ನನಗೂ ಒಬ್ಬಳು ಗೆಳತಿ ಬೇಕು..

7

ನನಗೂ ಒಬ್ಬಳು ಗೆಳತಿ ಬೇಕು..

Published:
Updated:
Prajavani

ಕಿಕ್ಕಿರಿದು ತುಂಬಿ ಚಲಿಸುತ್ತಿದ್ದ ಬಸ್‌ನಲ್ಲಿ ಒಂದು ಕೈಯಿಂದ ಪಠ್ಯ ಪುಸ್ತಕಗಳಿದ್ದ ಬ್ಯಾಗನ್ನು ಸಂಭಾಳಿಸುತ್ತ, ಇನ್ನೊಂದು ಕೈಯಿಂದ ಸರಳನ್ನು ಹಿಡಿದುಕೊಂಡಿದ್ದ ಅರ್ಚನಾ ಸೀಟಿನಲ್ಲಿ ಕುಳಿತಿದ್ದ ತನ್ನದೇ ವಯಸ್ಸಿನ ಹುಡುಗಿಯನ್ನು ಮೆಲ್ಲನೆ ಕೇಳಿದಳು, ‘ಈ ಬ್ಯಾಗನ್ನು ಸ್ವಲ್ಪ ಹಿಡಿದುಕೊಳ್ತೀರಾ ಪ್ಲೀಸ್‌’. 

ಆ ಹುಡುಗಿ ವಾರಿಧಿ ‘ಕೊಡಿ ಪರವಾಗಿಲ್ಲ’ ಎಂದು ಕೈ ನೀಡಿ ಬ್ಯಾಗ್‌ ಇಸಿದುಕೊಂಡಿದ್ದಲ್ಲದೇ ಕೂತಲ್ಲೇ ಸ್ವಲ್ಪ ಜರುಗಿ ಅರ್ಚನಾಳಿಗೂ ಕೂರಲು ಜಾಗ ಮಾಡಿಕೊಟ್ಟಳು. ಒಂದು ಮುಗುಳ್ನಗುವಿನ ವಿನಿಮಯ. ಹಿಂದೆಯೇ ಹೆಸರು, ಕಾಲೇಜು, ಸ್ನೇಹಿತೆಯರು.. ಎಂದೆಲ್ಲ ಹರಟೆ ಸಾಗಿ ಬಸ್‌ ಇಳಿಯುವಾಗ ವಿಳಾಸದ ವಿನಿಮಯ.

ಇಷ್ಟು ಸಾಕು ಒಂದ ಅಪ್ಪಟ ಸ್ನೇಹ ಅರಳಲು.. ಪ್ರಾಣ ಸಖಿಯರ ಮಧ್ಯೆ ನೋವು– ನಲಿವಿನ ಹಂಚಿಕೆಗೆ ನಾಂದಿ ಹಾಡಲು.  

ಇದಾಗಿದ್ದು 30 ವರ್ಷಗಳ ಹಿಂದೆ. ಗೆಳತಿಯ ಸ್ನೇಹ ಸಿಂಚನದ ಸಂದೇಶಗಳ ಬೀಪ್‌ ಸದ್ದು ಕೇಳಲು ಕೈಯಲ್ಲಿ ಸೆಲ್‌ ಫೋನ್‌ ಇಲ್ಲದ ಕಾಲ; ಏನಿದ್ದರೂ ಕಾಲೇಜು, ಪಾರ್ಕ್‌, ಕ್ಯಾಂಟೀನ್‌, ಸಿನಿಮಾ, ಹಬ್ಬಗಳ ಸಂಭ್ರಮದ ಹಿನ್ನೆಲೆ ಈ ಸ್ನೇಹಕ್ಕೆ. ಪದವಿ ಮುಗಿದ ನಂತರ ದಾರಿಗಳು ಬೇರೆಯಾದರೂ ಅಂಚೆ ಹೊತ್ತು ತರುವ ಪತ್ರಗಳು, ಮಿಂಚಂಚೆ (ಇಮೇಲ್‌), ಸೆಲ್‌ ಫೋನಿನ ಸಂದೇಶಗಳು, ಮಾತುಕತೆಗಳು ಸ್ನೇಹದ ಬೆಸುಗೆಯನ್ನು ಗಟ್ಟಿಯಾಗಿಸಿವೆ. ಬಸ್ಸಿನ ಪಯಣದಲ್ಲಿ ಆರಂಭವಾದ ಅವರ ಸ್ನೇಹ ಇಂದಿಗೂ ಹಸಿರಾಗಿದೆ. ಅವರಿಬ್ಬರ ನಡುವಿನ ಸ್ನೇಹ ಸಂಕೋಲೆಯ ನಡುವೆ ರಹಸ್ಯಗಳ ಸುಳಿವಿಲ್ಲ. ಅವಳ ಜೀವಕ್ಕೆ ಇವಳು, ಇವಳ ಜೀವಕ್ಕೆ ಅವಳು ಅಂತಿರುವ ಅವರ ನಡುವಿನ ಸ್ನೇಹ ಬಂಧನ ಮಾತ್ರ ಹಾಗೇ ಇದೆ.  

‘ಪತಿ, ಮಕ್ಕಳು, ಬಂಧುಗಳಿದ್ದರೂ ಎಷ್ಟೋ ಬಾರಿ ಒಂಟಿ ಎನಿಸುತ್ತದೆ. ಮನದಲ್ಲಿ ಹೇಳಲಾಗದ ಬೇಸರ, ತಳಮಳ. ಆಗೆಲ್ಲ ನನಗೆ ನೆನಪಾಗುವುದು ನನ್ನ ಆಪ್ತ ಗೆಳತಿ ವಾರಿಧಿಯೇ’ ಎನ್ನುತ್ತಾಳೆ ಅರ್ಚನಾ.

ಸ್ನೇಹವೆಂಬುದು ಶುರುವಾಗುವುದೇ ಹೀಗೆ. ಎಲ್ಲಿ, ಹೇಗೆ ಎಂಬುದರ ಸುಳಿವು ಕೊಡದೇ ಬೆಸೆದು ಬಿಡುತ್ತದೆ. ಮಕ್ಕಳು ಪ್ಲೇಹೋಮಿಗೆ ಹೋಗುವ ದಿನಗಳಲ್ಲೇ ಪೋಷಕರು ಕೇಳುವ ಮಾತು, ‘ನಿನ್ನ ಬೆಸ್ಟ್‌ ಫ್ರೆಂಡ್‌ ಯಾರು?’ ಎಂದು. ನಂತರ ಅದು ಶಾಲೆಯಲ್ಲಿ, ಆಟ ಆಡುವಾಗ, ಜೊತೆಗೆ ಓದಿ ಚರ್ಚಿಸುವಾಗ.. ಹೀಗೆ ಸಂದರ್ಭಗಳಿಗೆ ತಕ್ಕಂತೆ ಸ್ನೇಹ ಮುಂದುವರಿದು ಈಗ ಫೇಸ್‌ಬುಕ್‌ ಫ್ರೆಂಡ್‌ಗೆ ಬಂದು ನಿಂತಿದೆ.

ಆದರೆ ಬದುಕಿನಲ್ಲಿ ಎದುರಾಗುವ ಅನೇಕ ಸಂಬಂಧಗಳಲ್ಲಿ ಮನಸ್ಸಿಗೆ ತುಂಬಾ ಹತ್ತಿರವಾಗಿ, ಸದಾ ನಮ್ಮೊಂದಿಗೆ ಇದ್ದು, ಇದು ನನ್ನದು, ನನ್ನೊಂದಿಗೆ ಇರುವಂತಹದ್ದು, ನನ್ನೊಲವ ಮಾತುಗಳಿಗೆ ಜೊತೆಯಾಗುವಂತಹದ್ದು, ನನ್ನ ನೋವಿಗೆ ಕಿವಿಯಾಗುವಂತಹದ್ದು, ಕಷ್ಟದ ದಿನಗಳಲ್ಲಿ ಕೈ ಜೋಡಿಸಿ ಗಟ್ಟಿಯಾಗಿ ಜೊತೆಯಾಗಿ ನಿಲ್ಲುವಂತಹದ್ದು ಎನ್ನಿಸುವ ಈ ಸ್ನೇಹವೆಂದರೆ ಹೆಣ್ಣುಮಕ್ಕಳ ಮಧ್ಯೆ ಇರುವಂತಹದ್ದು.

ಪರಮಾಪ್ತೆ ಸಾವಿನತನಕ..
ಹೆಣ್ಣೊಬ್ಬಳು ಹೆಣ್ಣಿಗೆ ಪರಮಾಪ್ತೆಯೂ ಆಗಬಹುದು, ಹಿತಶತ್ರುವೂ ಆಗಬಹುದು. ಒಂದು ಹೆಣ್ಣು ಸುಲಭವಾಗಿ ಇನ್ನೊಂದು ಹೆಣ್ಣಿನೊಂದಿಗೆ ಸ್ನೇಹ ಬೆಳೆಸುವುದಿಲ್ಲ. ಆದರೆ ಒಮ್ಮೆ ಸ್ನೇಹ ಬೆಳೆಸಿದಳೆಂದರೆ ಈ ಸ್ನೇಹ ಅವರ ಸಾವಿನವರೆಗೂ ಜೊತೆಯಾಗಿಯೇ ಇರುತ್ತದೆ. ಹೆಣ್ಣು ತನ್ನ ಸ್ನೇಹಿತೆಯಲ್ಲಿ ತಾಯಿಯನ್ನು ಕಾಣುತ್ತಾಳೆ, ಶಿಕ್ಷಕಿಯನ್ನು ಕಾಣುತ್ತಾಳೆ, ಆಪ್ತ ಸಮಾಲೋಚಕಿಯನ್ನು ಕಾಣುತ್ತಾಳೆ, ತನ್ನನ್ನೇ ಸ್ನೇಹಿತೆಯಲ್ಲಿ ಕಾಣುತ್ತಾಳೆ.

ಹೆಣ್ಣಿನ ಭಾವನೆ ಹೆಣ್ಣಿಗಷ್ಟೇ ಅರ್ಥವಾಗುತ್ತದೆ. ಸ್ನೇಹಿತೆಯೊಬ್ಬಳು ತನ್ನ ಸ್ನೇಹಿತೆಯ ಮನದ ನೋವು, ಭಾವನೆಗಳನ್ನು ಸಮಾಧಾನ ಚಿತ್ತದಿಂದ ಕೇಳಿಸಿಕೊಂಡು ಅವಳಿಗೆ ಸಾಂತ್ವನವನ್ನು ಹೇಳುತ್ತಾಳೆ. ಅದೆಷ್ಟೋ ಬಾರಿ ಯಾರಲ್ಲಿಯೂ ಹೇಳಿಕೊಳ್ಳಲಾಗದ ಭಾವನೆಗಳನ್ನು ತನ್ನ ಆತ್ಮೀಯ ಸ್ನೇಹಿತೆಯ ಬಳಿ ಹೇಳಿಕೊಂಡು ಅವಳ ಹೆಗಲಿಗೆ ತಲೆಯಾನಿಸಿ ಅತ್ತಾಗಲಷ್ಟೇ ಅವಳ ಮನಸ್ಸು ಹಗುರವಾಗುವುದು. ಎಲ್ಲೋ ಬಾಯ್‌ಫ್ರೆಂಡ್ ಕೈ ಕೊಟ್ಟಾಗ, ಯಾರನ್ನೋ ನಂಬಿ ಮೋಸ ಹೋದಾಗ, ಯಾರೂ ನನ್ನವರಲ್ಲ ಎನ್ನಿಸುವ ಭಾವನೆಗಳು ಮೂಡಿದಾಗೆಲ್ಲಾ ಸ್ನೇಹಿತೆಯೆಂಬ ತಂಗಾಳಿ ಮೆಲ್ಲನೇ ನೇವರಿಸಿ ಹಿತ ನೀಡುತ್ತದೆ.

‘ಇಬ್ಬರು ಪುರುಷರ ಮಧ್ಯೆ ಗೆಳೆತನ ಎಷ್ಟೇ ಗಟ್ಟಿಯಾಗಿದ್ದರೂ ಕೆಲವೊಂದು ಸ್ವಂತ ವಿಷಯಗಳನ್ನು ಹೇಳಿಕೊಳ್ಳಲು ಮುಜುಗರ ಪಡುತ್ತಾರೆ. ಆದರೆ ಇಬ್ಬರು ಯುವತಿಯರು ಒಲ್ಲದ ಗೆಳೆಯನ ಬಗ್ಗೆ, ಕಚೇರಿಯಲ್ಲಿ ಕಿರುಕುಳ ಕೊಡುವ ಸಹೋದ್ಯೋಗಿಯ ಕುರಿತು, ಕೊನೆಗೆ ರಸ್ತೆಯಲ್ಲಿ ಅಪರಿಚಿತನೊಬ್ಬ ನುಂಗಿಬಿಡುವಂತೆ ನೋಡಿರುವ ಬಗ್ಗೆಯೂ ಸ್ನೇಹಿತೆಯ ಜೊತೆ ಹೇಳಿಕೊಳ್ಳುತ್ತಾಳೆ’ ಎನ್ನುತ್ತಾರೆ ಆಪ್ತ ಸಮಾಲೋಚಕಿ ಡಾ. ಎಸ್‌. ಪ್ರಮೀಳಾ ವೈದ್ಯನಾಥನ್‌.

ಸ್ನೇಹಿತೆಯರನ್ನು ಆಯ್ಕೆ ಮಾಡಿಕೊಳ್ಳುವುದು ಕಷ್ಟ. ಒಂದು ಸ್ವಲ್ಪ ಸಮಯ ಬೇಕು, ಒಂದಿಷ್ಟು ನಂಬಿಕೆ ಬೇಕು, ಹಾಗೇ ಒಂದು ಸ್ವಲ್ಪ ಅದೃಷ್ಟವೂ ಜೊತೆಗಿರಬೇಕು, ಬಸ್‌ನಲ್ಲಿ ಅಕ್ಕಪಕ್ಕ ಕೂತವರು ಕೊನೆಯತನಕ ಆಪ್ತ ಗೆಳತಿಯರು ಆದ ಹಾಗೆ. ಹೆಣ್ಣುಮಕ್ಕಳು ಸಾಮಾನ್ಯವಾಗಿ ಪ್ರಾಣ ಸ್ನೇಹಿತೆಯರಾಗುವುದು ಕಾಲೇಜು ದಿನಗಳಲ್ಲಿ. ಅಲ್ಲಿಯವರೆಗೆ ಸ್ನೇಹವೆಂಬುದು ಶಾಲೆ ಮುಗಿಯವವರೆಗೂ, ಆಮೇಲೆ ನಾನೆಲ್ಲೋ ನೀನೆಲ್ಲೋ ಎಂಬಂತಿರುತ್ತದೆ. ಆದರೆ ಸ್ನೇಹ ಕಾಲೇಜು ದಿನಗಳಿಂದ ಬಿಡಿಸಲಾರದಂತಾಗುತ್ತದೆ.

ಅವಳ ಅಳುವಿಗೆ ಹೆಗಲು
ಓದಿಗೆಂದು ಹಾಸ್ಟೆಲ್‌ ಸೇರಿದ ಮೇಲೆ ಹೆಣ್ಣಿಗೆ ಸ್ನೇಹಿತೆಯೇ ಎಲ್ಲವೂ ಆಗಿರುತ್ತಾಳೆ. ಮನೆ ಮಂದಿಯಿಂದ ದೂರವಿರುವಾಗ ಸ್ನೇಹಿತೆಯರಲ್ಲೇ ಮನೆಯವರನ್ನು ಕಾಣುತ್ತಾಳೆ ಹೆಣ್ಣು. ಅದರಲ್ಲೂ ತನ್ನ ತಾಯಿಯನ್ನು ಮಿಸ್ ಮಾಡಿಕೊಳ್ಳುವ ಅವಳು ಸ್ನೇಹಿತೆಯಲ್ಲಿ ತಾಯಿಯ ಭಾವವನ್ನು ಕಾಣುತ್ತಾಳೆ. ಅದೆಷ್ಟೋ ಹೆಣ್ಣುಮಕ್ಕಳಿಗೆ ಹಾಸ್ಟೆಲ್‌ನಲ್ಲಿ ಸ್ನೇಹಿತೆಯೇ ತಾಯಿಯಾಗಿದ್ದು ಇದೆ. ಹುಷಾರಿಲ್ಲದೇ ಮಲಗಿದ್ದಾಗ ಬೆಡ್ ಸಮೀಪಕ್ಕೆ ತಾಯಿಯಂತೆ ಬಿಸಿ ಊಟ ತಂದಿಡುವುದು, ಸಮಯಕ್ಕೆ ಸರಿಯಾಗಿ ಮಾತ್ರೆಗಳನ್ನು ನೀಡುವುದು, ತಿಂಗಳ ಮೂರು ದಿನಗಳ ನೋವಿನಲ್ಲಿ ಜೊತೆಯಾಗುವುದು, ತಲೆಹರಟೆ ಮಾಡಿದಾಗ ಗದರುವುದು, ಅವಳ ಅಳುವಿಗೆ ಹೆಗಲು ಕೊಡುವುದು.. ಹೀಗೆ ಪ್ರತಿ ವಿಷಯದಲ್ಲೂ ಸ್ನೇಹಿತೆಯೊಬ್ಬಳು ತಾಯಿಯಾಗುತ್ತಾಳೆ.

‘ನನಗೆ ನನ್ನ ವಯಸ್ಸಿನ ಹುಡುಗಿಯರ ಜೊತೆ ಸ್ನೇಹ ಬೆಳೆಸುವುದಕ್ಕೆ ಹಿಂಜರಿಕೆ. ಅವರಷ್ಟು ಶಿಕ್ಷಣ ಇಲ್ಲ, ಅವರಷ್ಟು ಸಾಮರ್ಥ್ಯ ಇಲ್ಲ... ಹೀಗೇ ಹಲವು ಕೀಳರಿಮೆ. ಹೀಗಾಗಿ ವಯಸ್ಸಾದ ಮಹಿಳೆಯರ ಜೊತೆ ಆರಾಮವಾಗಿ ಮಾತನಾಡಬಲ್ಲೆ, ಸುಲಭವಾಗಿ ಹೊಂದಿಕೊಂಡು ಬೆರೆಯಬಲ್ಲೆ. ಪಕ್ಕದ ಮನೆಯ 60ರ ಹರೆಯದ ಫಿಲೋಮಿನಾ ಆಂಟಿಯ ಜೊತೆ ಎಲ್ಲಾ ವಿಷಯಗಳ ಬಗ್ಗೆ ಮಾತನಾಡಿ ಮನಸ್ಸು ಹಗುರ ಮಾಡಿಕೊಳ್ಳುವೆ’ ಎನ್ನುತ್ತಾಳೆ ಬಿ.ಕಾಂ. ಮುಗಿಸಿ ಕೆಲಸಕ್ಕಾಗಿ ಹುಡುಕಾಡುತ್ತಿರುವ ವಿನುತಾ ಎಂ. ರಾವ್‌.

ಒಂಟಿತನಕ್ಕೆ ಔಷಧ
ಒಂಟಿತನಕ್ಕೊಂದು ದಿವ್ಯ ಔಷಧ ಈ ಸ್ನೇಹ. ಶಿಕ್ಷಣದ ಸಲುವಾಗಿ, ಉದ್ಯೋಗಕ್ಕೆಂದು ನಗರ ಸೇರುವ ಹೆಣ್ಣುಮಕ್ಕಳು ವಿರುದ್ಧ ಲಿಂಗಿಗಳ ಜೊತೆ ಗೆಳೆತನ ಬೆಳೆಸುವುದು ಸಾಮಾನ್ಯ. ಆದರೆ ಯಾವುದೋ ಒಂದು ಘಳಿಗೆಯಲ್ಲಿ ಆಪ್ತ ಭಾವದ ಕೊರತೆ, ಸ್ನೇಹದ ದುರುಪಯೋಗದ ಅನುಮಾನ ಅಥವಾ ಅನುಭವ, ಅಗತ್ಯವಿರುವಾಗ ನೆರವಿನ ನಿರಾಕರಣೆಯಿಂದ ಸ್ನೇಹದ ಹಸ್ತ ಚಾಚುವುದು ಹುಡುಗಿಯರತ್ತಲೇ.

‘ಈಗ ತಂತ್ರಜ್ಞಾನ ಮುಂದುವರಿದಿದೆ. ಫೇಸ್‌ಬುಕ್‌, ಮೀಟಪ್‌, ವಾಟ್ಸ್‌ಪ್‌ ಗ್ರೂಪ್‌ನಂತಹ ವೆಬ್‌ಸೈಟ್‌, ಆ್ಯಪ್‌ಗಳಲ್ಲಿ ಸ್ನೇಹಿತೆಯರನ್ನು ಹುಡುಕಿಕೊಳ್ಳುವುದು ಸುಲಭ. ಕೆಲವರು ನಿಕಟ ಗೆಳತಿಯರಾಗುವುದೂ ಇದೆ. ಒಂದಿಪ್ಪತ್ತು ಸ್ನೇಹಿತೆಯರಿದ್ದರೆ, ನಾಲ್ಕಾರಾದರೂ ಆಪ್ತರು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು’ ಎನ್ನುತ್ತಾಳೆ ಉದ್ಯೋಗದ ಸಲುವಾಗಿ ಬೆಂಗಳೂರಿಗೆ ಬಂದು ನೆಲೆಸಿರುವ ಟೆಕಿ ಮಂಜುಳಾ ಲೋಕೇಶ್‌.

‘ಈ ಧಾವಂತದ ಬದುಕಿನಲ್ಲಿ, ಆಧುನಿಕತೆ ಸೃಷ್ಟಿಸಿದ ಹಲವು ಹಲವಂಡಗಳ ಮಧ್ಯೆ ಒಂಟಿತನವೆಂಬುದು ಬಿಡಿಸಲಾರದ ಕಗ್ಗಂಟು. ಸುತ್ತ ಗದ್ದಲದ ಮಧ್ಯೆ ಗೋಡೆ ಕಟ್ಟಿಕೊಂಡು ಬದುಕುವವರ ಸಂಖ್ಯೆ ಕಡಿಮೆಯೇನಿಲ್ಲ. ಆಗ ಮೋಡದ ಮಧ್ಯೆ ಈ ಸ್ನೇಹವೆಂಬ ಬೆಳಕು ಜೀವನ ಪ್ರೀತಿಯನ್ನು ಮೂಡಿಸುತ್ತದೆ. ಬದುಕಿನ ದಿಕ್ಕನ್ನೇ ಬದಲಾಯಿಸಿಬಿಡುತ್ತದೆ’ ಎನ್ನುವ ತತ್ವಜ್ಞಾನಿ ಅಲೈನ್‌ ಡಿ ಬಾಟ್ಟನ್‌ ಮಾತು ಇಂದಿನ ಯುವತಿಯರನ್ನೇ ನೋಡಿ ಹೇಳಿದಂತಿದೆ. 

ಒಂದು ಸಮೀಕ್ಷೆಯ ಪ್ರಕಾರ ಭಾರತದ ಯುವಕ– ಯುವತಿಯರಲ್ಲಿ ಶೇ. 8ರಷ್ಟು ಮಂದಿಗೆ ಒಂಟಿತನದ ಭಾವ ಕಾಡುತ್ತಿದೆಯಂತೆ. ಅದರಲ್ಲೂ ಯುವತಿಯರು ಸೂಕ್ಷ್ಮ ಮನೋಭಾವ ಹೊಂದಿದ್ದು, ಈ ಒಂಟಿತನದಿಂದ ಖಿನ್ನತೆಗೆ ಜಾರುವುದು ಬಹು ಬೇಗ. ಕಳೆದ ವರ್ಷ ಬೆಂಗಳೂರಿನ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿಟ್ಟ ಕಾರಣ ಒಂಟಿತನ. ಈ ಖಿನ್ನತೆಯಿಂದ ಹೊರಬರುವ ದಿವ್ಯ ಔಷಧಿಯೆಂದರೆ ಕೊಡಕೊಳ್ಳುವ ತಾಪತ್ರಯವಿಲ್ಲದ ಪರಿಶುದ್ಧ ಸ್ನೇಹ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !