ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗು: ಅಂಗಾಂಗ ದಾನದಲ್ಲಿ ಜಿಲ್ಲೆ ಅಂಬೆಗಾಲು!

Published : 13 ಆಗಸ್ಟ್ 2024, 6:24 IST
Last Updated : 13 ಆಗಸ್ಟ್ 2024, 6:24 IST
ಫಾಲೋ ಮಾಡಿ
Comments

ಮಡಿಕೇರಿ: ಅಂಗಾಂಗಗಳ ದಾನ ಮತ್ತು ಅಂಗಾಂಗಳ ಕಸಿಗೆ ಸಂಬಂಧಿಸಿದಂತೆ ಕೊಡಗು ಜಿಲ್ಲೆ ಇನ್ನೂ ಅಂಬೆಗಾಲಿಡುತ್ತಿದೆ. ಇಲ್ಲಿಯವರೆಗೂ ಅಂಗಾಂಗ ಕಸಿ ಇರಲಿ, ಕನಿಷ್ಠ ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ಅಂಗಾಂಗ ತೆಗೆಯುವ ವ್ಯವಸ್ಥೆಯೂ ಇಲ್ಲಿರಲಿಲ್ಲ. ಸದ್ಯ, ಈಚೆಗಷ್ಟೇ ಅಂಗಾಂಗ ಹೊರತೆಗೆದು ಸಾಗಿಸುವ ಸೌಲಭ್ಯ ಪಡೆದುಕೊಳ್ಳುವ ಕಡೆಗೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ದಾಪುಗಾಲಿರಿಸಿದೆ.

ಅಂಗಾಂಗ ಕಸಿ ಮಾಡಲು ನುರಿತ ತಜ್ಞ ವೈದ್ಯರು ಬೇಕು. ಜಿಲ್ಲೆಯಲ್ಲಿ ತಜ್ಞ ವೈದ್ಯರ ಕೊರತೆ ಸಾಕಷ್ಟಿರುವ ಕಾರಣದಿಂದ ಅಂಗಾಂಗ ಕಸಿ ಸದ್ಯಕ್ಕಂತೂ ಸಾಧ್ಯವಿಲ್ಲದ ಮಾತಾಗಿದೆ. ಸಮಾಧಾನಕರ ಸಂಗತಿ ಎಂದರೆ, ಅಂಗಾಂಗಗಳನ್ನು ಹೊರತೆಗೆದು ಸಾಗಿಸುವ ಪ್ರಕ್ರಿಯೆಗೆ ಸರ್ಕಾರದಿಂದ ಅನುಮತಿ
ದೊರೆತಿದೆ.

ಅಂಗಾಂಗಗಳನ್ನು ಹೊರತೆಗೆದು ಸಾಗಿಸಲು ಸಹ ತಜ್ಞ ವೈದ್ಯರ ಅಗತ್ಯ ಇದ್ದರೂ ಸದ್ಯ ಇಲ್ಲಿ ಲಭ್ಯವಿರುವ ಫಿಜಿಶಿಯನ್‌, ಅರಿವಳಿಕೆ ತಜ್ಞರು ಹಾಗೂ ಶಸ್ತ್ರಚಿಕಿತ್ಸಕರಿಂದಲೇ ಈ ಪ್ರಕ್ರಿಯೆ ನಡೆಸಬಹುದು. ಹಾಗಾಗಿ, ಇತ್ತೀಚೆಗಷ್ಟೇ ಅಂಗಾಂಗ ಹೊರತೆಗೆದು ಸಾಗಾಣಿಕೆ ಮಾಡಲು ಅನುಮತಿ
ದೊರೆತಿದೆ.

ಇದಕ್ಕೆ ಇನ್ನೂ 5 ಮಂದಿ ನುರಿತ ತಜ್ಞರು ಇರುವ ಸಮಿತಿಯೊಂದು ರಚನೆಯಾಗಬೇಕಿದೆ. ಈ ಸಮಿತಿ ಇಲ್ಲದೇ ಅಂಗಾಂಗ ಹೊರತೆಗೆಯುವ ಪ್ರಕ್ರಿಯೆ ಅಸಾಧ್ಯ. ಜೊತೆಗೆ, ಇಲ್ಲಿನ ವೈದ್ಯರಿಗೆ ಈ ಕುರಿತು ತರಬೇತಿಯೂ ಆಯೋಜನೆಗೊಳ್ಳಬೇಕಿದೆ.

ಇದರೊಂದಿಗೆ ತೀರಾ ಅಗತ್ಯವಾಗಿ ಅಂಗಾಂಗ ಹೊರತೆಗೆಯುವುದಕ್ಕೆ ಸಂಬಂಧಿಸಿದಂತೆ ಬೇಕಾದ ಮೂಲಸೌಕರ್ಯಗಳನ್ನೂ ಒದಗಿಸಬೇಕಿದೆ. ಇಷ್ಟೆಲ್ಲ ಆದ ಬಳಿಕವಷ್ಟೇ ಅಂಗಾಂಗಗಳನ್ನು ಹೊರತೆಗೆದು ಸಾಗಾಣಿಕೆ ಮಾಡಲು ಸಾಧ್ಯ ಎಂದು ಅಂಗಾಂಗ ದಾನಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಗೆ ಇರುವ ನೋಡಲ್ ಅಧಿಕಾರಿ ಡಾ.ಧನಂಜಯ ಮೇದಪ್ಪ
ಹೇಳುತ್ತಾರೆ.

ಇನ್ನು ಈ ಬಗೆಯ ಅವಕಾಶಗಳೂ ಇಲ್ಲಿಯವರೆಗೆ ಲಭ್ಯವಾಗಿಲ್ಲ. ಇಲ್ಲಿ ನುರಿತ ತಜ್ಞರ ಕೊರತೆ ಇರುವುದರಿಂದ ಮಿದುಳು ನಿಷ್ಕ್ರಿಯ ಎಂದು ನಿರ್ಧರಿಸುವುದು ಕಷ್ಟ. ಒಂದು ವೇಳೆ ಮಿದುಳು ನಿಷ್ಕ್ರಿಯ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ಮೈಸೂರು ಅಥವಾ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಿಬಿಡುತ್ತಿದ್ದಾರೆ.

ಅಂಗಾಂಗ ದಾನಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ  https://www.jeevasarthakathe.karnataka.gov.in ಸಂಪರ್ಕಿಸಬಹುದು.

ಸಾರ್ವಜನಿಕರಲ್ಲಿ ಅರಿವು ಅಗತ್ಯ

ಅಂಗಾಂಗಗಳ ದಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲೂ ವ್ಯಾಪಕ ಅರಿವು ಮೂಡಬೇಕಿದೆ ಎಂದು ನೋಡಲ್ ಅಧಿಕಾರಿ ಡಾ.ಧನಂಜಯ ಮೇದಪ್ಪ ಹೇಳುತ್ತಾರೆ.

ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ಸಂಬಂಧಿಕರ ಅನುಮತಿ ಪಡೆದು ಮೂತ್ರಿಪಿಂಡ, ಲಿವರ್, ಹೃದಯ, ಇತ್ಯಾದಿ ಅಂಗಾಂಗಗಳನ್ನು ಹೊರತೆಗೆದು ಅಗತ್ಯ ಇರುವ ರೋಗಿಗೆ ಕಸಿ ಮಾಡುವುದರಿಂದ ರೋಗಿಯ ಜೀವ ಉಳಿಯುತ್ತದೆ. ಇದೊಂದು ಬಗೆಯ ದಾನ ಎಂಬ ಜಾಗೃತಿಯನ್ನು ಮೂಡಿಸಬೇಕಿದೆ ಎಂದು ಅವರು ತಿಳಿಸುತ್ತಾರೆ.

ಈ ಕುರಿತು ಅರಿವು ಮೂಡಿಸಲು ವಿಶ್ವ ಅಂಗಾಂಗ ದಾನ ದಿನಾಚರಣೆಯನ್ನಾಗಿ ಆಗಸ್ಟ್ 13 ಮತ್ತು ರಾಷ್ಟ್ರೀಯ ಅಂಗಾಂಗ ದಾನ ದಿನಾಚರಣೆಯನ್ನು ಆಗಸ್ಟ್ 3ರಂದು ಆಚರಿಸಲಾಗುತ್ತದೆ. ಎರಡೂ ದಿನಾಚರಣೆಗಳೂ ಆಗಸ್ಟ್‌ನಲ್ಲೇ ಇರುವುದು ವಿಶೇಷ.

ಅಂಗಾಂಗ ದಾನಕ್ಕೆ ಸಂಬಂಧ ಇರುವ ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಕೇಂದ್ರಗಳ ಸಹಯೋಗದಲ್ಲಿ ಶೀಘ್ರ ತರಬೇತಿ ಕಾರ್ಯಾಗಾರ ನಡೆಸಲಾಗುವುದು.
-ಡಾ.ನಂಜುಂಡಯ್ಯ, ಜಿಲ್ಲಾ ಶಸ್ತ್ರಚಿಕಿತ್ಸಕ.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ವೈದ್ಯಕೀಯ ಕಾಲೇಜಿಗೆ ಈಗಷ್ಟೇ ಅಂಗಾಂಗ ಹೊರತೆಗೆದು, ರವಾನಿಸಲು ಅನುಮತಿ ದೊರೆತಿದೆ. ಇನ್ನು ತರಬೇತಿಗಳು ಆಯೋಜನೆಗೊಳ್ಳಬೇಕಿದೆ
-ಡಾ.ಧನಂಜಯ ಮೇದಪ್ಪ, ಅಂಗಾಂಗ ದಾನ ವಿಭಾಗ ನೋಡ‌ಲ್ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT