ಅಲೆಮಾರಿಗಳಂತಾದ ಹಳ್ಳಿಗರು: ದೊರೆಸ್ವಾಮಿ

7
ನಟರಾಜ್‌ ಹುಳಿಯಾರ್‌ ಅವರ ಕಾದಂಬರಿ,

ಅಲೆಮಾರಿಗಳಂತಾದ ಹಳ್ಳಿಗರು: ದೊರೆಸ್ವಾಮಿ

Published:
Updated:
Prajavani

ಬೆಂಗಳೂರು: ‘ಅಂದು, ಯಂತ್ರೋದ್ಯಮವು ಹಳ್ಳಿಗರ ಕಸುಬು, ಬದುಕನ್ನು ಕಸಿದುಕೊಂಡಿದ್ದರಿಂದ ಅವರು ಅಧೋಗತಿಗೆ ತಲುಪುವಂತಾಯಿತು. ಇಂದಿಗೂ ಅವರು ಅಲೆಮಾರಿಗಳಂತೆ ಪರದಾಡುತ್ತಲೇ ಇದ್ದಾರೆ’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಪಲ್ಲವ ಪ್ರಕಾಶನ, ಬಯಲು ಬಳಗ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಕಾಮನ ಹುಣ್ಣಿಮೆ’ (ಕಾದಂಬರಿ), ‘ಕನ್ನಡಿ’ (ಪ್ರಜಾವಾಣಿ ಅಂಕಣ ಬರಹಗಳು) ಕೃತಿಗಳ‌ನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಗ್ರಾಮ ಭಾರತದ ಬದುಕು ಇಂದು ಬದಲಾಗಿದೆ. ಹಳ್ಳಿಗರೆಲ್ಲ ಊರು, ಕೇರಿ ತೊರೆದು ಬೆಂಗಳೂರೆಂಬ ಗುಡಿಸಲಿನಲ್ಲಿ ಸೇರಿದ್ದಾರೆ. ಸರ್ಕಾರ ಇಂತಹ ವಿದ್ಯಮಾನಗಳ ಬಗ್ಗೆ ಚಿಂತಿಸಬೇಕಿದೆ. ಕಳೆದುಹೋದ ಅವರ ಬದುಕು ಮತ್ತೆ ಸಿಗುವಂತೆ ಮಾಡಲು ಕಾರ್ಯೋನ್ಮುಖವಾಗಬೇಕಿದೆ’ ಎಂದು ಹೇಳಿದರು.

‘ಹುಳಿಯಾರ್ ಅವರು ಪ್ರತಿ ಬರಹ ಬರೆಯುವಾಗಲೂ ಪ್ರಸವ ವೇದನೆ ಅನುಭವಿಸಿ, ಓದುಗರಿಗೆ ಹೊಸತನ್ನು ಉಣಬಡಿಸಿದ್ದಾರೆ. ಅವರು ಅಂಕಣ‌ ಬರೆಯುವ ಶಿಸ್ತುಉಳ್ಳವರಾಗಿದ್ದು, ಓದುಗರಲ್ಲಿ ಓದಿನ ಆಸಕ್ತಿ, ವೈಚಾರಿಕತೆಯನ್ನು ಹುಟ್ಟು ಹಾಕುವ ಸಾಮರ್ಥ್ಯವುಳ್ಳವರು. ಬುದ್ಧಿ ಆಧರಿತ ಜ್ಞಾನಕ್ಕಿಂತ, ಅನುಭವಜನ್ಯ ಜ್ಞಾನದ‌ ವಿಶ್ಲೇಷಣೆಯನ್ನು ಅವರ ಬರಹಗಳಲ್ಲಿ ನೋಡಬಹುದು’ ಎಂದು ಹೇಳಿದರು.

ಹಿರಿಯ ವಕೀಲ ರವಿವರ್ಮಕುಮಾರ್‌ ಮಾತನಾಡಿ, ‘ಅಧಿಕಾರಕ್ಕೆ ಮಾತ್ರ ಹೋರಾಟ, ಕೆಲಸ ಮಾಡುವವರಿದ್ದಾರೆ. ಶಾಂತವೇರಿ ಗೋಪಾಲಗೌಡರಂತೆ ರಾಜ್ಯ ಹಾಗೂ ಜನತೆಯ ಹಿತಕ್ಕಾಗಿ ಆಡಳಿತ ನಡೆಸುವ ರಾಜಕಾರಣಿಗಳು ಈಗಿಲ್ಲ. ಬದಲಿಗೆ, ಜಾತಿಗಾಗಿ, ತಮ್ಮವರ ಹಿತರಕ್ಷಣೆಗಾಗಿ ಸರ್ಕಾರ ನಡೆಸುತ್ತಿದ್ದಾರೆ. ರಾಜ್ಯ, ರಾಷ್ಟ್ರದ ಆಗುಹೋಗುಗಳು, ದುಃಸ್ಥಿತಿಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ’ ಎಂದು ಬೇಸರವ್ಯಕ್ತಪಡಿಸಿದರು. 

‘ಪ್ರಜಾವಾಣಿ’ಯ ಸಹಾಯಕ ಸಂಪಾದಕ ಎನ್.ಎ.ಎಂ.ಇಸ್ಮಾಯಿಲ್ ಮಾತನಾಡಿ, ‘ಅಂಕಣ ಬರವಣಿಗೆ ಆಟದಂತೆ. ಅದು ಸಂವೇದನಾಶೀಲತೆಯನ್ನು ಹುಟ್ಟುಹಾಕುವಂಥದ್ದು. ಓದುಗರ ಮಟ್ಟಕ್ಕಿಳಿದು ವಿಷಯ ಪ್ರಸ್ತಾಪಿಸಿ, ಓದುಗರ ತಿಳಿವಳಿಕೆ ಮಟ್ಟ ಹೆಚ್ಚಿಸುವುದನ್ನು ಗಮನದಲ್ಲಿಟ್ಟುಕೊಂಡು ಲೇಖಕ ಅಂಕಣಗಳನ್ನು ಬರೆಯಬೇಕಾಗುತ್ತದೆ. ಹುಳಿಯಾರ್‌ ಅವರು ಇಂತಹ ಪ್ರಯತ್ನಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !