ಸುಲ್ತಾನಪುರ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಉತ್ತರ ಪ್ರದೇಶದಲ್ಲಿ ಇಂದು ಚಪ್ಪಲಿ ಹೊಲಿಯುವ ಚಮ್ಮಾರನ ಅಂಗಡಿಗೆ ದಿಢೀರ್ ಭೇಟಿ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ತಮ್ಮ ವಿರುದ್ಧ ದಾಖಲಾಗಿರುವ ಮಾನನಷ್ಟ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿರುವ ಸಂಸದರು ಮತ್ತು ಶಾಸಕರ ನ್ಯಾಯಾಲಯಕ್ಕೆ ರಾಹುಲ್ ಗಾಂಧಿ ಇಂದು ಹಾಜರಾದರು.
ಅಲ್ಲಿಂದ ಲಖನೌಗೆ ಹಿಂತಿರುಗುವ ವೇಳೆ ವಿಧಾಯಕ ನಗರದಲ್ಲಿ ಚಮ್ಮಾರನ ಅಂಗಡಿಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕನ ಅನಿರೀಕ್ಷಿತ ಭೇಟಿಯಿಂದ ಕಾರ್ಮಿಕ ರಾಮ್ ಚೆತ್ ಆಶ್ಚರ್ಯಚಕಿತಗೊಂಡಿದ್ದಾನೆ. ಬಳಿಕ ಅವರ ಹಾಗೂ ಕುಟುಂಬದ ಸಮಸ್ಯೆಗಳನ್ನು ರಾಹುಲ್ ಗಾಂಧಿ ಆಲಿಸಿರುವುದಾಗಿ ತಿಳಿಸಿದ್ದಾರೆ.
ರಾಹುಲ್ ಭೇಟಿ ಬಗ್ಗೆ ಸಂತೋಷ ವ್ಯಕ್ತಪಡಿಸಿರುವ ರಾಮ್, ಸುಮಾರು ಅರ್ಧ ಗಂಟೆ ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದಾರೆ.
ಈ ವೇಳೆ ಇಬ್ಬರು ತಂಪು ಪಾನೀಯ ಸೇವಿಸಿದರು. ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಬೇಕಾದ ಕ್ರಮ ಕೈಗೊಳ್ಳುವುದಾಗಿ ರಾಹುಲ್ ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ.