ಗುರಿ ಸಾಧನೆಗೆ ಸಾಮರ್ಥ್ಯ ಬೆಳೆಸಿಕೊಳ್ಳಿ

7
ಚಿಕ್ಕಮಗಳೂರಿನ ಸಾಧಕ ಕುವರಿ ಮೇಘನಾ ಅಭಿನಂದನಾ ಸಮಾರಂಭ

ಗುರಿ ಸಾಧನೆಗೆ ಸಾಮರ್ಥ್ಯ ಬೆಳೆಸಿಕೊಳ್ಳಿ

Published:
Updated:
ಭಾರತೀಯ ವಾಯುಸೇನೆಯ (ಐಎಎಫ್‌) ಯುದ್ಧ ವಿಮಾನ ಹಾರಾಟ ನಡೆಸುವ ‘ಫ್ಲೈಯಿಂಗ್‌ ಆಫೀಸರ್‌’ ರ‍್ಯಾಂಕ್‌ ಪಡೆದಿರುವ ನಗರದ ಮೇಘನಾ ಶಾನುಭೋಗ್‌ ಅವರನ್ನು ಚಿಕ್ಕಮಗಳೂರಿನ ಬ್ರಾಹ್ಮಣ ಮಹಾಸಭಾದ ವತಿಯಿಂದ ಬ್ರಹ್ಮಸಮುದ್ರ ರಂಗಣ್ಣ ಕಲ್ಯಾಣ ಮಂಟಪದಲ್ಲಿ ಬುಧವಾರ ಸನ್ಮಾನಿಸಲಾಯಿತು.

ಚಿಕ್ಕಮಗಳೂರು: ಸಾಧನೆಗೆ ಅಸಾಧ್ಯ ವಾದುದು ಯಾವುದು ಇಲ್ಲ ಎಂದು ಭಾರತೀಯ ವಾಯುಸೇನೆಯ (ಐಎಎಫ್‌) ಯುದ್ಧ ವಿಮಾನ ಹಾರಾಟ ನಡೆಸುವ ‘ಫ್ಲೈಯಿಂಗ್‌ ಆಫೀಸರ್‌’ ರ‍್ಯಾಂಕ್‌ ಪಡೆದಿರುವ ನಗರದ ಎಂ.ಆರ್‌.ಮೇಘನಾ ಶಾನುಭೋಗ್‌ ಕಿವಿಮಾತು ಹೇಳಿದರು.

ನಗರದ ಬ್ರಾಹ್ಮಣ ಮಹಾಸಭಾದ ವತಿಯಿಂದ ಬ್ರಹ್ಮಸಮುದ್ರ ರಂಗಣ್ಣ ಕಲ್ಯಾಣ ಮಂಟಪದಲ್ಲಿ ಬುಧವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ದಲ್ಲಿ ಮಾತನಾಡಿದರು.

‘ನಾಲ್ಕನೇ ತರಗತಿವರೆಗೆ ಅಪ್ಪ ಅಮ್ಮನೊಂದಿಗೆ ಇದ್ದೆ. ನಂತರ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ವಿದ್ಯಾ ಭ್ಯಾಸ ಮಾಡಿದೆ. ತರಗತಿಯಲ್ಲಿ ಪಾಠಗಳನ್ನು ಚೆನ್ನಾಗಿ ಕೇಳುತ್ತಿದ್ದೆ. ಉಳಿದ ಅವಧಿಯಲ್ಲಿ ಹೆಚ್ಚು ಓದುತ್ತಿರಲಿಲ್ಲ. ಓದುವ ಸಮಯದಲ್ಲಿ ಮಲಗಿರುತ್ತೇನೆ ಎಂದು ಹಾಸ್ಟೆಲ್‌ ವಾರ್ಡನ್‌ ಅವರು ಅಪ್ಪಅಮ್ಮನಿಗೆದೂರು ಹೇಳುತ್ತಿದ್ದರು. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಿದ್ದರಿಂದ ಅಪ್ಪಅಮ್ಮನಿಗೆ ಮಗಳ ಬಗ್ಗೆ ಖುಷಿ ಇತ್ತು’ ಎಂದರು.

‘ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಮೈಸೂರಿನ ಶ್ರೀಜಯ ಚಾಮರಾ ಜೇಂದ್ರ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿ.ಇ (ಮಾಹಿತಿ ವಿಜ್ಞಾನ) ಓದುತ್ತಿದ್ದಾಗ ಹಿಮಾಲಯದಲ್ಲಿ 26 ದಿನ ಸಾಹಸ ಶಿಬಿರದಲ್ಲಿ ಪಾಲ್ಗೊಂಡಿದ್ದೆ. 16 ಸಾವಿರ ಅಡಿ ಎತ್ತರಕ್ಕೆ ನಮ್ಮನ್ನ ಕರೆದೊಯ್ದಿದ್ದರು. ಶಿಬಿರದಿಂದ ವಾಪಸಾದ ನಂತರ ಕಾಲೇಜಿನಲ್ಲಿ ‘ಸಾಹಸ್‌’ ಅಡ್ವೆಂಚರ್‌ ಕ್ಲಬ್‌ ಸ್ಥಾಪಿಸಿದೆ. ಆ ಕ್ಲಬ್‌ ಮೂಲಕ ವಾರಾಂತ್ಯದಲ್ಲಿ ಟ್ರಕ್ಕಿಂಗ್‌, ಪ್ಯಾರಾ ಗ್ಲೈಡಿಮಗ್‌ ಮೊದಲಾದವನ್ನು ಆಯೋಜಿಸುತ್ತಿದ್ದೆವು. ಇದಕ್ಕೆ ಪೋಷಕರ ಬೆಂಬಲವೂ ಇತ್ತು. ಬಹಳಷ್ಟು ಸ್ನೇಹಿತರು ಸಾಹಸ ಆಸಕ್ತಿ ಮೈಗೂಡಿಸಿಕೊಂಡರು. ಹೊರಾಂಗಣ ಚಟುವಟಿಕೆಗಳಲ್ಲಿ ನನಗೆ ಆಸಕ್ತಿ ಹೆಚ್ಚು ಇತ್ತು’ ಎಂದು ಹೇಳಿದರು.

‘ಬಿ.ಇ ಮುಗಿಸಿದ ನಂತರ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗೆ (ಯುಪಿಎಸ್‌ಸಿ) ತಯಾರಿಗೆ ದೆಹಲಿಗೆ ಹೋದೆ. ಅಲ್ಲಿದ್ದಾಗ ಏರ್‌ ಫೋರ್ಸ್‌ ಸಾಮಾನ್ಯ ಸಾಮರ್ಥ್ಯ ಪರೀಕ್ಷೆ (ಎಎಫ್‌ಸಿಎಟಿ) ಬರೆದಿದ್ದೆ. ಅ ಪರೀಕ್ಷೆಯಲ್ಲಿ ಯಶಸ್ವಿಯಾದೆ. ನಂತರ ಸರ್ವಿಸ್‌ ಸೆಕ್ಟರ್‌ ಬೋರ್ಡ್‌ನ (ಎಸ್‌ಎಸ್‌ಬಿ) ಪರೀಕ್ಷೆಗಳಲ್ಲೂ ಯಶಸ್ವಿಯಾದೆ. 2016ರ ಜನವರಿಯಲ್ಲಿ ಆಯ್ಕೆ ಪ್ರಕ್ರಿಯೆ ಶುರುವಾಯಿತು. ಎಲ್ಲ ಹಂತಗಳಲ್ಲೂ ಯಶಸ್ವಿಯಾಗಿ ಗುರಿ ಸಾಧಿಸಿದೆ’ ಎಂದು ಹೇಳಿದರು.

ಮೇಘನಾ ತಂದೆ ವಕೀಲ ಎಂ.ಕೆ.ರಮೇಶ್‌ ಮಾತನಾಡಿ, ‘ನನಗೆ ‘5’ ಅದೃಷ್ಟದ ಸಂಖ್ಯೆ. ನಮ್ಮ ತಂದೆಗೆ ನಾನು ಐದನೇ ಮಗ ನಾನು. ಹೆಂಡತಿ ಐದನೇ ಸೊಸೆ. 10 ಮೊಮ್ಮಕ್ಕಳಲ್ಲಿ ಮಗಳು ಮತ್ತು ಮಗ ಐದನೇಯವರು’ ಎಂದರು.

ಪತ್ರಕರ್ತ ಗಿರಿಜಾಶಂಕರ್‌ ಮಾನತಾಡಿ, ಮೇಘನಾ ಅವರ ತಾತ ಕೇಶವಯ್ಯ ಅವರು ಧೈರ್ಯಶಾಲಿಯಾಗಿದ್ದರು’ ಎಂದರು.

ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ ಜೋಶಿ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಶೇಷಾದ್ರಿ, ಪತ್ನಿ ಸೌಭಾಗ್ಯಾಶೇಷಾದ್ರಿ, ಮಹಾಸಭಾದ ಖಜಾಂಚಿ ಮೋಹನ್‌, ಕಾರ್ಯದರ್ಶಿ ಅಶ್ವಿನ್‌, ಗೋಪಾಲಕೃಷ್ಣ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !