ವಾಷಿಂಗ್ಟನ್: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಪದಚ್ಯುತಿ ಹಿಂದೆ ತನ್ನ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಅಮೆರಿಕ, ‘ಇದು ನಗೆಪಾಟಲಿನ ಹೇಳಿಕೆಯಾಗಿದ್ದು, ಸಂಪೂರ್ಣ ಸುಳ್ಳಿನಿಂದ ಕೂಡಿದೆ’ ಎಂದಿದೆ.
ಹಸೀನಾ ಆರೋಪದ ಕುರಿತು ಪ್ರತಿಕ್ರಿಯಿಸಿದ ಅಮೆರಿಕದ ರಾಜ್ಯ ಇಲಾಖೆಯ ಪ್ರಧಾನ ಉಪ ವಕ್ತಾರ ವೇದಾಂತ್ ಪಟೇಲ್, ‘ಇದು ನಗೆಪಾಟಲಿನ ಹೇಳಿಕೆಯಾಗಿದೆ. ಹಸೀನಾ ಪದಚ್ಯುತಿ ಹಿಂದೆ ಅಮೆರಿಕದ ಕೈವಾಡವಿಲ್ಲ’ ಎಂದರು.
‘ಇತ್ತೀಚಿನ ದಿನಗಳಲ್ಲಿ ತಪ್ಪು ಮಾಹಿತಿಗಳು ಹರಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ದಕ್ಷಿಣ ಏಷ್ಯಾದಲ್ಲಿ ಮಾಹಿತಿ ತಂತ್ರಜ್ಞಾನವನ್ನು ಬಲಪಡಿಸುವುದರಲ್ಲಿ ನಾವು ಬದ್ಧರಾಗಿದ್ದೇವೆ’ ಎಂದು ಹೇಳಿದರು.
‘ಸೆಂಟ್ ಮಾರ್ಟಿನ್ ದ್ವೀಪವನ್ನು ಅಮೆರಿಕಕ್ಕೆ ಒಪ್ಪಿಸಿದ್ದರೆ ನಮ್ಮ ಸರ್ಕಾರ ಉಳಿಯುತ್ತಿತ್ತು’ ಎಂದು ಶೇಖ್ ಹಸೀನಾ ಹೇಳಿದ್ದು, ತಮ್ಮ ಪದಚ್ಯುತಿ ಹಿಂದೆ ಅಮೆರಿಕದ ಕೈವಾಡವಿದೆ ಎಂದು ಪರೋಕ್ಷವಾಗಿ ಆರೋಪಿಸಿದ್ದರು.
ಮೀಸಲಾತಿ ವಿರೋಧಿಸಿ ಶೇಖ್ ಹಸೀನಾ ಸರ್ಕಾರದ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಆಗಸ್ಟ್ 5ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹಸೀನಾ ಭಾರತಕ್ಕೆ ಪಲಾಯನ ಮಾಡಿದ್ದರು. ಹಸೀನಾ ಪದಚ್ಯುತಿ ಬೆನ್ನಲ್ಲೇ ನೊಬೆಲ್ ಪುರಸ್ಕೃತ ಮೊಹಮ್ಮದ್ ಯೂನಸ್ ನೇತೃತ್ವದಲ್ಲಿ ಬಾಂಗ್ಲಾದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಿದೆ.