ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೀತಿ ಆಯೋಗದ ಸಭೆ: 11 ಸಿ.ಎಂಗಳು ಗೈರು

Published : 28 ಮೇ 2023, 0:45 IST
Last Updated : 28 ಮೇ 2023, 0:45 IST
ಫಾಲೋ ಮಾಡಿ
Comments

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಇಲ್ಲಿ ನಡೆದ ನೀತಿ ಆಯೋಗದ ಆಡಳಿತ ಮಂಡಳಿಯ 8ನೇ ಸರ್ವಸದಸ್ಯರ ಸಭೆಗೆ 11 ರಾಜ್ಯಗಳ ಮುಖ್ಯಮಂತ್ರಿಗಳು ಗೈರು ಹಾಜರಾಗಿದ್ದರು.

ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಮತ್ತು ತಾವು ಸಭೆಗೆ ಬಹಿಷ್ಕಾರ ಹಾಕಿರುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಶುಕ್ರವಾರವೇ  ಹೇಳಿದ್ದರು. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ವಿಸ್ತರಣೆಯಯ ಕಾರಣದಿಂದಾಗಿ ಬೆಂಗಳೂರಿನಲ್ಲೇ ಉಳಿದಿದ್ದರು.

ಮುಖ್ಯಮಂತ್ರಿಗಳಾದ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ತಮಿಳುನಾಡಿನ ಎಂ.ಕೆ.ಸ್ಟಾಲಿನ್‌, ಬಿಹಾರದ ನಿತೀಶ್‌ ಕುಮಾರ್, ಕೇರಳದ ಪಿಣರಾಯಿ ವಿಜಯನ್, ರಾಜಸ್ಥಾನದ ಅಶೋಕ್‌ ಗೆಹಲೋತ್‌ ಅವರು ಸಭೆಯನ್ನು ಬಹಿಷ್ಕರಿಸಿದ್ದಾರೆ.

ಸಂಸತ್ತಿನ ನೂತನ ಭವನದ ಉದ್ಘಾಟನೆಗೆ ಪ್ರತಿಪಕ್ಷಗಳು ಬಹಿಷ್ಕಾರ ಹಾಕಿರುವುದರ ಹಿಂದೆಯೇ, ಅದರ ಮುನ್ನಾದಿನದಂದು ಪ್ರಧಾನಿ ಅಧ್ಯಕ್ಷತೆಯಲ್ಲಿಯೇ ನಡೆದ ನೀತಿ ಆಯೋಗದ ಸಭೆಗೂ ಎನ್‌ಡಿಎಯೇತರ ಮುಖ್ಯಮಂತ್ರಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

19 ಸಿ.ಎಂಗಳ ಹಾಜರಿ: ಸಭೆ ಕುರಿತು ನಂತರ ಮಾಹಿತಿ ನೀಡಿದ ನೀತಿ ಆಯೋಗದ ಸಿಇಒ ಬಿ.ವಿ.ಆರ್.ಸುಬ್ರಹ್ಮಣ್ಯಂ, ‘19 ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಆರು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್‌ ಗವರ್ನರ್‌ಗಳು ಸಭೆಯಲ್ಲಿ ಭಾಗವಹಿಸಿದ್ದರು’ ಎಂದು ತಿಳಿಸಿದರು.

ರಾಷ್ಟ್ರೀಯ ಅಭಿವೃದ್ಧಿಯ ಕಾರ್ಯಸೂಚಿಗೆ ಪೂರಕವಾಗಿ ಮುಂದಿನ 25 ವರ್ಷಗಳಲ್ಲಿ ರಾಜ್ಯಗಳು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುವ ದಿಸೆಯಲ್ಲಿ ನೀತಿ ಆಯೋಗವು ನಿರ್ಣಾಯಕ ಪಾತ್ರವನ್ನು ವಹಿಸಲಿದೆ ಎಂದು ಅವರು ಹೇಳಿದರು.  

ಜಾತಿ ಆಧಾರಿತ ಜನಗಣತಿ ಮತ್ತು ರಾಜ್ಯಕ್ಕೆ ವಿಶೇಷ ಸ್ಥಾನಮಾನ ಬೇಡಿಕೆ ಕುರಿತು ಸಭೆಯಲ್ಲಿ ಪ್ರಸ್ತಾಪಿಸುವ ಉದ್ದೇಶವಿತ್ತು. ಆದರೆ ಕೇಂದ್ರದ ಧೋರಣೆಯಿಂದ ಭಾಗವಹಿಸಲು ಆಗಲಿಲ್ಲ

-ನಿತೀಶ್‌ ಕುಮಾರ್ ಬಿಹಾರ ಮುಖ್ಯಮಂತ್ರಿ  

ಜಿಎಸ್‌ಟಿಯಿಂದಾಗಿ ರಾಜ್ಯಗಳಿಗೆ ಆಗುವ ಆದಾಯ ನಷ್ಟ ಸರಿತೂಗಿಸಲು ಕೇಂದ್ರ ಸರ್ಕಾರ ‘ಶಾಶ್ವತ ವ್ಯವಸ್ಥೆ’ ರೂಪಿಸಬೇಕು. ಎನ್‌ಪಿಎಸ್‌ ಯೋಜನೆಯಡಿ ಠೇವಣಿ ಇಟ್ಟಿರುವ ₹ 19 ಸಾವಿರ ಕೋಟಿಯನ್ನು ಮರಳಿಸಬೇಕು

-ಭೂಪೇಶ್‌ ಬಘೆಲ್‌ ಛತ್ತೀಸಗಢ ಮುಖ್ಯಮಂತ್ರಿ

ಇದು (ಬಹಿಷ್ಕಾರ) ಜನವಿರೋಧಿಯಾದ ಮತ್ತು ಬೇಜವಾಬ್ದಾರಿಯುತ ನಡೆ. ಹೀಗೆ ಗೈರುಹಾಜರಾದರೆ ಸಭೆಯಲ್ಲಿ ಆ ರಾಜ್ಯಗಳ ಧ್ವನಿಯೇ ಇಲ್ಲವಾಗಲಿದೆ. ಇದು ದುರದೃಷ್ಟಕರ

-ರವಿಶಂಕರ್‌ ಪ್ರಸಾದ್ ಬಿಜೆಪಿ ಮುಖಂಡ

ಆರ್ಥಿಕತೆ ಕುರಿತು ವಿವೇಕಯುತ ತೀರ್ಮಾನ:

ಪ್ರಧಾನಿ ಸಲಹೆ ನವದೆಹಲಿ (ಪಿಟಿಐ):‘ದೇಶವನ್ನು 2047ರ ವೇಳೆಗೆ ಅಭಿವೃದ್ಧಿ ರಾಷ್ಟ್ರವಾಗಿಸುವ ಗುರಿ ಸಾಧನೆಗಾಗಿ ರಾಜ್ಯಗಳು ಜನರ ಆಶಯಗಳನ್ನು ಈಡೇರಿಸುವ ಏಕರೂಪದ ಚಿಂತನೆ ಹೊಂದಿರಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ನೀತಿ ಆಯೋಗದ ಸಭೆಯಲ್ಲಿ ಮಾತನಾಡಿದ ಅವರು ‘ಅಭಿವೃದ್ಧಿ ಗುರಿ ಸಾಧಿಸಲು ರಾಜ್ಯಗಳಿಗೆ ಆರ್ಥಿಕ ಶಿಸ್ತಿರಬೇಕು. ಹಣಕಾಸಿನ ವಿಷಯದಲ್ಲಿ ವಿವೇಕದ ನಿರ್ಧಾರ ಕೈಗೊಳ್ಳಬೇಕು. ಆಡಳಿತದಲ್ಲಿ ಸನ್ನಡತೆ ಹೊಂದಿರಬೇಕು‘ ಎಂದರು. ‘2047ರಲ್ಲಿ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ವೇಳೆಗೆ ದೇಶ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು. ಇದಕ್ಕಾಗಿ ಜನರ ಆಶಯಗಳಿಗೆ ಸ್ಪಂದಿಸಲು ಆರ್ಥಿಕ ನಿರ್ಧಾರಗಳಲ್ಲಿ ವಿವೇಕಯುತ ತೀರ್ಮಾನ ಅಗತ್ಯ‘ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT