‘ನಾನೂ ಅಡುಗೆ ಮಾಡ್ತೀನಿ’

7
ಸೆಲೆಬ್ರಿಟಿ ಅಡುಗೆ

‘ನಾನೂ ಅಡುಗೆ ಮಾಡ್ತೀನಿ’

Published:
Updated:

ಅಮ್ಮನಿಗೆ ನಾನು ಪ್ರೀತಿಯ ಮಗ. ಹಾಗಾಗಿ ನನಗೇನು ಬೇಕೋ ಅದನ್ನೆಲ್ಲಾ ಅವರೇ ಮಾಡಿಕೊಡುತ್ತಾರೆ. ಹಾಗಂತ ನನಗೆ ಅಡುಗೆ ಬಗ್ಗೆ ಆಸಕ್ತಿ ಇಲ್ಲ ಎಂದಲ್ಲ, ಅಡುಗೆ ಮಾಡಲು ಅವಕಾಶ ಸಿಗುವುದು ಕಡಿಮೆ. ಒಂದೊಂದು ಬಾರಿ ನನಗೇನು ಬೇಕೋ ಅದನ್ನು ಮಾಡಿಕೊಂಡು ತಿನ್ನುತ್ತೇನೆ. 

ಅಡುಗೆ ಅಂದ್ರೆ ನೆನಪಾಗುವುದು ಅಮ್ಮನ ಕೈರುಚಿಯ ಬಿಸಿಬೇಳೆ ಭಾತ್‌, ಅತ್ತೆಯ ಖಾರಾಭಾತ್‌, ಹೆಂಡತಿ ಮಾಡುವ ಇಟಾಲಿಯನ್‌ ಆಹಾರ... ಇವೆಲ್ಲವೂ ನನಗಿಷ್ಟ. ಅಮ್ಮ ಮಾಡುವ ಅಕ್ಕಿರೊಟ್ಟಿ, ಕಡುಬಿನ ಜೊತೆ ಚಿಕನ್‌ ಅಥವಾ ಮಟನ್‌ ಇದ್ದರೆ ಅದರ ರುಚಿ ಆಹಾ! ನಮ್ಮ ಮನೆಯಲ್ಲಿ ಸಾಮಾನ್ಯವಾಗಿ ತರಹೇವಾರಿ ಅಡುಗೆ ಮಾಡುತ್ತಾರೆ. ಮೊದಲು ಅಮ್ಮ ಮಾತ್ರ ನನಗೆ ಅಡುಗೆ ಮಾಡಿಕೊಡ್ತಿದ್ರು. ಈಗ ಹೆಂಡತಿ ಮತ್ತು ಅತ್ತೆ, ಅಮ್ಮನಿಗೆ ಜೊತೆಯಾಗಿದ್ದಾರೆ. ಹಾಗಂತ ನಾನು ಅಡುಗೆ ಮಾಡೋದಿಲ್ಲ ಅಂತೆಲ್ಲಾ ಅಂದುಕೊಳ್ಳಬೇಡಿ. ಸಮಯವಿದ್ದಾಗ ಅಡುಗೆ ಮಾಡಲು ಸಹಾಯ ಮಾಡುತ್ತೇನೆ. ಶೂಟಿಂಗ್‌ ಇಲ್ಲದೇ ಇದ್ದಾಗ, ಮನೆಯಲ್ಲಿರುವವರಿಗೆ ಆರೋಗ್ಯ ಸರಿಯಿಲ್ಲದ ಸಮಯದಲ್ಲಿ ಅವರಿಗೆ ಏನು ಬೇಕೋ ಅದನ್ನು ಮಾಡಿಕೊಡುತ್ತೇನೆ. 

ನಾನು ಒಬ್ಬನೇ ಒಂದು ಅಡುಗೆಯನ್ನು ಯಾವತ್ತೂ ಮಾಡಿಲ್ಲ. ನನಗೆ ಮೂರು – ನಾಲ್ಕು ಜನ ಸಹಾಯಕರು ಬೇಕೇ ಬೇಕು. ಅಡುಗೆಗೆ ಬಳಸುವ ವಸ್ತುಗಳನ್ನೆಲ್ಲಾ ಅಲ್ಲೇ ಬಿಟ್ಟಿರುತ್ತೇನೆ. ನಾನು ಅಡುಗೆ ಮನೆ ಶಿಸ್ತು ಮತ್ತು ಶುಚಿತ್ವವನ್ನು ಪಾಲಿಸುವುದು ಕಡಿಮೆ. ಮದುವೆಗೂ ಮೊದಲು ಅಮ್ಮ ಊರಿಗೆ ಹೋದಾಗಲೆಲ್ಲ ಸ್ನೇಹಿತರನ್ನೆಲ್ಲ ಕರೆಯುತ್ತಿದ್ದೆ. ನನ್ನ ಇಬ್ಬರು ಸ್ನೇಹಿತರು ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಮುಗಿಸಿದ್ದಾರೆ. ಮನೆಗೆ ಬಂದು ಅವರೇ ಅಡುಗೆ ಮಾಡುತ್ತಿದ್ದರು. ಅವತ್ತು ಭೂರಿಭೋಜನ. ಅಡುಗೆ ಅಂದ್ರೆ ನೆನಪಾಗುವ ಸವಿನೆನಪುಗಳಿವು. 

ಮನೆ ಊಟವೇ ನನ್ನ ಆದ್ಯತೆ. ಊರಿಗೇನಾದರೂ ಹೋದರೆ ಅಣಬೆಯಿಂದ ತಯಾರಿಸುವ ತಿಂಡಿಯನ್ನು ಹೊಟ್ಟೆ ಬಿರಿಯುವಷ್ಟು ತಿನ್ನುತ್ತೇನೆ. ಅದರಲ್ಲೂ  ಮಳೆಗಾಲದಲ್ಲಿ ಸಿಗುವ ಅಣಬೆಯಿಂದ ಮಾಡುವ ತಿಂಡಿಯ ನೆನಪು ಹಚ್ಚಹಸಿರಾಗಿ ಉಳಿದಿದೆ. ಈಗಲೂ ಊರಿಗೆ ಹೋದಾಗ ಮರೆಯದೇ ಅದನ್ನು ಮಾಡಿಕೊಂಡು ತಿನ್ನುತ್ತೇನೆ.

ನಾನು ಅಡುಗೆ ಕಲಿಯಲೇಬೇಕು ಎಂಬ ಸನ್ನಿವೇಶ ಇಲ್ಲಿಯವರೆಗೂ ಸೃಷ್ಟಿಯಾಗಿರುವುದೇ ಕಡಿಮೆ. ಆದ್ರೆ ಯಾರಾದ್ರೂ ಹೇಳಿಕೊಟ್ರೆ ಕಲಿಯುತ್ತೇನೆ. ಅವಕಾಶ ಸಿಕ್ಕರೆ ಹೋಟೆಲ್‌ ಆರಂಭಿಸುವಷ್ಟು ಒಳ್ಳೆಯ ಶೆಫ್‌ ಆಗಬಲ್ಲೆ ಎಂಬ ವಿಶ್ವಾಸ ನನಗಿದೆ.

ಅಣಬೆ ಫ್ರೈ ಮಾಡೋದು ಹೀಗೆ
ಬೇಕಾದ ಸಾಮಗ್ರಿಗಳು: ಅಣಬೆ, ತುಪ್ಪ, ಈರುಳ್ಳಿ, ಮೆಣಸಿನಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಪನೀರ್‌, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು.

ಒಂದು ಪಾತ್ರೆಯಲ್ಲಿ ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಕಾಳುಮೆಣಸು, ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ರುಬ್ಬಿಕೊಂಡು ಅದನ್ನು ಮೊಸರಿನೊಂದಿಗೆ ಬೆರೆಸಿ ಅದಕ್ಕೆ ಖಾರದಪುಡಿಯನ್ನು ಹಾಕಿ ಕಲಸಬೇಕು.

ಇನ್ನೊಂದು ಕಡೆ ಅಣಬೆಯನ್ನು ತುಪ್ಪ, ಉಪ್ಪು, ಮೆಣಸಿನಪುಡಿ ಬೆರೆಸಿ ಕೆಂಡದ ಮೇಲೆ ಫ್ರೈ ಮಾಡಬೇಕು. ಫ್ರೈ ಆಗಿರುವ ಅಣಬೆಯನ್ನು ಮೊಸರಿನೊಂದಿಗೆ ತಿನ್ನಲು ರುಚಿಯಾಗಿರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !