ಅಂಧ್ರದಿಂದ ಬರುತ್ತಿದೆ ಗಾಂಜಾ; ವಿದ್ಯಾರ್ಥಿಯೇ ಪೆಡ್ಲರ್

7
ಕೋರಮಂಗಲ ಪೊಲೀಸರಿಂದ ಐದು ಮಂದಿಯ ಬಂಧನ

ಅಂಧ್ರದಿಂದ ಬರುತ್ತಿದೆ ಗಾಂಜಾ; ವಿದ್ಯಾರ್ಥಿಯೇ ಪೆಡ್ಲರ್

Published:
Updated:

ಬೆಂಗಳೂರು: ವಿದ್ಯಾರ್ಥಿಗಳು ಹಾಗೂ ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನಗರದ ಪ್ರತಿಷ್ಠಿತ ಕಾಲೇಜುವೊಂದರ ಬಿಬಿಎ ವಿದ್ಯಾರ್ಥಿ ಸೇರಿ ಐದು ಮಂದಿ ಕೋರಮಂಗಲ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ವಿಶಾಖಪಟ್ಟಣದ ಮಣಿಕಂಠ, ಎಸ್.ಲಕ್ಷ್ಮಣ್ ಅಲಿಯಾಸ್ ಅರ್ಜುನ್, ಬಳ್ಳಾರಿಯ ಜಿ.ಶ್ರೇಯಸ್, ಬೆಂಗಳೂರಿನ ಅನ್ನಸಂದ್ರಪಾಳ್ಯದ ಜುಬೇರ್ ಪಾಷಾ ಹಾಗೂ ರಾಜಾಜಿನಗರದ ಶಿವಪ್ರಸಾದ್ ‌ಬಂಧಿತರು. ಆರೋಪಿಗಳಿಂದ 3.5 ಕೆ.ಜಿ ಗಾಂಜಾ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೊದಲು ಕುಮಾರಸ್ವಾಮಿ ಲೇಔಟ್‌ನ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಶ್ರೇಯಸ್‌ಗೆ, ಸಹಪಾಠಿಯೊಬ್ಬನ ಮೂಲಕ ಶಿವಪ್ರಸಾದ್‌ನ ಪರಿಚಯವಾಯಿತು. ಆತನಿಂದ ಗಾಂಜಾ ಖರೀದಿಸಿ ಸೇದುತ್ತಿದ್ದ ಶ್ರೇಯಸ್, ಕ್ರಮೇಣ ತಾನೂ ಆತನೊಟ್ಟಿಗೆ ಸೇರಿಕೊಂಡು ಡ್ರಗ್ ಪೆಡ್ಲರ್ ಆದ. ಆ ನಂತರ ಎಂಜಿನಿಯರಿಂಗ್ ಶಿಕ್ಷಣ ಬಿಟ್ಟು ಸಂಪೂರ್ಣವಾಗಿ ದಂಧೆಯಲ್ಲಿ ತೊಡಗಿಸಿಕೊಂಡ. ಇತ್ತೀಚೆಗೆ ಪುನಃ ಅದೇ ಕಾಲೇಜಿನಲ್ಲಿ ಬಿಬಿಎ ಕೋರ್ಸ್‌ಗೆ ಸೇರಿಕೊಂಡಿದ್ದ.

‘ಪ್ರಮುಖ ಆರೋಪಿಗಳಾದ ಮಣಿಕಂಠ ಹಾಗೂ ಲಕ್ಷ್ಮಣ್ ಬಳಿ ಹಲವು ಯುವಕರು ಕಮಿಷನ್ ಆಸೆಗೆ ಪೆಡ್ಲರ್‌ಗಳಾಗಿ ಕೆಲಸ ಮಾಡುತ್ತಿದ್ದರು. ವಿಶಾಖಪಟ್ಟಣದಿಂದ ರೈಲಿನಲ್ಲಿ ಗಾಂಜಾ ತೆಗೆದುಕೊಂಡು ವೈಟ್‌ಫಿಲ್ಡ್‌ಗೆ ಬರುವ ಅವರಿಬ್ಬರು, ರೈಲು ನಿಲ್ದಾಣದ ಬಳಿಯೇ ಪೆಡ್ಲರ್‌ಗಳಿಗೆ ಗಾಂಜಾ ಹಂಚಿ ಹೊರಟು ಹೋಗುತ್ತಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.

ಗಾಂಜಾ ಪಡೆದು ಶ್ರೇಯಸ್ ತನ್ನ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾರುತ್ತಿದ್ದರೆ, ಎಚ್‌ಎಎಲ್ ಸುತ್ತಮುತ್ತಲ ಪ್ರದೇಶದ ಯುವಕರಿಗೆ ಜುಬೇರ್ ಗಾಂಜಾ ಮಾರುತ್ತಿದ್ದ. ಶಿವಪ್ರಸಾದ್‌ಗೆ ಸಾಫ್ಟ್‌ವೇರ್ ಉದ್ಯೋಗಿಗಳೇ ಗಿರಾಕಿಗಳಾಗಿದ್ದರು.

**

ಚಪ್ಪಲಿ ಬಾಕ್ಸ್‌ನಲ್ಲಿ ಗಾಂಜಾ

‘ಸೆ.5ರಂದು ಕೋರಮಂಗಲದ 8ನೇ ಬ್ಲಾಕ್‌ಗೆ ಬಂದಿದ್ದ ಶಿವಪ್ರಸಾದ್, ಬಿಬಿಎಂಪಿ ಅಂಬೇಡ್ಕರ್ ಪಾರ್ಕ್ ಬಳಿ ಗಾಂಜಾ ಮಾರಲು ಯತ್ನಿಸುತ್ತಿದ್ದ. ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ತನ್ನ ಜಾಲದ ಬಗ್ಗೆ ಬಾಯ್ಬಿಟ್ಟ. ಕೂಡಲೇ ಕುಮಾರಸ್ವಾಮಿ ಲೇಔಟ್‌ನ ಶ್ರೇಯಸ್ ಮನೆ ಮೇಲೆ ದಾಳಿ ನಡೆಸಿದೆವು. ಬಾಕ್ಸ್‌ನಲ್ಲಿ ಗಾಂಜಾದ ಕವರ್ ಇಟ್ಟು, ಅದು ಕಾಣದಂತೆ ಹಳೆ ಚಪ್ಪಲಿಗಳನ್ನು ತುಂಬಿದ್ದ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೂವರು ಪೆಡ್ಲರ್‌ಗಳನ್ನು ವಶಕ್ಕೆ ಪಡೆದ ಬಳಿಕ ಅವರಿಂದಲೇ ಮಣಿಕಂಠ ಹಾಗೂ ಅರ್ಜುನ್‌ಗೆ ಕರೆ ಮಾಡಿಸಿ, ‘ಮಾಲು ಖಾಲಿ ಆಗಿದೆ’ ಎಂದು ಹೇಳಿಸಿದೆವು. ಅವರು ಒಂದೂವರೆ ಕೆ.ಜಿ.ಗಾಂಜಾ ತೆಗೆದುಕೊಂಡು ವೈಟ್‌ಫೀಲ್ಡ್‌ಗೆ ಬರುತ್ತಿದ್ದಂತೆಯೇ ಅವರನ್ನೂ ವಶಕ್ಕೆ ಪಡೆದೆವು’ ಎಂದು ಮಾಹಿತಿ ನೀಡಿದರು. 

Tags: 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !