ಹಿಮತ್‌ನಗರ್ (ಗುಜರಾತ್): ಶಂಕಿತ 'ಚಂಡೀಪುರ ವೈರಸ್' ಸೋಂಕಿನಿಂದಾಗಿ ಗುಜರಾತ್‌ನ ಸಬರ್‌ಕಾಂತ ಜಿಲ್ಲೆಯಲ್ಲಿ ನಾಲ್ಕು ಮಕ್ಕಳು ಮೃತಪಟ್ಟಿದ್ದಾರೆ. ಅನಾರೋಗ್ಯಕ್ಕೀಡಾಗಿರುವ ಇನ್ನಿಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
'ಚಂಡೀಪುರ ವೈರಸ್' ಸೋಂಕು ಸೊಳ್ಳೆ, ಉಣ್ಣೆ, ನೊಣದಿಂದ ಹರಡುತ್ತದೆ. ಜ್ವರ, ತಲೆನೋವು, ಮಿದುಳಿನ ಉರಿಯೂತ ಇದರ ಲಕ್ಷಣಗಳಾಗಿವೆ.
'ಚಂಡೀಪುರ ವೈರಸ್' ತಗುಲಿದೆಯೇ ಇಲ್ಲವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವ ಸಲುವಾಗಿ ಆರೂ ಮಕ್ಕಳ ರಕ್ತದ ಮಾದರಿಯನ್ನು ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆಗೆ (ಎನ್‌ಐವಿ) ಕಳುಹಿಸಲಾಗಿದೆ. ವರದಿ ಇನ್ನಷ್ಟೇ ಬರಬೇಕಿದೆ ಎಂದು ಸಬರ್‌ಕಾಂತ ಜಿಲ್ಲೆಯ ಮುಖ್ಯ ಆರೋಗ್ಯಾಧಿಕಾರಿ ರಾಜ್ ಸುತಾರಿಯಾ ತಿಳಿಸಿದ್ದಾರೆ.
ಹಿಮ್ಮತ್‌ನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಲ್ಕು ಮಕ್ಕಳು 10ರಂದು ಮೃತಪಟ್ಟಿದ್ದರು. ಆಸ್ಪತ್ರೆಯ ಮಕ್ಕಳ ವೈದ್ಯರು, 'ಚಂಡೀಪುರ ವೈರಸ್' ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ಇನ್ನೆರಡು ಮಕ್ಕಳಲ್ಲಿಯೂ ಶಂಕಿತ ಸೋಂಕಿನ ಲಕ್ಷಣಗಳು ಕಂಡುಬಂದಿವೆ ಎಂದು ಅವರು ಹೇಳಿದ್ದಾರೆ.
ಮೃತಪಟ್ಟ ನಾಲ್ಕು ಮಕ್ಕಳಲ್ಲಿ ಮೂವರು ಗುಜರಾತ್‌ನ ಸಬರ್‌ಕಾಂತ ಹಾಗೂ ಅರಾವಲ್ಲಿ ಜಿಲ್ಲೆಯವರು. ಇನ್ನೊಂದು ಮಗು ಹಾಗೂ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ರಾಜಸ್ಥಾನದವರು. ಶಂಕಿತ ಸೋಂಕಿನ ಬಗ್ಗೆ ರಾಜಸ್ಥಾನದ ಅಧಿಕಾರಿಗಳಿಗೂ ತಿಳಿಸಲಾಗಿದೆ ಎಂದು ಸುತಾರಿಯಾ ಮಾಹಿತಿ ನೀಡಿದ್ದಾರೆ.
ಶಂಕಿತ ಸೋಂಕು ಕಾಣಿಸಿಕೊಂಡಿರುವ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದೂ ಹೇಳಿದ್ದಾರೆ.