ಹಲ್ಲಿಗೂ ಮರಗಳಿಗೂ ಅಮರ ಸಂಬಂಧ

7

ಹಲ್ಲಿಗೂ ಮರಗಳಿಗೂ ಅಮರ ಸಂಬಂಧ

Published:
Updated:
Deccan Herald

ದೇಶಕ್ಕೆ ಸ್ವಾತಂತ್ರ್ಯ ದೊರೆತ ವರ್ಷ ಪ್ರಕಟಗೊಂಡ ಪುಟ್ಟ ಪುಸ್ತಕ. ಅದರ ಹೆಸರು ‘ಆರೋಗ್ಯದರ್ಪಣ’. ಅದರ ಕರ್ತೃ ಹೆಸರು ಪಂಡಿತ ಶ್ರೀ ಶಿವಕುಮಾರ ಸ್ವಾಮಿ. ಮನೆಮನೆಗಳಲ್ಲಿದ್ದ ಆರೋಗ್ಯದ ಕನ್ನಡಿಯಂತಹ ಕೃತಿ ಅದಾಗಿತ್ತು. ಅಂತಹ ಗ್ರಂಥವು ಪ್ರಾಚೀನ ಆಯುರ್ವೇದಸಂಹಿತೆಗಳ ಸುಲಭ ಸಾರವನ್ನು ಜನರಿಗೆ ತಲುಪಿಸಲು ಮೀಸಲಾಗಿತ್ತು. ಅದರಲ್ಲಿರುವ ದಂತಧಾವನ ಪ್ರಕರಣದ ಒಂದು ಜಿಜ್ಞಾಸೆಯನ್ನು ಓದುಗರಿಗೆ ಯಥಾವತ್ತಾಗಿ ನೀಡಿದ್ದೇನೆ. ನೆನಪಿರಲಿ. ಈ ಕೃತಿ ರಚನೆಯ ಕಾಲ ಏಳು ದಶಕಗಳಿಗೂ ಹಿಂದೆ! ‘ಬಾಯಿ ಮುಚ್ಚಿ ರಾತ್ರಿ ವೇಳೆ ನಾವು ನಿದ್ರಿಸುವೆವು. ಹಿಂದೆ ತಿಂದ ಆಹಾರದ ಮಲಿನಾಂಶದ ಶೇಖರಣೆ ಹಲ್ಲಿನ ಮೇಲೆ ಸಹಜವಾಗಿ ಆಗುತ್ತದೆ. ಬಾಯಿ ದುರ್ಗಂಧಮಯವಾಗುತ್ತದೆ. ಅಂತಹ ದುರ್ಗಂಧ ಹೋಗಲಾಡಿಸಲು ಭಾರತದಲ್ಲಿ ಪ್ರಾಚೀನಕಾಲದಿಂದಲೂ ಬೇವು, ಮಾವು ಮುಂತಾದ ಕಡ್ಡಿಗಳಿಂದ ದಂತಶೋಧನೆ ಮಾಡುತ್ತಿದ್ದ ಪದ್ಧತಿ ಪ್ರಚಾರದಲ್ಲಿತ್ತು. ಅದು ಪ್ರಾಚೀನಾಯುರ್ವೇದ ಗ್ರಂಥಗಳಲ್ಲಿ ಅತಿ ಮನೋಹರವಾಗಿ ವರ್ಣಿತವಾಗಿದೆ.

ಬ್ರಷ್ ಬಳಸುವ ಮಂದಿಗೂ ಮನೆಯಲ್ಲಿಯೇ ಮಾಡಿಕೊಳ್ಳುವ ದಂತಸಂಸ್ಕಾರ ಚೂರ್ಣಗಳೆಂಬ ಹಲ್ಲುಪುಡಿಯ ತಯಾರಿಕೆಯ ವಿಧಾನವನ್ನು ಪಾಠಕರಿಗೆ ಬರೆದಿರುವುದಾಗಿದೆ. ಆ ಚೂರ್ಣಗಳನ್ನದ್ದಿ ಬ್ರಷ್ ಉಪಯೋಗಿಸಬಹುದು. ಅನಂತರ ಬ್ರಷ್‌ ಅನ್ನು ಬಿಸಿನೀರಲ್ಲಿ ಹತ್ತು ಹದಿನೈದು ನಿಮಿಷ ಅದ್ದಿಟ್ಟು ಅನಂತರ ತೊಳೆದಿರಿಸಬೇಕು. ಹೀಗೆ ತೊಳೆದಿಡದಿದ್ದರೆ ಬ್ರಷ್ ಕೂದಲುಗಳ ಸಂದುಗಳ ನಡುವೆ ಹೊಲಸು ನಿಂತು ಸೂಕ್ಷ್ಮ ಕ್ರಿಮಿ ಉತ್ಪನ್ನವಾಗುವವು. ಹೊಸ ರೋಗಗಳನ್ನು ಹುಟ್ಟಿಸುತ್ತವೆ. ಆದುದರಿಂದ ಬ್ರಷ್‌ನ ಭಕ್ತರು ಇವುಗಳ ಶುದ್ಧತೆಯ ಬಗ್ಗೆ ವಿಶೇಷ ಲಕ್ಷ್ಯ ಕೊಡುವುದು ಅತ್ಯಾವಶ್ಯಕ. ಬೇಸರದಿಂದ ಇವುಗಳ ನಿರ್ಮಲತೆಯಲ್ಲಿ ಉದಾಸೀನತೆ ಮಾಡುವುದಾದರೆ ‘ವಿನಾಯಕಂ ಪ್ರಕುರ್ವಾಣೋ ರಚಯಾಮಾ ಸ ವಾನರಂ’, ಅಂದರೆ ಗಣೇಶ ಮಾಡಲಾರಂಭಿಸಿ ಮಾಡುತ್ತಾ ಮಾಡುತ್ತಾ ಮಂಗನ ಆಕಾರದಲ್ಲಿ ಪರ್ಯವಸಾನವಾದಂತಾಯಿತು ಎಂಬ ಗಾದೆಯಂತೆ ಹಲ್ಲುಗಳ ಸ್ವಚ್ಛತೆಗೆ ಬಳಸಿದ ಬ್ರಷ್‌ ಉದರ ವಿಕಾರಗಳಿಗೆ ಕಾರಣವಾದೀತು. ಲಾಭಕ್ಕೆ ಬದಲು ಹಾನಿಯೇ ಉಂಟಾದೀತು. ಈ ಹಾನಿಯು ಆಗಿಂದಾಗಲೇ ಕಾಣಿಸದಿದ್ದರೂ ದಿನಕ್ರಮದಿಂದ ಬೆಳೆದು ಬೆಟ್ಟದಂತಾಗುತ್ತದೆ.(ಕೃಪೆ: ಅರೋಗ್ಯ ದರ್ಪಣ, ಪಂ.ಶಿವಕುಮಾರ ಸ್ವಾಮಿಗಳು, ಪುಟ 17-18, ಪ್ರಕಟಣೆ: ಇಸವಿ 1947).

ಅಕ್ಟೋಬರ್ 2018ರ ಕೃಷಿ ಸಂಚಿಕೆಯ ಒಂದು ಲೇಖನದ ವಾದ ಸರಣಿಯ ಓದು ಕೂಡ ಓದುಗರಿಗೆ ಇಲ್ಲಿ ಪ್ರಸ್ತುತ. ಲೇಖಕರ ಹೆಸರು ಡಾ. ಶ್ರೀಶೈಲ ಬಾದಾಮಿ. ಅವರ ಮಾತುಗಳನ್ನೇ ಓದಿರಿ: ‘ಮ್ಯಾಂಚೆಸ್ಟರ್ ವಿ.ವಿ.ಯ ಸಂಶೋಧನೆಯ ಪ್ರಕಾರ ಟೂತ್ ಬ್ರಷ್ ಸೂಕ್ಷ್ಮಜೀವಿಗಳ ಮ್ಯಾಗ್ನೆಟ್ ಇದ್ದಂತೆ. ದಿನವೂ ನಾವು ಬಳಸುವ ಹಸಿಯ ಬ್ರಷ್ ಇಡುವ ಜಾಗ ಶೌಚಾಲಯ ತಾನೇ? ನಾವು ತಿನ್ನುವ ಕಟ್ಲೆಟ್ ಅನ್ನು, ಇತರ ಆಹಾರವನ್ನು ಶೌಚಾಲಯದಲ್ಲಿಟ್ಟು ಪದೇ ಪದೇ ತಿನ್ನುವುದಿಲ್ಲ. ಶೌಚಾಲಯದಲ್ಲಿಡುವುದು, ಅಲ್ಲಿಯೇ ಕುಳಿತು ಬ್ರಷ್ ಮಾಡುವುದು ಇನ್ನೂ ಅಪಾಯಕಾರಿ’ (ಕೃಪೆ: ಕೃಷಿಭಾರತ್ ಪುಟ 38). ಓದುಗರನ್ನು ಭಯ ಅಥವಾ ಗೊಂದಲಕ್ಕೀಡು ಮಾಡುವ ಉದ್ದೇಶ ನನಗಿಲ್ಲ. ಪರ್ಯಾಯ ಅಲೋಚನೆಗಳತ್ತ ಮತ್ತು ಪ್ರಕ್ರಿಯೆಗಳತ್ತ ಕೊಂಡೊಯ್ಯುವ ಮೂಲ ಉದ್ದೇಶ ನನಗಿದೆ. ಒಟ್ಟಿನಲ್ಲಿ ಆರೋಗ್ಯಸಾಧನೆಯ ಹಾದಿಗಳಿವು. ಏಕೆಂದರೆ ಬಾಯಿಯೇ ನಮ್ಮ ದೇಹದ ಹೆಬ್ಬಾಗಿಲು. ದೇಹವೆಂಬ ಮನೆಯ ಅತಿ ಉದ್ದನೆಯ ಅಂಗದ ಪ್ರವೇಶ ದ್ವಾರ!.

ಚರಕಾದಿ ಆದಿಮ ಆಯುರ್ವೇದಗ್ರಂಥಗಳು ಹಲ್ಲುಜ್ಜುವ ಬಳಕೆಯ ಸಸ್ಯಗಳ ಕಡ್ಡಿಯ ಉದ್ದನೆಯ ಪಟ್ಟಿ ನೀಡುತ್ತವೆ. ಕಗ್ಗಲಿ ಎಂಬ ಮುಳ್ಳುಮರದ ಆಯಾ ವ್ಯಕ್ತಿಯ ಕಿರಿ ಬೆರಳು ಗಾತ್ರದ ಕಿರುರೆಂಬೆ ಬಳಸುವುದು ಸುಶ್ರುತಸಂಹಿತೆಯನ್ವಯ ಉತ್ತಮ. ಬಲು ಗಟ್ಟಿ ಮರ ಅದು. ಹಸಿಯ ರೆಂಬೆಯ ಕಡ್ಡಿಯ ಒಂದು ತುದಿಯನ್ನು ಜಜ್ಜಿ ಬ್ರಷ್‍ನಂತೆಯೇ ರೂಪಿಸಿ ಬಳಸುವ ಉಪದೇಶ ಇತ್ತು. ಅದರಲ್ಲಿಯೇ ನಾಲಿಗೆ ಉಜ್ಜಿದರೆ ನಾಲಿಗೆ ಸಹಿತ ಸ್ವಚ್ಛ. ಬೇವು, ಆಲ, ಅತ್ತಿ, ಬಸಿರಿ, ಹೊಂಗೆ, ಬೋರೆ, ಬಿಲ್ವ, ಕದಂಬ, ಅರ್ಜುನ(ತೊರೆಮತ್ತಿ) ಮತ್ತು ಮಾವಿನ ಕಡ್ಡಿಗಳ ಬಳಕೆಯ ಉಲ್ಲೇಖವು ಆಯುರ್ವೇದದ ಪ್ರಾಚೀನ ಗ್ರಂಥಗಳಲ್ಲಿದೆ. ಕರಿಜಾಲಿ ಮತ್ತು ಬಕುಲ(ಪಗಡೆ) ಮರಗಳದ್ದೂ ಬಳಕೆಯು ಬಾಯಿಯ ಆರೋಗ್ಯ ಸಾಧನೆಯ ಮಟ್ಟಿಗೆ ಬಹು ಪ್ರಶಂಸಿತ. ಇವೆಲ್ಲ ಮರ ಜಾತಿಗಳು. ನಿಸರ್ಗದ ಕ್ಷುಪಗಳೆನಿಸಿದ ಕಣಗಿಲೆ, ಎಕ್ಕದ ಗಿಡ ಮತ್ತು ಉತ್ತರಣೆಯಂತಹ ಪೊದರು ಸಸ್ಯ ಬಳಸುವ ಉಲ್ಲೇಖ ಪ್ರಾಚೀನ ಗ್ರಂಥದವು. ಅಂದ ಹಾಗೆ ಎಕ್ಕ ಎಂಬ ಗಿಡಕ್ಕೆ ವಿಷಸಸ್ಯ ಎಂಬ ಹಣೆ ಪಟ್ಟಿ ಇದೆ. ಆದರೆ ಅದು ಸೂರ್ಯನ ಪ್ರತೀಕ. ಅಷ್ಟೇ ಪ್ರಖರ. ಆಯಾ ವ್ಯಕ್ತಿಯ ಪ್ರಕೃತಿಗನುಗುಣವಾಗಿ ಹಲ್ಲುಜ್ಜುವ ಬ್ರಷ್ ಆಯ್ಕೆ ಆಯುರ್ವೇದ ಶಾಸ್ತ್ರದ ಗರಿಮೆ. ಅಷ್ಟೆ ಅಲ್ಲ, ವಿಶ್ವದ ಯಾವುದೇ ಮೂಲೆಯಲ್ಲಿಲ್ಲದ ಒಂದು ಹೆಚ್ಚುಗಾರಿಕೆ ಕೂಡ ಆಯುರ್ವೇದ ಶಾಸ್ತ್ರದ್ದು. ಋತು ಅಂದರೆ ಬೇಸಿಗೆ, ಚಳಿ, ಮಳೆಗಾಲದ ವಿವಿಧ ಕಾಲಮಾನಗಳು. ಅದಕ್ಕೆ ಅನುಗುಣವಾಗಿ ಮರ, ಗಿಡ ಬಳಸಿ ಹಲ್ಲು ಮತ್ತು ಬಾಯಿಯ ಶುಚಿಗೊಳಿಸುವ ವಿಧಾನ ಆಯುರ್ವೇದದ ಹೆಚ್ಚುಗಾರಿಕೆ.

ಬೇವು, ಹೊಂಗೆ ಬಳಸಿ ಹಲ್ಲುಜ್ಜುವ ವಿಧಾನವಂತೂ ನಿನ್ನೆ ಮೊನ್ನೆ ತನಕ ಗ್ರಾಮೀಣ ಪರಿಸರದಲ್ಲಿತ್ತು. ವಿಶ್ವ ಆರೋಗ್ಯ ಸಂಸ್ಥೆಯ ಒಂದು ಅಧ್ಯಯನ ಪ್ರಬಂಧವನ್ನು ನಾಲ್ಕು ದಶಕ ಪೂರ್ವದಲ್ಲಿ ಓದಿದ್ದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾದ ಒಂದು ಅಧ್ಯಯನ. ಬೇವಿನಕಡ್ಡಿ ನಿತ್ಯ ಬಳುತ್ತಿದ್ದ ಮಂದಿಗೆ ಬಾಯಿಯ ಅರ್ಬುದರೋಗದ ಸಾಧ್ಯತೆ ವಿರಳ ಎನ್ನುವ ಶೋಧ ಪ್ರಬಂಧ ಅದು. ಬೇವು ಅಪ್ಪಟ ಭಾರತೀಯ ಮೂಲದ ಮರ. ದಕ್ಷಿಣ ಆಫ್ರಿಕಾಕ್ಕೆ ಒಯ್ದು ಅಲ್ಲಿ ನೆಟ್ಟದ್ದು ಬ್ರಿಟಿಷ್ ಆಡಳಿತದ ದಿನಗಳಲ್ಲಿ. ಏಕೆಂದರೆ ಆಫ್ರಿಕಾ ಮತ್ತು ಭಾರತವು ಅವರ ಆಳ್ವಿಕೆಯಡಿಯಲ್ಲಿತ್ತು. ಇಂದು ಭಾರತದಲ್ಲಿ ಬ್ರಷ್, ಪೇಸ್ಟ್ ಬಳಕೆ ಎಲ್ಲೆಡೆ ಸಾರ್ವತ್ರಿಕ. ಪೇಸ್ಟ್‌ನ ಹಲವು ಬಗೆಯ ಅರ್ಬುದಕಾರಿ ರಾಸಾಯನಿಕಗಳ ಬಗ್ಗೆ ವಿದೇಶಗಳಲ್ಲಿ ಎಚ್ಚರಿಕೆಯ ಕರೆಗಂಟೆ ಸದ್ದು ಮಾಡುತ್ತಿದೆ. ಜೊತೆಗೆ ಬ್ರಷ್ ಮತ್ತು ಪೇಸ್ಟ್‌ನ ಪರಿಸರ ಮಾಲಿನ್ಯತೆಯ ಅನೇಕ ಅಧ್ಯಯನದ ಬಗ್ಗೆ ಕಳವಳಕಾರಿ ಅಂಶಗಳು ಪತ್ತೆಯಾಗ ಹತ್ತಿವೆ.

ಹಾಗಾದರೆ ಪರ್ಯಾಯಗಳೇನು?

ಬಯಲು ಸೀಮೆ, ಪೂರ್ವ ಕರ್ನಾಟಕದ ಹಲವು ಭಾಗಗಳಲ್ಲಿ ಬಹಳ ಸಾಮಾನ್ಯ ಮರವೊಂದಿದೆ. ಸ್ಥಳೀಯರ ಪ್ರಕಾರ ಅದು ಗೋಯಿನ್ಮರ, ಗೋಣಿ ಮರ. ‘ಸಾಲವಡೊರ ಪರ್ಸಿಕಾ’ ಎಂಬ ದ್ವಿನಾಮದ ಮರ ಅದು. ಪೀಲು ಅಥವಾ ಮೆಸ್ವಾಕ್ ಎಂಬ ಹೆಸರುಗಳೂ ಅದಕ್ಕಿವೆ. ಮೆಕ್ಕಾ–ಮದೀನ ಪ್ರವಾಸಿಗರು ಅದರ ಕಡ್ಡಿಗಳನ್ನು ಒಯ್ಯುತ್ತಾರೆ. ಅವರ ದಂತಕಾಷ್ಟ, ಅಂದರೆ ಬ್ರಷ್ ಅದು. ಇದನ್ನು ಖಂಡಿತ ಬಳಸಲು ಅವಕಾಶ ಇದೆ. ಜಾಲಿಮರದ ನಾಣ್ಯದಾಕಾರದ ಉದ್ದನೆಯ ಕಾಯಿಗಳನ್ನು ಸುಟ್ಟು ಬೂದಿ ಮಾಡಿ ಅದರ ಪುಡಿಯ ದಂತಧಾವನದ ಬಳಕೆಗೆ ಅವಕಾಶ ಇದೆ. ಭತ್ತದ ಹೊಟ್ಟಿನ ಕರಿ, ಬೂದಿಗೆ ಅದೇ ಅರ್ಹತೆ ಇದೆ. ಹಿಂದೆ ಓದಿದ ಅನೇಕ ಮರ ಜಾತಿಗಳ ಕಿರುರೆಂಬೆ ಖಂಡಿತ ಬಳಸಲಾದೀತು. ಇವಾವುವೂ ಪರಿಸರ ಮಾರಕವಲ್ಲ. ದೇಹದ ಆರೋಗ್ಯಕ್ಕೆ ಪೂರಕ ಸಹ. ಉದುರಿದ ಮಾವಿನ ಎಲೆ, ಗೋಡಂಬಿ ಎಲೆ ಸುರುಳಿ ಹಲ್ಲುಜ್ಜಲು ಬಳಸುವ ವಿಧಾನ ಹಿಂದೆ ಕರಾವಳಿಯ ಮನೆಮನೆಯ ಮಾತಾಗಿತ್ತು. ಅಂತಹ ಎಲೆಗಳ ನಡುವಿನ ನರ ನಾಲಗೆ ಶುಚಿಗೊಳಿಸುವ ಟಂಗ್ ಕ್ಲೀನರ್. ಇವೆಲ್ಲ ಯೂಸ್ ಎಂಡ್ ಥ್ರೋ! ಹರಿಯುವ ನೀರಿನ ಮೂಲಗಳಿಗೆ ಅಪಾಯ ತಾರವು. ದೇಹದ ಥೈರಾಯಿಡ್‍ನಂತಹ ಹಾರ್ಮೋನುಗಳ ಏರಿಳಿತಕ್ಕೆ ದಾರಿಯಾಗವು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !