ಢಾಕಾ: ಪ್ರಧಾನಿಯಾಗಿದ್ದ ಶೇಖ್ ಹಸೀನಾ ಪದಚ್ಯುತಿಗೆ ಕಾರಣವಾದ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದರಿಂದ, ಬಾಂಗ್ಲಾದೇಶದಲ್ಲಿ ಒಂದು ತಿಂಗಳಿನಿಂದ ಮುಚ್ಚಿದ್ದ ಶಾಲಾ–ಕಾಲೇಜುಗಳು, ವಿಶ್ವವಿದ್ಯಾಲಯಗಳು ಸೇರಿದಂತೆ ಎಲ್ಲ ಶಿಕ್ಷಣ ಸಂಸ್ಥೆಗಳು ಭಾನುವಾರದಿಂದ ಪುನರಾರಂಭಗೊಂಡವು.
ಉದ್ಯೋಗದಲ್ಲಿನ ಮೀಸಲಾತಿ ವಿರೋಧಿಸಿ ಈಚೆಗೆ ನಡೆದ ಚಳವಳಿ ಸಂದರ್ಭದಲ್ಲಿ ಹಿಂಸಾಚಾರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ದೇಶದಾದ್ಯಂತ ಜುಲೈ 17ರಿಂದ ಅನಿರ್ದಿಷ್ಟ ಅವಧಿಗೆ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿತ್ತು.
ತನ್ನ ವ್ಯಾಪ್ತಿಯಲ್ಲಿನ ಸಂಸ್ಥೆಗಳನ್ನು ಪುನರಾರಂಭಿಸಲು ಶಿಕ್ಷಣ ಸಚಿವಾಲಯವು ಗುರುವಾರ ಆದೇಶ ಹೊರಡಿಸಿತ್ತು. ಒಂದು ತಿಂಗಳ ನಂತರ ಎಲ್ಲಾ ಶಿಕ್ಷಣ ಸಂಸ್ಥೆಗಳು ಭಾನುವಾರ ಮತ್ತೆ ಬಾಗಿಲು ತೆರೆದವು.
‘ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಸೂಚನೆಯ ಮೇರೆಗೆ, ಆ.18ರಿಂದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪುನರಾರಂಭಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಿ’ ಎಂದು ಉಪ ಕಾರ್ಯದರ್ಶಿ ಮೊಸಮ್ಮತ್ ರಹಿಮಾ ಅಖ್ತರ್ ಆ.15ರಂದು ಸಹಿ ಮಾಡಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ ಎಂದು ಢಾಕಾ ಮೂಲದ ಬೆಂಗಾಲಿ ನ್ಯೂಸ್ ಚಾನೆಲ್ ವರದಿ ಮಾಡಿದೆ.