ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ ವಾಲ್ಮೀಕಿ ನಿಗಮದ ಹಗರಣದ ಆರೋಪ: ಗದ್ದಲ, ಕೋಲಾಹಲ

Published : 26 ಜುಲೈ 2024, 9:35 IST
Last Updated : 26 ಜುಲೈ 2024, 9:35 IST
ಫಾಲೋ ಮಾಡಿ
Comments

ನವದೆಹಲಿ: ಕರ್ನಾಟಕದ ಮಹರ್ಷಿ ವಾಲ್ಮೀಕಿ ನಿಗಮದ ಹಗರಣದ ಆರೋಪವು ಇಂದು ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿತು.

ಸದನದ ಎಲ್ಲ ನಿಗದಿತ ಚರ್ಚೆಗಳನ್ನು ಅಮಾನತು ಮಾಡಿ ನಿಯಮ 267ರ ಅಡಿ ಚರ್ಚೆಗೆ ಆಡಳಿತಾರೂಢ ಬಿಜೆಪಿ ಪಕ್ಷದ ಸದಸ್ಯರು ಒತ್ತಾಯಿಸಿದರು. ಅವಕಾಶ ನಿರಾಕರಿಸಿದ ರಾಜ್ಯಸಭಾಧ್ಯಕ್ಷ ಜಗದೀಪ್ ಧನಕರ್, ಬಿಜೆಪಿ ಸದಸ್ಯರೊಬ್ಬರಿಗೆ ವಿಷಯ ಪ್ರಸ್ತಾಪಿಸಲು ಅವಕಾಶ ನೀಡಿದರು.

ಚರ್ಚೆಗೆ ಅವಕಾಶ ಕೊಡದ ಸ್ಪೀಕರ್ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಲು ಆಡಳಿತ ಪಕ್ಷದ ಸದಸ್ಯರು ಮುಂದಾದರೆ, ಕರ್ನಾಟಕದ ಭ್ರಷ್ಟಾಚಾರದ ವಿಷಯ ಪ್ರಸ್ತಾಪಿಸಲು ಬಿಜೆಪಿ ಸದಸ್ಯ ಈರಣ್ಣ ಕಡಾಡಿಗೆ ಅವಕಾಶ ನೀಡಿರುವುದನ್ನು ಖಂಡಿಸಿ ವಿರೋಧ ಪಕ್ಷ ಕಾಂಗ್ರೆಸ್‌ನ ಸದಸ್ಯರು ಪ್ರತಿಭಟನೆ ನಡೆಸಿದ್ದರಿಂದ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.

ಬಿಜೆಪಿಯ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಬ್ರೀಜ್ ಲಾಲ್, ನರೇಶ್ ಬನ್ಸಾಲ್ ಮತ್ತು ಸುಧಾಂಶು ತ್ರಿವೇದಿಯವರು ಕರ್ನಾಟಕದ ಭ್ರಷ್ಟಾಚಾರ ಕುರಿತ ಚರ್ಚೆಗೆ ಒತ್ತಾಯಿಸಿ ನೋಟಿಸ್ ನೀಡಿದ್ದರು.

ತಮ್ಮ ಆದೇಶವನ್ನು ಒಪ್ಪಿಕೊಳ್ಳುವಂತೆ ಉಭಯ ಬಣದ ನಾಯಕರಿಗೂ ಸ್ಪೀಕರ್ ಪದೇ ಪದೇ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ.

ಈ ನಡುವೆ, ಕಡಾಡಿ ಮಾತು ಆರಂಭಿಸಿದಾಗ ಅದಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ಬೆಳಿಗ್ಗೆ ಸ್ಪೀಕರ್ ಹಾಕಿದ್ದ ಕಲಾಪದ ಶೂನ್ಯವೇಳೆಯ ಪಟ್ಟಿಯಲ್ಲಿ ಇವರ ಹೆಸರು ಇರಲಿಲ್ಲ ಎಂದು ಹೇಳಿದರು. ಕಲಾಪದಲ್ಲಿ ಮಾತನಾಡುವವರ ಪಟ್ಟಿಯಲ್ಲಿ ಕಡಾಡಿ ಹೆಸರು ಇಲ್ಲದ ಕಾರಣ ಅವರಿಗೆ ಬೇರೊಂದು ದಿನ ಮಾತನಾಡಲು ಅವಕಾಶ ಕೊಡಿ ಎಂದು ಕಾಂಗ್ರೆಸ್ ಸದಸ್ಯ ಪಿ. ಚಿದಂಬರಂ ಒತ್ತಾಯಿಸಿದರು.

ನಿಯಮ 267ರ ಅಡಿಯ ನೋಟಿಸ್‌ ಕುರಿತಂತೆ ಆದೇಶ ನೀಡುವ ವೇಳೆ ಧನಕರ್, ಕಡಾಡಿಗೆ ಮಾತನಾಡಲು ಅವಕಾಶ ನೀಡುವುದಾಗಿ ಹಲವು ಬಾರಿ ಪ್ರಸ್ತಾಪಿಸಿದ್ದರು.

ಇದನ್ನೇ ಹಿಡಿದುಕೊಂಡು ಡಿಎಂಕೆ ಸದಸ್ಯ ತಿರುಚಿ ಸಿವಾ, ಕಡಾಡಿಗೆ ಅವಕಾಶ ನೀಡುವುದಾದರೆ ಬೇರೆ ಸದಸ್ಯರಿಗೂ ಮಾತನಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಯಾವುದೇ ಸದಸ್ಯರು ಅವಕಾಶ ಕೇಳಿದರೆ ನೀಡಲಾಗುವುದು ಎಂದು ಧನಕರ್ ಪ್ರತಿಕ್ರಿಯಿಸಿದರು.

ಬಳಿಕ, ವಿರೋಧ ಪಕ್ಷಗಳ ಸದಸ್ಯರ ಪ್ರತಿಭಟನೆಯ ನಡುವೆಯೇ ಕಡಾಡಿ, ಕರ್ನಾಟಕದ ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣದ ಆರೋಪದ ವಿಚಾರದ ಬಗ್ಗೆ ಮಾತನಾಡಿದರು.

ಇದಕ್ಕೂ ಮುನ್ನ, ಸದನ ಆರಂಭವಾಗುತ್ತಿದ್ದಂತೆ ಕಾರ್ಗಿಲ್ ವಿಜಯ ದಿವಸದ ಹಿನ್ನೆಲೆಯಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು.

ಈ ನಡುವೆ, ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಸಂಸತ್ ಭವನದ ಎದುರು ರಾಜ್ಯ ಬಿಜೆಪಿ ಸಂಸದರು ಪ್ರತಿಭಟನೆ ನಡೆಸಿದರು. ಸಂಸದರಾದ ಬಸವರಾಜ ಬೊಮ್ಮಾಯಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಸಿ.ಎನ್. ಮಂಜುನಾತ್ ಮತ್ತು ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT