ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

'ಸಂವಿಧಾನ ಹತ್ಯಾ ದಿವಸ್‌' ಘೋಷಣೆ: ಕೇಂದ್ರದ ವಿರುದ್ಧ ಖರ್ಗೆ‌ ವಾಗ್ದಾಳಿ

Published : 13 ಜುಲೈ 2024, 5:02 IST
Last Updated : 13 ಜುಲೈ 2024, 5:02 IST
ಫಾಲೋ ಮಾಡಿ
Comments

ನವದೆಹಲಿ: ಜೂನ್‌ 25 ಅನ್ನು ‘ಸಂವಿಧಾನ ಹತ್ಯಾ ದಿವಸ್‌’ (ಸಂವಿಧಾನದ ಹತ್ಯೆಯ ದಿನ) ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶುಕ್ರವಾರ ಘೋಷಿಸಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದ ವಿರುದ್ಧ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಸುದೀರ್ಘ ಪೋಸ್ಟ್‌ ಮಾಡಿರುವ ಅವರು, 'ಕಳೆದ 10 ವರ್ಷಗಳಲ್ಲಿ ನಿಮ್ಮ ಸರ್ಕಾರ ಪ್ರತಿದಿನ 'ಸಂವಿಧಾನ ಹತ್ಯೆ ದಿನ' ಆಚರಿಸಿದೆ. ದೇಶದ ಪ್ರತಿಯೊಬ್ಬ ಬಡವರ ಮತ್ತು ವಂಚಿತ ವರ್ಗದ ಆತ್ಮಗೌರವವನ್ನು ಪ್ರತಿ ಕ್ಷಣವೂ ಕಿತ್ತುಕೊಂಡಿದ್ದೀರಿ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಮಧ್ಯಪ್ರದೇಶದ ಬಿಜೆಪಿ ನಾಯಕರೊಬ್ಬರು ಆದಿವಾಸಿಗಳ ಮೇಲೆ ಮೂತ್ರ ವಿಸರ್ಜನೆ ಮಾಡಿದಾಗ, ಉತ್ತರ ಪ್ರದೇಶದ ಹಾಥರಸ್‌ನಲ್ಲಿ ದಲಿತರ ಮಗಳನ್ನು ಪೊಲೀಸರು ಬಲವಂತವಾಗಿ ಅಂತ್ಯಸಂಸ್ಕಾರ ಮಾಡಿದಾಗ... ಅದು ಸಂವಿಧಾನದ ಕೊಲೆಯಲ್ಲದೇ, ಮತ್ತೇನು' ಎಂದು ಖರ್ಗೆ ಪ್ರಶ್ನಿಸಿದ್ದಾರೆ.

'ದಲಿತರ ವಿರುದ್ಧ ಪ್ರತಿ 15 ನಿಮಿಷಕ್ಕೊಂದು ಅಪರಾಧ ಮತ್ತು ಪ್ರತಿದಿನ 6 ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆದಾಗ... ಅದು ಸಂವಿಧಾನದ ಕೊಲೆಯಲ್ಲದೇ, ಇನ್ನೇನು?. ಕಳೆದ 13 ತಿಂಗಳಿಂದ ಮಣಿಪುರ ಹಿಂಸಾಚಾರದ ಕಪಿಮುಷ್ಠಿಯಲ್ಲಿ ಸಿಲುಕಿರುವಾಗ ನೀವು ಅಲ್ಲಿಗೆ ಹೋಗಲು ಬಯಸದೇ ಇರುವಾಗ ಅದು ಸಂವಿಧಾನದ ಹತ್ಯೆಯಲ್ಲದೇ, ಮತ್ತೇನು?' ಎಂದು ‌ಖರ್ಗೆ ಕೇಳಿದ್ದಾರೆ.

'ಮೋದಿ ಅವರೇ, ನಿಮಗೆ ಸಂವಿಧಾನದ ಬಗ್ಗೆ ಮಾತನಾಡುವುದು ಇಷ್ಟವಿಲ್ಲ. ಬಿಜೆಪಿ–ಆರ್‌.ಎಸ್‌.ಎಸ್‌ ಹಾಗೂ ಜನಸಂಘ ಯಾವತ್ತೂ ಸಂವಿಧಾನವನ್ನು ಒಪ್ಪಿಕೊಂಡಿಲ್ಲ. ಆರ್.ಎಸ್.ಎಸ್‌ ಮುಖವಾಣಿ ಆರ್ಗನೈಸರ್‌ನ 1949ರ ಜೂನ್‌ 30ರ ಸಂಚಿಕೆಯಲ್ಲಿ, ‘ಹೊಸ ಸಂವಿಧಾನದ ಕೆಟ್ಟ ವಿಷಯ ಏನೆಂದರೆ, ಅದರಲ್ಲಿ ಒಂದಂಶವೂ ಭಾರತೀಯತೆ ಇಲ್ಲ’ ಎಂದು ಬರೆದಿದ್ದು ನಿಜವಲ್ಲವೇ?. ಭಾರತ ಸಂವಿಧಾನದ ಪಿತಾಮಹ ಡಾ. ಬಿ.ಆರ್‌ ಅಂಬೇಡ್ಕರ್ ವಿರುದ್ಧ ಇದ್ದು, ಮನುಸ್ಮೃತಿಯನ್ನು ಬೆಂಬಲಿಸಿದ್ದೂ ಸತ್ಯವಲ್ಲವೇ?' ಎಂದು ಖರ್ಗೆ ಪ್ರಶ್ನಿಸಿದ್ದಾರೆ.

'ಸುಪ್ರೀಂಕೋರ್ಟ್‌ನ 5 ಹಾಲಿ ನ್ಯಾಯಾಧೀಶರು ಸಾರ್ವಜನಿಕ ಪತ್ರಿಕಾಗೋಷ್ಠಿ ನಡೆಸಿ ನ್ಯಾಯಾಲಯದಲ್ಲಿ ನಿಮ್ಮ ಸರ್ಕಾರದ ಹಸ್ತಕ್ಷೇಪದ ಬಗ್ಗೆ ಪ್ರಶ್ನೆಗಳನ್ನು ಎತ್ತಿದಾಗ... ಅದು ಸಂವಿಧಾನದ ಕೊಲೆಯಲ್ಲ, ಹಾಗದರೆ ಏನು?. ನಿಮ್ಮ ಸರ್ಕಾರ ಶೇ 95ರಷ್ಟು ವಿರೋಧ ಪಕ್ಷದ ನಾಯಕರ ಮೇಲೆ ಇ.ಡಿ, ಸಿಬಿಐ, ಐಟಿ ದಾಳಿ ನಡೆಸಿದ್ದು, ಚುನಾಯಿತ ಸರ್ಕಾರಗಳನ್ನು ಉರುಳಿಸಿದ್ದು, ಚುನಾವಣೆಗೆ ಎರಡು ವಾರಗಳ ಮೊದಲು ದೇಶದ ಪ್ರಮುಖ ವಿರೋಧ ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದು, ಇಬ್ಬರು ಮುಖ್ಯಮಂತ್ರಿಗಳನ್ನು ಜೈಲಿಗೆ ಕಳುಹಿಸಿದ್ದು.. ಸಂವಿಧಾನದ ಕೊಲೆಯಲ್ಲದೇ, ಮತ್ತೇನು?'.

'ಅನ್ನದಾತರ ಮೇಲೆ ಮೂರು ಕರಾಳ ಕಾನೂನುಗಳನ್ನು ಹೇರಿ, ಅವರನ್ನು ಒಂದು ವರ್ಷ ದೆಹಲಿಯ ಹೊಸ್ತಿಲಲ್ಲಿ ನೋವಿನಿಂದ ಕುಳಿತುಕೊಳ್ಳುವಂತೆ ಮಾಡಿದ್ದೀರಿ. ಅವರ ಮೇಲೆ ಲಾಠಿ ಪ್ರಹಾರ, ಡ್ರೋನ್‌ಗಳಿಂದ ಅಶ್ರುವಾಯು ಪ್ರಯೋಗಿಸಿರುವುದು.. ಸಂವಿಧಾನದ ಕೊಲೆಯಲ್ಲದೇ, ಮತ್ತೇನು?' ಎಂದು ಖರ್ಗೆ ಪ್ರಶ್ನಿಸಿದ್ದಾರೆ.

'ಮೋದಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರು ಸಂವಿಧಾನವನ್ನು ಬದಲಿಸಿ ಮನುಸ್ಮೃತಿಯನ್ನು ಜಾರಿಗೆ ತರಲು ಬಯಸುತ್ತಿದ್ದಾರೆ. ಇದರಿಂದ ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳ ಮೇಲೆ ದಾಳಿ ಮಾಡಬಹುದು. ಅದಕ್ಕಾಗಿಯೇ ಸಂವಿಧಾನದಂತಹ ಪವಿತ್ರ ಪದದ ಜೊತೆಗೆ ಕೊಲೆಯಂತಹ ಪದವನ್ನು ಸೇರಿಸಿ ಬಾಬಾಸಾಹೇಬ್ ಡಾ.ಅಂಬೇಡ್ಕರ್ ಅವರನ್ನು ಅವಮಾನಿಸುತ್ತಿದ್ದಾರೆ' ಎಂದು ಖರ್ಗೆ ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ಶಶಿ ತರೂರ್ ಕೂಡ ಈ ಕ್ರಮವನ್ನು ಟೀಕಿಸಿದ್ದು , ಜೂನ್‌ 25ನ್ನು ಸಂವಿಧಾನ ಹತ್ಯಾ ದಿವಸ್ ಎಂದು ಘೋಷಿಸಿರುವುದು ಸ್ವಲ್ಪ ವಿಚಿತ್ರವಾಗಿದೆ ಎಂದು ಹೇಳಿದ್ದಾರೆ.

ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ಹೊರಡಿಸಿದ ಗೆಜೆಟ್ ಅಧಿಸೂಚನೆಯಲ್ಲಿ ಸರ್ಕಾರವು ಜೂನ್ 25 ಅನ್ನು ‘ಸಂವಿಧಾನ ಹತ್ಯಾ ದಿವಸ್‌’ (ಸಂವಿಧಾನದ ಹತ್ಯೆಯ ದಿನ) ಎಂದು ಘೋಷಿಸಿದೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಅಧಿಕಾರ ದುರುಪಯೋಗದ ವಿರುದ್ಧ ಹೋರಾಡಿದವರಿಗೆ ಆ ದಿನದಂದು ಗೌರವ ಸಲ್ಲಿಸಲಾಗುವುದು ಎಂದು ಸರ್ಕಾರ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT