ತಿರುವನಂತಪುರ: ಝೀಕಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನತೆಗೆ ಜಾಗರೂಕರಾಗಿರುವಂತೆ ಕೇರಳ ಸರ್ಕಾರದ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಜ್ವರ, ತಲೆನೋವು, ಮೈಕೈ ಹಾಗೂ ಸಂಧುಗಳಲ್ಲಿ ನೋವು ಮತ್ತು ಕಣ್ಣು ಕೆಂಪಾಗುವುದು ಝೀಕಾ ವೈರಸ್‌ನ ಲಕ್ಷಣಗಳಾಗಿವೆ. ಈ ರೀತಿಯ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಎಂದಿದೆ.
ಅಂತಹ ರೋಗಿಗಳಿಗೆ ವಿಶೇಷ ಆದ್ಯತೆಯ ಮೇರೆಗೆ ಚಿಕಿತ್ಸೆ ನೀಡಬೇಕೆಂದು ವೈದ್ಯರಿಗೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಲಶ್ಶೇರಿನಲ್ಲಿ ಸದ್ಯ 8 ಝೀಕಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ.
ಒಂದು ವೇಳೆ ಗರ್ಭಿಣಿಯರು ಸೋಂಕಿಗೆ ತುತ್ತಾದರೆ ಹುಟ್ಟಲಿರುವ ಮಗುವಿನಲ್ಲಿ ಜನನ ತೊಂದರೆಗಳು ಕಾಡಬಹುದು. ಹೀಗಾಗಿ ವೈರಸ್ ಪತ್ತೆಯಾದ ಪ್ರದೇಶಗಳಲ್ಲಿ ಇರುವ ಗರ್ಭಿಣಿಯರು ವಿಶೇಷ ಎಚ್ಚರಿಕೆವಹಿಸಬೇಕು ಎಂದು ಹೇಳಲಾಗಿದೆ.
ಝೀಕಾ ಸೋಂಕು ಪ್ರಾಥಮಿಕವಾಗಿ ಸೊಳ್ಳೆಗಳಲ್ಲಿ ಕಂಡುಬಂದರೂ, ಲೈಂಗಿಕ ಸಂಪರ್ಕ ಮತ್ತು ರಕ್ತದಾನದ ಮೂಲಕವೂ ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಇರುತ್ತದೆ. ಸೊಳ್ಳೆ ಸಂತಾನೋತ್ಪತ್ತಿಯನ್ನು ತಡೆಯಲು ಬೇಕಾದ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ