ಅನಧಿಕೃತ ಸಾಮಿಲ್‌; ಕಾನೂನು ಕ್ರಮದ ಎಚ್ಚರಿಕೆ

ಶುಕ್ರವಾರ, ಮೇ 24, 2019
22 °C

ಅನಧಿಕೃತ ಸಾಮಿಲ್‌; ಕಾನೂನು ಕ್ರಮದ ಎಚ್ಚರಿಕೆ

Published:
Updated:

ವಿಜಯಪುರ: ಜಿಲ್ಲೆಯಲ್ಲಿ ನಿಯಮ ಬಾಹಿರವಾಗಿ, ಅನಧಿಕೃತವಾಗಿ ಸಾಮಿಲ್‌ಗಳನ್ನು ನಡೆಸುತ್ತಿರುವವರು ಕೂಡಲೇ ಸ್ಥಗಿತಗೊಳಿಸಬೇಕು. ನಿಯಮ ಮೀರಿ ಚಾಲನೆ ಮಾಡುತ್ತಿರುವುದು ಕಂಡು ಬಂದಲ್ಲಿ, ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.

ಜಿಲ್ಲೆಯ ಭೌಗೋಳಿಕ ಕ್ಷೇತ್ರಕ್ಕೆ ಕೇವಲ 0.17%ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಇದರಿಂದ ಜಿಲ್ಲೆಯಲ್ಲಿ ತಾಪಮಾನ ಅತಿ ಹೆಚ್ಚಾಗಿದ್ದು, ಮುಖ್ಯವಾಗಿ ಗಿಡ-ಮರಗಳಿಲ್ಲದೇ, ಅತಿ ಕಡಿಮೆ ಪ್ರಮಾಣದ ಮಳೆ ಬೀಳುವಂತಾಗಿದೆ. ಇಂಥಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಸಹ ಅನಧಿಕೃತವಾಗಿ ಗಿಡ–ಮರಗಳನ್ನು ಕಡಿಯುತ್ತಿರುವುದು ಕಂಡು ಬಂದಿದ್ದರಿಂದ, ಅನಧಿಕೃತ ಸಾಮಿಲ್‌ಗಳನ್ನು ಮೇಲಾಧಿಕಾರಿಗಳ ನಿರ್ದೇಶನದಂತೆ ಸ್ಥಗಿತಗೊಳಿಸಲಾಗಿದೆ ಎಂದಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 197 ಸಾಮಿಲ್‌ಗಳು ಗುಡಿ ಕೈಗಾರಿಕೆ ಲೈಸನ್ಸ್ ಪಡೆದು ದೊಡ್ಡ ಪ್ರಮಾಣದ ಯಂತ್ರಗಳನ್ನು ಅಳವಡಿಸಿಕೊಂಡು, ಅನಧಿಕೃತವಾಗಿ ಬೃಹತ್ ಗಾತ್ರದ ಮರಗಳನ್ನು ಕೊರೆಯುತ್ತಿದ್ದು, ಕರ್ನಾಟಕ ಅರಣ್ಯ ಕಾಯ್ದೆ -1963ರಂತೆ ಇದು ಕಾನೂನು ಬಾಹಿರ ಕೃತ್ಯವಾಗಿದೆ.

ಇಂತಹ ಸಾಮಿಲ್‌ಗಳನ್ನು ಎರಡು ತಿಂಗಳಿಂದ ಸೀಜ್ ಮಾಡಿ ಎಫ್.ಐ.ಆರ್. ಸಹ ದಾಖಲಿಸಲಾಗಿದೆ. ಸೀಜ್ ಮಾಡಲಾದ ಸದರಿ ಸಾಮಿಲ್‌ಗಳಲ್ಲಿ ಗುಡಿ ಕೈಗಾರಿಕೆ ನಿಯಮಗಳನ್ನು ಅಳವಡಿಸಿಕೊಂಡು, ಸಣ್ಣ ಪ್ರಮಾಣದ ಯಂತ್ರಗಳನ್ನು ಅಳವಡಿಸಿಕೊಂಡವರಿಗೆ, ಮತ್ತೆ ಸಾಮಿಲ್ ಚಾಲನೆ ಮಾಡಲು ಅನುಮತಿ ನೀಡುವ ಪ್ರಕ್ರಿಯೆ ಹಂತ ಹಂತವಾಗಿ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಭೀಕರ ಬರ ಇರುವುದರಿಂದ ದೊಡ್ಡ ಮರಗಳು ಹಾಗೂ ಸಣ್ಣ ಮರಗಳನ್ನು ಕೂಡ ರೈತರಿಂದ ಕಡಿಮೆ ದರದಲ್ಲಿ ಖರೀದಿಸಿ ಅನಧಿಕೃತವಾಗಿ ಮರಗಳನ್ನು ಕೊರೆದು, ಹೆಚ್ಚಿನ ದರದಲ್ಲಿ ಮಾರಾಟ ಮಾಡುವ ಪ್ರವೃತ್ತಿ ಹೆಚ್ಚಿದೆ. ಇದಕ್ಕೆ ಕಡಿವಾಣ ಹಾಕಲು ಅರಣ್ಯ ಇಲಾಖೆ ಕಾನೂನು ದಂಡದ ಪ್ರಯೋಗ ನಡೆಸಿದೆ.

ಅನಧಿಕೃತವಾಗಿ ಸಾಮಿಲ್ ಹೊಂದಿದವರು ಗುಂಪುಗಾರಿಕೆ ಮಾಡಿಕೊಂಡು, ಮೇ 3ರಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಬಾಗಿಲು ಹಾಕಿ ಗಲಾಟೆ ಮಾಡಿ, ಸರ್ಕಾರಿ ಕೆಲಸಕ್ಕೆ ಅಡಚಣೆಯನ್ನುಂಟು ಮಾಡಿದ್ದಾರೆ.

ಈ ಸಂದರ್ಭ ಪ್ರತಿಭಟನಕಾರರಲ್ಲಿ ಫಯಾಜ್‌, ಮೈನುದ್ದೀನ್‌ ಮೊಕಾಶಿ ಎಂಬುವರು ತಮ್ಮ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ, ಇತರರಿಗೂ ಪ್ರಚೋದನೆ ನೀಡಿ, ತಾವು ಮಾಡುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳಿಗೆ ಸಹಕಾರ ನೀಡಲು ಒತ್ತಡ ಹೇರಿದ್ದಾರೆ.

ಆದರೆ ಕಾನೂನು ಬಾಹಿರವಾಗಿ ಚಾಲನೆಯಲ್ಲಿರುವ ಸಾಮಿಲ್‌ಗಳಿಗೆ ಯಾವುದೇ ವಿನಾಯ್ತಿಯಿಲ್ಲ. ನಡೆಸಲು ಅವಕಾಶವೂ ಇಲ್ಲ. ನಿಯಮ ಬಾಹಿರವಾಗಿ ಮತ್ತು ಅನಧಿಕೃತವಾಗಿ ಚಾಲನೆಯಲ್ಲಿರುವ ಸಾಮಿಲ್‌ಗಳನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !