ನಗರದೆಲ್ಲೆಡೆ ತ್ರಿವರ್ಣ ಧ್ವಜಕ್ಕೆ ವಂದನೆ

7

ನಗರದೆಲ್ಲೆಡೆ ತ್ರಿವರ್ಣ ಧ್ವಜಕ್ಕೆ ವಂದನೆ

Published:
Updated:

ಬೆಂಗಳೂರು: ನಗರದಾದ್ಯಂತ ಸ್ವಾತಂತ್ರ್ಯ ದಿನವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಮೈದಾನ, ಪ್ರಮುಖ ವೃತ್ತಗಳು ಮತ್ತು ಕಟ್ಟಡಗಳ ಮೇಲೆ ತ್ರಿವರ್ಣ ಧ್ವಜಗಳು ಹಾರಾಡಿದವು. ಶಾಲೆಗಳಲ್ಲಿ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿದರು. ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಧರಿಸಿ ಗಮನ ಸೆಳೆದರು.

ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು, ಆಸ್ಪತ್ರೆ, ಸಂಘ-ಸಂಸ್ಥೆಗಳ ಆವರಣಗಳಲ್ಲೂ ಧ್ವಜಾರೋಹಣ ನಡೆಯಿತು. ಆಟೊ ಸೇರಿ ವಿವಿಧ ವಾಹನಗಳ ಮೇಲೆ ರಾಷ್ಟ್ರಧ್ವಜಗಳು ಹಾರಾಡಿದವು. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಕಚೇರಿ ಆವರಣಗಳಲ್ಲೂ ಸ್ವಾತಂತ್ರೋತ್ಸವ ವಿಜೃಂಭಣೆಯಿಂದ ನಡೆಯಿತು.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಕುಲಪತಿ ಕೆ.ಆರ್‌.ವೇಣುಗೋಪಾಲ್‌ ಧ್ವಜಾರೋಹಣ ನೆರವೇರಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಅಧ್ಯಕ್ಷ ಮನು ಬಳಿಗಾರ್ ಧ್ವಜಾರೋಹಣ ನೆರವೇರಿಸಿದರು. 

ಹೈಕೋರ್ಟ್‌: ಮುಖ್ಯನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿ ಹೈಕೋರ್ಟ್‌ ಆವರಣದಲ್ಲಿ ಧ್ವಜಾರೋಹಣ ನಡೆಸಿದರು. ಅಧೀನ ನ್ಯಾಯಾಲಯಗಳ ನ್ಯಾಯಾಧೀಶರು ಹಿಂದಿ ಮತ್ತು ಕನ್ನಡದ ರಾಷ್ಟ್ರಭಕ್ತಿ ಗೀತೆಗಳನ್ನು ಹಾಡಿದರು. 

72 ತಾಣಗಳಲ್ಲಿ ರಾಷ್ಟ್ರಗೀತೆ ಗಾಯನ: ರಾಷ್ಟ್ರಗೀತೆ ಜಾಗೃತಿ ಅಭಿಯಾನ ಸಮಿತಿ 72 ತಾಣಗಳಲ್ಲಿ ನಾಗರಿಕರಿಂದ ರಾಷ್ಟ್ರಗೀತೆಯನ್ನು ಹಾಡಿಸುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ನಿವೃತ್ತ ನ್ಯಾಯಮೂರ್ತಿ ಎನ್‌.ಸಂತೋಷ್ ಹೆಗ್ಡೆ ಅವರು ಹೆಗ್ಗನಹಳ್ಳಿಯ ನ್ಯೂ ಬಾಲ್ಡ್‌ವಿನ್ ಶಾಲೆಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದರು.

ತ್ರಿವರ್ಣ ಧ್ವಜದ ಕಲಾಕೃತಿ: ಲೀಸಾ ಸ್ಕೂಲ್‌ ಆಫ್‌ ಡಿಸೈನ್‌ನ ವಿದ್ಯಾರ್ಥಿಗಳು 15 ಅಡಿ ಉದ್ದ ಹಾಗೂ 7 ಅಡಿ ಅಗಲದ ಕ್ಯಾನ್ವಾಸ್‌ ಮೇಲೆ ತ್ರಿವರ್ಣದಲ್ಲಿ ಬಾವುಟ ವಿನ್ಯಾಸಗೊಳಿಸುವ ಮೂಲಕ ಸ್ವಾತಂತ್ರ್ಯೋತ್ಸವ ಆಚರಿಸಿದರು. ಈ ಕ್ಯಾನ್ವಾಸ್‌ ಮೇಲೆ ನಾಗರಿಕರಿಗೂ ಪೇಂಟಿಂಗ್‌ ಮಾಡಲು ಅವಕಾಶವಿತ್ತು.

ಸರ್ಕಾರಿ ಶಾಲೆ ನವೀಕರಿಸಿ ಸ್ವಾತಂತ್ರ್ಯೋತ್ಸವ ಆಚರಣೆ: ಆಸ್ಟರ್‌ ಸಿಎಂಐ ಆಸ್ಪತ್ರೆಯು ಹೆಬ್ಬಾಳ ವಾರ್ಡ್‌ನ ಕುಂತಿ ಗ್ರಾಮದ ಸರ್ಕಾರಿ ಶಾಲೆಯೊಂದನ್ನು ನವೀಕರಿಸುವ ಮೂಲಕ ಸ್ವಾತಂತ್ರ್ಯೋತ್ಸವ ಆಚರಿಸಿತು. ‘ಸ್ವಚ್ಛ ಶಾಲೆ ಯೋಜನೆ’ ಎಂಬ ಕಾರ್ಯಕ್ರಮದಲ್ಲಿ ಶಾಲೆಯ ಪರಿಸರ ಶುಚಿಗೊಳಿಸುವುದು, ಗೋಡೆಗೆ ಬಣ್ಣ ಬಳಿಯುವುದು, ಆರೋಗ್ಯ ಮತ್ತು ಶುಚಿತ್ವದ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ನೀಡುವ ಕೆಲಸವನ್ನು ಆಸ್ಟರ್‌ ಸ್ವಯಂಸೇವಕರ ತಂಡ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !