‘ಆಯೋಗದಿಂದ ಮಾನವ ಹಕ್ಕು ರಕ್ಷಣೆ ಭ್ರಮೆ’

7
ವಿಚಾರ ಸಂಕಿರಣದಲ್ಲಿ ಎಸ್‌.ಆರ್‌.ನಾಯಕ್‌ ಅಭಿಪ್ರಾಯ

‘ಆಯೋಗದಿಂದ ಮಾನವ ಹಕ್ಕು ರಕ್ಷಣೆ ಭ್ರಮೆ’

Published:
Updated:

ಬೆಂಗಳೂರು: ‘ಕಾನೂನಿನಡಿಯಲ್ಲಿ ಸ್ಥಾಪಿಸಿದ ಮಾನವ ಹಕ್ಕುಗಳ ರಕ್ಷಣಾ ಆಯೋಗಗಳಿಂದ ಹಕ್ಕುಗಳ ಸಂರಕ್ಷಣೆ ಸಾಧ್ಯ ಎನ್ನುವುದು ಕೇವಲ ಭ್ರಮೆ’ ಎಂದು ನಿವೃತ್ತ ನ್ಯಾಯಮೂರ್ತಿ ಎಸ್‌.ಆರ್‌.ನಾಯಕ್‌ ತಿಳಿಸಿದರು.  

ನಗರದ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಭಾನುವಾರ ಆಯೋಸಿದ್ದ ‘ಮಾನವ ಹಕ್ಕುಗಳ ಇಂದಿನ ಸ್ಥಿತಿಗತಿ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.  ‌

‘ಜನರಿಗೆ ಇಂತಹ ಆಯೋಗಗಳ ಅಸ್ತಿತ್ವದ ಪರಿಚಯ ಇಲ್ಲ. ಇವುಗಳಿಂದ ಹಕ್ಕುಗಳ ಸಂರಕ್ಷಣೆ ಅಸಾಧ್ಯ. ಆಯೋಗದ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುವಾಗ ಈ ಬಗ್ಗೆ ಅರಿತಿದ್ದೇನೆ. ಹಾಗಾಗಿ ಸಂಘ, ಸಂಸ್ಥೆಗಳು ವಂಚಿತ ಕೆಳಸ್ತರದ ಸಮುದಾಯಗಳನ್ನು ಹಾಗೂ ನಾಗರಿಕರನ್ನು ಜಾಗೃತಿಗೊಳಿಸಿದಾಗ ಮಾತ್ರ ಮಾನವ ಹಕ್ಕುಗಳ ಉದ್ದೀಪನೆ ಸಾಧ್ಯ’ ಎಂದರು. 

‘ಸಮಾಜೋದ್ಧಾರಕರ ಈ ನಾಡಿನಲ್ಲಿ ಇನ್ನೂ ಪೂರ್ಣ ಪ್ರಮಾಣದ ಸಮಾನತೆ ಸಿಕ್ಕಿಲ್ಲ. ವಂಚಿತ ಸಮುದಾಯಗಳ ಸ್ಥಿತಿಗತಿ ಅಭಿವೃದ್ಧಿಯಾಗಿಲ್ಲ. ಆದ್ದರಿಂದ ಮಾನವ ಹಕ್ಕುಗಳನ್ನು ಬಲವಾಗಿ ಪ್ರತಿಷ್ಠಾಪಿಸ‌ಲೇಬೇಕಾದ ಅಗತ್ಯವಿದೆ’ ಎಂದೂ ಅವರು ಹೇಳಿದರು. 

ಅರ್ಥಶಾಸ್ತ್ರಜ್ಞ ಡಾ.ಕೇಶವ, ‘ಬಹುತ್ವದ ಭಾರತದಲ್ಲಿ ಮಾನವ ಹಕ್ಕುಗಳ ರಕ್ಷಣೆ ಕಷ್ಟ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಕೈಮೀರುತ್ತಿದೆ. ಇನ್ನೊಬ್ಬರ ನೇರ, ನಿಷ್ಠುರ, ವಿಚಾರಗಳನ್ನು ಒಪ್ಪಿಕೊಳ್ಳಲೇಬೇಕಿಲ್ಲ. ಆದರೆ, ಅವರ ಮಾತನಾಡುವ ಹಕ್ಕನ್ನು ಗೌರವಿಸಬೇಕಾದ ಜವಾಬ್ದಾರಿಯೂ ಇಲ್ಲದೆ, ವಿಚಾರವಾದಿಗಳ ಕೊಲೆ ಯತ್ನಕ್ಕೆ ಕೈಹಾಕುವಷ್ಟು ಮುಂದಾಗಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ, ‘ಹಕ್ಕು, ಅವಕಾಶಗಳಿಂದ ವಂಚಿತರಾದ ತಳ ಸಮುದಾಯಗಳನ್ನು ಉಳ್ಳವರಿಗೆ ಸಮಾನವಾಗಿ ಮೇಲೆತ್ತುವ ಕಾರ್ಯವಾಗಬೇಕಿದೆ’ ಎಂದರು.

‘ಮಾನವ ಹಕ್ಕುಗಳನ್ನು, ರಾಜಕಾರಣಿಗಳು ತಮ್ಮ ಹಿಂಬಾಲಕರು, ಭ್ರಷ್ಟ ಅಧಿಕಾರಿಗಳು, ಶ್ರೀಮಂತರು, ಉದ್ಯಮಿಗಳನ್ನು ಸಲಹುವ ಹಕ್ಕುಗಳಾಗಿ ಪರಿವರ್ತಿಸಲು ಹವಣಿಸುತ್ತಿರುವುದು ನಿಜಕ್ಕೂ ದುರಂತ’ ಎಂದು ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಸಿ.ಲಕ್ಷ್ಮೀನಾರಾಯಣ ದೂರಿದರು.  

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !