ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಲ್ಯ ವಿವಾಹ | ದೇಶದಲ್ಲೇ ಎರಡನೇ ಸ್ಥಾನ ತಲೆ ತಗ್ಗಿಸುವ ವಿಚಾರ: ಹೆಬ್ಬಾಳ್ಕರ್‌

Published : 13 ಜುಲೈ 2024, 12:13 IST
Last Updated : 13 ಜುಲೈ 2024, 12:13 IST
ಫಾಲೋ ಮಾಡಿ
Comments

ಮಂಗಳೂರು: ‘ಬಾಲ್ಯ ವಿವಾಹದ ವಿಚಾರದಲ್ಲಿ ಕರ್ನಾಟಕವು ದೇಶದಲ್ಲೇ ಎರಡನೇ ಸ್ಥಾನದಲ್ಲಿರುವುದು ದುರದೃಷ್ಟಕರ. ಜವಾಬ್ದಾರಿಯುತ ಸ್ಥಾನದಲ್ಲಿರುವ ಮಂತ್ರಿಯಾಗಿ, ನನಗೂ ತಲೆ ತಗ್ಗಿಸುವ ವಿಚಾರವಿದು. ಬಾಲ್ಯ ವಿವಾಹದಲ್ಲಿ ಬಳ್ಳಾರಿ ಜಿಲ್ಲೆಯು ರಾಜ್ಯಕ್ಕೆ ಪ್ರಥಮ ಹಾಗೂ ಬೆಳಗಾವಿ ಎರಡನೇ ಸ್ಥಾನದಲ್ಲಿದೆ ಎಂದು ಹೇಳಲೂ ನಾಚಿಕೆ ಆಗುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು.

ಇಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಇದಕ್ಕೆ ನಮ್ಮ ಇಲಾಖೆಯಲ್ಲಿರುವ ದೋಷಗಳು‌ ಮಾತ್ರ ಕಾರಣವಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿಗಳು, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಎಸ್‌ಡಿಎಂಸಿಗಳು, ಕಾನೂನು ಇಲಾಖೆ, ‌ಆರೋಗ್ಯ ಇಲಾಖೆ ಮತ್ತು ಪೊಲೀಸ್‌ ಇಲಾಖೆಗಳ ಸಹಕಾರದಿಂದ ಹಾಗೂ ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಇದನ್ನು ತಡೆಯಬೇಕಿದೆ. ಬಾಲಕಿಯರು ಗರ್ಭಿಣಿಯಾಗುವುದನ್ನು ಹಾಗೂ ಬಾಲ್ಯವಿವಾಹವನ್ನು ಬೇರು ಮಟ್ಟದಿಂದ ಹೋಗಲಾಡಿಸಲು ಕ್ರಮ ವಹಿಸುತ್ತೇವೆ’ ಎಂದರು.

‘ಬಾಲ್ಯವಿವಾಹವನ್ನು ಮೂಢನಂಬಿಕೆಯಿಂದ ಮಾಡುತ್ತಾರೋ, ಏನೂ ಎಂದೇ ಗೊತ್ತಾಗುತ್ತಿಲ್ಲ. ಇದನ್ನು ಇರುವ ಜಿಲ್ಲಾ ಮಟ್ಟದ ಸಮಿತಿಗಳು, ವಕೀಲರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಬಾಲ್ಯ ವಿವಾಹದ ವಿಚಾರ ಗೊತ್ತಾದ ತಕ್ಷಣವೇ ಎಫ್‌ಐಆರ್‌ ದಾಖಲಿಸಬೇಕು’ ಎಂದರು.

‘ರಾಜ್ಯದಲ್ಲಿ 70ಸಾವಿರಕ್ಕೂ ಅಧಿಕ ಅಂಗನವಾಡಿಗಳಿದ್ದು, ಅವುಗಳಲ್ಲಿ 20 ಸಾವಿರ ಅಂಗನವಾಡಿಗಳಲ್ಲಿ ಸರ್ಕಾರ ಮೊಂಟೆಸ್ಸರಿಗಳನ್ನು ಪ್ರಾರಂಭಿಸಲಿದೆ. ಅಂಗನವಾಡಿ ಕಾರ್ಯಕರ್ತೆಯರಲ್ಲಿ ಸುಮಾರು 15 ಸಾವಿರದಷ್ಟು ಪದವೀಧರೆಯರು ಹಾಗೂ 2 ಸಾವಿರದಷ್ಟು ಸ್ನಾತಕೋತ್ತರ ಪದವೀಧರೆಯರು ಇದ್ದಾರೆ. ಇವರಿಗೆ ಇನ್ನಷ್ಟು ತರಬೇತಿ ನೀಡಿ, ಮೋಂಟೆಸ್ಸರಿಗಳಲ್ಲಿ ಬಳಸಿಕೊಳ್ಳಲಿದ್ದೇವೆ. ಮೋಂಟೆಸ್ಸರಿ ಆರಂಭಿಸುವುದರ ಜೊತೆಗೆ, ಅವುಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ಸೌಕರ್ಯವನ್ನು ಕಲ್ಪಿಸಲಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಒಪ್ಪಿಗೆ ಸೂಚಿಸಿದ್ದು, ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದೆ. ಇಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳೆರಡರಲ್ಲೂ ಕಲಿಯಲು ಅವಕಾಶ ಕಲ್ಪಿಸಲಿದ್ದೇವೆ’ ಎಂದು ತಿಳಿಸಿದರು.

ವಾಲ್ಮೀಕಿ ನಿಗಮದ ಹಗರಣ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣಗಳ ಸಂಬಂಧ ವಿರೋಧ ಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣದ ತನಿಖೆ ಪೂರ್ಣಗೊಳ್ಳಲಿ. ಈ ಬಗ್ಗೆ ಈಗ ಪ್ರತಿಕ್ರಿಯಿಸುವುದು ಸರಿಯಲ್ಲ. ವಿರೋಧ ಪಕ್ಷಗಳು ಮುಖ್ಯಮಂತ್ರಿಯವರ ರಾಜೀನಾಮೆಗೆ ಒತ್ತಾಯಿಸುವುದು ರಾಜಕೀಯ ಪ್ರೇರಿತ. ಮಾಡಬಾರದ ಹಗರಣಗಳನ್ನು ಮಾಡಿದ್ದರಿಂದಲೇ ಬಿಜೆಪಿ ಶಾಸಕರ ಸಂಖ್ಯೆ 60ಕ್ಕೆ ಇಳಿಸಿದೆ. ಏನಾದರೂ ಹೋರಾಟ ಮಾಡಬೇಕು ಎಂಬ ಕಾರಣಕ್ಕೆ ಅವರು ಈ ರೀತಿ ಆರೋಪ ಮಾಡುತ್ತಿದ್ದಾರೆ’ ಎಂದರು.

ರಾಜ್ಯಲ್ಲಿ ಓಲೈಕೆ ರಾಜಕಾರಣದಿಂದಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ಆಯಿತು ಎಂಬ ಪ್ರಶ್ನೆಗೆ, ‘ರಾಜ್ಯದಲ್ಲಿ ಪಕ್ಷವು ಎಲ್ಲೂ ಓಲೈಕೆ ರಾಜಕಾರಣ ನಡೆಸಿಲ್ಲ. ಪಕ್ಷದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಅಭ್ಯರ್ಥಿಗಳನ್ನು ಗಲ್ಲಿಸಲು ಶ್ರಮ ಪಟ್ಟಿದ್ದಾರೆ.ಕಾಂಗ್ರೆಸ್‌ ಹಿನ್ನಡೆಗೆ ಕಾರಣಗಳು ಏನು ಎಂಬುದನ್ನು ವಿಶ್ಲೇಷಿಸಿರುವ ಕಾಂಗ್ರೆಸ್‌ ಮುಖಂಡ ಮಧುಸೂದನ ಮಿಸ್ತ್ರಿ ಅವರೂ ಈ ರೀತಿ ವರದಿ ನೀಡಿಲ್ಲ’ ಎಂದರು.

ಸಂವಿಧಾನಕ್ಕೆ ಬದ್ಧವಾಗಿರಲಿ:

ಕೇಂದ್ರ ಸರ್ಕಾರವು ಜೂನ್‌ 25 ರಂದು ಸಂವಿಧಾನ ಹತ್ಯಾ ದಿನವನ್ನು ಆಚರಿಸಲು ಮುಂದಾಗಿರುವುದಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳ್ಕರ್‌, ‘ಈ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕಾರಣ ಮಾಡುತ್ತಿದೆ. ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್ ಎಂದ ಅವರ ಮಂತ್ರಿಮಂಡಲದಲ್ಲಿ ಒಬ್ಬರಾದರೂ ಮುಸ್ಲಿಂ ಸಚಿವರು ಇದ್ದಾರೆಯೇ? ಒಬ್ಬ ಮುಸ್ಲಿಂ ಅಭ್ಯರ್ಥಿಗಾದರೂ ಅವರು ಟಿಕೆಟ್‌ ನೀಡಿದ್ದಾರೆಯೇ. ಸಂವಿಧಾನ ಬದಲಾಯಿಸಲೆಂದೇ ಬಂದವರು ನಾವು ಎಂದು ಬಿಜೆಪಿಯ ಇಬ್ಬರು ಸಂಸದರು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ದೇಶದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ಶೋಷಣೆ, ಮಹಿಳಾ ಕ್ರೀಡಾಪಟು ಮೇಲಿನ ದೌರ್ಜನ್ಯ, ಹಾಥರಾಸ್‌ ಪ್ರಕರಣಗಳ ಕುರಿತ ಪ್ರಶ್ನೆಗಳಿಗೆ ಅವರ ಬಳಿ ಉತ್ತರ ಇಲ್ಲ. ಸಂವಿಧಾನ ಹತ್ಯೆ ದಿನವನ್ನು ಆಚರಿಸುವ ಮೊದಲು ಸಂವಿಧಾನಕ್ಕೆ ಬದ್ಧವಾಗಿ ನಡೆದುಕೊಳ್ಳುವುದನ್ನು ಕಲಿಯಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT