ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ | ಕುಡಿಯುವ ನೀರಿಗೆ ಮೀಸಲಾದ ಯರಗೋಳ್ ಜಲಾಶಯ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

₹ 308.46 ಕೋಟಿ ವೆಚ್ಚದ ಯೋಜನೆ
Published : 11 ನವೆಂಬರ್ 2023, 10:20 IST
Last Updated : 11 ನವೆಂಬರ್ 2023, 10:20 IST
ಫಾಲೋ ಮಾಡಿ
Comments

ಬಂಗಾರಪೇಟೆ (ಕೋಲಾರ): ಕೋಲಾರ ನಗರ, ಬಂಗಾರಪೇಟೆ ಹಾಗೂ ಮಾಲೂರು ಪಟ್ಟಣಗಳ ಜನರಿಗೆ ಕುಡಿಯುವ ನೀರು ಪೂರೈಸಲಿರುವ ಯರಗೋಳ್‌ ಜಲಾಶಯವನ್ನು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.

ತಾಲ್ಲೂಕಿನ ಬಲಮಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ನಂತರ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ₹ 2,263 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದರು.

₹ 1,656 ಕೋಟಿ ವೆಚ್ಚದ 43 ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ₹ 607 ಕೋಟಿ ವೆಚ್ಚದ 21 ಕಾಮಗಾರಿಗಳ ಉದ್ಘಾಟನೆ ಇದರಲ್ಲಿ ಸೇರಿದೆ.

ಯರಗೋಳ್ ಗ್ರಾಮದ ಬಳಿ ಈ ಅಣೆಕಟ್ಟು ನಿರ್ಮಿಸಲಾಗಿದೆ. ಮಾರ್ಕಂಡೇಯ ಜಲಾಶಯದಿಂದ ತಮಿಳುನಾಡಿಗೆ ವ್ಯರ್ಥವಾಗಿ ಹೋಗುತ್ತಿದ್ದ ನೀರು ತಡೆಗಟ್ಟಲು ಈ ಯೋಜನೆ ಜಾರಿ ಮಾಡಲಾಗಿದೆ. ಕುಡಿಯುವ ನೀರಿಗೆ ಮೀಸಲಾದ ಜಿಲ್ಲೆಯ ಏಕೈಕ ಯೋಜನೆ ಇದಾಗಿದೆ.

ನಗರಾಭಿವೃದ್ಧಿ ಇಲಾಖೆ ಮಾಹಿತಿ ಪ್ರಕಾರ ಜಲಾಶಯ ನಿರ್ಮಾಣ ಹಾಗೂ ಇತರ ಕಾಮಗಾರಿಗೆ ಸುಮಾರು ₹ 308.46 ಕೋಟಿ ವೆಚ್ಚವಾಗಿದೆ.‌

2006ರಲ್ಲಿ ಜೆಡಿಎಸ್‌–ಬಿಜೆಪಿ ಸರ್ಕಾರದಲ್ಲಿ ಯೋಜನೆಗೆ ಅನುಮೋದನೆ ಸಿಕ್ಕಿತ್ತು. 2007ರ ಆಗಸ್ಟ್‌ನಲ್ಲಿ ಕೋಲಾರದಲ್ಲಿ ಶಂಕುಸ್ಥಾಪನೆ ಆಯಿತು. ಆದರೆ, ಯೋಜನೆಗೆ ಅಧಿಕೃತ ಚಾಲನೆ ಸಿಕ್ಕಿದ್ದು ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ. 2013ರ ಸೆಪ್ಟೆಂಬರ್‌ನಲ್ಲಿ ಮತ್ತೊಮ್ಮೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ನಂತರ ಜಲಾಶಯ ನಿರ್ಮಾಣ ಕಾಮಗಾರಿ ಆರಂಭವಾಗಿ 2020ರಲ್ಲಿ ಪೂರ್ಣಗೊಂಡಿತು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌, ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ, ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಕಂದಾಯ ಸಚಿವ ಕೃಷ್ಣಬೈರೇಗೌಡ, ಇಂಧನ ಸಚಿವ ಕೆ.ಜೆ.ಜಾರ್ಜ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌, ಸಂಸದ ಎಸ್‌.ಮುನಿಸ್ವಾಮಿ, ಶಾಸಕರಾದ ಎಸ್‌.ಎನ್‌.ನಾರಾಯಣಸ್ವಾಮಿ, ಕೊತ್ತೂರು ಮಂಜುನಾಥ್‌, ಕೆ.ವೈ.ನಂಜೇಗೌಡ, ರೂಪಕಲಾ ಶಶಿಧರ್‌, ಜಿ.ಕೆ.ವೆಂಕಟಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯರಾದ ಎಂ.ಎಲ್‌.ಅನಿಲ್‌ ಕುಮಾರ್‌, ಇಂಚರ ಗೋವಿಂದರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT