ನಾನು ಬ್ರಹ್ಮ,ಚೌಕಿದಾರನಲ್ಲ!

ಸೋಮವಾರ, ಏಪ್ರಿಲ್ 22, 2019
29 °C

ನಾನು ಬ್ರಹ್ಮ,ಚೌಕಿದಾರನಲ್ಲ!

Published:
Updated:

ಅರೆ ಇದ್ಯಾರಪ್ಪ, ಈ ಪರಿ ಭಕ್ತಿಯಿಂದ ತನ್ನ ನೆನೆಯುತ್ತಿದ್ದಾರೆಂದು ಅಚ್ಚರಿಗೊಂಡ ಬ್ರಹ್ಮ ಭೂಲೋಕಕ್ಕಿಳಿದ. ಮರಿ’ಶಾ’ಣ್ಯಾರ ಗುಂಪು ಏಕೋಭಕ್ತಿಯಿಂದ ಭಜಿಸುತ್ತಿತ್ತು. ವಿಷಯವೇನೆಂದು ಕೇಳಿದ. ‘ಕೆಲವರಿಗೆ ವಿಜ್ಞಾನ ಲೇಖಕರು ಅಂತ ಹಣೆಬರೆಹ ಬರೆದು ಭೂಲೋಕಕ್ಕೆ ಕಳಿಸಿದ್ದೀಯಲ್ಲ, ಅವ್ರ ಕೆಲಸ ಏನು ದೇವಾ’ ಮುಂಚೂಣಿಯಲ್ಲಿದ್ದ ಮರಿ ‘ಶಾ’ಣ್ಯಾನೊಬ್ಬ ಬ್ರಹ್ಮನಿಗೇ ಪ್ರಶ್ನೆ ಎಸೆದ.  

‘ವಿಜ್ಞಾನ ವಿಷಯಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳವಾಗಿ ಬರೆಯುವುದು’ ಎಂದ ಬ್ರಹ್ಮನಿಗೆ ದಾರಿತಪ್ಪಿ ರಸಪ್ರಶ್ನೆ ಕಾರ್ಯಕ್ರಮಕ್ಕೆ ಬಂದಿದ್ದೀನಾ ಅನ್ನಿಸಿತು.

‘ಮತ್ಯಾಕೆ ಅವ್ರು ರಾಜಕೀಯ, ಧಾರ್ಮಿಕ ವಿಷಯಗಳನ್ನೆಲ್ಲ ವಿಜ್ಞಾನಕ್ಕೆ ಬೆರೆಸಿ, ಕಾಕ್‍ಟೇಲ್ ಮಾಡಿ ಅಮಾಯಕ ಜನರಿಗೆ ಕುಡಿಸೋದು? ಅವರಿಗ್ಯಾಕೆ ಬೇಕು ಊರಿನ ಉಸಾಬರಿ… ನೀ ಹಣೆಬರೆಹ ಬರೆಯುವಾಗ ಈ ವಿಜ್ಞಾನ ಲೇಖಕರ ಮಿದುಳಿನ ವೈರಿಂಗಿನಲ್ಲಿ ಸ್ವಲ್ಪ ತಪ್ಪಿದ್ದೀಯ. ಈಗಿಂದೀಗಲೇ ಅವರ ಮಿದುಳಿನ ವೈರಿಂಗ್ ಸರಿಪಡಿಸಿ, ಶುದ್ಧ ವಿಜ್ಞಾನ ಮಾತ್ರ ಬರೆಯುವಂತೆ ಮಾಡತಕ್ಕದ್ದು’ ಎಂದು ಒಕ್ಕೊರಲಿನಿಂದ ಹಕ್ಕೊತ್ತಾಯ ಮಂಡಿಸಿದರು ಮರಿ’ಶಾ’ಣ್ಯಾರು.

ಬ್ರಹ್ಮ ಉತ್ತರಿಸುವ ಮೊದಲೇ ಮತ್ತೆ ಹೇಳಿದರು, ‘ಸಾಹಿತಿಗಳು ಶುದ್ಧರಸ ಸಾಹಿತ್ಯ ಮಾತ್ರ ಬರೀಬೇಕು. ಕಲಾವಿದರು ಶುದ್ಧಕಲೆ ಪ್ರದರ್ಶಿಸಬೇಕು. ರಾಜಕೀಯ, ಸಾಮಾಜಿಕ, ಧಾರ್ಮಿಕ ವಿಚಾರಗಳ ಬಗ್ಗೆ ಮೂಗುತೂರಿಸಬಾರದು. ಹಂಗೆ ಇವರೆಲ್ಲರ ಮಿದುಳಿನ ವೈರಿಂಗ್ ಸರಿಮಾಡು’.

‘ಆಯಿತಪ್ಪ, ಎಲ್ಲರ ವೈರಿಂಗ್ ಸರಿಮಾಡಣ. ರಾಜಕಾರಣಿಗಳು ಪುಷ್ಪಕ ವಿಮಾನ ನಮ್ಮಲ್ಲಿ ಮೊದಲೇ ಇತ್ತು, ನಾರದನೇ ಗೂಗಲ್ ಇತ್ಯಾದಿ ಹೇಳ್ತಾ ವಿಜ್ಞಾನದಲ್ಲಿ ಮೂಗು ತೂರಿಸಬಾರದು. ಮಂದಿರ-ಮಸೀದಿ, ಸಂಸ್ಕೃತಿ ವಿಚಾರ ಪಕ್ಕಕ್ಕಿಟ್ಟು, ಬರೀ ಶುದ್ಧ ರಾಜಕಾರಣ ಮಾಡಬೇಕು. ಹಂಗೆ ರಾಜಕಾರಣಿಗಳ ವೈರಿಂಗ್ ಕೂಡ ಸರಿಮಾಡ್ತೀನಿ’ ಎಂದ.

ಗಾಬರಿಗೊಂಡ ಮರಿ‘ಶಾ’ಣ್ಯಾರು ‘ಹಂಗ್ಹೆಂಗೆ... ರಾಜಕಾರಣಿಗಳು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಾಡೋರು... ಇವರ ವೈರಿಂಗ್ ಈಗಿರೋ ಹಂಗೇ ಇರಲಿ’ ಎಂದರು.

‘ಹೋ...ಮತ್ತೆ ನೀವ್ಹೇಳಿದ್ಹಂಗೆ ಮಾಡಕ್ಕೆ ನಾನೇನು ಅಂಬಾನಿ ಮನೆ ‘ಚೌಕಿದಾರ’ ಅಂದ್ಕಂಡ್ರಾ’ ಎಂದವನೇ ಬ್ರಹ್ಮ ಅಲ್ಲಿಂದ ಪೇರಿಕಿತ್ತ!

Tags: 

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !