ಶನಿವಾರ, ನವೆಂಬರ್ 16, 2019
22 °C
ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಯ ಕಾರ್ಯನೀತಿ ಯೋಜನಾ ಸಭೆಯಲ್ಲಿ ಶಿಕ್ಷಣ ತಜ್ಞ ಆರ್.ನಾಗರಾಜಯ್ಯ ಸಲಹೆ

ವಿದ್ಯಾರ್ಥಿಗಳ ಕಲಿಕಾ ನೂನ್ಯತೆ ಗುರುತಿಸಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ನಿಧಾನಗತಿಯ ಕಲಿಕೆ ಮತ್ತು ಕಲಿಕಾ ನೂನ್ಯತೆ ಉಳ್ಳ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗಾಗಿಯೇ ವಿಶೇಷ ರೀತಿಯ ಪಠ್ಯಕ್ರಮ ನಿಗದಿ ಮಾಡುವ ಮೂಲಕ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಕೂಡ ಉತ್ತಮ ಫಲಿತಾಂಶ ಪಡೆಯುವಂತೆ ಮಾಡುವ ಅಗತ್ಯವಿದೆ’ ಎಂದು ಶಿಕ್ಷಣ ತಜ್ಞ ಆರ್.ನಾಗರಾಜಯ್ಯ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಬುಧವಾರ ಜಿಲ್ಲಾಧಿಕಾರಿ ಆರ್.ಲತಾ ಅವರ ನೇತೃತ್ವದಲ್ಲಿ ನಡೆದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಯ ಕಾರ್ಯನೀತಿ ಯೋಜನಾ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಉತ್ತಮಗೊಳಿಸಲು ಸೆ. 30ರ ಒಳಗೆ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮೊದಲಿಗೆ ಒಂದು ಮಾದರಿ ಪರೀಕ್ಷೆ ನಡೆಸಬೇಕು. ಅದರ ಮೌಲ್ಯಮಾಪನದಲ್ಲಿ ನಿಧಾನಗತಿಯ ಕಲಿಕಾ ವಿದ್ಯಾರ್ಥಿಗಳನ್ನು ಗುರುತಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಾಲ್ಲೂಕುವಾರು ಸಭೆ ನಡೆಸಿ, ಎಲ್ಲಾ ಸರ್ಕಾರಿ ಶಾಲೆಗಳ ಅಂಕಿ ಅಂಶಗಳನ್ನು ಕಲೆಹಾಕಬೇಕು’ ಎಂದು ತಿಳಿಸಿದರು.

‘ನಿಧಾನಗತಿಯ ಕಲಿಕಾ ವಿದ್ಯಾರ್ಥಿಗಳಿಗೆ ಶನಿವಾರ ಹೆಚ್ಚುವರಿಯಾಗಿ ವಿಶೇಷ ತರಗತಿಗಳನ್ನು ಆಯೋಜಿಸಬೇಕು. ಇವರಿಗೆ ಪ್ರತ್ಯೇಕವಾಗಿ ವಿಶೇಷ ಪಠ್ಯಕ್ರಮವನ್ನು ನೀಡುವುದರಿಂದ ಮಕ್ಕಳಲ್ಲಿ ಕಲಿಯುವ ಉತ್ಸಾಹವನ್ನು ಹೆಚ್ಚಿಸಬಹುದು’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಫೌಜಿಯಾ ತರನ್ನುಮ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಜಿ.ನಾಗೇಶ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)