ಬೇಕಾಗಿದ್ದಾನೆ ಮಿಸ್ಟರ್‌ ರೈಟ್‌!

ಬುಧವಾರ, ಏಪ್ರಿಲ್ 24, 2019
27 °C

ಬೇಕಾಗಿದ್ದಾನೆ ಮಿಸ್ಟರ್‌ ರೈಟ್‌!

Published:
Updated:
Prajavani

‘ಈ ಕಾಲದ ಹೆಣ್ಮಕ್ಕಳಿಗೆ ಗಂಡು ನೋಡುವುದೊಂದು ತಲೆನೋವು. ಎಂಥವರನ್ನು ತಂದರೂ ಹೆಸರಿಡ್ತಾರೆ, ತುಂಬಾ ಚೂಸಿ... ಅಬ್ಬಬ್ಬಾ... ಇವರಿಗೆ ಭೂಮಿಯ ಮೇಲಿನ ಗಂಡುಗಳು ಆಗಲ್ಲ; ಆಕಾಶದಿಂದಲೇ ಇಳಿದು ಬರಬೇಕು ವರಮಹಾಶಯ...’

ಹೆಣ್ಣು ಹೆತ್ತವರ, ಅವರ ಬಂಧುಮಿತ್ರರ ಗೊಣಗಾಟಗಳಿವು. ಆದರೇನು ಮಾಡುವುದು? ಇವರು ಇರುವುದೇ ಹೀಗೆ. ‘ನೀನು ನಮ್ಮಂತಾಗಬೇಡ’ ಎಂದ ಅಮ್ಮ, ಚಿಕ್ಕಮ್ಮಂದಿರ ಚಿಗುರೊಡೆದ ಕನಸುಗಳಲ್ಲವೆ? ಅಷ್ಟಕ್ಕೂ ಚೆಂದದೊಂದು ಬೊಂಬೆಗೆ, ಅಂದದ ದಿರಿಸಿಗೆ, ಇಷ್ಟದ ತಿಂಡಿಗೇ ಅಷ್ಟೆಲ್ಲ ಹಟ ಕಟ್ಟಿದವರು, ಇಡೀ ಜೀವನಕ್ಕಾಗುವ ಸಂಗಾತಿಗೆ ಇಷ್ಟಾದರೂ ಪಟ್ಟು ಹಿಡಿಯುವವರೇ.

ನಿಜ, ಈ ಕಾಲದ ಹುಡುಗಿಯರು ಬದಲಾಗಿದ್ದಾರೆ. ವಾರಕ್ಕೊಂದು ಸಿನಿಮಾ, ತಿಂಗಳಿಗೊಮ್ಮೆ ಹೋಟೆಲ್‌ನಲ್ಲಿ ಮಸಾಲೆ ದೋಸೆ–ಜಾಮೂನು, ಹಬ್ಬಕ್ಕೊಂದು ಸೀರೆ, ಜೀವಮಾನದಲ್ಲಿ ಒಂದು ಚಿನ್ನದ ಸರ... ಇದ್ಯಾವುದೂ ಈಗ ಅವಳ ಪಟ್ಟಿಯಲ್ಲಿ ಉಳಿದಿಲ್ಲ. ತನಗೇನು ಬೇಕು ಅದನ್ನು ತಾನೇ ಕೊಂಡು ಖುಷಿ ಪಡುವಷ್ಟು ಆರ್ಥಿಕ ಬಲ ಅವಳಿಗೆ ಬಂದಿದೆ. ಹೊಸ ಸ್ಟಾಕ್‌ ಬಂದಾಗೊಮ್ಮೆ ಡಜನ್‌ಗಟ್ಟಲೆ ಡೆನಿಮ್‌ಪ್ಯಾಂಟು, ರಾಶಿ ಡಿಸೈನರ್‌ ಸೀರೆಗಳನ್ನು ತಂದಿರುತ್ತಾಳೆ.

ಸಂಗಾತಿ ಆಯ್ಕೆಯ ವಿಷಯಕ್ಕೆ ಬಂದಾಗ ಆ ಬದಲಾವಣೆ ತುಸು ಢಾಳಾಗೇ ರಾಚುತ್ತದೆ ಕಣ್ಣಿಗೆ. ಅವಳಿಗೆ ಬೇಕಿರುವುದು ತನ್ನನ್ನು ಸಾಕಬಲ್ಲ ಒಡೆಯನೂ ಅಲ್ಲ, ಕಾಯಬಲ್ಲ ಧೀರನೂ ಅಲ್ಲ. ಬಾಳ ಜೊತೆಗೊಬ್ಬ ಸಂಗಾತಿ. ತನ್ನನ್ನು ಗೌರವಿಸುವ, ಆಧರಿಸುವ, ಸಮನಾಗಿ ಕಾಣುವ, ಸಂಯಮದಿಂದ ನಡೆದುಕೊಳ್ಳುವ, ತಾನವಳ ಒಡೆಯನಲ್ಲ, ಅವಳು ತನ್ನ ದಾಸಿಯಲ್ಲ ಎನ್ನುವುದನ್ನರಿತು ಜತೆಯಾಗೇ ಸಾಗಬಲ್ಲ ಗೆಳೆಯ. ಜೊತೆಗೆ ತನ್ನ ಗುರಿ, ಕನಸನ್ನು ಸಾಕಾರಗೊಳಿಸುವಂತಹ ಸಂಗಾತಿ.

ಡೇಟಿಂಗ್‌ ಆ್ಯಪ್‌ನಲ್ಲಿ ಹುಡುಕುತ್ತ..

ಅರೆಂಜ್ಡ್‌ ಮದುವೆ ಈಗಲೂ ಇದೆ. ಆದರೆ ಮನೆಯ ಹಿರಿಯರು, ಪಕ್ಕದ ಮನೆ ಆಂಟಿ ಹೊಂದಿಸಿದ ಹುಡುಗ ಆಕೆಗೆ ಬೇಡವಾಯ್ತಾ? ವಧು–ವರರ ಸಮಾವೇಶ, ಮೆಟ್ರಿಮೋನಿಯಲ್‌ ಸೈಟ್‌ಗಳು ವಿಚ್ಛೇದಿತರಿಗೆ, ಪತಿಯನ್ನು ಕಳೆದುಕೊಂಡವರಿಗೆ ಎಂದು ಮೂಗು ಮುರಿಯುವ ಕಾಲವಾ? ಪ್ರೀತಿ– ಪ್ರೇಮ ಹುಟ್ಟಿಸುವ ಮುಗುಳ್ನಗುವಿನ ವಿನಿಮಯ ಕಾಲೇಜಿನಲ್ಲಿ, ಕುಟುಂಬದ ಸಮಾರಂಭದಲ್ಲೇ ಆಗಬೇಕೆಂದಿಲ್ಲ, ಡೇಟಿಂಗ್‌ ಆ್ಯಪ್‌ಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಪ್ರೀತಿಯನ್ನು ಹುಡುಕುವ ಯುಗವಿದು ಎನ್ನುವ ಹುಡುಗಿಯರೇ ಅಧಿಕ. ‘ಬ್ಲೈಂಡ್‌ ಡೇಟ್‌’ಗಳು ಕೆಲವೊಮ್ಮೆ ಕೈಕೊಟ್ಟರೂ, ಆತ ಸಾಮಾಜಿಕ ಜಾಲತಾಣದಲ್ಲಿ, ಫೊನಿನಲ್ಲಿ ಪೋಸ್‌ ಕೊಟ್ಟಂತಿರದಿದ್ದರೂ ಸೋತು ಕೂರುವ ಮನಸ್ಸಲ್ಲ ಅದು; ಮರಳಿ ಯತ್ನವ ಮಾಡು ಎಂಬ ಮಾತಿಗೆ ಕಟ್ಟು ಬೀಳುವ ಜಾಯಮಾನದಲ್ಲೇನೂ ತಪ್ಪಿಲ್ಲ ಬಿಡಿ ಎನ್ನುವ ಬಿಂದಾಸ್‌ ಮನೋಭಾವ.

‘ಲವ್‌ ಮ್ಯಾರೇಜ್‌ ಎಂದು ವಿಶೇಷವಾಗಿ ಹೇಳಿ ಹುಬ್ಬೇರಿಸುವ ದಿನಗಳಲ್ಲ ಇವು. ಕಾಲೇಜಿನಲ್ಲಿ, ಕಚೇರಿಯಲ್ಲಿ ಲವ್‌ ಹುಟ್ಟದಿದ್ದರೇನಂತೆ. ಡೇಟಿಂಗ್‌ ಸೈಟ್‌ನಲ್ಲಿ ಹುಟ್ಟಿ ಮದುವೆಯಲ್ಲಿ ಮುಕ್ತಾಯವಾಗುವ ಸ್ಮಾರ್ಟ್‌ನೆಸ್‌ ಇದೆ. ಅಷ್ಟಕ್ಕೂ ನೈಸರ್ಗಿಕ ಆಯ್ಕೆ ಎಂಬ ಡಾರ್ವಿನ್‌ ವಾದಕ್ಕೆ ಅನುಗುಣವಾಗಿಯೇ ಈ ಲವ್‌ ಮ್ಯಾರೇಜ್‌ಗಳು ನಡೆಯುತ್ತವೆ’ ಎನ್ನುತ್ತಾರೆ ಮನಶಾಸ್ತ್ರಜ್ಞೆ ಡಾ. ಪ್ರಮೀಳಾ ಎಸ್‌.

ಪ್ರತಿ ಹುಡುಗಿಗೂ ತನ್ನ ಜೀವನ ಸಂಗಾತಿಯಾಗುವವ ಹೀಗೇ ಇರಬೇಕು ಎನ್ನುವುದೊಂದು ಕಲ್ಪನೆ ಇರುತ್ತದೆ. ಆದರೆ ಬೆಳೆಯುತ್ತ ಬೆಳೆಯುತ್ತ ಕನಸಿನ ಹುಡುಗನ ಮಾನದಂಡಗಳು ಬದಲಾಗುತ್ತವೆ. ಆಕೆ ಮದುವೆಯಾಗುವ ವಯಸ್ಸು ತಲುಪುವ ಹೊತ್ತಿಗೆ, ಕಾಲ್ಪನಿಕ ವ್ಯಕ್ತಿಯ ಚಿತ್ರಣ ಸಂಪೂರ್ಣ ಬದಲಾಗಿರುತ್ತದೆ. ಪ್ರೀತಿ– ಸೌಂದರ್ಯ– ಹಣ– ಅಂತಸ್ತು ಎನ್ನುವ ಭೌತಿಕ ಅಂಶಗಳು ಒಂದು ಬದಿಗೆ ಸರಿದು, ವಾಸ್ತವಿಕ– ಭಾವನಾತ್ಮಕ ಸಂಗತಿಗಳು ಮುನ್ನೆಲೆಗೆ ಬಂದಿರುತ್ತವೆ. ಈ ಹಂತದಲ್ಲಿ ಅವರವರ ಆಸಕ್ತಿ– ಗ್ರಹಿಕೆ– ಅಗತ್ಯಗಳಿಗನುಗುಣವಾಗಿ ಸಿದ್ಧಗೊಳ್ಳುವ ಪಟ್ಟಿ ಯಾರೇನೇ ಅಂದರೂ ಬದಲಾಗುವುದಿಲ್ಲ.

‘ನಿಮಗೆಂಥ ಹುಡುಗ ಬೇಕು?’ ಇಂಥದ್ದೊಂದು ಪ್ರಶ್ನೆ ಕೇಳಿ ನೋಡಿ. ಒಂದಲ್ಲ, ಎರಡಲ್ಲ, ನೂರಾರು ನಮೂನೆಯ ಉತ್ತರಗಳು ಚಕಿತಗೊಳಿಸುತ್ತವೆ. ಸಂಪ್ರದಾಯವಾದಿಗಳಿಗಂತೂ ಈ ಉತ್ತರಗಳು ತುಸು ಹೆಚ್ಚೇ ಆಘಾತ ನೀಡಬಹುದೇನೊ. ನವಯುಗದ ಬದಲಾದ ಮಹಿಳಾಮಣಿಗಳನ್ನು ಬಲ್ಲವರಾಗಿದ್ದರೆ, ಅಂಥವರ ತುಟಿಯ ಮೇಲೊಂದು ಮೆಲುನಗು ಮೂಡಿ ಮಾಯವಾಗಬಹುದೇನೊ.

‘ಅವನಿಗೆ ಬೈಕ್‌ ಓಡಿಸೋಕೇ ಗೊತ್ತಿಲ್ಲ, ನನಗೆ ಅಂವ ಬೇಡ’ ಅಂತ ಕಾಂಚನಾ ಹೇಳಿದಾಗ ಹೆತ್ತವರಿಗೆ ಏನುತ್ತರಿಸುವುದಂತಲೇ ಗೊತ್ತಾಗಲಿಲ್ಲ. ‘ಶೀ.. ಅಂವ ಉಗುರು ಕಚ್ಚುತ್ತಾನಪ್ಪ...’ ಅಂತ ಮಾಧುರಿ ಮುಖ ಕಿವುಚಿದಾಗ ಗೆಳತಿಯರೆಲ್ಲ ಗೋಳು ಹೊಯ್ದುಕೊಂಡು ನಕ್ಕಿದ್ದರು. ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದ ರೀನಾ ಠಾಕೂರ್‌ ‘ಪ್ರತಿ ಸಲ ಹೋಟೆಲ್‌ಗೆ ಹೋದಾಗಲೂ ಬಿಲ್‌ ನಾನೇ ಕೊಡಬೇಕಿತ್ತು. ಹೀಗಾಗಿ ರಿಜೆಕ್ಟ್‌ ಮಾಡಿದೆ’ ಎಂದಾಗ ಇವೆಲ್ಲ ಸಣ್ಣ ಸಣ್ಣ ಸಂಗತಿಗಳು ಎನಿಸಿತ್ತು. ಆದರೆ ಕೆಲವರ ಪಟ್ಟಿಯಲ್ಲಿ ಇಂಥವಕ್ಕೇ ದೊಡ್ಡ ದೊಡ್ಡ ಸ್ಥಾನವಿರುತ್ತದೆ.

ಕಳೆದ ಒಂದು ದಶಕದ ಅಂತರದಲ್ಲಿ ’ಮಿ. ಪರ್ಫೆಕ್ಟ್‌’ನ ಗುಣಗಾನದ ಪರಿಭಾಷೆ ಬದಲಾಗಿದೆ. ಈಗಿನ ಹುಡುಗಿಯರ ಮನಸ್ಥಿತಿ ಹಾಗೂ ಪಾಲಕರ ಬದಲಾದ ದೃಷ್ಟಿಕೋನ ಇದಕ್ಕೆ ಕಾರಣ.. ಒಟ್ಟಾರೆ ‘ಅವನು ಹೇಗಿರಬೇಕು?’ ಎನ್ನುವ ಪ್ರಶ್ನೆಗೆ ಹುಬ್ಬೇರಿಸುವ, ಕಿರುನಗೆ ಮೂಡಿಸುವ, ವೈವಿಧ್ಯಮಯ ಉತ್ತರಗಳಂತೂ ಸಿಗುತ್ತವೆ.

ಹುಡುಗನ ಕುಲ– ಗೋತ್ರ, ರಾಶಿ– ನಕ್ಷತ್ರ, ಮನೆತನ, ಆಚಾರ– ವಿಚಾರ, ಸಂಪ್ರದಾಯ; ಅಕ್ಕತಂಗಿಯರು– ಅಣ್ಣತಮ್ಮಂದಿರು, ಅಪ್ಪನ ವಂಶ, ಅಮ್ಮನ ತವರು. ಎಲ್ಲಿ ಕೆಲಸ ಮಾಡುತ್ತಾನೆ, ನೌಕರಿ ಕಾಯಂ ಇದೆಯೇ, ಸಂಬಳ ಎಷ್ಟಿದೆ, ಸ್ಮೋಕಿಂಗ್‌ಝೋನ್‌ನಲ್ಲಿ ಕಾಣಿಸಿಕೊಳ್ಳುತ್ತಾನಾ? ಈ ವೃತ್ತಾಂತವೆಲ್ಲ ಹಳೇ ಕಥೆಯಾಯ್ತು.

ಅವಳಿಗಿರುವ ದೊಡ್ಡ ಆತಂಕ ಅವನು ತನ್ನ ಸ್ವಾತಂತ್ರ್ಯವನ್ನು ಗೌರವಿಸುತ್ತಾನಾ ಎಂಬುದು ಅಷ್ಟೆ.

Tags: 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !