ಐಸಿಯು ವಾರ್ಡ್‌ ಮತ್ತು ಡಯಾಲಿಸಿಸ್‌ ಕೇಂದ್ರಕ್ಕೆ ಬಾಲಗ್ರಹ ಪೀಡೆ!

7

ಐಸಿಯು ವಾರ್ಡ್‌ ಮತ್ತು ಡಯಾಲಿಸಿಸ್‌ ಕೇಂದ್ರಕ್ಕೆ ಬಾಲಗ್ರಹ ಪೀಡೆ!

Published:
Updated:

ಚಿಂಚೋಳಿ: ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ನೂತನವಾಗಿ ತೆರೆದ ತುರ್ತು ನಿಗಾ ಘಟಕ(ಐಸಿಯು) ವಾರ್ಡ್‌ ಮತ್ತು ಡಯಾಲಿಸಿಸ್‌ ಚಿಕಿತ್ಸೆ ಕೇಂದ್ರಗಳು ಉದ್ಘಾಟನೆಯಾಗಿ 4 ತಿಂಗಳು ಗತಿಸಿದರೂ ಇನ್ನೂ ಸೇವೆ ಆರಂಭವಾಗಿಲ್ಲ.

ಐಸಿಯು ವಾರ್ಡನ್‌ ಯಂತ್ರೋಪಕರಣಗಳು ಮತ್ತು ಡಯಾಲಿಸಿಸ್‌ ಕೇಂದ್ರದ ಯಂತ್ರೋಪಕರಣಗಳು ಬನಾಲ್ಕು ಗೋಡೆಗಳ ಮಧ್ಯೆ ದೂಳು ತಿನ್ನುತ್ತ ಕಾಲ ಕಳೆಯುವಂತಾಗಿದೆ. ಇದರಿಂದ ಎರಡು ಸೇವೆಗಳು ಬಾಲಗ್ರಹ ಪೀಡೆಗೆ ಒಳಗಾದಂತಾಗಿದೆ.
ರಾಜ್ಯದಾದ್ಯಂತ ಡಯಾಲಿಸಿಸ್‌ ಘಟಕಗಳನ್ನು ನಡೆಸಿಕೊಂಡು ಹೋಗಲು ಬಿಆರ್‌ಎಸ್‌ ಸಂಸ್ಥೆಗೆ ಸರ್ಕಾರ ಗುತ್ತಿಗೆ ನೀಡಿದೆ. ಕಳೆದ ವಾರವೇ ಇಲ್ಲಿ ಈ ಘಟಕ ಕಾರ್ಯಾರಂಭ ಮಾಡುತ್ತಿತ್ತು ಆದರೆ ಘಟಕಕ್ಕೆ ಅಗತ್ಯವಾದ ರಸಾಯನಿಕ ತುಂಬಾ ಹಳೆಯದಾಗಿದ್ದರಿಂದ ಆರಂಭ ಮಾಡಿಲ್ಲ.

ಈಗ ಮತ್ತೆ ರಸಾಯನಿಕ ಪೂರೈಸಲು ಕೇಳಿಕೊಳ್ಳಲಾಗಿದೆ. ಇದು ಬಂದ್‌ ತಕ್ಷಣ ಡಯಾಲಿಸಿಸ್‌ ಘಟಕ ಆರಂಭವಾಗಲಿದೆ ಎನ್ನುತ್ತಾರೆ ತಾಲ್ಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿಯ ಮುಖ್ಯ ವೈದ್ಯಾಧಿಕಾರಿ ಡಾ. ಸಂಜಯ ಗೋಳೆ.
ತುರ್ತು ನಿಗಾ ಘಟಕ ತೆರೆದು ಮೂರು ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ವಾರ್ಡ್‌ ತೆರೆದು ಹೊರಗಿನ ಗಾಳಿ ಹೋಗದಂತೆ ಕ್ರಮ ಕೈಗೊಳ್ಳಲಾಗಿದೆ ಆದರೆ ಇದು ಕೂಡ ಬಳಕೆಯಾಗದೇ ಯಂತ್ರೋಪಕರಣಗಳು ತುಕ್ಕು ಹಿಡಿಯುವಂತಾಗಿದೆ.
ಆಸ್ಪತ್ರೆಯಲ್ಲಿ 14 ತಜ್ಞ ವೈದ್ಯರ ಪೈಕಿ ಕೇವಲ ಇಬ್ಬರು ವೈದ್ಯರು ಮಾತ್ರ ಇದ್ದಾರೆ. ಹಗಲು ರಾತ್ರಿ ಎನ್ನದೇ ಇಬ್ಬರು ವೈದ್ಯರಿಂದ ಇಡಿ ಆಸ್ಪತ್ರೆ ನಿರ್ವಹಿಸುವಂತಹ ಸ್ಥಿತಿಯಿದೆ. ಇದರಿಂದ ಬಹುತೇಕ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗಳಿಗೆ ಕಳುಹಿಸಿಕೊಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಕಳೆದ ಫೆಬ್ರುವರಿ ತಿಂಗಳಲ್ಲಿಯೇ ಎರಡು ಸೇವೆಗಳನ್ನು ಶಾಸಕ ಡಾ. ಉಮೇಶ ಜಾಧವ್‌ ಉದ್ಘಾಟಿಸಿದ್ದರು. ಆದರೆ ಎರಡು ಘಟಕಗಳು ಕಾರ್ಯಾರಂಭ ಮಾಡದಿರುವುದರಿಂದ ಬಡರೋಗಿಗಳು ದೂರದ ಕಲಬುರಗಿ, ಹೈದರಾಬಾದ, ಸೋಲಾಪುರಗೆ ತೆರಳುವುದು ಅನಿವಾರ್ಯವಾಗಿದೆ.

ಹೀಗೆ ತುರ್ತು ಸಂದರ್ಭದಲ್ಲಿ ತೆರಳುವ ರೋಗಿಗಳಿಗೆ ಹೈದರಾಬಾದ ಮತ್ತು ಸೋಲಾಪುರದಲ್ಲಿ ಬಿಪಿಎಲ್‌ ಕಾರ್ಡುದಾರರಿಗೆ ರಿಯಾಯಿತಿ ಸೇವೆ ಲಭಿಸುತ್ತಿಲ್ಲ ಇದರಿಂದ ದುಬಾರಿ ಹಣ ವ್ಯಯಿಸಿ ಕೈಸುಟ್ಟುಕೊಳ್ಳುತ್ತಿದ್ದಾರೆ ಎಂದು ದೂರುತ್ತಾರೆ, ಮಲ್ಲಿಕಾರ್ಜುನ ಮಡಿವಾಳ್‌.

ಸರ್ಕಾರ ತಾಲ್ಲೂಕು ಆಸ್ಪತ್ರೆಗೆ ಯಂತ್ರೋಪಕರಣಗಳನ್ನು ನೀಡಿದೆ. ಡಯಾಲಿಸಿಸ್‌ ಘಟಕಕ್ಕೆ ಗುತ್ತಿಗೆ ನೀಡಿದೆ ಆದರೂ ಆರಂಭವಾಗಿಲ್ಲ. ಐಸಿಯುಗೆ ವೈದ್ಯರು ಇಲ್ಲದೇ ಹೋದರೆ ವಾರ್ಡ್‌ ನಿರುಪಯುಕ್ತವಾಗಲಿದೆ. ಹೀಗಾಗಿ ತಕ್ಷಣ ಐಸಿಯು ವಾರ್ಡ್‌ ತಜ್ಞ ವೈದ್ಯರನ್ನು ನೇಮಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಜಿಲ್ಲಾ ಕೇಂದ್ರದಿಂದ ಸುಮಾರು 90 ಕಿ.ಮೀ ದೂರದಲ್ಲಿರುವ ತಾಲ್ಲೂಕಿನಲ್ಲಿ ಆಧುನಿಕ ಆರೋಗ್ಯ ಸೇವೆಗಳ ಕೊರತೆಯಿದೆ. ತಕ್ಷಣ ಆರೋಗ್ಯ ಇಲಾಖೆ ಈ ಕೊರತೆ ನೀಗಿಸಿ ಬಡವರಿಗೆ ನೆರವಾಗಬೇಕಿದೆ. ಈಗಾಗಲೇ ಜಿಲ್ಲೆಯ ಆಳಂದ, ಜೇವರ್ಗಿ ಮೊದಲಾದ ಕಡೆಗಳಲ್ಲಿ ಡಯಾಲಿಸಿಸ್‌ ಸೇವೆ ಆರಂಭವಾಗಿದೆ. ಆದರೆ ಇಲ್ಲಿ ಮಾತ್ರ ಇನ್ನೂ ಮೀನಮೇಷ ಎಣಿಸುತ್ತಿಸುದೆ.
 

ಡಯಾಲಿಸಿಸ್‌ ಚಿಕಿತ್ಸೆ ಕೇಂದ್ರ ವಾರದೊಳಗೆ ಆರಂಭವಾಗಲಿದೆ. ಐಸಿಯು ವಾರ್ಡ್‌ಗೆ ಪ್ರತ್ಯೇಕ ವೈದ್ಯರ ಅಗತ್ಯವಿದೆ. ಇದಕ್ಕಾಗಿ ವೈದ್ಯರನ್ನು ನೀಡಲು ಕೇಳಿಕೊಳ್ಳಲಾಗಿದೆ
-ಡಾ. ಸಂಜಯ ಗೋಳೆ, ಆಡಳಿತ ಮುಖ್ಯ ವೈದ್ಯಾಧಿಕಾರಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಚಿಂಚೋಳಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !