ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರಪತಿ ಭವನದ ‘ದರ್ಬಾರ್‌ ಹಾಲ್‌’ ಈಗ ‘ಗಣತಂತ್ರ ಮಂಟಪ’

‘ಅಶೋಕ ಹಾಲ್‌’ಗೆ ‘ಅಶೋಕ ಮಂಟಪ’ ಎಂದು ಮರುನಾಮಕರಣ
Published : 25 ಜುಲೈ 2024, 14:14 IST
Last Updated : 25 ಜುಲೈ 2024, 14:14 IST
ಫಾಲೋ ಮಾಡಿ
Comments

ನವದೆಹಲಿ: ರಾಷ್ಟ್ರಪತಿ ಭವನದಲ್ಲಿನ ‘ದರ್ಬಾರ್‌ ಹಾಲ್‌’ ಅನ್ನು ‘ಗಣತಂತ್ರ ಮಂಟಪ’ ಎಂದು, ‘ಅಶೋಕ ಹಾಲ್’ ಅನ್ನು ‘ಅಶೋಕ ಮಂಟಪ’ ಎಂಬುದಾಗಿ ಗುರುವಾರ ಮರುನಾಮಕರಣ ಮಾಡಲಾಗಿದೆ.

ಈ ಕುರಿತು ಪ್ರಕಟಣೆ ನೀಡಿರುವ ರಾಷ್ಟ್ರಪತಿಗಳ ಸಚಿವಾಲಯ, ‘ರಾಷ್ಟ್ರಪತಿ ಭವನವು ಭಾರತದ ಸಾಂಸ್ಕೃತಿಕ ಮೌಲ್ಯಗಳು ಹಾಗೂ ಸಂಪ್ರದಾಯಗಳನ್ನು ಹೆಚ್ಚು ಪ್ರತಿಬಿಂಬಿಸುವಂತೆ ಮಾಡುವ ಪ್ರಯತ್ನದ ಭಾಗವಾಗಿ ಈ ಬದಲಾವಣೆಗಳನ್ನು ಮಾಡಲಾಗಿದೆ’ ಎಂದು ತಿಳಿಸಿದೆ.

‘ದರ್ಬಾಲ್‌ ಹಾಲ್‌’ನಲ್ಲಿ ರಾಷ್ಟ್ರೀಯ ಪುರಸ್ಕಾರಗಳ ಪ್ರದಾನ ಕಾರ್ಯಕ್ರಮ ಸೇರಿದಂತೆ ಮಹತ್ವದ ಸಭೆ– ಸಮಾರಂಭಗಳನ್ನು ಹಮ್ಮಿಕೊಳ್ಳಲಾಗುತ್ತದೆ. 

ಬ್ರಿಟಿಷರ ಆಳ್ವಿಕೆಯಲ್ಲಿ ಸಭಾಂಗಣಗಳನ್ನು ‘ದರ್ಬಾರ್‌’ ಎಂದು ಕರೆಯಲಾಗುತ್ತಿತ್ತು. ಭಾರತವು ಗಣತಂತ್ರವಾದ ನಂತರ ‘ದರ್ಬಾರ್‌’ ಎಂಬುದು ತನ್ನ ಪ್ರಸ್ತುತತೆ ಕಳೆದುಕೊಂಡಿತು. ಅನಾದಿ ಕಾಲದಿಂದಲೂ ಭಾರತೀಯ ಸಮಾಜದಲ್ಲಿ ‘ಗಣತಂತ್ರ’ ಎಂಬ ಪರಿಕಲ್ಪನೆ ಹಾಸುಹೊಕ್ಕಾಗಿದೆ. ಹೀಗಾಗಿ ಈ ಸಭಾಂಗಣಕ್ಕೆ ‘ಗಣತಂತ್ರ ಮಂಟಪ’ ಎಂಬ ಹೆಸರೇ ಸೂಕ್ತ’ ಎಂದು ಪ್ರಕಟಣೆ ತಿಳಿಸಿದೆ.

ರಾಷ್ಟ್ರಪತಿ ಭವನದಲ್ಲಿನ ರಂಗಮಂದಿರವನ್ನು ಈವರೆಗೆ ‘ಅಶೋಕ ಹಾಲ್‌’ ಎಂದು ಕರೆಯಲಾಗುತ್ತಿತ್ತು. ಈಗ ಇದು, ‘ಅಶೋಕ ಮಂಟಪ’ ಎಂದು ಮರುನಾಮಕರಣಗೊಂಡಿದೆ.

‘ಅಶೋಕ’ ಎಂಬ ಪದವು, ಎಲ್ಲ ಬಗೆಯ ಯಾತನೆಗಳಿಂದ ಮುಕ್ತನಾದ ವ್ಯಕ್ತಿ ಎಂಬ ಅರ್ಥವನ್ನು ಹೊಂದಿದೆ. ಸಾಮ್ರಾಟ್‌ ಅಶೋಕ ಕುರಿತಾಗಿಯೂ ಇದನ್ನೇ ಬಳಸಲಾಗುತ್ತದೆ. ಇದು, ಏಕತೆ ಮತ್ತು ಶಾಂತಿಯುತ ಸಹಬಾಳ್ವೆಯನ್ನು ಸಾರುತ್ತದೆ’ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ಹೇಳಿದೆ.

‘ಸಾಮ್ರಾಟ್‌ ಅಶೋಕನ ರಾಜಧಾನಿ ಸಾರಾನಾಥದಲ್ಲಿರುವ ನಾಲ್ಕು ಮುಖದ ಸಿಂಹ ನಮ್ಮ ರಾಷ್ಟ್ರೀಯ ಲಾಂಛನ. ಅಶೋಕ ಎಂಬುದು ಒಂದು ವೃಕ್ಷದ ಹೆಸರೂ ಆಗಿದ್ದು, ಭಾರತೀಯರ ಧಾರ್ಮಿಕ ಪರಂಪರೆ, ಕಲೆ ಮತ್ತು ಸಂಸ್ಕೃತಿಯಲ್ಲಿ ಈ ವೃಕ್ಷಕ್ಕೆ ಮಹತ್ವದ ಸ್ಥಾನ ಇದೆ’ ಎಂದು ತಿಳಿಸಿದೆ.

‘ಅಶೋಕ ಹಾಲ್‌’ ಅನ್ನು ‘ಅಶೋಕ ಮಂಟಪ’ ಎಂದು ಮರುನಾಮಕರಣ ಮಾಡಿರುವ ಕಾರಣ, ಭಾಷೆ ವಿಚಾರವಾಗಿಯೂ ಏಕರೂಪತೆ ಸಾಧಿಸಿದಂತಾಗಿದೆ’ ಎಂದೂ ತಿಳಿಸಿದೆ.

ಪ್ರಿಯಾಂಕಾ ಗಾಂಧಿ 
ಪ್ರಿಯಾಂಕಾ ಗಾಂಧಿ 
ಮರುನಾಮಕರಣ: ಪ್ರಿಯಾಂಕಾ ಟೀಕೆ
ನವದೆಹಲಿ(ಪಿಟಿಐ): ರಾಷ್ಟ್ರಪತಿ ಭವನದ ‘ದರ್ಬಾರ್‌ ಹಾಲ್‌’ ಹಾಗೂ ‘ಅಶೋಕ ಹಾಲ್‌’ಗಳನ್ನು ಮರುನಾಮಕರಣ ಮಾಡಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಡ್ರಾ ಟೀಕಾ ಪ್ರಹಾರ ಮಾಡಿದ್ದಾರೆ. ‘ಕೇಂದ್ರದಲ್ಲಿ ಸರ್ಕಾರ ನಡೆಸುವವರಿಗೆ ‘ಸಭೆಯ ಪರಿಕಲ್ಪನೆ’ ಇಲ್ಲ. ಬದಲಾಗಿ ‘ಸರ್ವಾಧಿಕಾರಿ ಪರಿಕಲ್ಪನೆ’ ಇದೆ’ ಎಂಬುದನ್ನು ಈ ನಡೆ ತೋರಿಸುತ್ತದೆ’ ಎಂದು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT