯೂ ನಡೆದಿದ್ದ ಆರೋಪಗಳು ಕೇಳಿ ಬಂದಿದ್ದವು. ಇದನ್ನು ವಿರೋಧಿಸಿ ವಿದ್ಯಾರ್ಥಿ ಹಾಗೂ ಪ್ರಗತಿಪರ ಸಂಘಟನೆಗಳು ವಿಶ್ವವಿದ್ಯಾಲಯದ ಎದುರು ಪ್ರತಿಭಟನೆ ನಡೆಸಿದ್ದವು.
ಬೇರೆ ರಾಜ್ಯದಿಂದ ಬಂದಿದ್ದ ಐದಾರು ಜನ ಆರ್‌ಎಸ್‌ಎಸ್ ಪ್ರಮುಖರು ಗುರುವಾರ ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ ಸಭೆ ನಡೆಸಿದ್ದಾರೆ. ಆರ್‌ಎಸ್‌ಎಸ್ ಜನ್ಮತಾಳಿ 2025ಕ್ಕೆ 100 ವರ್ಷಗಳು ತುಂಬಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಕಲಬುರಗಿ ಭಾಗದಲ್ಲಿ ಸಂಘದ ಚಟುವಟಿಕೆಗಳನ್ನು ವಿಸ್ತರಿಸುವ ಬಗ್ಗೆ ಚರ್ಚೆಗಳು ನಡೆದವು. ಯಾವ ಸರ್ಕಾರಕ್ಕೂ, ಸಚಿವರಿಗೂ ಹೆದರುವ ಅವಶ್ಯಕತೆ ಇಲ್ಲ. ಸಂಘವನ್ನು ಕೇಂದ್ರೀಯ ವಿ.ವಿ.ಯಿಂದಲೇ ಗಟ್ಟಿಗೊಳಿಸಬೇಕು. ಕಲಬುರಗಿ ವಿಮಾನ ನಿಲ್ದಾಣದ ಬಳಿ ಮುಂದಿನ ದಿನಗಳಲ್ಲಿ ಬೃಹತ್ ಸಮಾವೇಶ ನಡೆಸಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು ಎಂದು ಮೂಲಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿವೆ.
ಸಭೆಯ ಕೊನೆಯಲ್ಲಿ ಆರ್‌ಎಸ್‌ಎಸ್ ಗೀತೆಯನ್ನು ಸಾಮೂಹಿಕವಾಗಿ ಹಾಡಲಾಯಿತು. ಅತಿಥಿಗೃಹದಲ್ಲಿ ಸಂಘದ ಭಗವಾ ಧ್ವಜವನ್ನು ಇರಿಸಲಾಗಿತ್ತು. ಈ ಬಗ್ಗೆ ವಿಡಿಯೊ ಮಾಡುತ್ತಿರುವುದನ್ನು ಗಮನಿಸಿದ ಆರ್‌ಎಸ್‌ಎಸ್‌ನ ಕೆಲ ಕಾರ್ಯಕರ್ತರು ವಿಡಿಯೊವನ್ನು ಡಿಲೀಟ್ ಮಾಡಿಸಿದರು ಎಂದು ಸಂಶೋಧನಾ ವಿದ್ಯಾರ್ಥಿ ಪಿ. ನಂದಕುಮಾರ್ ಆರೋಪಿಸಿದರು.
‘ಆರ್‌ಎಸ್‌ಎಸ್ ಸಭೆ ನಡೆದಿದ್ದು ನಿಜ. ನಾನೂ ಸಭೆಯ ಕೊನೆಯಲ್ಲಿ ಹೋಗಿದ್ದೆ. ರಾಷ್ಟ್ರೀಯ ಚಿಂತನೆಯ ವಿಚಾರಗಳ ಬಗ್ಗೆ ಆರ್‌ಎಸ್‌ಎಸ್‌ನವರು ಕೆಲ ಮಾಹಿತಿಗಳನ್ನು ಹಂಚಿಕೊಂಡರು. ಇದರಲ್ಲಿ ತಪ್ಪೇನಿದೆ’ ಎಂದು ವಿ.ವಿ.ಯ ಉನ್ನತ ಅಧಿಕಾರಿಯೊಬ್ಬರು ಪ್ರಶ್ನಿಸಿದರು.
ಸಭೆಯ ಕುರಿತು ‘ಪ್ರಜಾವಾಣಿ’ಯು ವಿ.ವಿ. ಕುಲಸಚಿವ ಪ್ರೊ.ಆರ್.ಆರ್. ಬಿರಾದಾರ ಅವರನ್ನು ಸಂಪರ್ಕಿಸಿದಾಗ, ಪ್ರತಿಕ್ರಿಯಿಸಲು ನಿರಾಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.