ಪಾಲಿಕೆ ವಾರ್ಡ್‌ಗಳಲ್ಲಿ ಗಂಡಂದಿರ ಗದ್ದಲ!

7
ಪತಿಯರ ದರ್ಬಾರ್‌ ಹಾಲ್‌ಗಳಂತಾದ ಕಚೇರಿಗಳು l ವೈಯಕ್ತಿಕ ವ್ಯವಹಾರಗಳಿಗೂ ಬಳಕೆ

ಪಾಲಿಕೆ ವಾರ್ಡ್‌ಗಳಲ್ಲಿ ಗಂಡಂದಿರ ಗದ್ದಲ!

Published:
Updated:

ಬೆಂಗಳೂರು: ಹಾ... ನಾನು ಅವ್ರ ಹಸ್ಬೆಂಡು. ಹೇಳಿ ಏನಾಗ್ಬೇಕು?

– ಇದು ಪಾಲಿಕೆ ಮಹಿಳಾ ಸದಸ್ಯರಿಗೆ ಕರೆ ಮಾಡಿದಾಗ ಕೇಳಿಬರುವ ಮಾತು. 198 ಸದಸ್ಯ ಬಲದ ಪಾಲಿಕೆಯಲ್ಲಿ ಅರ್ಧಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಇದ್ದಾರೆ. ಬಹುತೇಕರ ಫೋನ್‌, ಕಡತ, ಕಚೇರಿ ನಿರ್ವಹಣೆ ಎಲ್ಲವೂ ಅವರ ಗಂಡನ ಕೈಯಲ್ಲಿದೆ.

‘ಪ್ರಜಾವಾಣಿ’ ಈ ಬಗ್ಗೆ ವಾಸ್ತವ ಪರಿಶೀಲನೆಗೆ ಮುಂದಾದಾಗ ಈ ‘ಬಹಿರಂಗ ಸತ್ಯ’ ದೃಢಪಟ್ಟಿತು. ವಾರ್ಡ್‌ 1, 9, 10, 114, 121, 117, 106, 125, 147, 158ರಲ್ಲಿ ಮಹಿಳಾ ಸದಸ್ಯರ ಪತಿರಾಯರೇ ಅಘೋಷಿತ ಸದಸ್ಯರು. ಇತರ ವಾರ್ಡ್‌ಗಳಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ‘ಮೆಂಬರು ಬಂದಿದ್ದಾರೆ’ ಎಂದು ಜನ ಆಯಾ ಮಹಿಳಾ ಸದಸ್ಯರ ಪತಿಯ ಹೆಸರನ್ನೇ ಹೇಳುತ್ತಾರೆ. ಕರೆಗಳೂ ಅವರಿಗೇ ಹೋಗುತ್ತವೆ. ಪಾಲಿಕೆಯ ದೂರವಾಣಿ ಕೈಪಿಡಿಯಲ್ಲಿರುವ ಬಹುಪಾಲು ಮೊಬೈಲ್‌ ಸಂಖ್ಯೆಗಳೂ ಅವರ ಗಂಡಂದಿರದ್ದೇ ಆಗಿವೆ. 

ಹೀಗೇಕೆ ಎಂದು ಸದಸ್ಯೆಯ ಪತಿಯೊಬ್ಬರನ್ನು ಕೇಳಿದರೆ, ‘ಅವರದ್ದೇ ನಂಬರು ಕೊಟ್ಟಿದ್ವಿ ಸಾರ್‌, ಏನೋ ಮಿಸ್ಸಾಗಿ ನನ್ನ ನಂಬರು ಪ್ರಿಂಟ್ ಮಾಡಿದ್ದಾರೆ’ ಎಂದು ಸಮಜಾಯಿಷಿ ನೀಡುತ್ತಾರೆ. 

ವಾರ್ಡ್‌ ಕಚೇರಿಗಳು ಅವರ ದರ್ಬಾರ್‌ ಹಾಲ್‌ಗಳಾಗಿರುತ್ತವೆ. ವೈಯಕ್ತಿಕ ವ್ಯವಹಾರಗಳ ಅಡ್ಡೆಯಾಗಿಯೂ ಇವು ಬಳಕೆಯಾಗುತ್ತಿವೆ. ಉದ್ಯಮ, ವಹಿವಾಟುಗಳ ಲೆಕ್ಕಾಚಾರ ರಾಜಕೀಯ ತಂತ್ರ ರೂಪಿಸುವುದೂ ಗಂಡಂದಿರ ಪಾರಮ್ಯ ಇರುವ ವಾರ್ಡ್‌ಗಳ ಈ ಕಚೇರಿಗಳಲ್ಲೇ ನಡೆಯುತ್ತಿವೆ ಎಂಬುದು ನಾಗರಿಕರ ಅಂಬೋಣ.

ಹಲವು ಪತಿರಾಯರು ಈ ಹಿಂದೆ ಸದಸ್ಯರಾಗಿದ್ದವರು. ವಾರ್ಡ್‌ ಮೀಸಲಾತಿ ಬದಲಾದಾಗ ಅಥವಾ ಅಲ್ಲಿ ಸ್ಪರ್ಧಿಸಲು ಮತ್ತೆ ಅವಕಾಶ ಸಿಗದಾಗ ತಮ್ಮ ಪತ್ನಿಯನ್ನು ಕಣಕ್ಕಿಳಿಸಿ ದರ್ಬಾರ್‌ ಮಾಡುವವರೂ ಇದ್ದಾರೆ. ಹೀಗಾಗಿ ಸದಸ್ಯೆ ಕೇವಲ ಕಡತಗಳಿಗೆ ಸಹಿ ಹಾಕಲು, ಪಾಲಿಕೆ ಸಭೆಯಲ್ಲಿ ಒಂದಿಷ್ಟು ಹೊತ್ತು ಕೂತು ಹೋಗಲು ಸೀಮಿತವಾಗಿದ್ದಾರೆ. 

ಕಡತ ಹಿಡಿದು ಓಡಾಡುವುದು, ಅಧಿಕಾರಿಗಳನ್ನು ಕರೆಸುವುದು, ಗುತ್ತಿಗೆದಾರರಿಗೆ ಸೂಚನೆ ಕೊಡುವುದು, ಜನರ ಸಭೆಗಳಿಗೆ ಹಾಜರಾಗುವುದು ಎಲ್ಲವೂ ಇವರೇ. ಇಷ್ಟೇ ಆಗಿದ್ದರೆ ಸುಮ್ಮನಿರಬಹುದು. ಜನಸಾಮಾನ್ಯನೊಬ್ಬ ಕರೆ ಮಾಡಿದಾಗ ಹಲವು ಪತಿರಾಯರು ಉಡಾಫೆಯಿಂದ ಮಾತ
ನಾಡುವುದು, ನಿರ್ಲಕ್ಷ್ಯದ ಉತ್ತರ ನೀಡುವುದೂ ಇದೆ. ಇಂಥ ನಡವಳಿಕೆಯಿಂದಾಗಿ ವಾರ್ಡ್‌ನ ಮಹಿಳೆಯರು, ಅಲ್ಲಿನ ಸದಸ್ಯೆ, ಮಹಿಳೆಯಾಗಿದ್ದರೂ ಸಮಸ್ಯೆ ಹೇಳಿಕೊಳ್ಳಲು ಹಿಂಜರಿಯುತ್ತಿದ್ದಾರೆ.

ಅಧಿಕಾರಿಗಳಿಗೆ ಆಯುಕ್ತರ ಸೂಚನೆ

‘ಸದಸ್ಯರ ಪತಿ ಭಾಗವಹಿಸಲು ಅವಕಾಶ ಇಲ್ಲ. ಮೀಸಲಾತಿ ಇರುವುದೇ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸಲಿಕ್ಕಾಗಿ. ಪತಿಯು ಅವರಿಗೆ ಅವಕಾಶ ಮಾಡಿಕೊಡಬೇಕು. ಇನ್ನು ಪಾಲಿಕೆಯ ಅಧಿಕೃತ ಸಭೆಗಳಲ್ಲಿ ಸದಸ್ಯರ ಪತಿ ಅಥವಾ ಸಭೆಗೆ ಸಂಬಂಧಿಸದವರು ಭಾಗವಹಿಸಲು ಬಿಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ’ ಎಂದು ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ತಿಳಿಸಿದರು. ‌

ಬಹಿರಂಗವಾಗಿ ಹೇಳಿದ್ದ ಸಿದ್ದರಾಮಯ್ಯ

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಕೂಡಾ ಈ ವಿಚಾರದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರು. 

‘ಸುಮಾರು 100ರಷ್ಟು ಮಹಿಳಾ ಸದಸ್ಯರಿರುವ ಬಿಬಿಎಂಪಿಯಲ್ಲಿ ನೀವೆಷ್ಟು ಜನ ಸ್ವತಂತ್ರರಾಗಿ ಕಾರ್ಯನಿರ್ವಹಿಸುತ್ತೀರಿ?  ಪಾಲಿಕೆಗೆ ಗಂಡ ಕಾರಿನಲ್ಲಿ ಕರೆತಂದು ಬಿಡುತ್ತಾರೆ. ಮೀಟಿಂಗು ಮುಗಿಯುವವರೆಗೆ ಕಾಯ್ತಿರುತ್ತಾರೆ. ಎಲ್ಲ ವ್ಯವಹಾರಗಳನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಬಾರದು. ನೀವೇ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು’ ಎಂದು ಕಿವಿಮಾತು ಹೇಳಿದ್ದರು.

ಹಾಗೆಂದು ಎಲ್ಲ ಸದಸ್ಯರೂ ಗಂಡನ ಕೈಗೇ ಅಧಿಕಾರದ ಕೀಲಿ ಕೊಟ್ಟಿಲ್ಲ. ಮೇಯರ್‌ ಗಂಗಾಂಬಿಕೆ, ಎನ್‌.ಶಾಂತಕುಮಾರಿ, ಜಿ.ಪದ್ಮಾವತಿ ,ನೇತ್ರಾ ನಾರಾಯಣ್‌, ಮಂಜುಳಾ ನಾರಾಯಣಸ್ವಾಮಿ... ಹೀಗೆ ಹಲವರು ಸ್ವತಂತ್ರ ನಿರ್ಧಾರ ತೆಗೆದು
ಕೊಳ್ಳುವ, ಆಡಳಿತದಲ್ಲಿ ಸಕ್ರಿಯವಾಗಿ ತೊಡಗಿಕೊಂಡವರೂ ಇದ್ದಾರೆ. ಇಂಥವರಿಂದಾಗಿ ಚರ್ಚೆಗಳು ಜೀವಂತಿಕೆ ಪಡೆದಿವೆ ಎನ್ನುತ್ತವೆ ಪಾಲಿಕೆ ಮೂಲಗಳು. 

ಶಿವಾಜಿನಗರದ ವಾರ್ಡ್‌ ಸಭೆಯಲ್ಲಿ ರೌಡಿಶೀಟರ್‌ 

ಬಿಬಿಎಂಪಿಯ ಪೂರ್ವ ವಲಯದ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮತ್ತು ಸಮನ್ವಯ ಸಮಿತಿ ಸಭೆಯಲ್ಲಿ ವಾರ್ಡ್‌ ನಂ 92ರ ಸದಸ್ಯೆ ಫರೀದಾ ಅವರ ಬದಲಿಗೆ ಅವರ ಪತಿ ಇಸ್ತಿಯಾಕ್‌ ಬಂದಿದ್ದರು. ಪಾಲಿಕೆ ಪೂರ್ವ ವಲಯದ ಜಂಟಿ ಆಯುಕ್ತ ಜಿ.ಎಂ.ರವೀಂದ್ರ ಅವರು ನಗರದ ಮೆಯೋಹಾಲ್‌ನಲ್ಲಿ ಗುರುವಾರ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಪಾಲಿಕೆ ಸದಸ್ಯರ ಸಾಲಿನಲ್ಲಿ ಇಸ್ತಿಯಾಕ್‌ ಕುಳಿತಿದ್ದರು. 

ಅವರು ವಿರುದ್ಧ ವಿವಿಧ ಠಾಣೆಗಳಲ್ಲಿ ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿವೆ. ಸಿಸಿಬಿ ಪೊಲೀಸರೂ ಇತ್ತೀಚೆಗೆ ಇಸ್ತಿಯಾಕ್‌ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದರು. ಕೆಲಕಾಲ ಅವರು ತಲೆ ಮರೆಸಿಕೊಂಡಿದ್ದರು.

***

ಮಹಿಳೆಯರ ಅಧಿಕಾರ ಸ್ಥಾನದಲ್ಲಿ ಪುರುಷರ ಹಸ್ತಕ್ಷೇಪ ತಪ್ಪು. ಮಹಿಳೆ ತನಗೆ ಅರ್ಹತೆ ಮತ್ತು ಆಸಕ್ತಿ ಇದ್ದರೆ ಮಾತ್ರ ರಾಜಕೀಯ ಕ್ಷೇತ್ರಕ್ಕೆ ಬರಬೇಕು. ಒಂದು ವೇಳೆ ಅವಳಿಗೆ ಏನೂ ಗೊತ್ತಿಲ್ಲವಾದರೆ ತಿಳಿಹೇಳಬೇಕೇ ವಿನಾ ಪತಿಯೇ ಅಧಿಕಾರ ಚಲಾಯಿಸುವುದು ಸರಿಯಲ್ಲ.

–ಜಯಮಾಲಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !