ಮಡಿಕೇರಿ: ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು ಆತಂಕ ಮೂಡಿಸಿದೆ. ಭಗಂಡೇಶ್ವರ ದೇಗುಲದ ಅಂಗಳಕ್ಕೇ ಈಗ ನೀರು ಬಂದಿದೆ. ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ.
ಕುಶಾಲನಗರದ ನದಿ ಪಾತ್ರದಲ್ಲಿ ಧ್ವನಿವರ್ಧಕದ ಮೂಲಕ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗುತ್ತಿದೆ.
ವಿರಾಜಪೇಟೆಯಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಮುರ್ನಾಡು ಬಳಿ ವಿರಾಜಪೇಟೆ ರಸ್ತೆಯಲ್ಲಿ ನೀರು ತುಂಬಿದೆ.
ಮಡಿಕೇರಿಯ ಎಫ್ ಎಂ ಸಿ ಕಾಲೇಜಿನ ಸಮೀಪದ ರಸ್ತೆಯಲ್ಲಿ ತಡೆಗೋಡೆ ಕಾಮಗಾರಿ ನಡೆಯುತ್ತಿತ್ತು. ಮಳೆ ಹೆಚ್ಚಿದ್ದರಿಂದ ರಸ್ತೆ ಕುಸಿಯುವ ಭೀತಿ ಮೂಡಿದ್ದು, ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿಷೇಧ ಏರಲಾಗಿದೆ. ಭಾರಿ ಮಳೆ ಮುಂದುವರಿದಿದೆ.
ನುಗ್ಗಿದ ನೀರಿನಲ್ಲಿ ಮೀನು ಹಿಡಿದ ಯುವಕರು: ಇಲ್ಲಿನ ದುಬಾರೆಯ ವಾಹನ ನಿಲುಗಡೆ ತಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ನುಗ್ಗಿದೆ. ನುಗ್ಗಿದ ನೀರಿನಲ್ಲಿ ಸ್ಥಳೀಯ ಯುವಕರು ಬಲೆ ಹಾಕಿ ಮೀನು ಹಿಡಿದು ಸಂಭ್ರಮಿಸಿದ್ದಾರೆ.