ಧಾರ್ಮಿಕ ನಿಂದನೆ ಪ್ರಕರಣ: ಆಶ್ರಯ ಕೋರಿ ಟ್ರಂಪ್‌ಗೆ ಮನವಿ

7
ಜೀವರಕ್ಷಣೆಗಾಗಿ ಪಾಕಿಸ್ತಾನ ತೊರೆದ ಬೀಬಿ ಪರ ವಕೀಲ

ಧಾರ್ಮಿಕ ನಿಂದನೆ ಪ್ರಕರಣ: ಆಶ್ರಯ ಕೋರಿ ಟ್ರಂಪ್‌ಗೆ ಮನವಿ

Published:
Updated:
Deccan Herald

ಇಸ್ಲಾಮಾಬಾದ್: ‘ನಮ್ಮ ಕುಟುಂಬದ ಸದಸ್ಯರಿಗೆ ಅಪಾಯವಿದೆ. ನಮಗೆ ಆಶ್ರಯ ನೀಡಬೇಕು’ ಎಂದು ಧಾರ್ಮಿಕ ನಿಂದನೆ ಪ್ರಕರಣದಲ್ಲಿ ಮರಣದಂಡನೆಯಿಂದ ಖುಲಾಸೆಗೊಂಡಿರುವ ಕ್ರೈಸ್ತ ಮಹಿಳೆ ಆಸಿಯಾ ಬೀಬಿ ಪತಿ ಆಶಿಕ್‌ ಮಸಿಹ್ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಮನವಿ ಮಾಡಿದ್ದಾರೆ. 

ಬ್ರಿಟಿಷ್‌ ಪಾಕಿಸ್ತಾನಿ ಕ್ರೈಸ್ತ ಸಂಘಟನೆ ರೆಕಾರ್ಡ್‌ ಮಾಡಿರುವ ವಿಡಿಯೊದಲ್ಲಿ ಮಾತನಾಡಿರುವ ಮಸಿಹ್, ‘ಪಾಕಿಸ್ತಾನದಿಂದ ಹೊರಹೋಗಲು ನೆರವು ನೀಡಬೇಕೆಂದು ಟ್ರಂಪ್ ಅವರಿಗೆ ಮನವಿ ಮಾಡುತ್ತಿದ್ದೇನೆ. ಬೀಬಿ ಪ್ರಕರಣದಲ್ಲಿ ಸಹಾಯ ಮಾಡಿದ ನನ್ನ ಸಹೋದರ ಜೋಸೆಫ್ ನದೀಂ ಪರವಾಗಿಯೂ ಮನವಿ ಮಾಡುತ್ತಿದ್ದು, ನೆರವು ನೀಡುವಂತೆ ಲಂಡನ್ ಮತ್ತು ಕೆನಡಾ ಪ್ರಧಾನಿಗೂ ಕೇಳಿಕೊಳ್ಳುತ್ತಿದ್ದೇನೆ’ ಎಂದಿದ್ದಾರೆ. 

ಇಸ್ಲಾಮಾಬಾದ್‌ನಲ್ಲಿರುವ ಅಮೆರಿಕ, ಬ್ರಿಟನ್ ಹಾಗೂ ಕೆನಡಾದ ರಾಯಭಾರ ಕಚೇರಿಗಳು ಈ ವಿಡಿಯೊ ಕುರಿತು ಪ್ರತಿಕ್ರಿಯಿಸುವಂತೆ ಮಾಡಿದ ಮನವಿಗೆ ಸ್ಪಂದಿಸಿಲ್ಲ. 

ಬೀಬಿ ಪರ ವಕೀಲರಾಗಿದ್ದ ಸೈಫುಲ್ ಮುಲೂಕ್ ಅವರು, ‘ಉದ್ರಿಕ್ತ ಗುಂಪಿನಿಂದ ನನ್ನ ಜೀವ ರಕ್ಷಿಸಿಕೊಳ್ಳಲು ಹಾಗೂ ಕುಟುಂಬದ ಸುರಕ್ಷತೆಗಾಗಿ ಪಾಕಿಸ್ತಾನ ತೊರೆದಿದ್ದೇನೆ’ ಎಂದು ತಿಳಿಸಿದ್ದಾರೆ. 

ಪ್ರತಿಭಟನೆ ವಾಪಸ್: ತೆಹ್ರಿಕ್–ಎ–ಲಬೈಕ್ (ಟಿಎಲ್‌ಪಿ) ಪಕ್ಷ ಮೂರು ದಿನಗಳ ಕಾಲ ಪಾಕಿಸ್ತಾನದ ಪ್ರಮುಖ ರಸ್ತೆಗಳಲ್ಲಿ ಸಂಚಾರ ತಡೆಹಿಡಿದು, ಬೀಬಿಯ ಮರಣದಂಡನೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಹತ್ಯೆಗೆ ಕರೆ ನೀಡಿತ್ತು.

ಬೀಬಿ ಎಲ್ಲಿದ್ದಾರೆ ಎನ್ನುವುದು ಮಾತ್ರ ಯಾರಿಗೂ ತಿಳಿದಿಲ್ಲ. ಒಂದು ವೇಳೆ ಅವರನ್ನು ದೇಶದಿಂದ ಹೊರಹೋಗಲು ಬಿಟ್ಟರೆ ಯುದ್ಧ ನಡೆಯುತ್ತದೆ ಎಂದು ಟಿಎಲ್‌ಪಿ ಎಚ್ಚರಿಸಿತ್ತು. ಬೀಬಿಯನ್ನು ದೇಶದಿಂದ ಹೊರಹೋಗದಂತೆ ತಡೆಯಲು ಹಾಗೂ ಪ್ರಕರಣದ ತೀರ್ಪು ‍ಮರುಪರಿಶೀಲನೆಗೆ ಒಳಪಡಿಸಲು ಸರ್ಕಾರದ ಜತೆಗೆ ಒಪ್ಪಂದ ಮಾಡಿಕೊಂಡ ಬಳಿಕ ಟಿಎಲ್‌ಪಿ ಪ್ರತಿಭಟನೆ ಹಿಂಪಡೆದಿದೆ. 

‘ಅಪಾಯಕಾರಿ ಸಂದೇಶ ರವಾನೆ’
‘ರಕ್ತಪಾತ ತಡೆಗಟ್ಟಿ’ ಎಂದು ಮಾಡುವ ಮನವಿಯು ಪ್ರಭಾವಿ ಸಂಘಟನೆಗಳಿಗೆ ಅಪಾಯಕಾರಿ ಸಂದೇಶ ರವಾನೆ ಮಾಡುತ್ತದೆ ಎಂದು ಪಾಕಿಸ್ತಾನದ ಹಿರಿಯ ಸಚಿವೆ ಶಿರೀನ್ ಮಜರಿ ಹೇಳಿದ್ದಾರೆ. 

ಆಸಿಯಾ ಬೀಬಿಯನ್ನು ಖುಲಾಸೆಗೊಳಿಸಿದ ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ಧದ ಪ್ರತಿಭಟನೆ ಕೈಬಿಡಲು ಸರ್ಕಾರದ ಜತೆಗೆ ಟಿಎಲ್‌ಪಿ ಒಪ್ಪಂದ ಮಾಡಿಕೊಂಡ ಬಳಿಕ ಶಿರೀನ್ ಅವರು ಈ ಕುರಿತು ಟ್ವೀಟ್ ಮಾಡಿದ್ದಾರೆ. 

‘ನಿರ್ದಿಷ್ಟ ಸಂಘಟನೆಗಳು ಸರ್ಕಾರಿ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡಾಗ, ಸರ್ಕಾರಿ ಸಂಸ್ಥೆಗಳ ಪರವಾಗಿ ಕಾನೂನು, ಸಂವಿಧಾನ ಬಳಸಿಕೊಂಡು ಬೆಂಬಲ ನೀಡಬೇಕು. ನಾನು ಸುಪ್ರೀಂ ಕೋರ್ಟ್ ಪರ ಇದ್ದೇನೆ’ ಎಂದು ಮಜರಿ ಟ್ವೀಟ್‌ನಲ್ಲಿ ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !