ಗುರುವಾರ , ಡಿಸೆಂಬರ್ 5, 2019
20 °C

‘ಕಲ್ಪನೆಯೇ ಬದುಕಾಗಿದೆ’

Published:
Updated:
Deccan Herald

* ನನ್ನ ಸಮಸ್ಯೆ ಎಂದರೆ ನನ್ನಷ್ಟಕ್ಕೆ ನನಗೆ ವಾಸ್ತವವನ್ನು ಅರಿತು ಬಾಳಲು ಆಗುತ್ತಿಲ್ಲ. ಸದಾ ಕಲ್ಪನೆಯ ಲೋಕದಲ್ಲಿ ಇರುವಂತೆ ಅನ್ನಿಸುತ್ತದೆ. ಎಲ್ಲರ ಜೊತೆ ಮಾತನಾಡುತ್ತಲೇ ಇದ್ದರೂ ವಾಸ್ತವ ನನಗೆ ಅರಿವು ಬರುತ್ತಿಲ್ಲ ಎಂಬ ಕೊರಗು. ಈ ಕೊರಗಿನಿಂದ ಮುಕ್ತವಾಗಲು ಏನು ಮಾಡಬೇಕು?
–ಊರು, ಹೆಸರು ಬೇಡ

ಉತ್ತರ: ಅವಾಸ್ತವಿಕ ಎನ್ನುವುದು ಒಂದು ಹಂತದಲ್ಲಿ ಎಲ್ಲರ ಜೀವನದಲ್ಲೂ ಸಾಮಾನ್ಯ. ಆದರೆ ನಿಮ್ಮ ವಿಷಯದಲ್ಲಿ ಪ್ರತಿದಿನ, ಪ್ರತಿ ಘಟನೆಯಲ್ಲೂ ಅದು ಕಾಣಿಸಿಕೊಳ್ಳುತ್ತಿದೆ. ಇದು ಆಲೋಚಿಸಬೇಕಾದ ವಿಷಯವೇ. ಇದಕ್ಕೆ ಮುಖ್ಯ ಕಾರಣ ಅತಿಯಾದ ಆತಂಕ. ಅದು ಒತ್ತಡವನ್ನು ಉಂಟಾಗಿಸುತ್ತದೆ. ಇದರಿಂದ ದೇಹ ದಣಿಯುತ್ತದೆ. ದೇಹ ಅತಿಯಾದ ಒತ್ತಡಕ್ಕೆ ಒಳಗಾಗುವ ಪ್ರಕ್ರಿಯೆಗೆ ‘ಹೈಪರ್ ಸ್ಟಿಮುಲೇಷನ್’ ಎಂದು ಕರೆಯಲಾಗುತ್ತದೆ. ಆ ಸಮಯದಲ್ಲಿ ದೇಹದಲ್ಲಿ ವಿಭಿನ್ನವಾದ ಸಂವೇದನೆ ಹಾಗೂ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲಿ ಅಸ್ತಾವಿಕ ಭಾವವೂ ಒಂದು. ಇದನ್ನು ನಿಯಂತ್ರಿಸಲು ಇರುವ ಒಂದೇ ಒಂದು ಮಾರ್ಗವೆಂದರೆ ಒತ್ತಡಕ್ಕೆ ಕಾರಣ ಏನು ಎಂಬುದನ್ನು ತಿಳಿದುಕೊಳ್ಳವುದು. ನಂತರ ನಿಧಾನವಾಗಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು. ಯಾವಾಗ ನಿಮ್ಮಲ್ಲಿ ಅವಾಸ್ತವಿಕ ಭಾವನೆ ಕಾಣಿಸಿಕೊಳ್ಳುವುದೋ ಆಗ ನಿಮ್ಮ ಉಸಿರಾಟವನ್ನು ಗಮನಿಸಿ. ಅದು ನಿಮ್ಮನ್ನು ವಾಸ್ತವ ಪ್ರಪಂಚಕ್ಕೆ ಮರಳಲು ಸಹಾಯ ಮಾಡುತ್ತದೆ. ಸಮಸ್ಯೆ ಸರಿಯಾಗದಿದ್ದರೆ ಆಪ್ತಸಮಾಲೋಚಕರನ್ನು ಕಾಣುವುದು ಒಳಿತು.

*
ನಾನು ಜೀವನದಲ್ಲಿ ಚಿಕ್ಕ ವಯಸ್ಸಿಗೆ ಅವಮಾನದ ರುಚಿಯನ್ನು ಕಂಡವಳು. ಈಗಲೂ ಅಷ್ಟೇ. ನಾನು ಮಾಡುವ ಪ್ರತಿ ಕೆಲಸದಲ್ಲೂ ನನಗೆ ಅವಮಾನವಾಗುವಂತೆ ಮಾಡುವ ಜನರೇ ಹೆಚ್ಚು. ಅವರ ಬಾಯನ್ನು ಮುಚ್ಚಿಸಲು ಅಸಾಧ್ಯ. ಆದರೆ ಅವರ ಮಾತನ್ನು ಕೇಳಿದಾಗ ಉಂಟಾಗುವ ಆ ಕ್ಷಣದ ಬೇಸರವನ್ನು ಹೇಳುವುದಕ್ಕೂ ಅಸಾಧ್ಯ. ‘ನೀನು ಸಾಧಾರಣ, ನಿನ್ನಿಂದ ಏನೂ ಮಾಡೋಕೆ ಆಗುವುದಿಲ್ಲ. ಬರೀ ಪೋಸು ಕೊಡ್ತಿಯಾ’ ಎಂದೆಲ್ಲಾ ನಿಂದಿಸುತ್ತಾರೆ. ಈ ಜನರಿಗೆ ಏನು ಹೇಳಲಿ. ನಾನು ಏನು ಮಾಡಲಿ?
–ಗಗನ, ಹಾಸನ

ಉತ್ತರ: ನಿಮಗೆ ಈಗ ಎಷ್ಟು ವರ್ಷ, ಎಲ್ಲಿಯವರೆಗೆ ಓದಿದ್ದೀರಿ, ಸದ್ಯಕ್ಕೆ ಏನು ಮಾಡಿಕೊಂಡಿದ್ದೀರಿ ಎಂಬ ಯಾವುದೇ ವಿಷಯವನ್ನು ತಿಳಿಸಿಲ್ಲ. ನೀವು ಬಾಲ್ಯದಿಂದಲೂ ಅವಮಾನಗಳಿಗೆ ಬಲಿಪಶುವಾಗಿದ್ದೀರಿ ಎಂಬುದು ನನಗೆ ಅರ್ಥವಾಗುತ್ತದೆ. ನಿಮ್ಮ ಸುತ್ತಲಿನ ಜನರಿಗೆ ನೀವು ‘ಟೇಕನ್ ಫಾರ್ ಗ್ರಾಂಟೆಡ್’ ಆಗಿದ್ದೀರಿ ಎಂದು ಅನ್ನಿಸುತ್ತಿದೆ. ಕೆಲವೊಮ್ಮೆ ಪರಿಸ್ಥಿತಿಯನ್ನು ನಿಮ್ಮಿಂದ ನಿಯಂತ್ರಣಕ್ಕೆ ತರಲು ಸಾಧ್ಯವಾಗದು. ಅದರ ಬದಲು ನೀವೇ ಬದಲಾಗುವುದು ಉತ್ತಮ. ನಿಮಗೆ ಗೌರವ ನೀಡದ ವ್ಯಕ್ತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮಗಾಗಿ ನೀವು ಏನನ್ನು ಸಾಧಿಸಬೇಕು ಎಂಬುದರ ಮೇಲೆ ಗಮನ ಹರಿಸಿ. ನಿಮಗೆ ಅವಮಾನ ಮಾಡುವ ಜನರಿಂದ ಏನನ್ನೂ ನಿರೀಕ್ಷಿಸಬೇಡಿ. ಅವರನ್ನು ನಿರ್ಲಕ್ಷ್ಯ ಮಾಡಿ. ನಿಮಗೆ ಸರಿಹೊಂದುವ ಸಮಾನಮನಸ್ಕ ಸ್ನೇಹಿತರ ಜೊತೆ ಬೆರೆಯಿರಿ. ಕೊನೆಗೆ ನೀವೇ ನಿಮ್ಮ ಜೀವನಕ್ಕೆ ಜವಾಬ್ದಾರಿ; ನಿಮ್ಮ ಸಂತೋಷಕ್ಕೆ ನೀವೇ ಕಾರಣ. ಹಾಗಾಗಿ ಕೆಲವೊಮ್ಮೆ ನೀವು ಸ್ವಾರ್ಥಿಯಾಗಬೇಕು. ನಿಮಗಾಗಿ ಮಾತ್ರ ಚಿಂತಿಸಬೇಕು.

*
ನಾನು ಬಿ.ಎಡ್‌. ವೃತ್ತಿಶಿಕ್ಷಣವನ್ನು ಮುಗಿಸಿ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ. ಒಂದು ಕಡೆ ಭವಿಷ್ಯದ ಬಗ್ಗೆ ಚಿಂತೆ; ಇನ್ನೊಂದು ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಕಲಿಸಬೇಕು ಅನ್ನೋ ಚಿಂತೆ. ಹಾಗಾಗಿ ಮಕ್ಕಳಿಗೆ ಒಳ್ಳೆಯ ರೀತಿಯಲ್ಲಿ ಕಲಿಸಲು ಪ್ರಯತ್ನಿಸುತ್ತಿದ್ದೇನೆ. ಅಲ್ಲದೆ ಈ ವಿಚಾರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದೇನೆ. ಆದರೆ ನನಗೆ ರಾತ್ರಿ ವೇಳೆಗೆ ಬೀಳುವ ದುಃಸ್ವಪ್ನಗಳು ನನ್ನ ಭವಿಷ್ಯದ ಬಗ್ಗೆ ಚಿಂತಿಸುವಂತೆ ಮಾಡುತ್ತವೆ. ಇದಕ್ಕೆ ಸರಿಯಾದ ಪರಿಹಾರವೇನು?
–ಅಮರೇಶ್, ಊರು ಬೇಡ

ಉತ್ತರ: ನಿಮಗೆ ಶಿಕ್ಷಕವೃತ್ತಿಯ ಮೇಲೆ ಒಲವಿರುವ ಕಾರಣಕ್ಕೆ ನೀವು ಆ ವೃತ್ತಿಯನ್ನು ಮಾಡುತ್ತಿದ್ದೀರಿ. ಅದು ನಿಜಕ್ಕೂ ಖುಷಿಯ ವಿಚಾರ. ಈ ವೃತ್ತಿಯ ಮೇಲೆ ಒಲವಿರುವ ಶಿಕ್ಷಕರು ಈಗಿನ ಸಮಾಜದಲ್ಲಿ ಕಾಣಸಿಗುವುದು ತುಂಬಾ ಅಪರೂಪವಾಗುತ್ತಿದೆ. ನೀವು ಒಂದು ರೀತಿಯಲ್ಲಿ ಸೇವೆ ಮಾಡುತ್ತಿದ್ದೀರಿ. ನಾನು ಹೇಳುವುದೇನೆಂದರೆ ನಿಮ್ಮಂತಹ ಶಿಕ್ಷಕರನ್ನು ಪಡೆದಿರುವುದು ವಿದ್ಯಾರ್ಥಿಗಳ ಪುಣ್ಯ. ನೀವು ನಿಮ್ಮೊಳಗೆ ಒಂದು ಆತಂಕ ವಲಯವನ್ನು ಸೃಷ್ಟಿಸಿಕೊಂಡಿದ್ದೀರಿ. ನಿಮ್ಮ ಸ್ನೇಹಿತರು ಅಥವಾ ಮನೆಯವರ ಜೊತೆ ನಿಮಗಿರುವ ಆತಂಕದ ಬಗ್ಗೆ ಮಾತನಾಡಿ. ಮಲಗುವ ಮೊದಲು ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅದು ನಿಮಗೆ ಒಳ್ಳೆಯ ರೀತಿ ನಿದ್ದೆ ಮಾಡಲು ಸಹಾಯ ಮಾಡುತ್ತದೆ. ಬೆಳಗಿನ ಫ್ರೆಶ್ ಮೂಡಿನಿಂದ ಏಳಬಹುದು. ಯಾವುದೇ ಅಡಚಣೆ ಇಲ್ಲದೆ ಒಳ್ಳೆಯ ನಿದ್ದೆ ಮಾಡಲು ಧ್ಯಾನದ ಮೂಲಕ ಸಾಧ್ಯ.

ಏನಾದ್ರೂ ಕೇಳ್ಬೋದು...
ಕೌಟುಂಬಿಕ ಸಮಸ್ಯೆ, ವೈಯಕ್ತಿಕ ಹಾಗೂ ಮಾನಸಿಕ ಸಮಸ್ಯೆಗಳ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಆಪ್ತ ಸಮಾಲೋಚಕಿ ಸುನೀತಾ ರಾವ್ ಉತ್ತರಿಸಲಿದ್ದಾರೆ.
ಇಮೇಲ್: bhoomika@prajavani.co.in 
ವಾಟ್ಸ್ಯಾಪ್: 9482006746

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು