ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Bangla | ಅವಾಮಿ ಲೀಗ್ ನಾಯಕನ ಹೋಟೆಲ್‌ನಲ್ಲಿ ಬೆಂಕಿ ಹಚ್ಚಿ 24 ಮಂದಿಯ ಹತ್ಯೆ

Published : 6 ಆಗಸ್ಟ್ 2024, 11:45 IST
Last Updated : 6 ಆಗಸ್ಟ್ 2024, 11:45 IST
ಫಾಲೋ ಮಾಡಿ
Comments

ಢಾಕಾ: ಅರಾಜಕತೆ ಸೃಷ್ಟಿಯಾಗಿರುವ ಬಾಂಗ್ಲಾದೇಶದ ಭೀಕರ ಪರಿಸ್ಥಿತಿ ಕುರಿತಾದ ಒಂದೊಂದೇ ವರದಿಗಳು ಹೊರಬೀಳುತ್ತಿವೆ.

ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪಕ್ಷ ಅವಾಮಿ ಲೀಗ್‌ನ ನಾಯಕರೊಬ್ಬರ ಒಡೆತನದಲ್ಲಿರುವ ಢಾಕಾದ ಹೋಟೆಲ್‌ನಲ್ಲಿ ಒಬ್ಬ ಇಂಡೋನೇಷ್ಯಾ ನಾಗರಿಕ ಸೇರಿ 24 ಮಂದಿಯನ್ನು ಉದ್ರಿಕ್ತರ ಗುಂಪು ಜೀವಂತ ಸುಟ್ಟು ಹಾಕಿರುವ ಪ್ರಕರಣ ಬಯಲಾಗಿದೆ.

ಶೇಖ್ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿ ದೇಶ ತೊರೆಯುತ್ತಿದ್ದಂತೆ ಈ ಕುಕೃತ್ಯ ನಡೆದಿದೆ ಎಂದು ಸ್ಥಳೀಯ ಪತ್ರಕರ್ತರು ಮತ್ತು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಸೋಮವಾರ ರಾತ್ರಿ ಉದ್ರಿಕ್ತರ ಗುಂಪು ಜಬೀರ್ ಇಂಟರ್‌ನ್ಯಾಷನಲ್‌ ಹೋಟೆಲ್‌ಗೆ ನುಗ್ಗಿ ಸಿಬ್ಬಂದಿಗೆ ಬೆಂಕಿ ಹಚ್ಚಿ, ಬಳಿಕ, ಹೋಟೆಲ್‌ಗೂ ಬೆಂಕಿ ಹಚ್ಚಿದ್ದಾರೆ.

ಈ ಹೋಟೆಲ್‌ ಅವಾಮಿ ಲೀಗ್‌ನ ಜೊಶೋರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಹೀನ್ ಚಕ್ಲದಾರ್‌ಗೆ ಸೇರಿದ್ದಾಗಿದೆ.

ಜೋಶರ್ ಸರ್ಕಾರಿ ಆಸ್ಪತ್ರೆಯ ವೈದ್ಯರು 24 ಸುಟ್ಟ ಮೃತದೇಹಗಳು ಆಸ್ಪತ್ರೆಗೆ ಬಂದಿರುವುದಾಗಿ ಖಚಿತಪಡಿಸಿದ್ದಾರೆ. ಮತ್ತಷ್ಟು ಜನರು ಸಾವಿಗೀಡಾಗಿರುವ ಆತಂಕ ಸಹ ಇದೆ.

ಅವಾಮಿ ಲೀಗ್ ನೇತೃತ್ವದ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಉದ್ರಿಕ್ತರ ಗುಂಪು ಹೋಟೆಲ್‌ನ ನೆಲಮಹಡಿಗೆ ಬೆಂಕಿ ಹಚ್ಚಿದ್ದು, ಅದು ಕೆಲವೇ ಸಮಯದಲ್ಲಿ ಪೂರ್ತಿ ಹೋಟೆಲ್ ಅನ್ನು ವ್ಯಾಪಿಸಿದೆ.

ರಾಜಧಾನಿ ಢಾಕಾದ ಬಂಗಬಂಧು ಅವೆನ್ಯೂನಲ್ಲಿರುವ ಅವಾಮಿ ಲೀಗ್ ಕೇಂದ್ರ ಕಚೇರಿ, ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಸೇರಿದ ಮನೆಗಳು, ವ್ಯಾಪಾರಿ ಕೇಂದ್ರಗಳನ್ನು ಪ್ರತಿಭಟನಾಕಾರರು ಧ್ವಂಸಗೊಳಿಸಿದ್ದಾರೆ.

ಹಸೀನಾ ರಾಜೀನಾಮೆಗೆ ಒತ್ತಾಯಿಸಿ ವಿದ್ಯಾರ್ಥಿಗಳು ಭಾನುವಾರದಿಂದ ಅಸಹಕಾರ ಚಳವಳಿ ಆರಂಭಿಸಿದ್ದರು. ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶ ತೊರೆದಿದ್ದರು. ಸದ್ಯ, ಸೇನಾ ಮುಖ್ಯಸ್ಥರು ಮಧ್ಯಂತರ ಸರ್ಕಾರ ರಚಿಸಿದ್ದಾರೆ.

ಹಸೀನಾ ನಿರ್ಗಮನದ ಸುದ್ದಿ ಹರಡುತ್ತಿದ್ದಂತೆ ಅರಾಜಕತೆ ತಾಂಡವವಾಡುತ್ತಿದ್ದು, ಮತ್ತಷ್ಟು ಹಿಂಸಾಚಾರ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT