ಸೇನಾನಿಗಳ ಸ್ಮರಣೆ, ದೇಶಭಕ್ತಿಯ ಅನುರಣನೆ

7
ಜಿಲ್ಲೆಯಾದ್ಯಂತ 72ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ,

ಸೇನಾನಿಗಳ ಸ್ಮರಣೆ, ದೇಶಭಕ್ತಿಯ ಅನುರಣನೆ

Published:
Updated:
Deccan Herald

ಚಾಮರಾಜನರ: ಜಿಲ್ಲೆಯಾದ್ಯಂತ ಬುಧವಾರ 72ನೇ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಶಾಲಾ, ಕಾಲೇಜು, ಸರ್ಕಾರಿ ಕಚೇರಿಗಳು, ಖಾಸಗಿ ಸಂಸ್ಥೆಗಳು, ರಾಜಕೀಯ ಪಕ್ಷಗಳು ಮತ್ತು ವಿವಿಧ ಸಂಘಟನೆಗಳ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

ಜಿಲ್ಲಾ ಕೇಂದ್ರ ಚಾಮರಾಜನಗರದ ಡಾ. ಬಿ.ಆರ್‌. ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಪ್ರಧಾನ ಕಾರ್ಯಕ್ರಮ ಸೇರಿದಂತೆ ಎಲ್ಲ ಶಾಲಾ ಕಾಲೇಜುಗಳಲ್ಲಿ ನಡೆ‌ದ ಕಾರ್ಯಕ್ರಮದಲ್ಲಿ ಮಕ್ಕಳು ದೇಶಾಭಿಮಾನದ ಹೊಸ ಲೋಕವನ್ನೇ ಅನಾವರಣಗೊಳಿಸಿದರು. ದೇಶಭಕ್ತಿ ಗೀತೆಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಯೋಧರ ಕೆಚ್ಚು ಮತ್ತು ಸಾಹಸಗಳನ್ನು ಕೊಂಡಾಡುವ ಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮವನ್ನು ಇಮ್ಮಡಿಗೊಳಿಸಿದರು.

ಆಕರ್ಷಕ ಪಥಸಂಚಲನ: ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪ್ರಧಾನ ಕಾರ್ಯಕ್ರಮದಲ್ಲಿ ಪೊಲೀಸ್‌ ಸಿಬ್ಬಂದಿ, ಅರಣ್ಯ ಇಲಾಖೆಯ ಸಿಬ್ಬಂದಿ, ಚಾಮರಾಜನಗರದ ವಿವಿಧ ಶಾಲೆಗಳ ಸ್ಕೌಟ್ಸ್‌ ಮತ್ತು ಗೈಡ್ಸ್‌ ತಂಡಗಳು ಹಾಗೂ ವಿದ್ಯಾರ್ಥಿಗಳು ನಡೆಸಿದ ಪಥಸಂಚಲನ ಗಮನ ಸೆಳೆಯಿತು. ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗ ಶೆಟ್ಟಿ ಅವರು ತೆರೆದ ವಾಹನದಲ್ಲಿ ಸಾಗಿ ಗೌರವ ವಂದನೆ ಸ್ವೀಕರಿಸಿದರು.

ದೇಶಭಕ್ತಿಯಲ್ಲಿ ಮಿಂದೆದ್ದ‌ ಜನ: ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ವಾತಂತ್ರ್ಯ ದಿನದ ಸಂಭ್ರಮಕ್ಕೆ ಮೆರುಗು ನೀಡಿದವು. ಚಾಮರಾಜನಗರದ ಆರು ಶಾಲೆಗಳ ಮಕ್ಕಳು ಪ್ರದರ್ಶಿಸಿದ ನೃತ್ಯಗಳು, ರೂಪಕಗಳು ಕ್ರೀಡಾಂಗಣದಲ್ಲಿ ನೆರೆದಿದ್ದ ನೂರಾರು ಜನರನ್ನು ದೇಶಪ್ರೇಮದ ಸಾಗರದಲ್ಲಿ ತೇಲಾಡುವಂತೆ ಮಾಡಿತು.

ಸೇಂಟ್‌ ಜೋಸೆಫ್‌ ಶಾಲೆಯ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರದರ್ಶಿಸಿದ ‘ಭವ್ಯ ಭಾರತ’, ಜೆಎಸ್‌ಎಸ್‌ ಬಾಲಕಿಯರ ಪ್ರೌಢಶಾಲೆಯ 250 ವಿದ್ಯಾರ್ಥಿಗಳಿಂದ ಮೂಡಿ ಬಂದ ‘ವಂದೇ ಮಾತರಂ’ ನೃತ್ಯ ರೂಪಕ,  ಸೇಂಟ್‌ ಫ್ರಾನ್ಸಿಸ್‌ ಇಂಗ್ಲಿಷ್‌ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ‘ಮೇರಾ ಭಾರತ್‌ ಮಹಾನ್‌’, ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರದರ್ಶಿಸಿದ ‘ಭಾರತ ದೇಶ ನಮ್ಮ ಹೆಮ್ಮೆ’ ನೃತ್ಯ, ಸೇಂಟ್‌ ಪೌಲ್‌ ಶಾಲೆಯ ಮಕ್ಕಳು ಪ್ರದರ್ಶಿಸಿದ ‘ಮಾ ತುಝೇ ಸಲಾಂ’ ಮತ್ತು ಸೇವಾ ಭಾರತಿ ಕನ್ನಡ ಮಾಧ್ಯಮ ಪ್ರೌಢಶಾಲೆ ಮಕ್ಕಳು ಹೆಜ್ಜೆ ಹಾಕಿದ ‘ಈ ಮಣ್ಣಿನಲ್ಲಿ’ ನೃತ್ಯ ಕಾರ್ಯಕ್ರಮಗಳು ಜನರ ಮನಸೂರೆಗೊಂಡವು. 

ದೇಶಭಕ್ತಿಯ ಗೀತೆಗಳು, ಜನರ ಚಪ್ಪಾಳೆಗಳು ಕ್ರೀಡಾಂಗಣದ ಸುತ್ತಲೂ ಅನುರಣಿಸಿದವು. ವೇದಿಕೆಯಲ್ಲಿದ್ದ ಗಣ್ಯರು ಕೂಡ ಚಪ್ಪಾಳೆ ಹೊಡೆದು ಮೆಚ್ಚುಗೆ ಸೂಚಿಸಿದರು. 

ಬಹುಮಾನ: ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆಯಲ್ಲಿ ಸೇಂಟ್‌ ಫ್ರಾನ್ಸಿಸ್‌ ಇಂಗ್ಲಿಷ್‌ ಮಾಧ್ಯಮ ಶಾಲೆಯ ಮಕ್ಕಳು ಪ್ರಥಮ ಬಹುಮಾನ ಗಳಿಸಿದರೆ ಸೇಂಟ್‌ ಜೋಸೆಫ್‌ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಮತ್ತು ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ತೃತೀಯ ಸ್ಥಾನಗಳಿಸಿದರು.

ಸನ್ಮಾನ: ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಡಿ.ಬಸಪ್ಪ ಕಾಗಲವಾಡಿ ಮತ್ತು ಕರಿನಂಜನಪುರದ ತೋಟದಪ್ಪ ಅವರನ್ನು ಸನ್ಮಾನಿಸಲಾಯಿತು.

ಸಮಾನತೆಯ ಅಗ್ನಿ ದಿವ್ಯ ಬೆಳಗಲಿ: ಪುಟ್ಟರಂಗಶೆಟ್ಟಿ

ಡಾ.ಬಿ.ಆರ್‌. ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ದಿನದ ಸಂದೇಶ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ‘ವಿಶಾಲ ಭಾರತದಲ್ಲಿ ಸಮೃದ್ಧತೆಯ ಜೊತೆಗೆ ಸರ್ವೋದಯದ ತೇರು ಸಮನಾಗಿ ಸಾಗಬೇಕು. ವರ್ಗ, ವರ್ಣ, ಧರ್ಮಗಳ ನಡುವಿನ ಸಂಘರ್ಷದ ಆಚೆ ಸಮಾನತೆಯ ಅಗ್ನಿದಿವ್ಯ ಶಾಂತವಾಗಿ ಬೆಳಗಬೇಕು’ ಎಂದು ಆಶಿಸಿದರು.

‘ನಮ್ಮಲ್ಲಿರುವ ಸಂಕುಚಿತ ಸ್ವಾರ್ಥಗಳು ಇಲ್ಲವಾಗಿ ಕುವೆಂಪು ಅವರು ಹೇಳಿದಂತೆ ನೂರು ದೇವರ ಬದಲು ಭಾರತಾಂಬೆಯನ್ನೇ ಮೊದಲ ದೇವರು ಎಂಬ ಪೂಜಿಸಿದರೆ ಪ್ರತಿಯೊಬ್ಬ ಭಾರತೀಯನಿಗೂ ಒಳಿತು ಸಿಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಕೃಷಿಕ ವರ್ಗದ ಘನತೆ ಹೆಚ್ಚುವಂತೆ ಮಾಡಲು ನೇಗಿಲ ಯೋಗಿಗೆ ಹೆಗಲು ಕೊಡಬೇಕು. ದೇಶ ಕಾಯುವ ಪ್ರತಿ ಸೈನಿಕನಿಗೂ ಮನೆಯ ಮಗನ ಮನೆಯ ಪ್ರೀತಿ, ಕಾಳಜಿ, ಆರೈಕೆ ದೊರೆಯಬೇಕು. ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ಸಿಕ್ಕಾಗ, ಶಿಕ್ಷಣ ಪಡೆದವರು ಸೂಕ್ತ ನೆಲೆ ಪ‍ಡೆದಾಗ ಮತ್ತು ವಿದ್ಯೆ ಇಲ್ಲದವನೂ ಸ್ವಾವಲಂಬಿಯಾಗಿ ಬದುಕಿದಾಗ ಸ್ವಾತಂತ್ರ್ಯ ಎಲ್ಲರ ಪಾಲಿನ ಹೆಮ್ಮೆ ಎನಿಸುತ್ತದೆ’ ಎಂದು ಸಚಿವರು ಪ್ರತಿಪಾದಿಸಿದರು.

‘ನಮ್ಮ ದೇಶದ ಪ್ರತಿಭಾವಂತ ಯುವ ಪೀಳಿಗೆಯನ್ನು ವಿದೇಶಿ ಕಂಪನಿಗಳು ಆಸೆ ತೋರಿಸಿ ದುಡಿಸಿಕೊಳ್ಳುತ್ತಿವೆ. ಇದನ್ನು ತಪ್ಪಿಸಿ, ನಮ್ಮ ದೇಶದಲ್ಲೇ ಅವರಿಗೆ ಅತ್ಯುತ್ತಮ ಅವಕಾಶಗಳನ್ನು ಕಲ್ಪಿಸಿ ದೇಶದ ಅಭಿವೃದ್ಧಿಗೆ ನಾಂದಿ ಹಾಡಬೇಕು. ನಮ್ಮಲ್ಲಿರುವ ಅಪಾರವಾದ ಮಾನವ ಮತ್ತು ಜ್ಞಾನ ಸಂಪತ್ತುಗಳನ್ನು ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳಬೇಕು’ ಎಂದರು.

ಜಿಲ್ಲೆಯ ಹೋರಾಟಗಾರರ ಸ್ಮರಣೆ: ಕ್ವಿಟ್‌ ಇಂಡಿಯಾ ಚಳವಳಿ ಮತ್ತು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದ ಜಿಲ್ಲೆಯ ಹೋರಾಟಗಾರರನ್ನು ಸಚಿವರು ಸ್ಮರಿಸಿದರು.

‘ಸಿ. ರಂಗಸ್ವಾಮಿ, ಗೋಪಾಲರಾಯರು, ವೆಂಕಟರಾವ್‌, ಡಿ.ಜೆ. ಶಂಕರಪ್ಪ, ಕೃಷ್ಣಮೂರ್ತಿ, ರಂಗಸ್ವಾಮಿ, ಎಚ್‌.ಕೆ. ಕುಮಾರಸ್ವಾಮಿ, ವೆಂಕಟಸುಬ್ಬಶೆಟ್ಟಿ, ಸಿ. ಯತಿರಾಜು, ಪಣ್ಯದ ಸಿದ್ದಪ್ಪ, ಮಲೆಯೂರು ಚಿಕ್ಕಲಿಂಗಪ್ಪ, ಪದ್ಮರಾಜ ಪಂಡಿತ್‌, ಕೆ.ವಿ. ಕೃಷ್ಣಮೂರ್ತಿ, ಐ.ಎನ್‌.ಎ. ರಾಮ್‌ರಾವ್‌, ಗಾಂಧಿಪುಟ್ಟನಂಜಪ್ಪ, ತೋಟದಪ್ಪ, ಗಾಂಧಿಬಸವಯ್ಯ, ಡಿ.ಬಸಪ್ಪ, ಬಣ್ಣ ಬಸಪ್ಪ, ಲಲಿತಾಜಿ ಟ್ಯಾಗೆಟ್‌, ಗಜಲಕ್ಷ್ಮಿಬಾಯಿ, ಕಮಲಮ್ಮ ಅವರು ಸ್ವಾತಂತ್ರ್ಯಕ್ಕಾಗಿ ಜಿಲ್ಲೆಯಲ್ಲಿ ಹೋರಾಟ ಮಾಡಿದ್ದಾರೆ. ಅವರಿಗೆ ಗೌರವಪೂರ್ವಕವಾಗಿ ನಮಿಸೋಣ’ ಎಂದು ಹೇಳಿದರು.

ಸಂಸದ ಆರ್‌. ಧ್ರುವನಾರಾಯಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೊಡ್ಡಮ್ಮ, ನಗರಸಭೆ ಅಧ್ಯಕ್ಷೆ ಶೋಭ, ಉಪಾಧ್ಯಕ್ಷ ಆರ್‌.ಎಂ. ರಾಜಪ್ಪ, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್‌ ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್‌ ಮೀನಾ, ಪ್ರಾದೇಶಿಕ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯಲ್‌ ಲಾಲ್‌ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗೀತ ಪ್ರಸನ್ನ, ಬಿಳಿಗಿರಿ ರಂಗನಾಥ ಹುಲಿಸಂರಕ್ಷಿತ ಪ್ರದೇಶದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್‌. ಶಂಕರ್‌, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರು, ನಗರಸಭೆ ಸದಸ್ಯರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಅಭಿವೃದ್ಧಿ ಕಾರ್ಯಗಳ ಪ್ರಸ್ತಾಪ ಇಲ್ಲ

ನಗರಸಭೆ ಚುನಾವಣೆಯ ಕಾರಣಕ್ಕೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಉಸ್ತುವಾರಿ ಸಚಿವರ ಭಾಷಣದಲ್ಲಿ ಸರ್ಕಾರದ ಸಾಧನೆ, ಅಭಿವೃದ್ಧಿ ಕಾರ್ಯಕ್ರಗಳ ಬಗ್ಗೆ ಪ್ರಸ್ತಾಪ ಇರಲಿಲ್ಲ. ಭಾಷಣ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನ, ಸೈನಿಕರ ಸಾಹಸ, ದೇಶದ ಅಭಿವೃದ್ಧಿ ಮುಂತಾದ ವಿಷಯಗಳನ್ನು ಪ್ರಸ್ತಾಪಿಸುವುದಕ್ಕೆ ಸೀಮಿತವಾಗಿತ್ತು.

ಕೃಪೆ ತೋರಿದ ವರುಣ

ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ವರುಣ ಅಡ್ಡಿಪಡಿಸಲಿಲ್ಲ. ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿರುವುದರಿಂದ ಧ್ವಜಾರೋಹಣ, ಪಥಸಂಚಲನಕ್ಕೆ ಮಳೆ ಅಡ್ಡಿಯಾಗಬಹುದು ಎಂಬ ಆತಂಕ ಇತ್ತು.

ಆದರೆ, ಕಾರ್ಯಕ್ರಮದ ಕೊನೆಯವರೆಗೂ ಮಳೆ ಬರಲಿಲ್ಲ. ಚಾಮರಾಜನಗರದ ಸೇವಾ ಭಾರತಿ ಪ್ರೌಢ ಶಾಲೆಯ ಮಕ್ಕಳ ನೃತ್ಯ ಪ್ರದರ್ಶನದ ಮುಕ್ತಾಯದ ಹೊತ್ತಿಗೆ ಮಳೆ ಸುರಿಯಿತು.

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !