ಬೆಂಗಳೂರು: ಇಷ್ಟು ದಿನ ಆನೆಯಂತೆ ಬಿಂಬಿಸಿಕೊಳ್ಳುತ್ತಾ, ಮನೆಮಂದಿಯ ಕಾಲೆಳೆಯುತ್ತಿದ್ದ ವಿನಯ್ ಕೊನೆಗೂ ಬಿಗ್‌ಬಾಸ್ ಮನೆಯ ಕ್ಯಾಪ್ಟನ್ ಆಗುವಲ್ಲಿ ಯಶಸ್ವಿಯಾಗಿದ್ದಾರೆ!. ಮೊದಲನೇ ವಾರದಿಂದಲೂ ಕ್ಯಾಪ್ಟನ್ ಆಗಲು ಒಂದಿಲ್ಲ ಒಂದು ಬಗೆಯಲ್ಲಿ ಪ್ರಯತ್ನಿಸುತ್ತಲೇ ಇದ್ದ ವಿನಯ್‌ಗೆ ನಾಲ್ಕನೇ ವಾರದಲ್ಲಿ ಯಶಸ್ಸು ದೊರಕಿದೆ.
ಹಳ್ಳಿಜೀವನದ ಟಾಸ್ಕ್‌ನಲ್ಲಿ ವಿನಯ್ ತಂಡ ಗೆದ್ದು ಬೀಗಿತ್ತು. ಸಂಗೀತಾ ತಂಡ ಸೋತು ತಣ್ಣಗಾಗಿತ್ತು. ಹಾಗಾಗಿ ವಿನಯ್ ತಂಡದ ಎಲ್ಲರ ಜೊತೆ ತುಕಾಲಿ ಸಂತೋಷ್ ಕೂಡ ಕ್ಯಾಪ್ಟನ್ಸಿ ಟಾಸ್ಕ್‌ಗೆ ಅರ್ಹರಾಗಿದ್ದರು. ಟಾಸ್ಕ್‌ನಲ್ಲಿ ಕೊನೆಗೆ ಉಳಿದಿದ್ದು ತುಕಾಲಿ ಮತ್ತು ವಿನಯ್ ಇಬ್ಬರೇ. ತುಕಾಲಿ ಅವರಿಗೆ ವಿನಯ್ ಅವರನ್ನು ಕ್ಯಾಪ್ಟನ್ಸಿ ರೇಸ್‌ನಿಂದ ಹೊರಗೆ ಹಾಕುವ ಅವಕಾಶವಿದ್ದಾಗಲೂ ಅವರು ಅದನ್ನು ಬಳಸಿಕೊಳ್ಳದೆ ಸಿರಿ ಅವರನ್ನು ಹೊರಗೆ ಹಾಕಿದ್ದರು. ಇದರ ಪರಿಣಾಮವಾಗಿ ತುಕಾಲಿ ತಾವೇ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸೋತು ಕ್ಯಾಪ್ಟನ್ ಪಟ್ಟವನ್ನು ವಿನಯ್ ಅವರಿಗೆ ಬಿಟ್ಟುಕೊಡಬೇಕಾಗಿತ್ತು.
ಬಿಗ್‌ಬಾಸ್ ಈ ಸೀಸನ್‌ನ ಪ್ರಾರಂಭದ ದಿನದಿಂದಲೂ ಸಂಗೀತಾ ಮತ್ತು ವಿನಯ್ ನಡುವೆ ಜಟಾಪಟಿ ನಡೆಯುತ್ತಲೇ ಇದೆ. ಹಳ್ಳಿಜೀವನದ ಟಾಸ್ಕ್‌ಗಳಲ್ಲಿಯಂತೂ ಅದು ಅತಿರೇಕಕ್ಕೇ ಹೋಗಿತ್ತು. ಸಂಗೀತಾ ಮತ್ತು ಅವರ ತಂಡದ ಎಲ್ಲ ಸದಸ್ಯರೂ ವಿನಯ್ ಅವರನ್ನು ಕೆಣಕಿ, ಅವರ ಮಾತಿಗೆ ನೇರವಾಗಿ ಕೌಂಟರ್ ಕೊಟ್ಟು ಸಾಕಷ್ಟು ಕೆರಳಿಸಿದ್ದರು. ಆದರೆ ಇದೀಗ ವಿನಯ್ ಈ ವಾರದ ಕ್ಯಾಪ್ಟನ್ ಆಗಿದ್ದಾರೆ.