ಪ್ಲೋರೈಡ್‌ ಅಂಶ ಹೆಚ್ಚಿರುವ ಜಲಮೂಲ ಗುರುತಿಸಿ

7
ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ಸಭೆಯಲ್ಲಿ ಸಿಇಒ ವಿಕಾಸ್ ಸೂಚನೆ

ಪ್ಲೋರೈಡ್‌ ಅಂಶ ಹೆಚ್ಚಿರುವ ಜಲಮೂಲ ಗುರುತಿಸಿ

Published:
Updated:

ವಿಜಯಪುರ: ‘ಫ್ಲೋರೈಡ್ ಅಂಶ ಹೆಚ್ಚಿರುವ ಜಲಮೂಲಗಳನ್ನು ಗುರುತಿಸುವ ಜತೆಗೆ, ಆ ನೀರಿನ ಪರೀಕ್ಷಾ ಕಾರ್ಯ ಚುರುಕುಗೊಳಿಸಿ‘ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ್‌ ಕಿಶೋರ್‌ ಸುರಳಕರ್‌ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಫ್ಲೋರೋಸಿಸ್ ತಡೆ ಹಾಗೂ ನಿಯಂತ್ರಣ ಕಾರ್ಯಕ್ರಮದಡಿ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ‘ನೀರನ್ನು ಪರೀಕ್ಷಿಸಿ ಜನರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ಜತೆಗೆ ಫ್ಲೋರೋಸಿಸ್ ಆರೋಗ್ಯ ಸಮಸ್ಯೆ ಕುರಿತು ಜಾಗೃತಿ ಕಾರ್ಯವನ್ನು ತೀವ್ರಗೊಳಿಸಿ’ ಎಂದು ತಿಳಿಸಿದರು.

‘ಫ್ಲೋರೋಸಿಸ್ ವ್ಯಕ್ತಿಯ ಎಲುಬು, ಕೀಲು, ಹಲ್ಲುಗಳಿಗೆ ಹಾನಿ ಮಾಡುವುದಲ್ಲದೆ ನೋವುಂಟು ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಪ್ರತಿ ಗ್ರಾಮ ಹಾಗೂ ನಗರ ಪ್ರದೇಶಗಳಿಗೆ ಕುಡಿಯಲು ಸರಬರಾಜಾಗುವ ನೀರಿನ ಅಂಶಗಳನ್ನು ಪರೀಕ್ಷಿಸಬೇಕು. ಫ್ಲೋರೈಡ್ ಅಂಶವಿರುವ ಜಲಮೂಲಗಳನ್ನು ಗುರುತಿಸುವ ಜತೆಗೆ ಹೆಚ್ಚು ಫ್ಲೋರೈಡ್ ಅಂಶಗಳನ್ನು ಹೊಂದಿರುವಂತಹ ಗ್ರಾಮಗಳಲ್ಲಿ ಫ್ಲೋರೋಸಿಸ್ ಕಾಯಿಲೆಯ ಕುರಿತು ಜಾಗೃತಿ ಮೂಡಿಸಬೇಕು. ಪ್ರತಿ ಗ್ರಾಮದಲ್ಲಿ ಕನಿಷ್ಠ 100 ಪೋಸ್ಟರ್‌ಗಳ ಮೂಲಕ ಅರಿವು ಕಾರ್ಯ ಕೈಗೊಳ್ಳಬೇಕು. ಈ ಕುರಿತಂತೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಕ್ರಿಯಾಯೋಜನೆ ರೂಪಿಸಬೇಕು’ ಎಂದರು.

’ಫ್ಲೋರೈಡ್ ಅಂಶವುಳ್ಳ ನೀರು ಕುಡಿಯುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಎಲ್ಲ ಶಾಲಾ ಮಕ್ಕಳಿಗೆ, ಬಸ್ ನಿಲ್ದಾಣ, ವಿವಿಧ ವೃತ್ತಗಳು, ಹೋಟೆಲ್‌ಗಳು ವಿವಿಧ ವಸತಿ ನಿಲಯಗಳಲ್ಲಿ ಪೋಸ್ಟರ್‌ಗಳ ಮೂಲಕ ಜಾಗೃತಿ ಮೂಡಿಸಬೇಕು. ಆರೋಗ್ಯ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಆಹಾರ ಇಲಾಖೆ, ಶಿಕ್ಷಣ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಅವಶ್ಯಕ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು’ ಎಂದು ಸಿಇಒ ಸೂಚಿಸಿದರು.

‘ಜಿಲ್ಲೆಯ ಗ್ರಾಮೀಣ ಮತ್ತು ನಗರ ವಸತಿ ಪ್ರದೇಶಗಳಲ್ಲಿ ಸ್ಥಾಪಿತಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಮೂಲಕ ನೀರು ಪೂರೈಕೆಯಾಗುವಂತೆ ಎಚ್ಚರಿಕೆ ವಹಿಸಬೇಕು. ದುರಸ್ತಿ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಸೂಕ್ತ ನಿಗಾ ಇಡಬೇಕು. ಸದ್ಯ ಪೂರೈಕೆಯಾಗುತ್ತಿರುವ ನೀರಿನ ಅಂಶಗಳನ್ನು ಪರಿಶೀಲನೆಗೂ ಒಳಪಡಿಸಿ’ ಎಂದು ವಿಕಾಸ್ ಆದೇಶಿಸಿದರು.

‘ಅಂತರ್‌ಜಲ ಮತ್ತು ಮೇಲ್ಮೈ ಜಲಮೂಲಗಳ ಸಮೀಕ್ಷೆ ಕಾರ್ಯ ಕೈಗೊಳ್ಳಬೇಕು. ಭೂಗರ್ಭ ಶಾಸ್ತ್ರಜ್ಞರ ನಿಯೋಜನೆ ಹೆಚ್ಚಿಸಬೇಕು. ವಿವಿಧ ಶಾಲೆಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆಯನ್ನು ನಿರಂತರವಾಗಿ ಕೈಗೊಳ್ಳಬೇಕು. ವೈದ್ಯಾಧಿಕಾರಿಗಳು ಕಾರ್ಯ ನಿರ್ವಹಿಸುತ್ತಿರುವ ತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಫ್ಲೋರೈಡ್ ಅಂಶವುಳ್ಳ ನೀರಿನ ಮಾದರಿಗಳ ಸಂಗ್ರಹಣೆ ಮಾಡಬೇಕು. ಫ್ಲೋರೈಡ್ ಅಂಶ ಕಂಡು ಬಂದ ತಕ್ಷಣ ಆ ನೀರು ಜನರಿಗೆ ಪೂರೈಕೆಯಾಗದಂತೆ ನೋಡಿಕೊಂಡು ಶುದ್ಧ ನೀರು ಪೂರೈಸಿ’ ಎಂದು ಸಲಹೆ ನೀಡಿದರು.

ಇದೇ ವೇಳೆ ಫ್ಲೋರೊಸಿಸ್ ರೋಗ ನಿಯಂತ್ರಣ ಕುರಿತು ಮುದ್ರಿಸಲಾದ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಂದ್ರ ಕಾಪಸೆ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಅಮರೇಶ ನಾಯಕ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !