ಟೆಹರಾನ್: ಇತ್ತೀಚೆಗೆ ಹತ್ಯೆಯಾದ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆ (61) ಅವರ ಭದ್ರತೆಯಲ್ಲಿ ಉಂಟಾದ ಲೋಪಕ್ಕೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು, ಸೇನಾಧಿಕಾರಿಗಳು ಹಾಗೂ ರಾಜಧಾನಿಯಲ್ಲಿರುವ ಸೇನೆಯ ಅತಿಥಿ ಗೃಹದಲ್ಲಿ ಕೆಲಸ ಮಾಡುವ ಸಿಬ್ಬಂದಿ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಮಂದಿಯನ್ನು ಇರಾನ್‌ನಲ್ಲಿ ಬಂಧಿಸಲಾಗಿದೆ.
ಟೆಹರಾನ್‌ನಲ್ಲಿರುವ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದ ಹನಿಯೆ ಅವರನ್ನು ಬುಧವಾರ (ಜುಲೈ 31ರಂದು) ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆಯ ಬಗ್ಗೆ ತಿಳಿದಿರುವ ಇರಾನ್‌ನ ಉನ್ನತ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ.
ಹನಿಯೆ ಅವರು ಹತ್ಯೆಯಾಗುವ ಕೆಲವೇ ಗಂಟೆಗಳ ಮೊದಲು ಇರಾನ್‌ನ ನೂತನ ಅಧ್ಯಕ್ಷರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಭದ್ರತೆ ಕಲ್ಪಿಸಲಾಗಿರುವ ಅತಿಥಿಗೃಹದಲ್ಲಿ ನಡೆದಿರುವ ಹತ್ಯೆಯು ಇರಾನ್ ನಾಯಕತ್ವಕ್ಕೆ ಭಾರಿ ಮುಜುಗರ ಉಂಟುಮಾಡಿದೆ.
ಹೀಗಾಗಿ, ಇರಾನ್ ಈ ಕ್ರಮ ಕೈಗೊಂಡಿದೆ.
ಹನಿಯೆ ಅವರು ಟೆಹರಾನ್‌ಗೆ ಬರುವ ಸುಮಾರು 2 ತಿಂಗಳ ಹಿಂದೆಯೇ ಬಾಂಬ್ ಇರಿಸಲಾಗಿತ್ತು ಎಂಬುದಾಗಿ ಇರಾನ್ ಸೇರಿದಂತೆ ಮಧ್ಯಪ್ರಾಚ್ಯ ರಾಷ್ಟ್ರಗಳ ಅಧಿಕಾರಿಗಳು ಅಂದಾಜಿಸಿದ್ದಾರೆ.
'ಈ ಕೃತ್ಯದಿಂದಾಗಿ ತನ್ನ ಮಾತೃಭೂಮಿಯನ್ನಾಗಲೀ, ಮಿತ್ರ ರಾಷ್ಟ್ರಗಳನ್ನಾಗಲೀ ಇರಾನ್ ರಕ್ಷಿಸಿಕೊಳ್ಳಲಾರದು ಎಂಬ ಸಂದೇಶ ರವಾನೆಯಾಗಲಿದೆ. ಇದು ಇರಾನ್‌ಗೆ ಭಾರಿ ಹಿನ್ನಡೆ ಉಂಟುಮಾಡುವ ಸಾಧ್ಯತೆ ಇದೆ' ಎಂದು ಅಂತರರಾಷ್ಟ್ರೀಯ ಬಿಕ್ಕಟ್ಟು ಪರಿಹಾರ ಸಂಘಟನೆಯ ಇರಾನ್ ನಿರ್ದೇಶಕ ಅಲಿ ವಾಯೆಝ್ ಹೇಳಿದ್ದಾರೆ.
ಹನಿಯೆ ಹತ್ಯೆಗೆ ಇಸ್ರೇಲ್ ಕಾರಣ ಎಂದು ಇರಾನ್ ಹಾಗೂ ಹಮಾಸ್ ಕಿಡಿಕಾರಿವೆ. ಪ್ಯಾಲೆಸ್ಟೀನ್‌ನ ಬಂಡುಕೋರ ಸಂಘಟನೆಯ ರಾಜಕೀಯ ಘಟಕದ ಮುಖ್ಯಸ್ಥ ಹನಿಯೆ ಸಾವಿಗೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯೇ ಕಾರಣ ಎಂದು ಹಮಾಸ್ ಆರೋಪಿಸಿದೆ. 'ದಾಳಿಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ' ಎಂದು ಇರಾನ್‌ನ ಪ್ಯಾರಾ ಮಿಲಿಟರಿ ರೆವಲ್ಯೂಷನರಿ ಗಾರ್ಡ್ ತಿಳಿಸಿದೆ.
ಗಾಜಾದಲ್ಲಿ ಹಮಾಸ್ ಮೇಲೆ ಕಳೆದ 10 ತಿಂಗಳಿಂದ ಯುದ್ಧ ನಡೆಸುತ್ತಿರುವ ಇಸ್ರೇಲ್, ಈ ಆರೋಪಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.